ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಅಯ್ಯನಗುಡಿ ತೋಪಿನ ಆಚೀಚಿನ ಮರಗಳಡಿಯಲ್ಲಿ ಮದುವೆ ಆತುರ, ಸಡಗರ, ಆತಂಕ. ರಸ್ತೆಯಲ್ಲಿ ಬಗೆಬಗೆಯ ವಾಹನಗಳು, ಅದರಾಚೆ ಜುಗು ಜುಗು ರೈಲು. ಏನೇನೋ ನೆನಪುಗಳು. ಬಹಳ ಹಿಂದೆ ಲಂಗದ ಹುಡುಗಿಯಾಗಿ ಅವ್ವನ ಕಂಕುಳಲ್ಲಿ ಕೂತು ಇಲ್ಲೇ ಮೊದಲಿಗೆ- ಅಷ್ಟು ಬಸ್ಸು, ಆ ರೈಲು, ಆ ಬಗೆ ಬಗೆಯ ಮಿಠಾಯಿನ ಸಾಲಂಗಡಿಗಳನ್ನು ನೋಡಿದ್ದು. ಕಣ್ಣು ತುಂಬುವ ನೋಟ. ಆಮೇಲೆ ಎಷ್ಟೆಲ್ಲ ಸಾರಿ ಇಲ್ಲಿ ಬಂದಿಲ್ಲ? ನಾಲ್ಕು ವರ್ಷದ ಹಿಂದೆ ಕೊರಳಿಗೆ ತಾಳಿ ಬಿಗಿಸಿಕೊಂಡಿದ್ದು ಇಲ್ಲೇ ಈ ಆಲದ ಮರದ ಕೆಳಗೆ.

- Advertisement -

ಅದೇ ಸೋಬಾನ, ಕಂಕಣ, ಬಾಸಿಂಗ. ಹೊಸ ಸೀರೆ, ಹೂವು, ಅರಿಶಿನ, ಗಂಧದ ಗರತಿಯರು; ಅಡಿಗೆಗೆ ನಿಂತ, ಅಭಿಮಾನದ, ಬೀಗಿನ, ಕಿವಿಮಾತಿನ, ಕೊಡೆ ಮಡಸಿದ ಗಂಡಸರು. ಎಣ್ಣೆ ಹರಿದ ಬೈತಲೆ ಕ್ರಾಪಿನ, ಹೊಸಲಂಗದ, ಬೆರಗುಗಣ್ಣು ಬೆರಗುಗಿವಿಗಳಿಂದ ಸಂದಣಿಯಲ್ಲಿ ನುಸುಳಿ ಮುಂದೆ ನಿಲ್ಲುವ ಹೈಕಳು ಮಕ್ಕಳು. ಕೂತಕಡೆ, ನಿಂತಕಡೆ ಹೀಗ್ಯಾಕೆ ಏನೇನೋ ಹಚ್ಚಿಕೊಳ್ಳುತ್ತೇನೆ? ಆರಾಮವಾಗಿ ಹೇಗೆಂದರೆ ಹಾಗೆ ಹೊಂದಿಕೊಂಡು ಯಾಕೆ ಎಲ್ಲರಂತೆ ಬದುಕುವುದಕ್ಕೆ ಆಗುವುದಿಲ್ಲ? ಅಥವಾ ಎಲ್ಲರಿಗೂ ಹೀಗೇ ಆಗುತ್ತಿರುತ್ತದೋ ಎಂದು ಅನುಮಾನಗೊಂಡಳು. ಹೆಣ್ಣು-ಗಂಡಿಗೆ ಸಂಬಂಧಿಸಿದ ಶಾಸ್ತ್ರಗಳು, ದೇವರುದಿಂಡಿರುಗಳ ಪೂಜೆ ಮುಂತಾದವುಗಳಿಗೆ ಇತರ ಹೆಂಗಸರುಗಳಂತೆ ಲವಲವಿಕೆಯಿಂದ ಓಡಾಡದಿದ್ದುದನ್ನು ಕಂಡು ಅವರಿವರು ಬೇಜಾರು ಮಾಡಿಕೊಂಡಂತೆ ಕಂಡಿತು. ಎಲ್ಲದರಲ್ಲೂ ಇವಳೊಬ್ಬಳು ಹುಚ್ಚಿ ಅನ್ನುವ ರಿಯಾಯಿತಿ ತೋರಿಸುವ ಧಾಟಿ. ಒಟ್ಟಿನಲ್ಲಿ ಇಂಥಾ ಹಾಳುಕಡೆಗಳಿಗೆ ಬರಬಾರದಿತ್ತು. ಸುಮ್ಮನೆ ನನ್ನ ಮಾತು ಕೇಳಿ ಅವ್ವ ಇಲ್ಲಿಗೆ ಬಂದಿದ್ದರೆ ಸೈಲಭೂಪ ಅಂತ, ಪದ ಹೇಳಿಕೊಂಡು ಈ ಹಾಳು ತಂಟೆತಕರಾರುಗಳಿಲ್ಲದೆ ಅತ್ತಿಕಡದಲ್ಲಿ ಆನಂದವಾಗಿ ಆಡು ಕಾಯಬಹುದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಹೀಗಂದುಕೊಳ್ಳುತ್ತಿದ್ದಂತೆ ಅನ್ಯಾಯ ನುಡಿಯುತ್ತಿದ್ದೇನೆ ಅನ್ನಿಸಿ ಮುಜುಗರವಾಯಿತು. ಕೆಂಪ ಗಾಡಿ ಹೂಡೂತ್ತಾನೆಂದು ಗೊತ್ತಾದಾಗ ತಾನೇ ಹೋಗಬೇಕೆಂದು ಆಸೆಯಾಗಲಿಲ್ಲವೇ? ಯಾಕೆ ಮುಚ್ಚುಮರೆ? ಯಾವುದಕ್ಕೆ ಭಯ? ಸರಿ ಅಂದದ್ದು ಬದುಕುವುದಕ್ಕೆ ಆಗುವುದಿಲ್ಲವೇ? ಗಾಡಿಯಂಚಿನಲ್ಲಿ ಎತ್ತಿಗೆ ನೀರು ಕುಡಿಸಿ ಹುಲ್ಲು ಹಾಕಿ ಮೈ ಸವರುತ್ತಿರುವ ಕೆಂಪ: ತುಂಬಿಕೊಂಡ ಮೈ, ಕಪ್ಪಾಗಿ ಕಡೆದ ಬೋಳಿಸದ ಮೊಳಕೆಗಡ್ಡ ಮೀಸೆಗಳು. ಹೊಸ ಅಂಗಿ, ವಲ್ಲಿ- ಉಡುಪು; ಬಾಚಲುಬಟ್ಟೆಯಲ್ಲಿ ಎಷ್ಟು ಚಂದ ನೋಡುವುದಕ್ಕೆ. ಎಷ್ಟು ಗಟ್ಟಿ, ಎಷ್ಟು ಒಳ್ಳೆಯತನ. ಕರ್ಣನ ಪಾರ್ಟಿನಲ್ಲಿ ಹಾಡುತ್ತಿದ್ದರೆ ನೋಡುವುದಕ್ಕೊಂದು ಚಂದ: ಕೊಲಲೇಂ ಪಾಂಡುಕುಮಾರರಾ?… ತಮ್ಮಂದಿರಂ ಕೊಲಲೇಂ?… ಕಂದ ಹಾಡುವಾಗ, ಕುಂತಿಯ ಹತ್ತಿರ, ಕೃಷ್ಣ ಅರ್ಜನರ ಹತ್ತಿರ, ಸಾಯುವ ಸಮಯದಲ್ಲಿ… ಎಷ್ಟು ಜನಕ್ಕೆ ನಮಗೆ ಕಣ್ಣು ತೇವವಾಗುವುದಿಲ್ಲ!

