ಈ ದಿನ ಸಂಪಾದಕೀಯ | ಕಪ್ಪು ಅಧ್ಯಾಯಗಳ ತಿಪ್ಪೆಗಳಿವೆ… ಯಾವ ರಂಗೋಲಿ ಬಿಡಿಸಿ ಮುಚ್ಚುವಿರಿ?

Date:

ಚರಿತ್ರೆಯನ್ನು ತಿದ್ದಿ ಬರೆಯ ಹೊರಟವರ ಚರಿತ್ರೆಗಳಲ್ಲಿ ಎಂದಿಗೂ ಮಾಯದ ಕೊಳೆತು ನಾರುವ ಸಾವಿರಾರು ಹುಣ್ಣುಗಳಿವೆ. ಅವುಗಳ ಮೇಲೆ ಮುಲಾಮು ಸವರಿ ಬರೀ ಪಟ್ಟಿ ಕಟ್ಟಿ ಮುಚ್ಚುವವರು ಅರಿಯಬೇಕಿದೆ. ಅಂಗಕ್ಕೆ ಹತ್ತಿದ ಗ್ಯಾಂಗ್ರೀನು ನಂಜು ಒಡಲನ್ನೇ ಬಲಿ ಪಡೆದೀತು.

ಚರಿತ್ರೆಯನ್ನು ತಿದ್ದಿ ಬರೆಯ ಹೊರಟವರ ಚರಿತ್ರೆಗಳಲ್ಲಿ ಎಂದಿಗೂ ಮಾಯದ ಕೊಳೆತು ನಾರುವ ಹುಣ್ಣುಗಳು ಸಾವಿರಾರು.

ಆರೆಸ್ಸೆಸ್ ನಿಷೇಧ, ಗೋಧ್ರಾ ಕೋಮುಗಲಭೆ, ಗಾಂಧೀ ಹತ್ಯೆ, ಮುಘಲ್ ಆಡಳಿತದ ಅಂಶಗಳನ್ನು ಎನ್.ಸಿ.ಇ.ಆರ್.ಟಿ. ಶಾಲಾ ಪಠ್ಯಗಳಿಂದ ಕಿತ್ತು ಹಾಕಲಾಗಿದೆ.

ಪುಣೆಯ ಒಬ್ಬ ಬ್ರಾಹ್ಮಣ, `ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದ್ದವರೆಂದು ಗಾಂಧೀಜಿಯನ್ನು ಬಣ್ಣಿಸಿದ್ದ ಪತ್ರಿಕೆಯೊಂದರ ಸಂಪಾದಕ’ ಎಂಬುದಾಗಿ ಗಾಂಧೀ ಹಂತಕ ನಾಥೂರಾಮ ಗೋಡ್ಸೆಯನ್ನು ಬಣ್ಣಿಸಿದ್ದ ಪದಗಳು ಕೂಡ ಮಾಯವಾಗಿವೆ. ಗೋಧ್ರಾ ಕೋಮುಗಲಭೆಯ ಎಲ್ಲ ಪ್ರಸ್ತಾಪಗಳನ್ನೂ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ.

ಚರಿತ್ರೆಯ ತಿದ್ದಿ ಬರೆಯುವ ಪ್ರಯತ್ನಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಬಂದಿವೆ. ಬಿಜೆಪಿ ಮತ್ತು ಸಂಘಪರಿವಾರವೂ ಈ ಮಾತಿಗೆ ಹೊರತಲ್ಲ. ದಶಕಗಳಿಂದ ನಡೆಯುತ್ತಿದ್ದ ಈ ಯೋಜನೆಗೆ ಮೋದಿಯವರು ಅಧಿಕಾರ ಹಿಡಿದ ನಂತರ ರಭಸ ದೊರೆತಿದೆ. ಗೆದ್ದವರು ತಮ್ಮ ಅನುಕೂಲದ ಲಾಭ ನಷ್ಟಗಳ ಅಳತೆಗೆ ತಕ್ಕಂತೆ ಚರಿತ್ರೆಯನ್ನು ಕತ್ತರಿಸಿ ಹೊಲಿದು ಇಡುತ್ತಾರೆ. ಕೆಳಗೆ ಬಿದ್ದವರ ನೋವು ಯಾತನೆ ಕಣ್ಣೀರುಗಳು ಧೂಳಿಗೆ ಬೆರೆತು ಮತ್ತೆಂದೂ ಕಾಣದಂತೆ ಮಣ್ಣಾಗಿಬಿಡುತ್ತವೆ.

ಮಹಾಕವಿ ಶ್ರೀರಂಗಂ ಶ್ರೀನಿವಾಸರಾವು ಹೇಳುತ್ತಾರೆ – `ಯಾವ ದೇಶದ ಚರಿತ್ರೆ ನೋಡಿದರೂ ಏನಿದ್ದೀತು ಗರ್ವಕಾರಣ… ನರಜಾತಿ ಚರಿತ್ರೆ ಸಮಸ್ತವೂ ಪರಪೀಡನ ಪಾರಾಯಣ… ನರಜಾತಿ ಚರಿತ್ರೆ ಸಮಸ್ತವೂ ದರಿದ್ರರನು ಸುಟ್ಟು ತಿನ್ನುವುದೇ ಅಲ್ಲವೇನು….?’

