ನಮ್ ಜನ | ಜಗದೊಳಗಿದ್ದೂ ಜಲಗಾರರಾಗದ ಪೋತಲಪ್ಪ ದಂಪತಿ

Date:

ನಮ್ಮ ಹೀರೋ ಪೋತಲಪ್ಪ ಚಿಕ್ಕ ವಯಸ್ಸಿನಿಂದಲೂ ಕಸದೊಂದಿಗೇ ಬದುಕುತ್ತಿರುವ ಆಸಾಮಿ. ಖಾಕಿ ಡ್ರೆಸ್ ತೊಟ್ಟು ರಸ್ತೆಗೆ ಇಳಿದರೆ, ಕಸಬರಿಕೆಯನ್ನೇ ವೀಣೆಯಂತೆ ನುಡಿಸಿ, ಅದರಿಂದ ಹೊಮ್ಮುವ ಸದ್ದನ್ನೇ ಸಂಗೀತದಂತೆ ಆಸ್ವಾದಿಸುವವರು. ಊರಿನವರ ಅಚ್ಚುಮೆಚ್ಚಿನ ಅಸಲಿ ಕಸುಬುದಾರರು

ಸದಾ ನಗುವ, ಕಪ್ಪಗೆ ಕುಳ್ಳಗಿರುವ, ಒಂದು ಆಂಗಲ್‌ನಿಂದ ವಯಸ್ಸಾದ ರಜನೀಕಾಂತ್ ಕಂಡಂತೆ ಕಾಣುವ ಪೋತಲಪ್ಪ – ಊರಿನ ಜನರ ಬಾಯಲ್ಲಿ ತೋತಲಪ್ಪ ಆಗಿದ್ದಾರೆ. ಹಾಗಂತ ಕರೆದರೆ ಅವರೇನೂ ಬೇಜಾರು ಮಾಡಿಕೊಳ್ಳುವುದಿಲ್ಲ. ಅವರಿಗೆ ಹೆಸರು ಮುಖ್ಯ ಅಲ್ಲವೇ ಅಲ್ಲ. ಅಸಲಿಗೆ ಅವರು ತೋತಲಪ್ಪನೇ ಅಲ್ಲ. ಅವರನ್ನು ಹೆಸರಿಡಿದು ಕರೆದರೂ, ಸುಮ್ಮನೆ ಕೂಗಿದರೂ ತಿರುಗಿ ನೋಡುತ್ತಾರೆ. ಕರೆಯುವುದೇ ಭಾಗ್ಯವೆಂದು ಭಾವಿಸುತ್ತಾರೆ. ಕರೆದವರನ್ನು ಅಣ್ಣ-ಅಕ್ಕ ಎಂದು ನಸುನಗೆಯ ಮೂಲಕ ಗೌರವಿಸುತ್ತಾರೆ. ಏನನ್ನಾದರೂ ಕೊಟ್ಟರೆ ಕಣ್ಣಿಗೊತ್ತಿಕೊಂಡು ಸ್ವೀಕರಿಸುತ್ತಾರೆ.

ಅವರ ನಿಜ ನಾಮಧೇಯ ರಾಜು. ವಯಸ್ಸು ಐವತ್ತು. ಅವರ ತಂದೆಯ ಹೆಸರು ಪೋತಲಪ್ಪ. ಕೆಲಸ ಸಫಾಯಿ ಕರ್ಮಚಾರಿ. ಮನೆ ಸ್ಲೀಪರ್ಸ್ ಕಾಲನಿ. ಊರು ಚನ್ನರಾಯಪಟ್ಟಣ. ಮಡದಿ ಮಂಜುಳಾ ಕೂಡ ಸಫಾಯಿ ಕರ್ಮಚಾರಿ. ಪೋತಲಪ್ಪ ದಂಪತಿಗೆ ನಾಲ್ವರು ಮಕ್ಕಳು. ಮೊದಲ ಮಗಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಎರಡನೆಯವ ಮಗ, ಪ್ಲಂಬರ್ ಕೆಲಸಕ್ಕೆ ಹೋಗುತ್ತಿದ್ದಾರೆ. ಇಬ್ಬರು ಹೆಣ್ಮಕ್ಕಳು ಪದವಿ ಓದುತ್ತಿದ್ದಾರೆ. ಚಿಕ್ಕ ಮನೆ, ಪುಟ್ಟ ಸಂಸಾರ, ಕಷ್ಟಪಟ್ಟು ದುಡಿಯುವ ದಂಪತಿ. ಮಾಡುವ ಕೆಲಸ ಕೀಳೆಂದು ಭಾವಿಸಿದವರಲ್ಲ, ಸಮಾಜ ತಮ್ಮನ್ನು ಕೀಳಾಗಿ ಕಂಡರೂ ಬೇಸರಿಸಿಕೊಂಡವರಲ್ಲ.