ಇದನ್ನು ಓದಿದ್ದೀರಾ?: ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಇವತ್ತೇನೋ ಆಗುತ್ತಿದೆ ನನಗೆ ಅಂದುಕೊಂಡಳು. ಅಬ್ಬೂರಿನಿಂದ ಬಂದ ಹೆಣ್ಣಿನ ಕಡೆಯವರ ಗಾಡಿಯಲ್ಲಿ ಅತ್ತೆಯಾಗಿದ್ದವಳೂ ಇದ್ದುದ್ದು ಕಂಡು ನಖಶಿಖಾಂತವಾಗಿ ಕೋಪಗೊಂಡಳು. ಅದೇ ಎಲೆಯಡಕೆಯ ಮೋಜು, ಅಗಲಗಣ್ಣು, ಸಿಂಗಾರ, ಹಾದರಗಿತ್ತಿತನ. ಥೂ ನಾಯಿಮುಂಡೆಯ ದರ್ಶನ, ಇವಳ್ಯಾಕೆ ಇಲ್ಲಿ ವಕ್ಕರಿಸಿದಾಳವ್ವಾ ಅಂದುಕೊಂಡಳು. ಉಳಿದವರಲ್ಲಿ ಅನೇಕರನ್ನು ಗುರುತಿಸಲಾಗಲಿಲ್ಲ. ‘ಮೇ ಮೇ ಚೆನ್ನಕ್ಕ ಇವಳ್ನೇ ಕಣಮ್ಮೆ ನಿನ್ನ ಕೊಟ್ಟಿದ್ದೋನ್ಗೆ ತಂದಿರೂದು; ಮಾಳೆಸೀಮೆಯೋಳಂತೆ- ಆ ನಾಯಕಸಾನಿ ವಂದಗೇ ಕಟ್ಕೊಂಡ್ ಬಂದಿರೋದ್ ನೋಡು’ ಅಂದು ಪಕ್ಕದಲ್ಲಿ ಕೂತಿದ್ದ ಹುಡುಗಿ ಆತುರದಲ್ಲಿ ಮೆಲ್ಲಗೆ ಪಕ್ಕೆಗೆ ತಿವಿದು ಸನ್ನೆ ಮಾಡಿ ಅತ್ತೆಯ ಕಡೆಗೆ ತೋರಿದಳು: ಪಾಪ! ಸದ್ದಿಲ್ಲದೆ, ನನ್ನಂತೆ ಗಲಾಟೆ ಮಾಡದ ಚೆಂದುಳ್ಳಿ ಹುಡುಗಿ ಅನ್ನಿಸಿ ಮಾತಾಡಿಸಬೇಕೆನಿಸಿತು. ಏನು ಮಾತಾಡಿಸುವುದು? ಯಾಕೆ ಮಾತಾಡಿಸಬೇಕು? ಸರಿಸರಿ ಇದೊಳ್ಳೆ ಗ್ರ್ಹಾಚಾರ…

ಇತ್ತ ಕಡೆಯಿಂದ ದೊಂದಿ ಮೀಸೆಯ ಗುಂಡೇಗೌಡ, ಬಲಗೈಯಲ್ಲಿ ಮಡಸಿದ ಕೊಡೆಯೇ ಊರುಗೋಲು; ಹಿಂದಲೆಗೆ ಗಂಟಿಕ್ಕಿದ ಜುಟ್ಟು, ನಗೆ, ದರ್ಬಾರಿನ ಬೀಸುಗಾಲು, ಥೂ ನಿನ್ನ ಮೀಸೆಗೆ ನನ್ ಮಾಸು ಕಟ್ಟ; ಈ ಉದ್ದನೆಯ ಕೊಕ್ಕರೆಗರಿ ಮಡಿಯ ದೊಗಲೆಜುಬ್ಬದೊಳಗೆ ಎಂಥ ದುರ್ನಾತ? ಬರಬಾರದಿತ್ತು ಅನ್ನಿಸುತ್ತಿದ್ದಂತೆಯೇ ಯಾಕೆ ಬರಬಾರದಿತ್ತು? ಬಂದರೇನಾಯಿತು? ಅಂದುಕೊಂಡಳು. ಸಂಬಂಧಿಕನ ಮದುವೆ; ಒಂದು ಊರು, ಒಂದು ಕೇರಿ. ಅವ್ವ ಕೇಳಬೇಕಲ್ಲ?… ಮಧ್ಯಾಹ್ನ ತುಂಬುವುದರಲ್ಲಿ ಮುಗಿದು ಹೋಗುವ ಮದುವೆಯೂ ತಲೆಚಿಟ್ಟು ಹಿಡಿಸಿತು.

ಮದುವೆಯ ಓಡಾಟ ಶಾಸ್ತ್ರ-ಸೂತ್ರಗಳ ಗಲಾಟೆ. ಆತುರ ಆತುರದ, ಅರ್ಥವಾಗದ ಮಂತ್ರ ಹೇಳುವ, ದಕ್ಷಿಣೆ ಕೇಳುವ ಪುರೋಹಿತ. ಇಲ್ಲೆ, ಈ ಕಾಲದಲ್ಲೇ ನಾಲ್ಕು ವರ್ಷಗಳ ಹಿಂದೆ ಅಣ್ಣಂದಿರಿಗೆ ಕೇವಲ ಕೈತೊಳದುಕೊಳ್ಳುವ, ಅವ್ವನಿಗೆ ಅರ್ಥವಾಗದ, ನನಗೆ ಮನಸ್ಸಿಲ್ಲದೆ, ಒಳ್ಳೆಯದನ್ನೇ ಹಾರೈಸಿ, ಒಳ್ಳೆಯವರೇ ಮಾಡಿದ ಮದುವೆ… ಎಲ್ಲಾ ಎಲ್ಲಾ ಅಸಹ್ಯ. ಇವೆಲ್ಲಾ ಯಾಕೆ ನೆನಪಾಗುತ್ತವೋ?

ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಮೋಡದ ವಾತಾವರಣ ಹೆಚ್ಚಾಗುತ್ತಿದ್ದಂತೆ ಎಲ್ರೂ ಗಾಬರಿಗೊಳಗಾದರು. “ಶಿವನೇ ಒಂದು ಗಂಟೆ ಅವಕಾಶಕೊಟ್ಟರೆ ಸಾಕಪ್ಪ, ಜನ ಅನ್ನ ತಿನ್ನಲಿ…” ”…ಈ ಮರದ ತಾಳಿನ ಮದುವೆಯೂ ಸಾಕು, ಈ ತಗಾಬಿಗಿ ಓಡಾಟವೂ ಸಾಕು. ಊರೇಲೆ ನರಸಿಂಹಸ್ವಾಮಿ ದೇವಸ್ಥಾನದ ಮುಂದೆ ಚಪ್ರ ಹಾಕೊಂಡು ಬೇಕಾದ್ಜನ ಕರಕೊಂಡು ಧಾರೆ ಹುಯ್ಯಕೊಂಡ್ರೆ ದೇವರು ಬ್ಯಾಡ ಅಂದದೇನ್ರಯ್ಯ?… ಇದ್ಕೆ ನಮ್ಮೋರ್‍ನೆಲ್ಲಾ ದಡ್ಡ ಜನಗಳು ಅನ್ನೂದು…” ಮುಂತಾದ ಮಾತುಕತೆಗಳೊಡನೆಯೇ ಧಾರೆ ಮುಗಿಸಿ ”ಕುಂತ್ಕೊಳ್ಳಿ, ಕುಂತ್ಕೊಳ್ಳಿ” ಅನ್ನುತ್ತಾ ಜನಗಳನ್ನು ಕೂರಿಸಿ, ಊಟಕ್ಕೆ ಇಸ್ತ್ರೀ ಎಲೆಗಳನ್ನು ಹಂಚಿದರು. ಹೆಂಗಸರೊಂದು ಕಡೆ, ಗಂಡಸರೊಂದು ಕಡೆ, ಹೆಂಗಸರ ಗುಂಪಿನಲ್ಲಿ ಜಾಗಕ್ಕೆ ಕಿತ್ತಾಟವಾಯಿತು; ಗಂಟಲು ಜೋರಾಟ, ಹೆಣ್ಣುಕುಲದ ಸಣ್ಣತನವನ್ನು ಕುರಿತು ತಲೆನರೆತ ಗೌಡರುಗಳು ಉಪನ್ಯಾಸ ಮಾಡುವ ಧಾಟಿಯಲ್ಲಿ ಶುರು ಮಾಡಿ, ಗೇಲಿ ಮಾಡಿ ಎಲ್ಲರನ್ನೂ ನಗಿಸಿದರು.

ಅತ್ತೆಯಾಗಿದ್ದವಳ ಧಿಮಾಕು, ಅರ್ಥವಿಲ್ಲದ ಜೋರು- ಇವುಗಳು ಕಸವಿಸಿ ತಂದವು; ತನ್ನನ್ನು ಕಂಡು ಬೇಕಂತಲೇ ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾಳೆ ಅನ್ನಿಸಿತು. ಅವಳ ಪಕ್ಕದಲ್ಲಿ ಸದ್ದಿಲ್ಲದೆ ಕೂತ ಸೊಸೆಯನ್ನು ಕಂಡು ಕನಿಕರಪಟ್ಟಳು. ಜನರನ್ನು ಉಬ್ಬಿಸಿ, ರೇಗಿಸಿ, ಕೀಟಲೆಯ ಮಾತುಗಳ ಚಮತ್ಕಾರದಲ್ಲಿ ಗುಂಡೇಗೌಡರು ರಂಜಿಸುತ್ತಿದ್ದರು. ಯಾವುದಕ್ಕೂ ಗಮನಕೊಡದ ಜನಗಳು ಆತುರಾತುರದಲ್ಲಿ ಊಟ ಮಾಡುತ್ತಿದ್ದರು.

