ಕೃಷಿರಂಗ | ಹಾಲಿನಲ್ಲಿ ಜಿಡ್ಡೇತರ ಘನ ಪದಾರ್ಥಗಳ ಕೊರತೆಗೆ ಕಾರಣಗಳೇನು ಗೊತ್ತೇ?

Date:

ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಹಾಲಿನಲ್ಲಿ ‘ಜಿಡ್ಡೇತರ ಘನ ಪದಾರ್ಥಗಳ ಕೊರತೆ ’(Low SNFsyndrome). ಅದು ಸಸಾರಜನಕ, ಲ್ಯಾಕ್ಟೋಸ್, ಲವಣಗಳ ಕೊರತೆಯಾಗಿರಬಹುದು. ಅದೊಂದು ಶರೀರ ಕ್ರಿಯೆಯ ಸಮಸ್ಯೆ, ಚಯಾಪಚಯ ಕ್ರಿಯೆಯ ಸಮಸ್ಯೆ, ಕೆಚ್ಚಲಿನ ಸಮಸ್ಯೆ. ಅದನ್ನು ಸರಿಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ.

- Advertisement -

ಹಾಲು ಉತ್ಪಾದನೆಯಲ್ಲಿ ನಮ್ಮ ದೇಶವು ಪ್ರಥಮ ಸ್ಥಾನದಲ್ಲಿದೆ. 1970ರ ದಶಕದಲ್ಲಿ ಆರಂಭವಾದ ಶ್ವೇತ ಕ್ರಾಂತಿಯ ಮೂಲಕ ಅಮೇರಿಕಾವನ್ನು ಹಿಂದಿಕ್ಕಿ ಜಾಗತಿಕವಾಗಿ ಪ್ರಥಮ ಸ್ಥಾನಕ್ಕೆ 1998ರಲ್ಲಿಯೇ ನಮ್ಮ ದೇಶ ತಲುಪಿದೆ. ವರ್ಗೀಸ್ ಕುರಿಯನ್‍ರವರು ಹಾಲು ಸಹಕಾರ ಸಂಘಗಳ ಜಾಲವನ್ನು ಸೃಷ್ಟಿಸಿ ಹಾಲು ಶೇಖರಣೆ, ಸಂಸ್ಕರಣೆ ಮತ್ತು ಮಾರಾಟಕ್ಕೆ ಉತ್ತಮ ಕೊಡುಗೆ ನೀಡಿದರು.

ಹಾಲು ಮಾರಾಟದ ಸಹಕಾರ ಸಂಘಗಳ ಜಾಲವು ನಮ್ಮ ರಾಜ್ಯದಲ್ಲಿ ಮೊದಲಿಗೆ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ (Karnataka Dairy Development Corporation: KDDC) ಎಂಬ ಹೆಸರಿನಲ್ಲಿ 1974ರಲ್ಲಿ ಆರಂಭವಾಗಿ ಕ್ರಮೇಣ 1984ರಲ್ಲಿ ಕರ್ನಾಟಕ ಹಾಲು ಮಂಡಳಿ (Karnataka Milk Federation: KMF) ಎಂಬ ಮರುನಾಮಕರಣದಿಂದ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯ ಜೀವನಾಡಿಯೆಂದು ಜನಜನಿತವಾಗಿದೆ. ರೈತರಿಂದ ಪ್ರತಿ ದಿನ 96 ಲಕ್ಷ ಲೀಟರ್ ಹಾಲನ್ನು ಸಂಗ್ರಹ ಮಾಡಲಾಗುತ್ತಿದೆ.