ಪೋತಲಪ್ಪ ದಂಪತಿ ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಏಳುತ್ತಾರೆ. ಖಾಕಿ ಬಟ್ಟೆ ತೊಟ್ಟು, ಕೈಯಲ್ಲಿ ಕಸಬರಿಕೆ ಹಿಡಿದು ರಸ್ತೆಗಿಳಿಯುತ್ತಾರೆ. ಮೊದಲಿಗೆ ಊರಿನ ಮಾರ್ಕೆಟ್ಟು ಮತ್ತು ಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ. ಅದು ಮುಗಿಯುವ ವೇಳೆಗೆ, ಮಾರ್ಕೆಟ್ಟು ಜನಗಳಿಂದ, ಹೂವು-ಹಣ್ಣು-ತರಕಾರಿಗಳಿಂದ ಜೀವ ತಳೆಯುತ್ತದೆ. ಐದು ಗಂಟೆಗೆ ಮೇಸ್ತ್ರಿ ಬಂದು ಹಾಜರಾತಿ ತೆಗೆದುಕೊಳ್ಳುತ್ತಾರೆ. ಆನಂತರ ನಿಗದಿಗೊಳಿಸಿದ ಏರಿಯಾಗಳತ್ತ ತೆರಳುತ್ತಾರೆ. ಪೋತಲಪ್ಪನವರಿಗೆ ನಿಗದಿ ಆಗಿರುವುದು ಪಟ್ಟಣದ ಗಾಂಧಿ ಸರ್ಕಲ್, ಮಂಜುಳಾ ಅವರದು ಮೇಗಲಕೇರಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಾನು ಹುಟ್ಟಿ ಬೆಳೆದದ್ದು ಮೇಗಲಕೇರಿಯಾದರೂ, ಹುಟ್ಟಿದಾಗಿನಿಂದ ಕಂಡಿರದಿದ್ದ ದೃಶ್ಯವೊಂದನ್ನು ಊರಿಗೆ ಹೋದಾಗ ನೋಡಿದೆ. ಸಫಾಯಿ ಕರ್ಮಚಾರಿಗಳು ರಸ್ತೆ ಗುಡಿಸುವುದನ್ನು ಕಂಡಿದ್ದೆ. ಆದರೆ, ಪ್ರತಿದಿನವೂ ರಸ್ತೆಯ ಜೊತೆಗೆ ಇಕ್ಕೆಲಗಳ ಚರಂಡಿಯ ಅಕ್ಕ-ಪಕ್ಕ ಬೆಳೆದಿದ್ದ ಗಿಡ-ಗಂಟಿಗಳನ್ನು ಕಿತ್ತು, ಚರಂಡಿಯೊಳಗಿನ ಕಸವನ್ನೆಲ್ಲ ಎತ್ತಿ ಒಂದು ಕಡೆ ಗುಡ್ಡೆ ಮಾಡಿ, ಚರಂಡಿಯನ್ನು ಪುಟ್ಟ ಕಾಲುವೆಯಂತೆ, ಅದರಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದನ್ನು ಕಂಡಿರಲಿಲ್ಲ. ರಸ್ತೆಯಲ್ಲಿ ಒಂದೇ ಒಂದು ಕಸ-ಕಡ್ಡಿಯೂ ಇರದಂತೆ ಸ್ವಚ್ಛವಾಗಿದ್ದನ್ನು ನೋಡಿರಲಿಲ್ಲ.