ಇದು ಭಯಂಕರವಾದ ಅನುಭವವಾದಂತೆ; ಎಲ್ಲರೂ ತನ್ನನ್ನೇ ನೋಡುತ್ತಿದ್ದಂತೆ; ತಮ್ಮ ಪಾಡಿಗೆ ತಾವಿದ್ದ ಜನಗಳು ಮೌನದಲ್ಲೇ ಗರಗಸದಿಂದ ಕೊಯ್ದಂತೆ. ಅವಳು, ಗುಂಡೇಗೌಡ, ನಾನು- ನಮಗೆ ಮುತ್ತಿದ ಜನಗಳ ಸಮಕ್ಷಮದಲ್ಲಿ ಅನುಮಾನ, ಕಿರುಕುಳ, ಸಂದಿಗ್ಧಗಳಲ್ಲಿ ಒದ್ದಾಡುತ್ತಿರುವುದು ಅನುಭವಕ್ಕೆ ಬರುತ್ತಿತ್ತು. ಮೋಡದ ದಂಡು, ಭಯಂಕರ ಒಕ್ಕೂಟ. ಭಯ, ತಡಕಾಟ; ಸರಸರನೆ ಓಡಾಡಿ ಗಾಡಿ ಹತ್ತಿದರು. ಅವರವರ ಜಾಗ; ಅದಲುಬದಲುತನ, ಕಿತ್ತಾಟ, ಕೂಗಾಟ; ಎತ್ತಿನ ಕಾಲಿಗೆ ಬಂದ ಕೊರಳ ಗಂಟೆ ಗಗ್ಗರದ ಸದ್ದಿನ, ವೇಗವಾದ ಓಟ.

*

ಪೇಟೆಯ ದಾರಿಯಲ್ಲಿ ಊರುಗಳಿಗೆ ಓಡುವ ಗಾಡಿಗಳು. ಬೆಂಗಳೂರು ಮೈಸೂರುಗಳ ಬಗೆ ಬಗೆಯ ವಾಹನಗಳು. ಹೀಗೆ ಬಂದು ಹಾಗೆ ಓಡುವ ಮದುವೆ. ಕತ್ತಿಗೆ ಹೂವಿನ ಹಾರ, ದೊಡ್ಡ ಗುಂಡು ಹಾಕಿಕೊಂಡು ಹೆಣ್ಣು-ಗಂಡುಗಳು. ಎಲ್ಲರಿಗೂ ಮಳೆಯ ಗಾಬರಿ; ಮನೆ ಸೇರುವ ತವಕ; ಮದುವೆ ಮುಗಿದ ನಿಶ್ಚಿಂತೆ. ಜತೆಯಲ್ಲಿ ಹೆಣ್ಣಿನ ಕಡೆಯವರ ಗಾಡಿಗಳು. ಅತ್ತೆಯಾಗಿದ್ದವಳು, ಅವಳ ಸೊಸೆ, ಗುಂಡೇಗೌಡ… ದಟ್ಟಿಸಿದ ಮೋಡಗಳು.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

…ಮದುವೆಯಾದ ಹೊಸತರಲ್ಲೇ ನನಗೂ ಅತ್ತೆಗೂ ಸರಿಬರಲಿಲ್ಲ. ಅವಳ ಅರ್ಥವಾಗದ ಹಂಚಿಕೆಗಳು ಭಯ ಹುಟ್ಟಿಸುತ್ತಿದ್ದವು. ತನ್ನ ಪಾಡಿಗೆ ತಾನು ಹೋಗುವ, ಯಾವ ಗಂಟೂ ಕಾಣದ ಗಂಡ. ಎದರೆ ಬಿದ್ದರೆ ಅತ್ತೆಯೊಡನೆ ಚಕ್ಕಂದದಲ್ಲಿ ಇದ್ದು ಬಿಡುವ ನೆರೆಮನೆಯ ಗುಂಡೇಗೌಡ. ಅತ್ತೆ ದಿನದಿನಕ್ಕೆ ಅಸಹ್ಯವಾಗತೊಡಗಿದಳು. ಗಂಡನಿಗೆ ಹೇಳಿಕೊಳ್ಳುವಂತಿಲ್ಲ; ಒಳ್ಳೆಯದು ಕೆಟ್ಟದ್ದು ಎರಡೂ ಒಂದೆ; ಅವ್ವನನ್ನು ಕಂಡರೆ ಹೆದರಿಕೆ ಕೂಡ ಅವನಿಗೆ. ಹುಳ್ಳಗಿನ ಮನಸ್ಸಿನ ಅವಳು ಕೆಮ್ಮಿದರೆ ನ್ಯಾಯ ಕೇಳುತ್ತಿದ್ದಳು. ನನ್ನ ಮಿಡ್ಲು ಸ್ಕೂಲಿನ ಓದು ಮಾಯಕಾರತನಕ್ಕೆ ಕಾರಣವಾಯಿತಂತೆ, ನನ್ನ ಅಣ್ಣಂದಿರು ಅಣೆಸೊಪ್ಪು ತಿನ್ನುವವರಂತೆ…

ಎರಡು ವರ್ಷ ತುಂಬಿಸುವುದಕ್ಕೆ ಸಾಕುಬೇಕಾಗಿ ಹೋಯಿತು. ನನ್ನ ದುಡಿಮೆಯ ಬಗ್ಗೆ ಮೆಚ್ಚುಗೆಯಿದ್ದರೂ ನನ್ನಲ್ಲಿ ನಂಬಿಕೆ ಬರಲಿಲ್ಲ ಅವಳಿಗೆ; ನನಗೆ ದೌಲತ್ತಂತೆ; ಕಾಲಲ್ಲಿ ಹೇಳುತ್ತಿದ್ದನ್ನು ಕಣ್ಣಲ್ಲಿ ಒತ್ತಿ ಮಾಡುವುದಿಲ್ಲವಂತೆ… ಹತ್ತಿದ ಜಗಳ ಹರಿಯಲಿಲ್ಲ…

ಪೇಟೆ ಹತ್ತಿರವಾದಂತೆ ಮಳೆಯ ಭಯ ಇನ್ನೂ ಹೆಚ್ಚಿ, ಎತ್ತಿನ ಕಾಲುಗಳು ಚೂಟಿಯಾಗತೊಡಗಿದವು. ಗಾಡಿ ಹೊಡೆಯುವವನು ಕೆಂಪ; ಧೈರ್ಯ ಬರುತ್ತದೆ. ಸರಿ ಅನ್ನುಸುದ್ದು ಬದುಕಬೇಕು; ಇಲ್ಲಾ ತುಂಬಿದ ಕೆರೆಯಲ್ಲಿ, ಇಲ್ಲಾ ನೇಣಿನಲ್ಲಿ, ಇಲಿಯೌಷಧಿಯಲ್ಲಿ… ಈ ಜೀವ ಮುಕ್ತಾಯ ಕಾಣಬೇಕು.

