ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ವಿರಹದ ಉರಿ
ಕಾಯಗುಣವಳಿದು
ಮಾಯದ ಮದ ಮುರಿದು ಕಾಮಕ್ರೋಧಂಗಳೆಲ್ಲವು
ಹೆರೆಹಿಂಗಿ ಹೋದವು.
ಅಂಗವೆಲ್ಲವು ಲಿಂಗಲೀಯವಾಗಿ
ಕಂಗಳ ಕಳೆಯ ಬೆಳಗಳಿದು
ಗುಹೇಶ್ವರನ ವಿರಹದುರಿಯೊಳಗೆ
ಬೆಂದವರ ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳು ನೋಡಾ.
ವಚನಾರ್ಥ:
ಸೊನ್ನಲಿಗೆಯ ಸಿದ್ದರಾಮ ಕನ್ನಡದ ಪ್ರಮುಖ ವಚನಕಾರ. ಮೂಲತಃ ವೃತ್ತಿಯಿಂದ ಕಟ್ಟಡ ಕಾರ್ಮಿಕ. ಜನೋಪಯೋಗಿ ಕೆರೆಕಟ್ಟೆಗಳನ್ನು ಕಟ್ಟುವಲ್ಲಿ ನಿಷ್ಣಾತ. ಸಿದ್ದರಾಮನ ಕಾರ್ಯಕ್ಷೇತ್ರಕ್ಕೆ ಭೇಟಿಯಿತ್ತ ಅಲ್ಲಮ ಸಿದ್ದರಾಮನನ್ನು ಕುರಿತು ಎಲ್ಲಿ ನಿಮ್ಮ ವಡ್ಡ ಎಂದು ಮೂದಲಿಸಿದಾಗ ಆತನ ಶಿಷ್ಯರು ಅಲ್ಲಮನ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅವರನ್ನು ಅಲ್ಲಮನು ಸಮರ್ಥವಾಗಿ ಎದುರಿಸಿ ನಿಂತಾಗ ಸಿದ್ದರಾಮನಿಗೆ ದೂರು ಹೋಗುತ್ತದೆ. ಕಥೆಯ ಪ್ರಕಾರ, ಸಿದ್ದರಾಮ ಶಿವಕೃಪೆಯಿಂದ ಪಡೆದಿದ್ದ ತನ್ನ ಒಳಗಣ್ಣಿನ ಪ್ರಖರವಾದ ಉರಿಯಿಂದ ಅಲ್ಲಮನನ್ನು ಘಾಸಿಗೊಳಿಸಲು ಯತ್ನಿಸಿ ವಿಫಲನಾಗುತ್ತಾನೆ. ಆಗ ಅಲ್ಲಮ ಸಿದ್ದರಾಮನನ್ನು ಉದ್ದೇಶಿಸಿ ನುಡಿದ ವಚನವಿದು. ಕಾಯಗುಣ ಅಳಿದು ಮಾಯದ ಮದ ಮುರಿದು ಹೋಗಿ ಕಾಮ ಕ್ರೋಧಗಳೆಲ್ಲವು ನನ್ನಲ್ಲಿ ಹಿಂಗಿ ಹೋಗಿವೆ ಸಿದ್ದರಾಮ ಎಂದು ಅಲ್ಲಮ ಹೇಳುತ್ತಾ ತನ್ನ ಅಂಗವೆಲ್ಲವು ಲಿಂಗದಲ್ಲಿ ಲೀನವಾಗಿದೆ, ಕಣ್ಣುಗಳಲ್ಲಿ ಆಸೆ ಆಕಾಂಕ್ಷೆಗಳ ಬೆಳಕು ಇಲ್ಲವಾಗಿದೆ. ನಾನಾಗಲೇ ಗುಹೇಶ್ವರನನ್ನು ಬಿಟ್ಟಿರಲಾಗದ ವಿರಹದ ಉರಿಯಲ್ಲಿ ಬೆಂದು ಹೋಗಿದ್ದೇನೆ. ಇನ್ನು ನಿನ್ನ ಕಣ್ಣಿನ ಉರಿ ನನ್ನನ್ನು ಸುಡಲಾರದು ಎಂದು ಅಲ್ಲಮ ಹೇಳುತ್ತಾ ಸಿದ್ದರಾಮನನ್ನು ಸಂತೈಸಿ ಶರಣತನದತ್ತ ಸೆಳೆಯುವ ಐತಿಹಾಸಿಕ ಸನ್ನಿವೇಶ ಈ ವಚನದ ಸಂದರ್ಭದಲ್ಲಿದೆ.