ಅಣ್ಣ-ತಮ್ಮಂದಿರನ್ನು ವಿಚಾರಿಸಿದಾಗ, ಅದಕ್ಕೆ ಕಾರಣ ಪೋತಲಪ್ಪ ದಂಪತಿ ಎಂಬುದು ತಿಳಿಯಿತು. ಅವರ ಬಗ್ಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಯಿತು. “ಕೆಲಸದ ವಿಚಾರದಲ್ಲಿ ಯಾರೂ ಬೆರಳೆತ್ತಿ ತೋರುವಂತಿಲ್ಲ. ಯಾರು ನೋಡ್ತರೋ ಬುಡ್ತರೋ… ರಸ್ತೇಲಿ ಒಂದೇ ಒಂದು ಕಸ-ಕಡ್ಡಿ ಕಾಣದಿಲ್ಲ, ಚರಂಡೀಲಿ ನೀರು ನಿಲ್ಲದಿಲ್ಲ, ಇನ್ನೊಬ್ರ ಕೈಯಿಂದ ಹೇಳ್ಸಕಳ ಜಾಯಮಾನವೇ ಅವರದಲ್ಲ. ಅದ್ಕೆ ಅವರನ್ನ ನಮ್ ಏರಿಯಾಕ್ಕೇ ಹಾಕಿಸಿಕೊಂಡಿದ್ದೀವಿ,” ಎಂದರು.

ಅದೇ ಸಮಯಕ್ಕೆ ಕಸ ಗುಡಿಸುತ್ತ ಪೋತಲಪ್ಪನವರ ಪತ್ನಿ ಮಂಜುಳಮ್ಮ ಪ್ರತ್ಯಕ್ಷರಾದರು. “ಇಲ್ಲೇ ಬಂದ್ರಲಾ…” ಎಂದರು. ಅವರನ್ನು ಮಾತನಾಡಿಸುತ್ತಾ ಹೋದೆ. ಸಂಕೋಚದ ಮುದ್ದೆಯಾದ ಮಂಜುಳಮ್ಮ, ಕೊಂಚ ದೂರ ನಿಂತೇ ಮಾತನಾಡತೊಡಗಿದರು. ಅವರಿಗೆ ಹತ್ತಿರವಾಗಲು, ಕಾಲೇಜು ದಿನಗಳಲ್ಲಿ ನಮ್ಮ ನಾಟಕದ ತಂಡದೊಂದಿಗೆ ಇದ್ದ ತಮಟೆ ರಂಗಣ್ಣನ ಫೋಟೊ ತೋರಿಸಿದೆ. “ರಂಗಣ್ಣ… ನಮ್ಮನೆ ಪಕ್ದಲೆ ಇರದು,” ಎಂದರು. “ಹೆಂಗಿದಾರೆ?” ಎಂದೆ. “ಅಯ್ಯೋ… ಸತ್ತೋದ್ರು…” ಎಂದರು. ಗೆಳೆಯನ ಸಾವಿಗೆ ಮೌನವಾದೆ. ಅವರೇ ಮುಂದಾಗಿ, “ಚೆನ್ನಾಗಿದ್ರು… ಜೋರಾಗೇ ಮನೆ ಕಟ್ಟಿದ್ರು…” ಎಂದು ಹೇಳುತ್ತಾ ಹೋದದ್ದನ್ನು ಕಂಡು, “ನಿಮ್ ಕೆಲ್ಸ ತುಂಬಾ ನೀಟಾಗಿದೆ,” ಎಂದು ಹೊಗಳಿದೆ. ಸುಮ್ಮನೆ ನಕ್ಕರು.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಗಿಡಮರಗಳೂ ಮಾತನಾಡುತ್ತವೆ; ನೀವು ಯಾವತ್ತಾದರೂ ಕೇಳಿಸಿಕೊಂಡಿದ್ದೀರಾ?