ಎಡಹಗಲು ಕಳೆದು ಮಧ್ಯಾಹ್ನಕ್ಕೆ ತಿರುಗುವ ಹೊತ್ತು. ಗೌಡ ಎಲೆ ಕುಯ್ಯಿಸುವುದಕ್ಕೆ ಆಳು ಕರೆದುಕೊಂಡು ಹೋಗಿದ್ದ. ತೊಟ್ಟಿ ತೊಳೆದು; ಹಟ್ಟಿಬಾಕಲು, ಹಿತ್ತಲು, ಕೊಟ್ಟಿಗೆ ಕಸಗುಡಿಸಿ, ‘ಹುಳ’ಕ್ಕೆ ಸೊಪ್ಪು ತರುವುದರಲ್ಲಿ ಹೊತ್ತಾಯಿತು. ಆತುರಾತುರದಲ್ಲಿ ಅಡಿಗೆ ಮಾಡುತ್ತಿದ್ದಳು. ಅನ್ನ ಮಾಡಿ ಇಳುಕಿ; ವಾಗೊಲೆಯಲ್ಲಿ ಸಾರು ಮಳ್ಳುತ್ತಿತ್ತು. ಎಸರು ಬಂದು ಹಿಟ್ಟು ತಿರುಗುತ್ತಿದ್ದಳು. ಬೆಂಕಿ ಸೆಕೆಗೆ ಮೈಯೆಲ್ಲಾ ಬೆವತಿತ್ತು. ಬೆವರೊರಸಿ ಸೆರಗು ಸರಿಮಾಡಿಕೊಳ್ಳಲು ಎದ್ದು ನಿಂತಾಗ ಅಡ್ಡಗೋಡೆ ಒರಗಿನಿಂತು ಗುಂಡೇಗೌಡ ಹುಸಿನಗೆ ನಗುತ್ತಿದ್ದ: ‘ಏನ್ಲ ಹೈದ್ಲೆ ನಾನ್ಬಂದು ಎಷ್ಟೊತ್ತಾಯ್ತು ಏನ್ಕತೆ… ಎಲಾ ಚೊಂಬೇಲಿ ನೀರು ತತ್ತಾ ಮತ್ತೆ ಇಲ್ಲಿ, ಬಾಳಾ ಬಾಯಾರ್‍ತದೆ ಕುಡೀಬೇಕು’ ಅಂದ. ಹಿಟ್ಟು ಸುಟ್ಟು ಹೋಗುತ್ತದೆನ್ನುವ ಭಯ. ಸರ್‍ರನೆ ಚೊಂಬಿನ ಕೊಳೆನೀರು ಹಳೆನೀರ ತಪ್ಪಲೆಗೆ ಹೂದು, ಸೆರಗಿನಿಂದ ಅಂಡುಸೀಟಿ, ಹಳಗೆಯ ನೀರು ಮೊಗೆದು, ಕೊಡುವುದಕ್ಕೆ ಹಿಂದಕ್ಕೆ ತಿರುಗಿದಳು. ಗುಂಡೇಗೌಡ ಹತ್ತಿರಕ್ಕೆ ಬಂದಿದ್ದ, ಅವನ ಅಂಗಾಂಗಗಳು ಅಸಾಧ್ಯ ಒದ್ದೆಯಿಂದ ನಡುಗುತ್ತಿದ್ದು, ದೊಂದಿಮೀಸೆಯ ಮುಖ ರಾಕ್ಷಸನದರಂತೆ ಕಾಣುತ್ತಿತ್ತು. “ನೀರ್‍ಕೊಡು ಅಂದ್ರೆ ಅರ್ಥವಾಗುದಲ್ಲ… ಏನ್ಹುಡುಗೀಲಾ ಇದು” ಅಂದವನೇ ಚೊಂಬು ಕಿತ್ತಿಟ್ಟು, ಅನಾಮತ್ತಾಗಿ ಎತ್ತಿಕೊಂಡು ಹೋಗಿ ಅಂಚಿನ ಕಿರುಮನೆಯಲ್ಲಿ ಇಳಿಸಿದ. ಇವನಿಗೆ ವದ್ದಾಟದಲ್ಲಿ, ಕೈಕಾಲು ಚಿಮ್ಮುವಿಕೆಯಲ್ಲಿ ಕೊಂಚ ಸುಸ್ತಾಗಿ, ಉಸುರಿಗೆ ನಿಂತಾಗ ಎಲ್ಲಿಲ್ಲದ ಶಕ್ತಿ ಬಂದಂತಾಗಿ ಬಲವಾಗಿ ದಮ್ಮ ಕಟ್ಟಿ, ಝಾಡಿಸಿ ಹಿಂದಕ್ಕೆ ನೂಕಿದಳು. ಗುಂಡೇಗೌಡನ ಬೆನ್ನಿನ ಹೊಡೆತಕ್ಕೆ ಸಾಲಾಗಿ ಓತಿಟ್ಟ ಕರಿಬಾನ ಸಾಲಿನ ಮಡಕೆಕುಡಿಕೆಗಳೆಲ್ಲಾ ದಿಕ್ಕಾಪಾಲಾಗಿ ಚೆಲ್ಲಿದವು. ಮೂಲೆಯಲ್ಲಿದ್ದ ಹಳೆಗೆರಗಳೆರಡನ್ನೂ ಬಲಗೈಯಲ್ಲಿ ಜೋಡಿಸಿಕೊಂಡು ತಲೆ, ಮೂಗು, ಕೆನ್ನೆ, ಕಿವಿ, ಕಣ್ಣು ಮತ್ತು ತಡೆಯಲು ಬರುವ ಕೈಗಳ ಮೇಲೆ ಬಲವಾಗಿ ಹೊಡೆದು ಬಿಟ್ಟಳು. ಅವನ ಮೂಗಿನಲ್ಲಿ ಚಳ್ಳನೆ ರಕ್ತ ಹರಿಯಿತು; ಹೆಮ್ಮೆಯೆನಿಸಿತು. ದಢಾರನೆ ಕದ ತೆಗೆದು ಬೀದಿಗೆ ಕಾಲಿಡುವುದಕ್ಕೂ, ಮೋದಿನಲ್ಲಿ ಸೊಪ್ಪು ಹೊತ್ತ ಅತ್ತೆ ಬರುವುದಕ್ಕೂ ಸರಿಹೋಯಿತು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಪಡಸಾಲೆಯಲ್ಲಿ ಉಸುರು ತೆಗೆದುಕೊಳ್ಳುತ್ತಾ ಗಟ್ಟಿಯಾಗಿ ಕೂತಳು. ಒಲೆಯ ಮೇಲೆ ಬೇಯುತ್ತಿದ್ದ ಹಿಟ್ಟಿನ ಕಂಟು ಹೊರಕ್ಕೂ ಬಡಿಯುತ್ತಿತ್ತು. ಅತ್ತೆ ಒಳಗಿನಿಂದಲೆ ತನ್ನ ಹರಕುಬಾಯಲ್ಲೇ ‘ಮಂಗ್‌ನನ್ ಸವತಿ ಒಳಾಕ್ ಬಾರೆ… ಸಾಕುದ್ದಣಿಗೆ ಈ ಕೆಲಸ ಮಾಡ್ದೇನ್ಲೆ? ನಿನಗೇನ್ಲೆ ಗೊತ್ತಾಗಬೇಕು- ಅಂಡು ಹತ್‌ಲಿಲ್ಲ, ಮ್ಯಾಲೆ ಸೀಯಲಿಲ್ಲ. ಕಿತ್ತೋದ್ನನಸವತಿ ತಂದ್ನಲ್ಲೊ ಸಿವ್ನೆ… ಉಂಟೇನಪ್ಪ, ಇದು ಉಂಟೇನಪ್ಪ?’ ಅನ್ನುತ್ತಿದ್ದವಳು ಒಳಕ್ಕೆ ಹೋಗುತ್ತಿದ್ದ ಸೊಸೆಯ ಮುಂದಲೆ ಹಿಡಿದು ದಢಾರನೆ ಜಡಿದು ನೆಲಕ್ಕುರುಳಿಸಿದಳು. ಇವಳಿಗೆ ತಲೆಯೇ ಕಿತ್ತು ಬಂದಂತೆ, ಜ್ಞಾನ ತಪ್ಪಿದಂತೆ, ಮೈಮೇಲಿನ ಅರಿವೇ ಇಲ್ಲದಂತೆ… ಕತ್ತು ಹಿಡಿದು ಹಿಂದಕ್ಕೆ ನೂಕಿ, ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ಅತ್ತೆಯನ್ನು ಒದ್ದು ಬಿಟ್ಟಳು…

ಕೋಣೆಯಲ್ಲಿ ಸುಟ್ಟ ಹಿಟ್ಟಿನ ಕಂಟು. ಅತ್ತೆ ಕೆಳಗೆ ಬಿದ್ದು ನರಳುತ್ತಿದ್ದಳು. ಗುಂಡೇಗೌಡ ಹೊದ್ದಿದ್ದ ನಲ್ಲಿ ರಕ್ತವಾಗಿದ್ದು, ಮತ್ತೆ ಮತ್ತೆ ಮೂಗಿಗೆ ಒತ್ತಿ ಹಿಡಿಯುತ್ತಿದ್ದ. ವಾಲೆ, ಮೂಗುಬಟ್ಟು, ಚಿನ್ನದ ಸರ, ಡಾಬು, ಕಾಲುಚೈನು ಮೇಲೆಸೆದು ಕೊರಳ ಸರವನ್ನು ಕಿತ್ತು ಪಳ್ಳನೆ ಮಣಿಗಳನ್ನು ಚೆಲ್ಲಿದಳು; ತಾಳಿಯನ್ನು ತೋರಿಸಿ ಬಿಸಾಕುತ್ತಾ ”ನನ್ನ ನಿನ್ನ, ನಿನ್ನ ಮಗನ ಋಣಾಸಂಬಂಧ ಏನಾರ ಇದ್ದರೆ ಇವತ್ಗೇ ಮುಗದೋಯ್ತು. ಇನ್ನು ಈ ಮನೆ ಹೊಸ್ಲ ನಾನು ತುಳುದ್ರೆ ನಮ್ಮೂರ ತಳವಾರ್‍ನ ಕಾಡನ್ಗೆ ಹುಟ್ದೋಳೇ ಸರಿ” ಅಂದು ಹೇಳಿ ಬೀದಿಯಲ್ಲಿ ತಲೆಯ ಮೇಲೆ ಸೆರಗು ಹೊದ್ದು ಕೊರಕೊರನೆ ಅಣೆಯ ಮೇಲೆ ಹತ್ತಿ ಒಬ್ಬಳೇ ನಡೆದುಬಿಟ್ಟಳು.