ವಾರ್ಷಿಕವಾಗಿ ದೇಶದಲ್ಲಿ ಅಂದಾಜು 239.30 ಮಿಲಿಯನ್ ಮೆಟ್ರಿಕ್ ಟನ್‍ಗಳಷ್ಟು ಹಾಲು ಉತ್ಪಾದನೆಯಾಗುತ್ತಿದೆಯೆಂದು 2023-24ರ ಅಂಕಿ ಅಂಶಗಳು ಹೇಳುತ್ತಿವೆ. ಹಸುಗಳಲ್ಲಿ ಕೈಗೊಂಡ ಮಿಶ್ರ ತಳೀಕರಣದಿಂದ ಮತ್ತು ನಮ್ಮ ದೇಶದಲ್ಲಿರುವ ಅಗಾದ ಸಂಖ್ಯೆಯ ಎಮ್ಮೆಗಳಿಂದ ಈ ಸಾಧನೆಯು ಸಾಧ್ಯವಾಗಿದೆ. ತಲಾವಾರು ಹಾಲಿನ ಲಭ್ಯತೆಯು ದಿನಕ್ಕೆ 471 ಗ್ರಾಂಗಳಷ್ಟಿದೆ. ಅದು 1950ರ ದಶಕದಲ್ಲಿ ಕೇವಲ 124 ಗ್ರಾಂಗಳಷ್ಟಿತ್ತು.

ಕ್ಷೀರಭಾಗ್ಯ ಯೋಜನೆ

ಹಾಲು ಉತ್ಪಾದನೆ ಜಾಸ್ತಿಯಾದಂತೆ, ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆಯನ್ನು 2013ರಿಂದ ಜಾರಿಗೆ ತಂದು ಒಂದು ಕೋಟಿ ಇಪ್ಪತ್ತು ಲಕ್ಷ ಶಾಲಾ ಮಕ್ಕಳಿಗೆ ಹಾಲನ್ನು ಒದಗಿಸಲಾಗುತ್ತಿದೆ. ಅದಕ್ಕಾಗಿ ಪ್ರತಿ ನಿತ್ಯ 8 ಲಕ್ಷ ಲೀಟರ್ ಹಾಲಿನ ಬಳಕೆಯಾಗುತ್ತಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಇದರಿಂದ ಅನುಕೂಲವಾಗುತ್ತದೆ. ಕರ್ನಾಟಕ ಹಾಲು ಒಕ್ಕೂಟವು ಈ ಯೋಜನೆಯ ಜಾರಿಗೆ ಶಕ್ತಿಮೀರಿ ದುಡಿಯುತ್ತಿದೆ.

ಹಾಲಿನ ಘನ ಪದಾರ್ಥಗಳು

ಹಾಲಿನಲ್ಲಿ ನೀರಿನ ಪ್ರಮಾಣ ಶೇ. 87.5. ಉಳಿದದ್ದು ಘನ ಪದಾರ್ಥಗಳು. ಘನ ಪದಾರ್ಥಗಳ ಪೈಕಿ ಹಸುವಿನ ಹಾಲಿನಲ್ಲಿ ಜಿಡ್ಡು (fat, ಕೊಬ್ಬು) ಸುಮಾರು ಶೇ. 3.5ರಿಂದ 4. ಜರ್ಸಿ ಹಸುವಿನ ಹಾಲಿನಲ್ಲಿ ಶೇ. 4ರಷ್ಟು ಜಿಡ್ಡಿನಂಶವಿದ್ದರೆ ಹೋಲ್‍ಸ್ಟೀನ್ ಫ್ರೀಸಿಯನ್ (ಎಚ್. ಎಫ್.) ಹಸುವಿನ ಹಾಲಿನಲ್ಲಿ ಶೇ. 3.5ರಷ್ಟಿರುತ್ತದೆ. ಎಮ್ಮೆ ಹಾಲಿನಲ್ಲಿ ಶೇ. 6ರಿಂದ 8ರಷ್ಟು ಜಿಡ್ಡಿರುತ್ತದೆ. ಜಿಡ್ಡನ್ನು ಬಿಟ್ಟು ಉಳಿದ ಘನ ಪದಾರ್ಥಗಳನ್ನು ‘ಜಿಡ್ಡೇತರ ಘನ ಪದಾರ್ಥ’ (Solids-not-Fat : SNF) ಎಂದು ಕರೆಯಲಾಗಿದೆ. ಅವೆಂದರೆ, ಸಸಾರಜನಕ (Protein), ಲ್ಯಾಕ್ಟೋಸ್ (Lactose ಹಾಲಿನಲ್ಲಿರುವ ಸಕ್ಕರೆ ಅಂಶ) ಹಾಗೂ ಲವಣಗಳು ಮತ್ತಿತರ ಅಂಶಗಳು. ಒಟ್ಟು ಜಿಡ್ಡೇತರ ಘನ ಪದಾರ್ಥಗಳು ಶೇ. 8.5ರಷ್ಟಿರಬೇಕು. ಆದರೆ, ಹಲವು ಸಮಸ್ಯೆಗಳಿಂದಾಗಿ ಜಿಡ್ಡೇತರ ಘನ ಪದಾರ್ಥಗಳ ಪ್ರಮಾಣದಲ್ಲಿ ಕೊರತೆಯಾಗಿರುವುದು ಸರ್ವೇ ಸಾಮಾನ್ಯವಾಗಿದೆ.
ಸಾಧಾರಣವಾಗಿ, ಹೋಲ್‍ಸ್ಟೀನ್ ಫ್ರೀಸಿಯನ್ ಹಸುಗಳು ದಿನಕ್ಕೆ 10ರಿಂದ 15 ಲೀಟರ್ ಹಾಲು ಕೊಟ್ಟರೆ, ಜರ್ಸಿ ಹಸುಗಳು 8ರಿಂದ 10 ಲೀಟರ್ ಹಾಲು ಕೊಡುತ್ತವೆ.