“ಸಂಬಳ ಮತ್ತೆಲ್ಲವನ್ನು ಸರಿಯಾಗಿ ಕೊಡ್ತಿದಾರ?” ಎಂದೆ. “ಎಲ್ಲಾನೂ ಕೊಡ್ತರೆ… ಬರಲುಕಡ್ಡಿ ಕೊಡ್ತರೆ, ನಾವು ಬಿದ್ರು ಕೋಲು ತಂದು ಕಟ್ಕಬೇಕು. ಬಗ್ಗಿ ಗುಡ್ಸದ್ರಿಂದ ಕಸ ಹೋಗಲ್ಲ. ಅದಕ್ಕೆ ನಿಂತ್ಕಂಡು ಗುಡ್ಸಂಗೆ ನಾವೇ ಕಸಬರಿಕೆ ಮಾಡ್ಕತಿವಿ. ಇದರ ಜೊತ್ಗೆ ಗುದ್ಲಿ, ಬೂಟ್ಸು, ಗ್ಲೋಸು, ವರ್ಷಕ್ಕೊಂದ್ಸಲ ಬಟ್ಟೆ ಕೊಡ್ತರೆ. ದಿನಾ ಬೆಳಗ್ಗೆ ಒಂಬತ್ತಕ್ಕೆ ತಿಂಡಿ ಕೊಡ್ತರೆ. ಶನಿವಾರ-ಭಾನುವಾರ ಹನ್ನೊಂದ್ ಗಂಟೆವರ್ಗೆ ಕೆಲ್ಸ, ಆಮೇಲೆ ರಜಾ. ಈಗ ಐದೊರ್ಷದ್ ಹಿಂದೆ ಪರ್ಮನೆಂಟ್ ಮಾಡವ್ರೆ. ಹದಿನೆಂಟ್ ಸಾವ್ರ ಸಂಬಳ. ಎಲ್ಲ ಸೌಕರ್ಯ ಐತೆ…” ಎಂದ ಮಂಜುಳಮ್ಮನ ಮಾತಿನಲ್ಲಿ – ಯಾರನ್ನೂ ಯಾವ ಕಾರಣಕ್ಕೂ ದೂರುವುದು ಸಾಧ್ಯವೇ ಇಲ್ಲ ಎನ್ನುವುದು ಧ್ವನಿಸುತಿತ್ತು. ಹಾಗೆಯೇ, ಜಗತ್ತಿನ ಜನರೆಲ್ಲ ಒಳ್ಳೆಯವರು, ನಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ ಎನ್ನುವಂತಿತ್ತು. ಆದರೆ, ಜನ ತೋರಿದ್ದು ಸ್ವಲ್ಪ ಪ್ರೀತಿ ಅಷ್ಟೇ. ಅದೂ ಅವರ ಅಚ್ಚುಕಟ್ಟಾದ ಕೆಲಸಕ್ಕೆ. ಆದರೂ, ಆ ಬಗ್ಗೆ ತಲೆಕೆಡಿಸಿಕೊಳ್ಳದ ಮಂಜುಳಮ್ಮನವರು, ಚಿಕ್ಕ ಮಕ್ಕಳಿಗೂ ಅಣ್ಣ-ಅಕ್ಕ ಅನ್ನುತ್ತಿದ್ದರು. ಸ್ವತಂತ್ರ ಬಂದು 75 ವರ್ಷಗಳಾದರೂ, ಪ್ರಜೆಗಳು ಪ್ರಭುಗಳಾದರೂ, ಜಾತಿ-ವರ್ಗದ ತಾರತಮ್ಯ ಮಾತ್ರ ಹೋಗಿಲ್ಲ.

ಎಷ್ಟೇ ಮಾತಿಗೆಳೆದರೂ, “ಕಸ ಗುಡಿಸೋ ನಾವು ಏನ್ ಮಾತಾಡದು! ನಾವು ಮಾಡೋ ಕೆಲ್ಸ ಅಷ್ಟು ಮುಖ್ಯವೇ? ಈ ಕೆಲ್ಸ ಹೇಳ್ಕಳದಾ? ನಮ್ ಕೆಲ್ಸ್ ಏನ್ ಮಹಾ…” ಎನ್ನುವ ಭಾವ. ಏನ್ ಮಾತಾಡಿದರೆ ಯಾರ್ ಏನ್ ಅಂದುಕೋತಾರೋ ಎಂಬ ಅಳುಕು ಅವರ ಪ್ರತೀ ನಡೆಯಲ್ಲೂ ಕಾಣುತ್ತಿತ್ತು. ಅವರಿಗೆ ಹೆಚ್ಚಿನ ಮುಜುಗರ ತರುವುದು ತರವಲ್ಲವೆಂದು ಭಾವಿಸಿ, “ಪೋತಲಪ್ಪ ಎಲ್ಲಿದಾರೆ?” ಎಂದೆ. “ಗಾಂಧಿ ಸರ್ಕಲ್ನಲ್ಲಿ ಇರ್ತರೆ,” ಎಂದು ತಮ್ಮ ಕಾಯಕದಲ್ಲಿ ಕರಗಿಹೋದರು.