ಕಟ್ಟೆಯ ಏರಿಯ ಮೇಲೆ ಬರುತ್ತಿದ್ದಾಗ, ತೋಟದಲ್ಲಿ ಎಲೆ ಕುಯ್ಯುತ್ತಿದ್ದ ಗಂಡ ಮತ್ತು ಕೆಲಸಗಾರರು ಕಂಡರು. ಸಮಾಧಾನ ಮಾಡುವವರಿಗೆ ಬಗ್ಗದಿದ್ದಾಗ ಗಂಡ ”ಓಡೋಗು ಬಡ್ಡಿಯ ಎಷ್ಟು ದಿನ ಅಂತ ಹಿಡಿದಿರುಕಾದುದು ಬುಡ್ರಯ್ಯ. ಈ ಅತ್ತೇ ಸೊಸೇರ ಕಿತ್ತಾಟ ನೋಡ್ಕೊಂಡು ಬದುಕ್ತಾ ಇವ್ನಲ್ಲ ನಾನು- ನಾಮರ್‍ದ ಸೂಳೆಮಗ- ನಾನು ಹೊಂಟೋಗ್‌ಬೇಕು ಕಣ್ರಯ್ಯ” ಅಂದ. “ಅಂಗಂತ ನೂರ್‍ಸಲ ಅನ್ನು, ತಡ್ಕೊತದೆ, ನೀನು ಹೋಗಬ್ಯಾಡ, ನಿಮ್ಮವ್ವ ಹೋಗೂದು ಬ್ಯಾಡ. ನೀನು ಅವ್ವನ್ಗೆ ಮಗ ಆದಾ ಹೊರ್‍ತು, ಹೆಡ್ತಿಗೆ ಗಂಡಾ ಆಗ್ಲಿಲ್ಲ. ನೀವೇ ಸುಖವಾಗಿರಿ: ಅಣ್ಣೆಸೊಪ್ ತಿನ್ನೊಂಡಿರು ಅಣ್ಣದೀರವ್ರೆ, ಹುಟ್‌ದೂರು ದೊಡ್ಡದಾಗದೆ, ಕೂಲಿ ಮಾಡ್ಕೊಂಡ್ ತಿಂತೀನಿ ಹೋಗಯ್ಯಾಯ್ಯೋ- ಮೈ ಬಗ್ಗಿಸಿ ದುಡದ್ರೆ ಯಾವ್ಸೂಳೆ ಮಗಗಾರ ಒಂದ್ಹೋಳಂಬಲಿ ಬುಡ್ನಾರ್‍ನೇ?” ಅಂದ ಮೇಲೆ ದಡದಡನೆ ಊರಿಗೆ ಬಂದು ಬಿಟ್ಟಳು.

*

…ಕೊನೆಗೂ ಮಳೆ ಎಟುಕಿಸಿತು. ಗಾಳಿ ಹೆಚ್ಚಾದಂತೆಲ್ಲ ತಿಮ್ಮ ಪ್ಪನ ಬೆಟ್ಟದ ಕಡೆಯಿಂದ ಜೋರಾಗಿ ಬರುವ ಮಳೆ. ಅಟ್ಟೂರು ಸೇರುತ್ತಿದ್ದಂತೆಯೇ ಸಿಕ್ಕಿಕೊಂಡರು. ಎತ್ತುಗಳ ಬಾಲ ಮುರಿದು, ಚೆಚ್ಚಿ, ಗಾಡಿಗಳನ್ನು ಓಡಿಸಿದರು. ರಪರಪನೆ ಬಿದ್ದ ಹನಿಗಳು. ಎಲ್ಲರೂ ಎಲ್ಲೆಂದರಲ್ಲಿ ನಿಂತುಕೊಂಡರು. ಕೆಂಪ ಅರಳಿಮರದಡಿಯಲ್ಲಿ ಗಾಡಿಬಿಟ್ಟ. ಎತ್ತುಗಳನ್ನು ಮಾರಿಗುಡಿಯ ಪಡಸಾಲೆಯ ಅಂಚಿನಲ್ಲಿ ನೆನೆಯದಂತೆ ಕಟ್ಟಿದ; ಗಾಡಿಯ ಜನವೆಲ್ಲಾ ಒಳಕ್ಕೆ ಸೇರಿಕೊಂಡರು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಸಂಜೆಯ ಮಳೆ, ಸಂಜೆಗೆ ಬಂದ ನೆಂಟ- ಬೇಗ ಹೋಗುವುದಿಲ್ಲವಂತೆ. ಮಾರಿಗುಡಿಯಲ್ಲಿ ಎಲ್ಲರೂ ಗುಬುರು ಹಾಕಿ, ಪಿಳಪಿಳ ಕಣ್ಣು ಬಿಡುತ್ತಾ, ಅಷ್ಟಗಲದ ರಾಡಿನಲ್ಲಿ ನಡೆಯುವ ಮಳೆಯ ಆಟವನ್ನು ನೋಡುತ್ತಾ ಕೂತರು. ಹೆಂಗಸರು, ಹುಡುಗಿಯರು, ಮುದುಕಿಯರು, ಗಾಡಿ ಹೊಡೆಯುವ ಕೆಂಪ; ಮಳೆ ನೋಡುವ ಸಡಗರದ ಕಿರುಚಾಟದ ಮಕ್ಕಳು; ಪಳ್ಳನೆ ಮಿಂಚು, ಗಡಬಡ ಸದ್ದು, ರಪರಪ ಹನಿಗಳು, ಎರಚಾಡುವ ನೀರು ಬೀದಿಯಲ್ಲಿ ಹರಿಯುವ ಹುಚ್ಚು ಹೊಳೆ.

ಎಲ್ಲರೂ ಅವರವರ ಸ್ವಂತಾನುಸ್ವಂತಿಕೆಯಲ್ಲಿ ಮುಳುಗಿದ್ದರು. ಕೆಂಪ ಏನೂ ಮಾತಿಲ್ಲದೆ ಕೂತಿದ್ದಾನೆ. ನನಗೆ ಅವನ ಮೇಲೆ ಆಸೆಯಿಲ್ಲವೆಂದು ತಿಳಿದುಕೊಂಡನೇನೋ? ದಿಕ್ಕಿಲ್ಲದ ಹುಡುಗ ಹೆರವರ ಮನೆಯ ಆಳು. ಅಪ್ಪನ ಆಸ್ತಿಯನ್ನು ಸಾಲ ಕೊಟ್ಟವರು ಉಣ್ಣುತ್ತಿದ್ದಾರೆ. ಸಾಹುಕಾರ ಮದುವೆಯ ಆಸೆಯನ್ನು ಹುಟ್ಟಿಸುತ್ತಲೇ, ಕಾಲ ನೂಕುತ್ತಿದ್ದಾನೆ. ಕೂಲಿಗೆ ಹೋದಾಗ ಹೊಲಗದ್ದೆ ತೋಟತುಡಿಕೆಗಳಲ್ಲಿ ದಿನವೂ ಸಿಗುತ್ತಾನೆ.