ಜಾತಿಪದ್ಧತಿ, ಹಿಂದುತ್ವ, ಮೂಲಭೂತವಾದವನ್ನು ವಿರೋಧಿಸುವ ಲೇಖಕರ ಕೃತಿಗಳನ್ನು ಪಠ್ಯಕ್ರಮಗಳಿಂದ ತೆಗೆದು ಹಾಕುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಸಂಗತಿ.

ಹಿಟ್ಲರ್ ಕೂಡ ದೂರ ಗತದ ಹುಸಿ ಚರಿತ್ರೆಗಳಲ್ಲೂ, ಬಹಳೇ ಮುಂದು ಮುಂದಿನ ಅವಾಸ್ತವಿಕ ಭವಿಷ್ಯತ್ತಿನಲ್ಲೂ ಜೀವಿಸುತ್ತಿದ್ದ. ಗತದ ಹುಸಿಚರಿತ್ರೆಯನ್ನೂ ಅವಾಸ್ತವಿಕ ಭವಿಷ್ಯತ್ತನ್ನೂ ಬೆರೆಸಿ ನಾಜಿ ಜರ್ಮನಿಯನ್ನು ಕಟ್ಟಲು ಮುಂದಾಗಿದ್ದ. ಇವನಂತಹ ಚಂಡಪ್ರಚಂಡರು ನಿಜವಾಸ್ತವದ ವರ್ತಮಾನಕ್ಕೆ ಕಣ್ಣು ತೆರೆಯುವುದೇ ಇಲ್ಲ. ಭೌತಿಕ ಭೂದೃಶ್ಯವನ್ನು ಮಾತ್ರವಲ್ಲದೆ ನೆನಪಿನ ಭೂದೃಶ್ಯವನ್ನೂ ಅಳಿಸಿ ಹಾಕುವ ಎಲ್ಲ ಪ್ರಯತ್ನವನ್ನು ಹಿಟ್ಲರ್ ನಡೆಸಿದ್ದ.

ಶಿಕ್ಷಣ ಪದ್ಧತಿಯನ್ನು ಹೊಲಬುಗೆಡಿಸಿ ಎಳೆಯ ಜನಾಂಗದ ಮೆದುಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿದ್ದರು ನಾಜೀಗಳು. ಆಲೋಚಿಸುವ ಸಾಮರ್ಥ್ಯವನ್ನೂ, ಪ್ರಶ್ನಿಸುವ ಮನಸ್ಥಿತಿಯನ್ನೂ ಅಳಿಸಬೇಕಿತ್ತು. ನಾಜೀ ‘ಲೋಕದೃಷ್ಟಿ’ಗೆ ವಿಧೇಯತೆಯನ್ನೂ, ವಿಶ್ವಾಸವನ್ನೂ ಮಕ್ಕಳಲ್ಲಿ ನೆಡುವುದು ಅವರ ಯೋಜನೆಯಾಗಿತ್ತು. `ವಸುಧೈವಕ ಕುಟುಂಬಕಂ’ ಎಂಬ ಮಂತ್ರ ಜಪಿಸುತ್ತಲೇ ಮುಸ್ಲಿಮ್ ಮುಕ್ತ, ಕ್ರೈಸ್ತ ಮುಕ್ತ, ಆದಿವಾಸಿ ಮುಕ್ತ, ದಲಿತ ಮುಕ್ತ, ಭಿನ್ನಮತ ಮುಕ್ತ ಭಾರತವನ್ನು ಕಟ್ಟಲು ಹೊರಟಿದ್ದಾರಲ್ಲ, ಥೇಟ್ ಹಾಗೆಯೇ.