ಪದಪ್ರಯೋಗಾರ್ಥ:
ವಿರಹ ಎಂಬ ಪದ ಕನ್ನಡ ಪ್ರೇಮ ಸಾಹಿತ್ಯದಲ್ಲಿ ಅತ್ಯಂತ ಪ್ರಚಲಿತವಿರುವ ಪದ. ವಿರಹ ಎಂದರೆ ಪ್ರೀತಿಪಾತ್ರರ ಅಗಲಿಕೆಯಿಂದ ಉಂಟಾಗುವ ತೀವ್ರವಾದ ದುಃಖ, ಹಂಬಲ ಅಥವಾ ಬೇರ್ಪಡುವಿಕೆಯ ಭಾವನೆ. ಇದು ಪ್ರೇಮಿಗಳು ಅಥವಾ ಆತ್ಮೀಯರು ದೂರವಾದಾಗ ಅನುಭವಿಸುವ ಮಾನಸಿಕ ನೋವಿನ ಸ್ಥಿತಿ. ಪ್ರೀತಿಪಾತ್ರರಿಂದ ಅಥವಾ ದೈವೀಕತೆಯಿಂದ ದೂರವಿರುವುದರಿಂದ ಉಂಟಾಗುವ ವೇದನೆ. ಸಾಹಿತ್ಯ, ಕಾವ್ಯ ಮತ್ತು ಭಕ್ತಿ ಸಂಪ್ರದಾಯಗಳಲ್ಲಿ ವಿರಹವು ಪ್ರೀತಿಯ ತೀವ್ರತೆಯನ್ನು ಹೊತ್ತಿ ಉರಿಯುವ ಉರಿಗೆ ಹೋಲಿಸುವ ಪ್ರಮುಖ ಭಾವನೆ. ನಾನು ಗುಹೇಶ್ವರನನ್ನು ಬಿಟ್ಟಿರಲಾಗದ ವಿರಹದ ಉರಿಯಲ್ಲಿ ಬೆಂದೆ ಎಂದು ಅಲ್ಲಮ ವಚನದಲ್ಲಿ ಸಹಜವಾಗಿ ಹೇಳಿರುವುದು ಕಂಡುಬರುತ್ತದೆ. ಕನ್ನಡ ಚಿತ್ರ ಕವಿರತ್ನ ಕಾಳಿದಾಸದ ಓ ಪ್ರಿಯತಮ ಎಂಬ ಪ್ರಖ್ಯಾತ ಗೀತೆಯಲ್ಲಿ ದುಷ್ಯಂತ ಶಕುಂತಲೆಯರ ಪ್ರಣಯ ಪ್ರಸಂಗವನ್ನು ಪ್ರಕಟಿಸುವಾಗ ವಿರಹದ ಉರಿ ಪದವನ್ನು ಚಿ. ಉದಯಶಂಕರ್ ಬಳಸಿದ್ದಾರೆ. ಬೆವರುತ ಚಳಿಯಲಿ ಬೆದರುತ ಭಯದಲಿ ವಿರಹದ ಉರಿಯಲಿ ನೊಂದೆನು ನೋವಲಿ ಯಾರಿಗೆ ಹೇಳಲಿ ಏನನು ಮಾಡಲಿ ಓ ಪ್ರಿಯತಮ! ಎಂದು ಗೀತೆ ಸಾಗುತ್ತದೆ. ವಿರಹ ನೂರು ನೂರು ತರಹ ಎಂಬ ಮತ್ತೊಂದು ಪ್ರಸಿದ್ದ ಕನ್ನಡ ಗೀತೆ ಇದೆ. ವಿರಹದ ಉರಿ ಅಲ್ಲಮನ ಅನನ್ಯ ಪದಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