ಪೋತಲಪ್ಪನವರು ಗಾಂಧಿ ಸರ್ಕಲ್‌ನಲ್ಲಿ ಆಗಲೇ ಕೆಲಸ ಮುಗಿಸಿ ಮನೆ ಕಡೆ ಹೋಗಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮನೆ ಹುಡುಕಿಕೊಂಡು ಹೋದರೆ, ಬ್ರಹ್ಮಾಸ್ತ್ರದಂತಿದ್ದ ಕಸಬರಿಕೆಯನ್ನು ಮನೆ ಮುಂದಿನ ಗೋಡೆಗೆ ಒರಗಿಸಿ ನಿಲ್ಲಿಸಿದ್ದರು. ಇದೇ ನಮ್ ಮನೆ ಎಂಬುದನ್ನು ಆ ಮೂಲಕ ಸಾರುತ್ತಿದ್ದರು. ಮನೆ ಮುಂದೆ ಕಟ್ಟಿದ್ದ ಆಡಿನಮರಿಗೆ, ಎರಡು ಮುರುಕು ಬಕೆಟ್‌ಗಳ ಮೇಲೆ ಕೂತು ಸೊಪ್ಪು ತಿನ್ನಿಸುತ್ತಿದ್ದರು.

“ನಮಸ್ಕಾರ ಪೋತಲಪ್ಪರಿಗೆ…” ಅಂದೆ. ಬೆಚ್ಚಿಬಿದ್ದು ಎದ್ದುಬಿಟ್ಟರು. ಬಲವಂತವಾಗಿ ಕೂರಿಸಿ, ಅವರ ಪಕ್ಕ ಕೂತು ನನ್ನ ಪರಿಚಯ ಹೇಳಿಕೊಂಡೆ. ಗೆಳೆಯ ರಂಗಣ್ಣನ ಫೋಟೊ ತೋರಿಸಿ ವಿಶ್ವಾಸ ಕುದುರಿಸಿದೆ. “ಏನ್ ಇಷ್ಟು ಬೇಗ ಕೆಲಸ ಮುಗಿಸಿ ಬಂದ್‌ಬುಟ್ಟಿದ್ದೀರಲ್ಲ!” ಎಂದೆ. ಏನೋ ಅಪರಾಧವಾಗಿರುವಂತೆ ಭಾವಿಸಿ, “ಏನ್ ಇರಲಿಲ್ಲ… ಭಾನುವಾರ ಅಲೂವ್ರ, ಬಂದೆ…” ಎಂದರು. ಪಕ್ಕದಲ್ಲಿದ್ದ ಆಡುಮರಿ ನೋಡಿ, “ಚೆನ್ನಾಗಿದೆ… ಎಷ್ಟು ಕೊಟ್ರಿ?” ಎಂದೆ. “ಕೆಲ್ಸ ಆದಮೇಲೆ ಇನ್ನೇನು ಮಾಡದು… ಅದ್ಕೆ ಏನಾರ ಇರ್ಲಿ ಅಂತ ಮೂರು ಸಾವ್ರ ಕೊಟ್ ತಂದೆ. ಕೆಲಸಕ್ಕೆ ವೋಯ್ತಿನಲ್ಲ, ಅಲ್ಲೆ ಸೊಪ್ಪು-ಸೆದೆ ಸಿಗ್ತದೆ, ಬರುವಾಗ ಹಿಡ್ಕಂಡ್ ಬತ್ತಿನಿ. ಅದರ ಮುಂದೆ ಕೂತ್ರೆ ಟೈಮ್ ಹೋಗಾದೆ ಗೊತ್ತಾಗಕಿಲ್ಲ,” ಎಂದರು.