ಜಿಡ್ಡೇತರ ಘನ ಪದಾರ್ಥಗಳ ಕೊರತೆ

ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಹಾಲಿನಲ್ಲಿ ‘ಜಿಡ್ಡೇತರ ಘನ ಪದಾರ್ಥಗಳ ಕೊರತೆ ’(Low SNFsyndrome). ಅದು ಸಸಾರಜನಕ, ಲ್ಯಾಕ್ಟೋಸ್, ಲವಣಗಳ ಕೊರತೆಯಾಗಿರಬಹುದು. ಅದೊಂದು ಶರೀರ ಕ್ರಿಯೆಯ ಸಮಸ್ಯೆ, ಚಯಾಪಚಯ ಕ್ರಿಯೆಯ ಸಮಸ್ಯೆ, ಕೆಚ್ಚಲಿನ ಸಮಸ್ಯೆ. ಅದನ್ನು ಸರಿಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ.

ಸಸಾರಜನಕ ಶೇ. 3.5, ಲ್ಯಾಕ್ಟೋಸ್ ಶೇ. 4 ಮತ್ತು ಲವಣ ಶೇ. 0.8 ಹಾಗೂ ಜೀವಸತ್ವಗಳು ಸೇರಿ ಒಟ್ಟು ಎಸ್.ಎನ್.ಎಫ್. ಪ್ರಮಾಣವು ಶೇ. 8.5ರಷ್ಟಿದ್ದರೆ ಅದು ಕೊಂಚಮಟ್ಟಿಗೆ ಗಟ್ಟಿ ಹಾಲು. ಆದರೆ, ಹೋಲ್‍ಸ್ಟೀನ್ ಫ್ರೀಸಿಯನ್ ಮಿಶ್ರತಳಿಯಲ್ಲಿ ಮತ್ತಿತರ ಕೆಲ ಮಿಶ್ರತಳಿಗಳಲ್ಲಿ ಎಸ್.ಎನ್.ಎಫ್. ಪ್ರಮಾಣದಲ್ಲಿ ಕೊರತೆಯಿರುತ್ತದೆ.

