ಆಸ್ಪತ್ರೆಯಿಂದ ಬಿಡುಗಡೆಯಾದರೂ ಸ್ವಂತ ಊರಿಗೆ ಮರಳಲು ಅಸಹಾಯಕ ಸ್ಥಿತಿಯಲ್ಲಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ನೆರವಿನ ಹಸ್ತ ಚಾಚಿ, ಹೊಸ ವಾಕರ್, ರೈಲು ಟಿಕೆಟ್ ಹಾಗೂ ಪ್ರಯಾಣದ ಖರ್ಚು ನೀಡಿ ಸ್ವಗ್ರಾಮಕ್ಕೆ ಕಳುಹಿಸಿದ ಮಾನವೀಯ ಘಟನೆ ಸ್ವಾತಂತ್ರ್ಯ ದಿನದಂದು ನಡೆದಿದೆ.
ಕೇರಳ ಮೂಲದ ವಿಜಯ್ (53) ಕಳೆದ ಒಂದೂವರೆ ತಿಂಗಳಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದರೂ, ಸ್ವತಂತ್ರವಾಗಿ ನಡೆಯಲು ಸಾಧ್ಯವಾಗದೆ ವಾಕರ್‌ನ ಅಗತ್ಯವಿತ್ತು. ಊರಿಗೆ ಮರಳಬೇಕೆಂಬ ಬಯಕೆ ಇದ್ದರೂ, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಅವರು ಅಸಹಾಯಕರಾಗಿದ್ದರು.
ಈ ವಿಚಾರ ತಿಳಿದ ವಿಶು ಶೆಟ್ಟಿ ಅವರು ತಕ್ಷಣ ನೆರವಿಗೆ ಧಾವಿಸಿದರು. ವಿಜಯ್ ಅವರಿಗೆ ಹೊಸ ವಾಕರ್ ಖರೀದಿಸಿ ನೀಡುವುದರ ಜೊತೆಗೆ ರೈಲು ಟಿಕೆಟ್ ಹಾಗೂ ದಾರಿ ಖರ್ಚಿಗೂ ಹಣ ನೀಡಿ, ಸ್ವತಃ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ರೈಲು ಹತ್ತಿಸಿದರು.
ಪದವೀಧರರಾಗಿರುವ ವಿಜಯ್, ಪ್ರೇಮ ವೈಫಲ್ಯದಿಂದಾಗಿ ಊರು ತೊರೆದು ಬಂದಿದ್ದಾಗಿ ತಿಳಿಸಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ನೆರವು ದೊರೆತು, ಇದೀಗ ಸ್ವಗ್ರಾಮಕ್ಕೆ ಮರಳುವಂತಾದ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅವರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಸ್ವಾತಂತ್ರ್ಯ ದಿನದಂದು ಒಬ್ಬ ಅಸಹಾಯಕನಿಗೆ ಸ್ವಾವಲಂಬನೆಯ ದಾರಿ ತೋರಿಸಿ, ಸುರಕ್ಷಿತವಾಗಿ ಊರಿಗೆ ಕಳುಹಿಸಿದ ವಿಶು ಶೆಟ್ಟಿಯವರ ಮಾನವೀಯ ಕಾಳಜಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.