ಪ್ರತಿದಿನ ಬೆಳಗಿನ ಜಾವ ಮೂರಕ್ಕೆ ಎದ್ದು ಕೆಲಸಕ್ಕೆ ನಿಂತರೆ, ಮಧ್ಯಾಹ್ನ ಒಂದು ಗಂಟೆಗೆಲ್ಲ ಕೆಲಸ ಮುಗಿಯುತ್ತದೆ. ಮಂಜುಳಮ್ಮ ಬಂದು ಮನೆಯ ಒಳಗಿನ ಕೆಲಸಗಳನ್ನು ನೋಡಿದರೆ, ಪೋತಲಪ್ಪ ಆಡಿನ ಮುಂದೆ ಕೂರುತ್ತಾರೆ. ಅದಕ್ಕೆ ಸೊಪ್ಪು ಹಾಕೋದು, ತಿಂಡಿ ತಿನ್ನಿಸೋದು, ಮೈ ತಿಕ್ಕೋದು, ಮುದ್ದು ಮಾಡೋದೇ ಅವರ ಇನ್ನರ್ಧ ದಿನದ ಕೆಲಸ. ಅದರ ಆಟ ನೋಡುತ್ತ, ಬೆಳವಣಿಗೆ ಗಮನಿಸುತ್ತ ಕೂತಲ್ಲೇ ಕಳೆದುಹೋಗಿರುತ್ತಾರೆ. ಪೋತಲಪ್ಪನವರಿಗೆ ಬೀಡಿ ಸೇದುವ, ಟೀ ಕುಡಿಯುವ ಚಟ ಬಿಟ್ಟರೆ ಮತ್ತೊಂದಿಲ್ಲ. ಹಾಗಾಗಿ ಕೆಲಸ, ಕಸಬರಿಕೆ ಮತ್ತು ಆಡು – ಇಷ್ಟು ಬಿಟ್ಟರೆ ಬೇರೆ ಜಗತ್ತು ಗೊತ್ತಿಲ್ಲ, ತಿಳಿಯಲಿಕ್ಕೂ ಹೋಗಿಲ್ಲ.

ಆ ಆಡು ಮತ್ತು ಪೋತಲಪ್ಪನವರನ್ನು ನೋಡುತ್ತಿದ್ದಂತೆ, ವೈಕಂ ಮಹಮದ್ ಬಷೀರ್ ಅವರ ‘ಫಾತುಮ್ಮನ ಆಡು,’ ದೇವನೂರ ಮಹಾದೇವರ ‘ಸಾಕವ್ವನ ಹುಂಜ,’ ಶಿವರಾಮ ಕಾರಂತರ ‘ಚೋಮನ ದುಡಿ’ ನೆನಪಾದವು. ನಮ್ ಪೋತಲಪ್ಪನ ಆಡು, ವೈಕಂರ ಫಾತುಮ್ಮನ ಆಡಿನೊಂದಿಗೆ ತಳುಕು ಹಾಕಿಕೊಂಡಿರುವುದು ಸೋಜಿಗವೆನಿಸಿತು. ಕೇರಳವಾದರೇನು, ಕರ್ನಾಟಕವಾದರೇನು, ಬಡವರೊಂದಿಗೆ ಬದುಕುವ ಪ್ರಾಣಿ – ಬಿಡುಗಡೆಯ ರೂಪಕದಂತೆ, ನಮ್ಮ ತಿಳಿವಳಿಕೆಗೆ ತಿಳಿಯಲಾರದ ತಂತುವಿನಂತೆ ಕಾಣತೊಡಗಿತು.  