‘ಕುರುಕ್ಷೇತ್ರ’ ನಾಟಕ ಆದ ಮಾರನೆಯ ದಿನ ಅವ್ವನಿಗೆ ಹುಷಾರಿಲ್ಲದೆ ತಾನೆ ಆಡುಕಾಯಲು ಹೋಗಿದ್ದಳು. ಕರ್ಣನ ಪಾರ್ಟಿನಲ್ಲಿ ಕೆಂಪ-ಕವಚ, ಕಿರೀಟ, ಬಣ್ಣ, ಬಟ್ಟೆಯ ಮೇಲೆ ಎಷ್ಟು ಚನ್ನಾಗಿ ಕಂಡಿದ್ದ? ಎಲ್ಲರೂ ಹೊಗಳಿದಾಗ ತನಗೇ ಯಾಕೆ ಹೆಚ್ಚು ಆನಂದವಾಗುತ್ತಿತ್ತು? ರಾತ್ರಿಯೆಲ್ಲಾ ನಾಟಕ ನೋಡಿ ಕೂತ ಕಡೆಯಲ್ಲಿ ಮಂಪರು, ಜಾರಿ ಜಾರೀ ಬೀಳುವ ರೆಪ್ಪಗಳು. ಬಿಲ್ಲು, ಬಾಣ, ಗದೆ ಹಿಡಿದ ವೀರರು, ಕಿತ್ತಾಟ, ಗೋಳಾಟ. ಆಡು ಮೇದು ಮೇದು ಮುಂದಕ್ಕೆ ಹೋಗುತ್ತಿದ್ದವು. ಕಂಡಗದರೆ, ಮೂರ್‍ಹಳ್ಳ ಕೂಡಿದ ಮೂಲೆ, ಎಲ್ಲ ಕಡೆಗೂ ಸುತ್ತಿ ಕಗ್ಗಲಿಯಲ್ಲಿ ಮೇಯುತ್ತಿದ್ದುವು. ಸಂಜೆಯ ಆಡುಗಳನ್ನು ಊರ ಕಡೆಗೆ ತಿರುಗಿಸಲು ಜೊತೆಯವರು ಇವಳನ್ನೇ ಕಳುಹಿಸಿದರು. ಹಳ್ಳದ ಆ ಕಡೆಯಿಂದ ಅಟ್ಟಿಕೊಂಡು ಬರುತ್ತಿದ್ದಾಗ ಕೆಂಪನ ದನಗಳು ಕಂಡವು, ಸಂಜೆಯಾಗುತ್ತಿದೆ. ಆ ಗಿಡಸುತ್ತಿನಲ್ಲಿ ಇನ್ನೇನು ಕತ್ತಲು ಕವಿಯುವ ಸಮಯ. ಸುತ್ತಲೂ ನೋಡಿದಳು ರೆಂಬೆಗಳೊಡೆದು ಹಸಿರು ಪಲ್ಲೇಸಿದ ಕಗ್ಗಲಿಮೆಳೆ; ಕೆಳಗೆ ಬೆಳೆದ ಮೆತ್ತನೆಯ ಹುಲ್ಲಿನ ಮೇಲೆ ಕೆಂಪ ಮಲಗಿದ್ದಾನೆ. ದೂರದಲ್ಲಿ ಆಡು ಕಾಯುವ ಹುಡುಗರು. ಮೈಯಲ್ಲಿ ರಕ್ತ ಎಲ್ಲ ಕಡೆಯೂ ವೇಗವಾಗಿ ಓಡಾಡುತ್ತಿತ್ತು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಧೈರ್ಯ ಮಾಡಿ ಕರೆದಳು, ಎಚ್ಚರವಿಲ್ಲ. ಹೋಗೋಣವೆಂದರೆ ಮನಸ್ಸಾಗಲಿಲ್ಲ. ಹೋಗಿ ಹತ್ತಿರ ಕೂತು ಬೆವರುತ್ತಾ ಭುಜ ಅಲುಗಿಸಿ, “ಕ್ಯೆಂಪಣ್ಣ, ಕ್ಯೆಂಪಣ್ಣಾ” ಅಂದು ಜೋರಾಗಿ ಕೂಗುವುದರಲ್ಲಿ ವದ್ದೆಯಾಗಿ ಹೋದಳು. ‘ಊ’ ಎಂದು ನಿಧಾನವಾಗಿ ಎದ್ದು ಕೂತು ನೋಡಿದ. ಬಹಳ ಸುಂದರವಾಗಿ ಕಂಡ, ತಲೆಗೆ, ಒತ್ತಿಗೆ ಹಾಕಿಕೊಂಡಿದ್ದ ಚೌಕದಿಂದ ಕಣ್ಣೊರಸಿ ನೋಡುತ್ತಾ ಎದ್ದ. ‘ಇವತ್ತು ನೀನ್ ಬಂದಿದ್ದ ಆಡ್ಗೆ?’ ಅನ್ನತ್ತಾ ‘ಒಳ್ಳೇದ್ಮಾಡ್ದೆ, ನಡಿ ನಡಿ ಕತ್ಲಾಯ್ತದೆ’ ಅನ್ನುತ್ತಾ ದನಗಳಿದ್ದ ಕಡೆಗೆ ನಡೆದ. ಎಷ್ಟು ಹತ್ತಿರದವನಾಗಿ ಕಾಣುತ್ತಾನೆ ಅನ್ನಿಸಿ, ಆ ವಿಶಾಲ ಮೌನದಲ್ಲಿ ತಕತಕನೆ ಕುಣಿಯಬೇಕೆನ್ನಿಸಿ, ಎಚ್ಚರವಾದಂತಾಗಿ ಸುತ್ತಲೂ ನೋಡಿ… ಓಡಿ ಓಡಿ ಜೊತೆಯವರೊಡನೆ ಸಡಗರದಿಂದ ಸೇರಿಕೊಂಡಳು.

…ಮಳೆ ನಿಲ್ಲದುದ್ದನ್ನು ಕಂಡು ಕೂತವರಿಗೆ ಮುಜುಗರ. ಕತ್ತಲೆಯಾಗುತ್ತಿದ್ದ ಸೂಚನೆ ಜೋರಾಗಿ ಬೀಸುವ ಗಾಳಿ ನಿಲ್ಲುವಂತೆ ಕಾಣಲಿಲ್ಲ. ಈ ಊರಿನಲ್ಲಿ ಬದುಕಬೇಕಾಗಿದ್ದ ಹುಡುಗಿ ನಾನು. ಜೀವನ ಹೇಗೆ ಹೇಗೋ ರೂಪುಗೊಳ್ಳುತ್ತಿರುವುದರ ಬಗ್ಗೆ ಸೋಜಿಗ, ಭಯ ಉಂಟಾದುವು. ಆ ಕಡೆಗೆ ವಲ್ಲಿ ಹೊದ್ದು ಕೂತ ಕೆಂಪ. ಸುತ್ತ ಹೆಂಗಸರು, ಮಕ್ಕಳು. ಮೂಕವಾಗಿ ಮೂಲೆ ಹಿಡಿದ ಮಾರಮ್ಮ. ಮದುವೆಯಾದ ಹೊಸತರಲ್ಲಿ ಹಬ್ಬದಲ್ಲಿ ಉಪ್ಪಾರ ತಂದಿದ್ದ ನೆನಪು. ಬೀಳುತ್ತಿರುವ ಮಳೆ ನೀರು.

ಕೆಂಪನೊಂದಿಗೆ ಸೇರಿಬಿಡಬೇಕು. ಯಾವುದಕ್ಕೂ ಗಮನ ಕೊಡದ ಅಣ್ಣಂದಿರು; ಆಡಿಕೊಳ್ಳುವ ಅತ್ತಿಗೆಯರು. ಯಾವ ಕಡೆಗೂ ಏನೂ ಹೇಳದೆ ಒಳಗೆ ಎಲ್ಲಕ್ಕೂ ನರಳುವ ಅವ್ವ. ಬುದ್ದಿ ಹೇಳುವವರಿಲ್ಲದೆ, ನೀನೇ ಅನ್ನುವವರಿಲ್ಲದೆ, ನಂಬುವವರಿಲ್ಲದೆ, ನಿತ್ಯ ತಲೆ ಸುಟ್ಟುಕೊಂಡು ಬದುಕುವ ಈ ‘ಕರ್ಮ’ ಸಾಕು. ಓದಿನ ದಿನಗಳು, ನೆನಪಾಗುತ್ತವೆ. ಹರಟೆಯ, ಕೀಟಲೆಯ ಹುಡುಗರು: ಕತೆ ಹೇಳುವ, ಹೊಡಿಯುವ, ಮುದ್ದಿಸುವ ಮೇಷ್ಟ್ರು. ಎಮ್ಮೆ, ದನ, ಬಯಲು, ಹಣ್ಣು-ಹಂಪಲು, ರಾಣಿ ಪಾರ್ಟು, ಹಿರಿಕೆರೆಯ ಈಜಾಟ, ಅತ್ತಿಮರದ ಹಳ್ಳದಲ್ಲಿ ಕುಪ್ಪಳಿಸಾಟ- ಬದುಕಿನಲ್ಲಿ ಸುಖಕಂಡ ದಿನಗಳು. ಉಳಿದುದಕ್ಕೆ ಏನು ಬೆಲೆ? ಬದುಕಬೇಕು: ತೊಡರುಗಾಲಿನವರ ನಡುವೆಯೂ ಗಟ್ಟಿಯಾಗಿ. ಮಳೆ ನಿಂತದ್ದು ಕಂಡು ಎಲ್ಲರಿಗೂ ಖುಷಿಯಾಯಿತು. ತಟತಟನೆ ಬಂದು ಗಾಡಿಯಲ್ಲಿ ಕೂತರು. ಮೈಲಿದೂರದ ಊರನ್ನು ಮತ್ತೆ ಮಳೆ ಎಟಕಿಸುವಷ್ಟರಲ್ಲಿ ತಲಪುವ ಆತುರದಲ್ಲಿ, ಕೆಂಪ ಸಾರಥ್ಯದ ಸಕಲ ಸನ್ನಾಹದಲ್ಲಿಯೂ ಮಗ್ನನಾದ.

