ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಹುರಿದ ಹುಳ್ಳಿ
ಕಿಚ್ಚಿನೊಳಗೆ ಹುರಿದ
ಹುಳ್ಳಿಯಂತಾದೆನಯ್ಯಾ
ಬೆಂದ ನುಲಿಯ ಸಂದಿಕ್ಕಿ
ಮತ್ತೊಂದ ಮಾಡಬಾರದಯ್ಯಾ,
ಗುಹೇಶ್ವರಾ, ನಿಮ್ಮ ನಿಲುವಿನ ಪರಿಯಿಂತುಟಯ್ಯಾ.
ಪದಾರ್ಥ:
ಹುಳ್ಳಿ = ಹುರುಳಿ ಕಾಳು
ನುಲಿ = ನೂಲು
ಸಂದಿಕ್ಕಿ = ಹೊಸೆದು
ವಚನಾರ್ಥ:
ಈ ವಚನದಲ್ಲಿ ಎರಡು ಸರಳವಾದ ಮತ್ತು ಅರ್ಥವತ್ತಾದ ಉದಾಹರಣೆಗಳಿವೆ. ಹುರಿದ ಹುರುಳಿ ಮತ್ತು ಸುಟ್ಟ ಹಗ್ಗ. ಕಿಚ್ಚಿನೊಳಗೆ ಅಂದರೆ ಬೆಂಕಿಯ ಉರಿಯಲ್ಲಿ ಹುರಿದ ಹುರುಳಿಕಾಳನ್ನು ಹಸಿ ಬಟ್ಟೆಯಲ್ಲಿ ಸುತ್ತಿ ಇಟ್ಟರೆ ಮೊಳಕೆಯೊಡೆಯುವುದಿಲ್ಲ. ಹಾಗೆಯೇ ಬೆಂಕಿಯಲ್ಲಿ ಸುಟ್ಟ ಹಗ್ಗದ ನೂಲನ್ನು ಮತ್ತೆ ಹೊಸೆದು ಹಗ್ಗ ಮಾಡಲು ಆಗುವುದಿಲ್ಲ. ಈ ಎರಡೂ ಉದಾಹರಣೆಗಳ ಅರ್ಥ ಏನೆಂದರೆ ಜ್ಞಾನಾಗ್ನಿಯಲಿ ಹುರಿದುಹೋದ ಅಥವಾ ಬೆಂದುಹೋದ ಜೀವಭಾವವುಳ್ಳ ಶರಣ ಮತ್ತೆ ಭವಬಂಧನಕ್ಕೆ ಬಾರನು. ಅಂದರೆ ಶರಣನಿಗೆ ಜನನ ಮರಣಗಳಿಲ್ಲ, ಪುನರ್ಜನ್ಮವಿಲ್ಲ. ಆತ ಜೀವನ್ಮುಕ್ತ. ಹುರಿದ ಹುಳ್ಳಿ ಹೇಗೆ ಮೊಳೆಯುವುದಿಲ್ಲವೋ ಹಾಗೆ ಜ್ಞಾನಾಗ್ನಿಯಲಿ ಬೆಂದ ಶರಣನಲ್ಲಿ ವಿಷಯಾಸಕ್ತಿ ಮೊಳೆಯುವುದಿಲ್ಲ. ಬೆಂಕಿಯಲ್ಲಿ ಸುಟ್ಟ ಹಗ್ಗದ ನೂಲನ್ನು ಮತ್ತೆ ಹೊಸೆದು ಹಗ್ಗ ಮಾಡಲು ಹೇಗೆ ಆಗುವುದಿಲ್ಲವೋ ಹಾಗೆ ಜ್ಞಾನಾಗ್ನಿಯಲಿ ಸುಟ್ಟ ಶರಣನಲ್ಲಿ ಲೌಕಿಕ ಆಸೆ ಆಕಾಂಕ್ಷೆಗಳು ಒಡಮೂಡುವುದಿಲ್ಲ. ಇದು ಗುಹೇಶ್ವರನನ್ನು ಅರಿದ ವ್ಯಕ್ತಿತ್ವದ ನಿಲುವಿನ ಪರಿ.
ಪದಪ್ರಯೋಗಾರ್ಥ:
ಹುರಿದ ಹುಳ್ಳಿ ಅಂದರೆ ಹುರಿದ ಹುರುಳಿ ಕಾಳು. ಯಾವುದೇ ಧಾನ್ಯವನ್ನು ಹಸಿ ನೆಲದಲ್ಲಿ ಬಿತ್ತಿದರೆ ಅಥವಾ ಹಸಿ ಬಟ್ಟೆಯಲ್ಲಿ ಕಟ್ಟಿಟ್ಟರೆ ಅದು ಮೊಳಕೆಯೊಡೆಯುತ್ತದೆ. ಇದು ಸಸ್ಯ ಬೀಜದ ನೈಸರ್ಗಿಕ ಗುಣ. ಅದೇ ಧಾನ್ಯವನ್ನು ಬಾಣಲೆಯಲ್ಲಿಟ್ಟು ಹುರಿದು ನಂತರ ಬಿತ್ತಿದರೆ ಅಥವಾ ಹಸಿ ಬಟ್ಟೆಯಲ್ಲಿ ಕಟ್ಟಿಟ್ಟರೆ ಮೊಳಕೆಯೊಡೆಯುವುದಿಲ್ಲ. ಇದನ್ನು ಹುರುಳಿ ಕಾಳಿನ ಉದಾಹರಣೆ ಕೊಟ್ಟು ಹುರಿದ ಹುಳ್ಳಿಯಂತೆ ಆದೆ ಎಂದು ಅಲ್ಲಮ ಹೇಳಿರುವುದು ವಚನದಲ್ಲಿ ಮಾಡಿರುವ ಅನನ್ಯ ಪದಪ್ರಯೋಗ. ಹುರಿದ ಹುಳ್ಳಿ ಎಂಬುದನ್ನು ವ್ಯಕ್ತಿತ್ವವಾಚಕ ಪದವನ್ನಾಗಿಯೂ ಗುರುತಿಸಬಹುದು. ಉದಾತ್ತ ಗುಣವುಳ್ಳ ವ್ಯಕ್ತಿಯನ್ನು ಶ್ಲಾಘಿಸುವಾಗ ಹುರಿದು ಬಿತ್ತಿದರೂ ಹುಟ್ಟುವಂತಹ ಮನುಷ್ಯ ಎಂದು ಹೇಳುವ ಪದಬಳಕೆ ಇದೆ. ಅಲ್ಲಮನ ಈ ವಚನದಲ್ಲಿ ಅಂತಹುದೆ ಪದಬಳಕೆ ವಿಭಿನ್ನ ಅರ್ಥದಲ್ಲಿ ಪ್ರಯೋಗಗೊಂಡಿದೆ. ಹುರಿದ ಹುಳ್ಳಿ ಎಂಬುದು ಸರಳ ಮತ್ತು ಪರಿಣಾಮಕಾರಿ ಪದಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