ಈ ಲೇಖನ ಓದಿದ್ದೀರಾ?: ಹಳ್ಳಿ ದಾರಿ | ಉದ್ಯೋಗ ಖಾತರಿ ಹೋರಾಟದ ವೇಳೆ ದಿಲ್ಲಿಯಲ್ಲಿ ಕಂಡ ಎರಡು ಪ್ರಪಂಚ

ಈ ನಮ್ಮ ಹೀರೋ ಪೋತಲಪ್ಪ ಚಿಕ್ಕ ವಯಸ್ಸಿನಿಂದಲೂ, ಬುದ್ಧಿ ಬಂದಾಗಿನಿಂದಲೂ ಕಸದೊಂದಿಗೇ ಬದುಕುತ್ತಿರುವ ಆಸಾಮಿ. ಅಪ್ಪ ಪೋತಲಪ್ಪ ಮಾಡ್ತಿದ್ರು, ಅದನ್ನೇ ಮಗನೂ ಮಾಡ್ತಿದಾರೆ. “ಇದ್ಕೇನು ಓದ್ಬೇಕಾ, ಬರೀಬೇಕಾ?” ಎನ್ನುವ ಪೋತಲಪ್ಪನವರಿಗೆ, ಓದಿದವರು ಇದನ್ನು ಮಾಡುವುದಿಲ್ಲ ಅನ್ನುವುದೂ ಗೊತ್ತಿದೆ. ಕಸ ಗುಡಿಸುವ ಕೆಲಸವನ್ನು ಎಲ್ಲರೂ ಮಾಡುತ್ತಾರೆ, ಪ್ರತೀ ಊರಲ್ಲೂ ನೂರಾರು ಜನರಿದ್ದಾರೆ, ಅದರಲ್ಲೇನು ವಿಶೇಷ ಎನ್ನುವ ಜನರೂ ಇದ್ದಾರೆ. ಆದರೆ, ಪೋತಲಪ್ಪನವರು ಮಾಡುವುದು ಕೇವಲ ಕೆಲಸವಲ್ಲ, ಆತ್ಮವನ್ನೇ ಒತ್ತೆಯಿಟ್ಟು ವಿಶ್ವಾಸದಿಂದ ಮಾಡುವ ಕಾಯಕ. ಶಿಸ್ತು ಮತ್ತು ಶ್ರದ್ಧೆಗಳಿಗೆ ವಿಶೇಷ ಮೆರುಗು ತರುವ ಕೆಲಸ. ಖಾಕಿ ಡ್ರೆಸ್ ತೊಟ್ಟು ರಸ್ತೆಗೆ ಇಳಿದರೆ, ಕಸಬರಿಕೆಯನ್ನೇ ವೀಣೆಯಂತೆ ನುಡಿಸಿ, ಅದರಿಂದ ಹೊಮ್ಮುವ ಸದ್ದನ್ನೇ ಸಂಗೀತದಂತೆ ಆಸ್ವಾದಿಸುವವರು. ಆ ಕಸಬರಿಕೆಯಿಂದಲೇ ಊರನ್ನೆಲ್ಲ ಸ್ವಚ್ಛಗೊಳಿಸುವ, ಸ್ವಚ್ಛಗೊಳಿಸಿದ್ದನ್ನು ಕಂಡು ಖುಷಿಪಡುವ, ಆ ಕಾಯಕದಲ್ಲೇ ಕೈಲಾಸ ಕಾಣುವವರು. ಊರಿನವರ ಅಚ್ಚುಮೆಚ್ಚಿನ ಅಸಲಿ ಕಸುಬುದಾರರು.  

ಅಷ್ಟೇ ಅಲ್ಲ, ಪೋತಲಪ್ಪ ದಂಪತಿ ಮಾಡುವ ಕೆಲಸಕ್ಕೆ, ಅಚ್ಚುಕಟ್ಟುತನಕ್ಕೆ ಹಲವರಿಂದ ಮೆಚ್ಚುಗೆ ಪಡೆದಿದ್ದಾರೆ. ಹಲವು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಆ ಬಗ್ಗೆ ಪೋತಲಪ್ಪನವರಿಗೆ ಕೇಳಿದರೆ, “ಕಳೆದ ತಿಂಗಳು ಬೇಲೂರಿನ ಯಾವುದೋ ಸಂಘದವರು ಕರೆದು ಸನ್ಮಾನ ಮಾಡಿದರು,” ಎಂದು ಪ್ರಶಸ್ತಿ ಫಲಕ, ಗಂಧದ ಹಾರ, ಶಾಲು, ಮೈಸೂರು ಪೇಟವನ್ನೆಲ್ಲ ತೋರಿಸಿದರು. ಚಿಕ್ಕ ಮನೆ, ಅದರಲ್ಲಿ ಆ ಪ್ರಶಸ್ತಿ ಫಲಕಗಳು, ಪೇಟಗಳು ತುಂಬಿದ್ದವು. ಅವುಗಳಿಂದ ಉಣ್ಣೋಕೆ, ಉಡೋಕೆ ಏನೂ ಸಿಗದಿದ್ದರೂ, ಜನ ನಮ್ಮ ಕೆಲಸವನ್ನು ಗುರುತಿಸುತ್ತಾರಲ್ಲ, ಕರೆದು ಗೌರವಿಸುತ್ತಾರಲ್ಲ ಎಂಬ ಬಗ್ಗೆ ಹೆಮ್ಮೆ ಇದೆ. ಕೆಲಸ ಮತ್ತು ಬದುಕಿನ ಬಗ್ಗೆ ಸಾರ್ಥಕತೆ ಇದೆ.