*

ಹೊರಗೆ ಬೀದಿಯಲ್ಲಿ, ಸೂರಿನ ಸಂದಿಯಲ್ಲಿ ಸುರಿದ ತಿಂಗಳ ಬೆಳಕು. ಮಳೆ ಹೂದು ನಿಂತ ತಂಪು ನೆಲದಿಂದ ಬೀಸುವ ಕಮ್ಮನೆ ಗಾಳಿ. ಈ ಪ್ರಶಾಂತತೆಗೆ ಹೊಂದಿಕೊಂಡಂತೆಯೇ ಸಾಗುತ್ತಿರುವ ಕಪ್ಪೆಗಳ ಲಯಬದ್ಧ ಮೇಳ. ಪಡಸಾಲೆಯ ಚಿಕ್ಕ ಕೋಣೆಯಲ್ಲಿ ನಾಲ್ಕಾರು ಮಡಕೆಗಳು; ಅಡಿಗೆಯ ಮೂಲೆ. ನಿದ್ದೆ ಮಾಡುತ್ತಿರುವ ಅವ್ವ. ಮನೆಯ ಒಳಕೋಣೆಗಳಲ್ಲಿ ಅಣ್ಣ-ಅತ್ತಿಗೆಯರು. ಇಷ್ಟು ಓಡಾಟದ ನಡುವೆಯೂ ಇವಳಿಗೆ ನಿದ್ದೆಯಿಲ್ಲ. ಕೆಂಪ ಕಾಡುತ್ತಾನೆ. ಎಲ್ಲ ಸಿದ್ಧತೆ ಮುಗಿಸಿಬಿಡಬೇಕು.

ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಸದ್ದಡಗಿದ ರಾತ್ರಿಯಲ್ಲಿ, ಕದತಳ್ಳಿ ಮೆಲ್ಲಗೆ ಬಂದು ಮೂಲೆಯಲ್ಲಿ ಕೂತ. ಮಲಗಿದ್ದ ಅವ್ವ ಎದ್ದು ಕಾಲುಮುದುರಿ ಕೂತಳು. ನಾನು ಕೂತೇ ಇದೆ. ಹೊರಗಡೆಗೆ, ಅಣ್ಣ ಅತ್ತಿಗೆಯರಿಗೆ ಕೇಳುತ್ತದೆನ್ನುವ ಭಯ. ಅವ್ವನ ಹತ್ತಿರ ಬಂದು ತಲೆಬಗ್ಗಿಸಿ ಹೇಳಿದ: “ನಾಳೆ ಅಂದದ್ದು ಹಾಳು, ಇವತ್ತೇ ಹೋಗ್ಬೂಡೂನ. ಶಿವ ಮಾಡ್ದಂಗಾಗ್ಲಿ. ಸದ್ದಿಲ್ಲದಂಗೆ ನಮ್ಮ ಕೆಲ್ಸ ನಾವು ಮಾಡ್ಕೊಂಡು ಬರೂನ. ಇನ್ನು ಹಿಂದೆ ಮುಂದೆ ನೋಡೂದ್ರೆ ಪ್ರಯೋಜ್ಣ ಇಲ್ಲ. ಬೆಳ್ಳಿ ಹುಟ್ಟುವತ್ಗೆ ಬಂದಿ ಏಳಿಸ್ತೀನಿ” ಅಂದ. ಅವ್ವ, ನಾನು, ಅವನು… ಯಾರೂ ಮಾತಾಡಲಿಲ್ಲ. ಬಹಳ ಹೊತ್ತು ಹಾಗೇ ಇದ್ದಾಗ ”ಯಾವುದ್ನೂ ಹೇಳಿ ಮತ್ತೆ” ಅಂದ; ಅವ್ವ ”ಆಗ್ಲಿ ನಡಿಯಪ್ಪ” ಅಂದಳು. ನನಗೆ ಮೈಯೆಲ್ಲ ಬೆಚ್ಚಗೆ, ಹರ್ಷ ಮೂಡಿದ ಹಾಗೆ, ಸಮಾಧಾನ ಸಿಕ್ಕಿದಂತೆ, ಅವ್ವ ಅತ್ಯಂತ ಒಳ್ಳೆಯವಳಾಗಿ… ಕೆಂಪ ಸದ್ದಿಲ್ಲದೆ ಎದ್ದು ಹೋದ.

ಇನ್ನು ತಡಮಾಡದೆ ಹೋಗಬೇಕು. ಹೊಳೆ ಹನುಮಂತರಾಯನ ಗುಡಿಯ ಹತ್ತಿರ ಸ್ನಾನಮಾಡಿ, ಪೂಜೆಮಾಡಿ, ಅವ್ವನ ಸಾಕ್ಷಿಯಲ್ಲಿ ತಾಳಿ ಕಟ್ಟಿಸಿಕೊಳ್ಳಬೇಕು. ಅಣ್ಣ ಅತ್ತಿಗೆಯರ, ಬಂಧುಗಳ, ಜನಗಳ, ಆಡಿಕೊಳ್ಳುವವರ ಕಣ್ಣುಮುಂದೆ ಅವ್ವನನ್ನು ಸಾಕುತ್ತಾ ಕೆಂಪನ ಜೊತೆಯಲ್ಲಿ ಅರೆಕಲ್ಲ ಮೇಲಾದರೂ ಅನ್ನ ಹುಟ್ಟಿಸಿಕೊಂಡು ತಿನ್ನಬೇಕು; ಬದುಕಬೇಕು.

ಮಗ್ಗಲು ಬದಲಾಯಿಸಿದಳು. ನಿದ್ದೆಯಲ್ಲಿ ಅವ್ವ; ನೀರವ ಮೌನ, ಅದನ್ನು ಕದಡುವ ಕಪ್ಪೆಗಳು; ಸುದೀರ್ಘ ವಟವಟ. ಕೆಟ್ಟ ಮದುವೆಯ ದಿನಗಳು. ಗಂಡಾಂತರಗಳು, ಕೆಂಪ: ಬಣ್ಣ ಬಣ್ಣದ ಸಂಜೆ ಸೂರ್ಯ ಮರೆಯಾಗುತ್ತಿದ್ದಾಗ ಮಸುಕು ಮಸುಕು ಬೆಳಕಿನಲ್ಲಿ ಸಿಕ್ಕಿ ಮಾತಾಡಿದ. ಮೆದೆಯ ಮೂಲೆಯಲ್ಲಿ ಕಾಣದಂತೆ ಹತ್ತಿರ ಹತ್ತಿರ ಕೂತರು. ಸದ್ದಿಲ್ಲದೆ ಒಂದಾಗುವ ಒಪ್ಪಿಗೆಯ ದನಿ; ಅವ್ವನ ಒಪ್ಪಿಗೆಗಾಗಿ ಪ್ರಯತ್ನ.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಯಾಕೆ ಹೀಗೆಲ್ಲಾ ಕಣ್ಣಿಗೆ ಕಟ್ಟುತ್ತವೆ? ಅವ್ವ ಊರಲ್ಲಿರಲಿಲ್ಲ. ಅಣ್ಣನ ಮಗಳ ಜೊತೆಯಲ್ಲಿ ಒಬ್ಬಳೇ… ಒಳಗೆ ಬಂದ. ಉತ್ಸಾಹ: ಹಿಗ್ಗು, ಮಂಪರು, ಮಂಪರು ನಿದ್ದೆ. ಕೆಂಪನ ಜೊತೆಯಲ್ಲಿ ದೊಡ್ಡ ಕಾಡಿನಲ್ಲಿ ನಡಿಗೆ, ದಣಿವಾರಿಸಿಕೊಳ್ಳುವುದಕ್ಕೆ ದಾರಿಯ ಮರದ ಕೆಳಗೆ ಕೂತರು. ಕೋರೆಹಲ್ಲಿನ ಎತ್ತರ ಎತ್ತರಾಕೃತಿಯ ಭಯಂಕರ ರಾಕ್ಷಸ. ಕೈಚಾಚಿ ಎಳೆದುಕೊಂಡು ಹೆಗಲಮೇಲೆ ಕೂರಿಸಿಕೊಂಡ. ಕಿರುಚಲು ನಾಲಗೆಯಿಲ್ಲದೆ ಕೈಕಾಲು ಬಡಿಯುವುದಕ್ಕೆ ಆಗದೆ, ಕೆಂಪನ ಕಡೆಗೆ ತಿರುಗಿದಳು. ಅವನನ್ನೂ ಸುತ್ತಿ ಸುತ್ತಿ ನುಲಿದು ಹಿಡಿದುಕೊಂಡು ತಲೆಗೆ ಬಾಯಿಹಾಕಿದ ಹೆಬ್ಬಾವು… ಕೂಗಿಕೊಳ್ಳಲು ಆಗದೆ ಮೈಯೆಲ್ಲಾ ತೊಯ್ದು ಹೋಗಿ, ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡಳು… ದಢಾರನೆ ಎದ್ದು ಕೂತಳು. ಒಂದೇ ಸಮನೆ ಏದುಸಿರು; ನಡುಗುವ ಅಂಗಾಂಗಗಳು; ಒದ್ದೆಯಾದ ಮೈ… ಥೂ ಹಾಳು ಕನಸೇ- ಅಂದುಕೊಂಡು ನಿದ್ದೆ ಬಾರದೆ ಹಾಗೇ ಕಿಂಡಿಗಳಲ್ಲಿ ಬೆಳುದಿಂಗಳು ಸುರಿಯುವ ಸೂರೆಡೆಗೆ ಕಣ್ಣು ಹಾಯಿಸಿದಳು.

