- ಮುಂಬರುವ ಮಳೆಗಾಲಕ್ಕೆ ಸಿದ್ಧತೆಗಾಗಿ ಬಿಬಿಎಂಪಿ ಕಚೇರಿಯಲ್ಲಿ ಸಭೆ
- ಕಚ್ಚಾ ಡ್ರೈನ್‌ಗಳಲ್ಲಿ ಮೊದಲ ಆದ್ಯತೆಯಾಗಿ ಹೂಳು ತೆರವುಗೊಳಿಸಬೇಕು
ಮುಂಬರುವ ಮಳೆಗಾಲದಲ್ಲಿ ಸಮರ್ಪಕವಾಗಿ ಅತಿವೃಷ್ಟಿ ಪರಿಸ್ಥಿತಿ ಎದುರಿಸುವ ಸಂಬಂಧ ಈಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಬರವ ಮಳೆಗಾಲಕ್ಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಾವೃತವಾಗುವ ಸೂಕ್ಷ್ಮ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ರಸ್ತೆ ಮೇಲೆ ಬಿದ್ದಂತಹ ನೀರು ಸರಾಗವಾಗಿ ಕಾಲುವೆಗಳಿಗೆ ಹರಿದುಹೋಗುವಂತೆ ಮಾಡಬೇಕು” ಎಂದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಪ್ಯಾಕೇಜ್‌ಗಳಲ್ಲಿ 512 ಕಡೆ ರಾಜಕಾಲುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಚ್ಚಾ ಡ್ರೈನ್‌ಗಳಲ್ಲಿ ಮೊದಲ ಆದ್ಯತೆಯಾಗಿ ಹೂಳು ತೆರವುಗೊಳಿಸಬೇಕು. ಜತೆಗೆ ಪ್ರಾಥಮಿಕ ರಾಜಕಾಲುವೆ, ದ್ವಿತೀಯ ರಾಜಕಾಲುವೆ, ರಸ್ತೆ ಬದಿಯ ಶೋಲ್ಡರ್ ಡ್ರೈನ್‌ಗಳಲ್ಲಿ ವಾರ್ಷಿಕ ನಿರ್ವಹಣೆಯ ಗುತ್ತಿಗೆದಾರರ ಮೂಲಕ ಹೂಳನ್ನು ತೆರವುಗೊಳಿಸಬೇಕು” ಎಂದು ಹೇಳಿದರು.
ಕಂಟ್ರೋಲ್ ರೂಂ ವ್ಯವಸ್ಥೆ
“ಮುಂಬರುವ ಮಳೆಗಾಲಕ್ಕೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿಗಳಿದ್ದು, ಎಲ್ಲ ನಿಯಂತ್ರಣ ಕೊಠಡಿಗಳಲ್ಲಿ ದಿನದ 24 ಗಂಟೆಯೂ ಇಂಜಿಯರ್‌ಗಳು ಕಾರ್ಯನಿರ್ವಹಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರಗ ಉತ್ಸವ ವೇಳೆ ಬೆಂಕಿ ಅವಘಡ; 10ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
“ಮಳೆಗಾಲದ ವೇಳೆ ನಗರದಲ್ಲಿ ಹೆಚ್ಚು ಜಲಾವೃತವಾಗುವ ಸೂಕ್ಷ್ಮ ಪ್ರದೇಶಗಳ ಮೇಲೆ ಗಮನವಿಡಬೇಕು. ಈ ಸಂಬಂಧ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜೊತೆಗೆ ಸೂಕ್ಷ್ಮ ಪ್ರದೇಶಗಳ ಮೇಲೆ ಗಮನಹರಿಸುವ ವಿಚಾರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ” ಎಂದರು.
ಈ ಸಭೆಯಲ್ಲಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.