ವಿಪರ್ಯಾಸವೆಂದರೆ, ಪ್ರಧಾನಿ ಮೋದಿಯವರು ‘ಸ್ವಚ್ಛ ಭಾರತ್’ ಅಭಿಯಾನ ಮಾಡಿ ಮಾಧ್ಯಮಗಳಿಂದ ಒಳ್ಳೆಯ ಪ್ರಚಾರ ಪಡೆದರು. ಒಂದರೆಗಳಿಗೆ ಕಸಬರಿಕೆ ಹಿಡಿದು ದೇಶವನ್ನೇ ಗುಡಿಸಿ ಹಾಕಿದರು. ವಿಶ್ವಾದ್ಯಂತ ಸುದ್ದಿಯಾದರು. ಆದರೆ, ಅದನ್ನು ನಿಜಾರ್ಥದಲ್ಲಿ ನಿತ್ಯಬದುಕಿನಲ್ಲಿ ಅನುಷ್ಠಾನಕ್ಕೆ ತಂದವರು, ಸುದ್ದಿಯಾಗಬೇಕಾದರು, ಮಿಂಚಬೇಕಾದವರು – ಈ ನಮ್ಮ ಸಫಾಯಿ ಕರ್ಮಚಾರಿಗಳು.

ರಾಷ್ಟ್ರಕವಿ ಕುವೆಂಪು ತಮ್ಮ ‘ಜಲಗಾರ’ ನಾಟಕದಲ್ಲಿ, ರಸ್ತೆಯಲ್ಲಿ ಕಸ ಗುಡಿಸುವ ವ್ಯಕ್ತಿಯ ಬಾಯಲ್ಲಿ, “ನನಗೆ ಸ್ಥಾವರ ದೇವಾಲಯ ಪ್ರವೇಶ ಬೇಡ, ನಾನೊಬ್ಬ ಜಗದ ಜಲಗಾರ. ನನಗೆ ಈ ನಿಸರ್ಗವೇ ದೇವಾಲಯ,” ಎಂದು ಹೇಳಿಸಿದ್ದಾರೆ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ವಿಶ್ವಮಾನವ ತತ್ವಗಳ ಆಚರಣೆ ಇಂದಿನ ಬದುಕಿಗೆ ಅಗತ್ಯ ಎನ್ನುವ ಸಂದೇಶವನ್ನು ಸಾರಿದ್ದಾರೆ.

ಈ ನಮ್ಮ ಪೋತಲಪ್ಪ ದಂಪತಿ ತಮ್ಮನ್ನು ಜಗದ ಜಲಗಾರರು, ಈ ನಿಸರ್ಗವೇ ದೇವಾಲಯ ಎಂದು ಹೇಳಿಕೊಂಡವರಲ್ಲ; ಬದಲಿಗೆ, ತಮ್ಮ ದಿನನಿತ್ಯದ ಬದುಕಿನಲ್ಲಿ ಅದನ್ನೇ ಅಳವಡಿಸಿಕೊಂಡವರು. ಇನ್ನು, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ವಿಶ್ವಮಾನವ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕಾದ್ದು ನಮ್ಮ ನಾಗರಿಕ ಸಮಾಜ. ಅಲ್ಲವೇ?

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...