ಬೀದಿಯಲ್ಲಿ, ಪಡಸಾಲೆಯಲ್ಲಿ, ಬಾಗಿಲಲ್ಲಿ, ಹೆಜ್ಜೆಯ ಸದ್ದು… ಕದ ತೆಗೆದಳು: ಕೆಂಪ. ‘ಏಳಿ ಹೊತ್ತಾಯ್ತು. ತೋಪುನ್‌ತಾವು ನಿಂತ್‌ಕೋತಿನಿ, ಸರಸರನೆ ಬಂದ್ಬುಡಿ’ ಅಂದು ಹೊರಟ. ಅವ್ವನನ್ನು ಏಳಿಸಿದಳು. ಹಣ್ಣು ಕಾಯಿನ, ಬಟ್ಟೆಯ ಸಣ್ಣ ಗಂಟು ಹಿಡಿದು ಅವ್ವ ಮಗಳು, ಸದ್ದಾಗದಂತೆ ಬೀಗಹಾಕಿ, ಬೀದಿಗಿಳಿದರು.

ನೆತ್ತಿಯಲ್ಲಿ ಪಡುವಣಕ್ಕೆ ಕೊಂಚ ಬಾಗಿದ ಚಂದ್ರ. ಲೆಕ್ಕವಿಲ್ಲದಷ್ಟು ಚುಕ್ಕಿಗಳು. ಮೇಲಿನಿಂದ ಕೆಳಕ್ಕೆ ನೀಟಾಗಿ ಹಾದ ಹೊಸಕೇರಿ. ಈರನಗುಡಿ ದಾಟಿ, ನೀರ್‍ಹೊಳೆ ಹಾದಿಯಲ್ಲಿ, ಅರಳಿಮರದಡಿಗೆ ಬಂದಾಗ ಕಾಯುತ್ತಿದ್ದ ಕೆಂಪನೂ ಸೇರಿಕೊಂಡ. ಬೇವೂರಿನ ದಾರಿಯಲ್ಲಿ ಅಡ್ಡಮೋರಿ ದಾಟಿ, ಕಾಲುವೆ ಏರಿಯ ಮೇಲೆ ಹೋಗ ಹೋಗುತ್ತಾ ತೋಟಮಾಳದ ಗುಂಪಿನಲ್ಲಿ ಕರಗಿ ಹೋದರು. ಸುತ್ತಮುತ್ತಿನ ಊರಿನಲ್ಲಿ ನಾಯಿಗಳ ಬೊಗಳು, ಕೋಳಿಯ ಕೂಗು.

(ಕೃಪೆ: ಬೆಟ್ಟಸಾಲು ಮಳೆ ಕಥಾ ಸಂಕಲನ, ಪ್ರ: ಕನ್ನಡ ಸಾಹಿತ್ಯ ಪರಿಷತ್ತು, ಬೆಲೆ: ರೂ. 115)

Kalegowda Nagavara

ಕಾಳೇಗೌಡ ನಾಗವಾರ(1947): ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ 1947ರ ಫೆಬ್ರವರಿ 2ರಂದು ಜನಿಸಿದರು. ತಂದೆ ಸಿದ್ದೇಗೌಡ ಮತ್ತು ತಾಯಿ ಲಿಂಗಮ್ಮ. ನಾಗವಾರ, ಚನ್ನಪಟ್ಟಣ, ಮಂಡ್ಯ, ಮೈಸೂರಿನಲ್ಲಿ ಶಿಕ್ಷಣ. ಕನ್ನಡ ಎಂಎ ಮತ್ತು ಸ್ನಾತಕೋತ್ತರ ಪದವೀಧರರು. ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಾಹಿತ್ಯದ ಪ್ರಾಧ್ಯಾಪಕರಾಗಿ ಸೇವೆ. ಜಾನಪದ ಸಾಹಿತ್ಯಕ್ಕೆ ಆಧುನಿಕತೆಯ ಮೆರುಗು ನೀಡಿದವರು. ಕ್ರಿಯಾಶೀಲ ಸಂಘಟಕರಾಗಿ ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿದ್ದರು. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಕವಿ, ಕತೆಗಾರರಾಗಿ; ಸಂಪಾದಕ, ಚಿಂತಕ, ವಿಮರ್ಶಕ ಹಾಗೂ ಜಾನಪದ ತಜ್ಞರಾಗಿ ಗುರುತಿಸಿಕೊಂಡವರು. ಅವರ ಕತೆಗಳಲ್ಲಿ ಗ್ರಾಮೀಣ ಸಂವೇದನೆ ಮತ್ತು ಬಂಡಾಯ ಆಶಯಗಳು ಎದ್ದುಕಾಣುವಂತದ್ದು. ಪ್ರಕಟಿತ ಕೃತಿಗಳು: ಬೆಟ್ಟಸಾಲು ಮಳೆ, ಅಲೆಗಳು, ಈ ಮಂಜಿನೊಳಗೆ, ಕಣ್ಣಾಚೆಗೆ, ಕಥಾಸಂಪುಟ (ಕಥಾ ಸಂಕಲನಗಳು), ಕರಾವಳಿಯಲ್ಲಿ ಗಂಗಾಲಗ್ನ, ಕನ್ನೆಯ ಸ್ನೇಹ, ಗಾಳಿ ಬೆಳಕಿನ ಪಯಣ (ಕವನ ಸಂಕಲನಗಳು), ತ್ರಿಪದಿ ರಗಳೆ ಮತ್ತು ಜನಪದ ಸಾಹಿತ್ಯ, ಪ್ರೀತಿ ಮತ್ತು ನಿರ್ಭೀತಿ, ಸರ್ವಜ್ಞ ಮತ್ತು ಹರಿಹರ, ಸೃಜನಶೀಲ ವೈಚಾರಿಕತೆ, ಭಿನ್ನಮತದ ಸೊಗಸು (ವಿಮರ್ಶಾ ಲೇಖನಗಳು), ಬೇಕಾದ ಸಂಗತಿ, ಬೀದಿಮಕ್ಕಳು ಬೆಳೆದೊ, ಗರಿಗೆದರಿದ ನವಿಲು, ಜಾನಪದ ತುಂಬುಹೊಳೆ, ಸಾಲು ಸಂಪಿಗೆ ನೆರಳು, ಹಲವು ತೋಟದ ಹೂಗಳು, ಮನದಾಳದ ಕನಸುಗಳು, ಗಿರಿಜನ ಕಾವ್ಯ, ಗಿರಿಜನ ಸಂಸ್ಕೃತಿ, ಬಯಲು ಸೀಮೆಯ ಲಾವಣಿಗಳು (ಜಾನಪದ), ಬೇವಿನಹಳ್ಳಿ ಹಾಡುಗೊಲ್ಲರ ಹಟ್ಟಿ (ಸಂಶೋಧನೆ), ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ರಾಮಮನೋಹರ ಲೋಹಿಯಾ ಸಂಪುಟಗಳು, ಜೀವನ ಪ್ರೀತಿ, ಕೊಡಗಿನ ಗೌರಮ್ಮ ಬರೆದ ಕಥೆಗಳು, ಜೀಶಂಪ ಅವರ ಜನಪದ ಬರಹಗಳು(ಸಂಪಾದನೆ), ಮಂಗಳಕರ ಚಿಂತನೆ (ಸಾಹಿತ್ಯದ ಮಗ್ಗಲುಗಳ ಕುರಿತಾದ ಚಿಂತನೆಗಳು). ಇವರಿಗೆ ಕರ್ನಾಟಕ ರಾಜ್ಯೋತ್ಸವ ಗೌರವವೂ ಸೇರಿದಂತೆ ಹಲವು ಪ್ರಶಸ್ತಿಗಳು, ಅಕಾಡೆಮಿಗಳ ಪುರಸ್ಕಾರಗಳು ಸಂದಿವೆ. ಸದ್ಯ ಮೈಸೂರಿನಲ್ಲಿ ನೆಲೆಯಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...