ಕೆಲರಾಸುಗಳ ಹಾಲಿನಲ್ಲಿ ಜಿಡ್ಡಿನ ಪ್ರಮಾಣವೂ ಕಡಿಮೆಯಿರುತ್ತದೆ. ಜಿಡ್ಡು ಮತ್ತು ಜಿಡ್ಡೇತರ ಘನ ಪದಾರ್ಥಗಳ ಪ್ರಮಾಣಕ್ಕೆ ತಕ್ಕಂತೆ ಹಾಲಿಗೆ ಬೆಲೆ ನಿಗದಿಯಾಗಿದೆ. ಒಂದು ಲೀಟರ್ ಹಾಲಿಗೆ ರೈತರು ರೂ. 31ರಿಂದ ರೂ. 42ರವರೆಗೆ ಪಡೆಯುತ್ತಿದ್ದಾರೆ. ಹಾಲಿನ ಗುಣಮಟ್ಟದ ಮೇಲೆ ರೈತರ ಆದಾಯ ನಿಂತಿದೆ.

ಕೆಲವು ಕಡೆ ಹಾಲಿನ ಸೊಸೈಟಿಗಳ ಮುಂದೆಯೇ ಹಾಲು ಕರೆದು, ಸ್ಥಳದಲ್ಲೇ ಹಾಲನ್ನು ನೀಡಲಾಗುತ್ತದೆ. ಲ್ಯಾಕ್ಟೋಮೀಟರ್ ರೀಡಿಂಗ್ ಆಧಾರದ ಮೇಲೆ ಹಾಲಿನ ಗುಣಮಟ್ಟವನ್ನು ಅಳೆಯಲಾಗುತ್ತದೆ. ಅದರಂತೆ, ದರವನ್ನು ಕೊಡಲಾಗುತ್ತದೆ. ಉತ್ತಮ ಹಾಲಿಗೆ ಕೊಂಚ ಹೆಚ್ಚು ದರ ಲಭಿಸುತ್ತದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India) ದ ರೀತ್ಯಾ ಹಾಲಿನಲ್ಲಿ 2006ರಲ್ಲಿ ನಿಗದಿಪಡಿಸಿದಂತೆ ಶೇ. 8.5ರಷ್ಟು ಜಿಡ್ಡೇತರ ಘನ ಪದಾರ್ಥಗಳು ಇರಬೇಕೆಂಬ ನಿಯಮವಿತ್ತು. ಆದರೆ, ತದನಂತರ ಅದನ್ನು ಕೊಂಚ ಸಡಿಲಗೊಳಿಸಿ, 2017ರಲ್ಲಿ ಶೇ. 8.3ಕ್ಕೆ ಇಳಿಸಲಾಗಿದೆ.

ಸಮಸ್ಯೆ ನಿವಾರಣೆಗೆ ಹಲವು ಪ್ರಯತ್ನಗಳು

ಜಿಡ್ಡೇತರ ಘನ ಪದಾರ್ಥಗಳ ಕೊರತೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹಲವು ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಆದರೆ, ಅಂತಿಮ ಫಲಿತಾಂಶ ಕೊಂಚ ಕಡಿಮೆಯೇ. ಯಾಕೆಂದರೆ, ಸಮಸ್ಯೆಯಿರುವುದು ದನಗಳ ಸಂತಾನೋತ್ಪತ್ತಿ ವಿಧಾನಗಳಲ್ಲಿ. ಪ್ರಮುಖವಾಗಿ, ಹೋಲ್‍ಸ್ಟೀನ್ ಫ್ರೀಸಿಯನ್ ಸಂತತಿಯ ಮಿಶ್ರತಳೀಕರಣವು ಮಿತಿ ಮೀರಿ ನಡೆದಿದೆ.
ಹಲವು ಪೀಳಿಗೆಗಳಲ್ಲಿ ಪದೇ ಪದೇ ಹೋಲ್‍ಸ್ಟೀನ್ ಫ್ರೀಸಿಯನ್ ತಳಿಯ ಅಥವಾ ಮಿಶ್ರತಳಿಯ ವೀರ್ಯವನ್ನು ಕೃತಕ ಗರ್ಭದಾರಣೆಯಲ್ಲಿ ಬಳಸಿದ್ದರಿಂದ ಜಿಡ್ಡೇತರ ಘನ ಪದಾರ್ಥಗಳ ಕೊರತೆಯ ಸಮಸ್ಯೆಯು ರೈತರನ್ನು ಯಥೇಚ್ಚವಾಗಿ ಕಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...
WhatsApp Image 2026 02 02 at 5.37.49 PM
ಹೋಲ್‍ಸ್ಟೀನ್ ಫ್ರೀಸಿಯನ್ ತಳಿಯ ಹಸು