ಮಕ್ಕಳು ಕಲಿಯುವುದನ್ನು ಬದಲಿಸುವುದು ಅವರ ಆದ್ಯತೆಯಾಗಿತ್ತು. ಪಠ್ಯಕ್ರಮದ ತಿರುಳಿಗೆ ಕೈ ಹಾಕಿದರು. ಇತಿಹಾಸ ಮತ್ತು ಜನಾಂಗೀಯ ವಿಜ್ಞಾನ (ಭಾರತದ ಸಂದರ್ಭದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣ ವ್ಯವಸ್ಥೆ) ಪಠ್ಯ ವಿಷಯಗಳಾದವು. ಜನಾಂಗೀಯ ಭೇದಭಾವ ಎತ್ತಿ ಹಿಡಿಯುವ ಹೊಸ ಪಠ್ಯಪುಸ್ತಕಗಳನ್ನು ಗೊತ್ತುಪಡಿಸಿದರು. ಮಕ್ಕಳಿಗೆ ಕಲಿಸಲು ಬಳಸಲಾಗುವ ಯಾವುದೇ ಪಠ್ಯಪುಸ್ತಕಗಳಿಗೆ ನಾಜೀ ಪಕ್ಷದ ಪೂರ್ವ ಅನುಮೋದನೆ ಕಡ್ಡಾಯವೆನಿಸಿತ್ತು. ಶಿಕ್ಷಕರು ಯಾರು ಎಂಬ ಸಂಗತಿಯ ಮೇಲೆ ಬಹಳ ಒತ್ತು ನೀಡಿದ್ದರು ನಾಜೀಗಳು. ಹಿಟ್ಲರ್ ಅಧಿಕಾರ ವಹಿಸಿಕೊಂಡು ಮೂರೇ ತಿಂಗಳಲ್ಲಿ ಎಲ್ಲ ಯಹೂದಿ ಮತ್ತು ಕಮ್ಯೂನಿಸ್ಟ್ ನಂಬಿಕೆಯ ಶಿಕ್ಷಕರನ್ನು ವಜಾ ಮಾಡಲಾಯಿತು. ಜೊತೆ ಜೊತೆಗೆ ಎಲ್ಲ ಶಿಕ್ಷಕರೂ ನಾಜೀ ಪಾರ್ಟಿಯ ಸದಸ್ಯರಾಗಿರಬೇಕಿತ್ತು. ಎಲ್ಲ ಶಿಕ್ಷಕರೂ ಒಂದು ತಿಂಗಳ ಅವಧಿಯ ನಾಜೀ ವಿಚಾರಧಾರೆಯ ತರಬೇತಿ ಪಡೆಯಲೇಬೇಕಿತ್ತು. ವಿಶ್ವವಿದ್ಯಾಲಯಗಳಲ್ಲಿನ ಎಲ್ಲ ಯಹೂದಿ ಪ್ರೊಫೆಸರುಗಳನ್ನು ಮನೆಗೆ ಕಳಿಸಲಾಯಿತು.

ಜರ್ಮನ್ ಆರ್ಯರಕ್ತ ಶ್ರೇಷ್ಠವೆಂದು ಮೆರೆದು ಯಹೂದಿಗಳ ಮಾರಣಹೋಮ ನಡೆಸಿದ ಚರಿತ್ರೆಯನ್ನು ಅಳಿಸುವ ತಿರುಚುವ ತಿದ್ದಿ ಬರೆಯುವ ಪ್ರಯತ್ನಗಳು ನವನಾಜೀಗಳಿಂದ ವಿಶ್ವದ ಹಲವೆಡೆ ನಡೆಯುತ್ತಿವೆ ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಎರಡು ವರ್ಷಗಳ ಹಿಂದೆ ಕಳವಳ ಪ್ರಕಟಿಸಿದ್ದರು.

ಚರಿತ್ರೆಯನ್ನು ತಿದ್ದಿ ಬರೆಯ ಹೊರಟವರ ಚರಿತ್ರೆಗಳಲ್ಲಿ ಎಂದಿಗೂ ಮಾಯದ ಕೊಳೆತು ನಾರುವ ಸಾವಿರಾರು ಹುಣ್ಣುಗಳಿವೆ. ಅವುಗಳ ಮೇಲೆ ಕೇವಲ ಮುಲಾಮು ಸವರಿ ಬರೀ ಪಟ್ಟಿ ಕಟ್ಟಿ ಮುಚ್ಚುವವರು ಅರಿಯಬೇಕಿದೆ. ಅಂಗಕ್ಕೆ ಹತ್ತಿದ ಗ್ಯಾಂಗ್ರೀನು ನಂಜು ಒಡಲನ್ನೇ ಬಲಿ ಪಡೆದೀತು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!

ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು....

ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’

ಸರ್ಕಾರ ಆರು ತಿಂಗಳು ಮುಗಿಸಿ, ತನ್ನದು ಅನನ್ಯ ಸಾಧನೆ ಎಂದು ಬಣ್ಣಿಸಿಕೊಳ್ಳುತ್ತಿದೆ....

ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

ಅಪ್ಪನ ಆಸ್ಥಾನವನ್ನೇ ಆಕ್ರಮಿಸಿಕೊಂಡು ಅಟ್ಟಹಾಸ ಮೆರೆದ ವಿಜಯೇಂದ್ರ, ತಮ್ಮ ರಾಜಕಾರಣದುದ್ದಕ್ಕೂ ಹೊಂದಾಣಿಕೆಯಲ್ಲಿಯೇ...

ಈ ದಿನ ಸಂಪಾದಕೀಯ | ಈ ಪರಿ ನರಮೇಧದ ನಂತರವೂ ಮೇಲೇಳದೇಕೆ ನೆತ್ತರದಾಹಿಗಳ ತಕ್ಕಡಿ?

ಗಾಝಾ ಪಟ್ಟಿಯ ಉತ್ತರದಿಂದ ದಕ್ಷಿಣಕ್ಕೆ ತೆರಳುವಂತೆ ತಾಕೀತು ಮಾಡಿ, ದಕ್ಷಿಣದ ಖಾನ್...