ಇಂತಹ ಸಮಸ್ಯೆಗೆ ಕಾರಣವೇನು ಎಂಬುದನ್ನು ಇಂಗ್ಲೆಂಡಿನಲ್ಲಿ ಹಲವಾರು ದಶಕಗಳ ಹಿಂದೆಯೇ ಕಂಡುಕೊಳ್ಳಲಾಗಿದೆ. ಹೋಲ್‍ಸ್ಟೀನ್ ಫ್ರೀಸಿಯನ್ ತಳಿಯನ್ನು ಯಥೇಚ್ಚವಾಗಿ ಒಳಮಿಶ್ರತಳೀಕರಣಕ್ಕೆ ಒಳಪಡಿಸಿದರೆ ಇಂತಹ ಸಮಸ್ಯೆಯು ಸರ್ವೇ ಸಾಮಾನ್ಯ. ಇಂತಹ ಮಾಹಿತಿಯನ್ನು ರೈತರಿಗೆ ಮನದಟ್ಟು ಮಾಡಿಕೊಡಬೇಕಿದೆ. ಆಗಾಗ, ಜರ್ಸಿ ಮತ್ತಿತರ ತಳಿಗಳ ವೀರ್ಯವನ್ನು ಬಳಸಬೇಕಿದೆ. ವರ್ಣಸಂಕರಣವು ವಿವಿಧ ತಳಿಗಳ ಮಧ್ಯೆ ವಿಶಾಲ ತಳಿಹದಿಯಲ್ಲಿ ನಡೆದಾಗ ಜಿಡ್ಡೇತರ ಘನ ಪದಾರ್ಥಗಳ ಕೊರತೆಯ ಸಮಸ್ಯೆಗೆ ಪರಿಹಾರವನ್ನು ಹುಡುಕಿಕೊಂಡಂತಾಗಬಹುದು. ಹೋಲ್‍ಸ್ಟೀನ್ ಫ್ರೀಸಿಯನ್ ತಳಿಯ ವೀರ್ಯಧಾರಣೆಯ ಮೋಹವನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬೇಕಿದೆ.

ಸಮತೋಲನ ಆಹಾರ, ಹಿಂಡಿ, ಮಿಶ್ರ ಲವಣಗಳ ಪೂರೈಕೆ, ಆಹಾರ ಸೇರ್ಪಡೆ ಪದಾರ್ಥಗಳು, ಆರೋಗ್ಯ ರಕ್ಷಣೆ, ಕೆಚ್ಚಲು ಬಾವು ನಿರ್ವಹಣೆ, ಶುದ್ಧ ನೀರು ಪೂರೈಕೆ, ಪರಾವಲಂಬಿಗಳ ನಿರ್ಮೂಲನೆ, ಲಸಿಕೆ ನೀಡಿಕೆ, ಒತ್ತಡ ನಿರ್ವಹಣೆಯಂತಹ ಕ್ರಮಗಳನ್ನು ಕೈಗೊಂಡು ಹಾಲೆಂಬ ಅಮೃತವನ್ನು ಉತ್ಪಾದಿಸುವ ಕ್ರಮವಿದೆ.

ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ಕೆಚ್ಚಲಿನ ಕೋಶಗಳು

ಹಾಲಿನ ಗುಣಮಟ್ಟವು ಶರೀರ ಕ್ರಿಯೆಗೆ ಸಂಬಂಧಿಸಿದ ವಿಷಯ. ಕೆಚ್ಚಲಿನೊಳಗಿನ ಗ್ರಂಥಿಗಳ ಎಪಿಥೇಲಿಯಲ್ ಕೋಶಗಳಲ್ಲಿ ಹಾಲಿನ ವಿವಿಧ ಅಂಶಗಳ ಶ್ರವಿಸುವಿಕೆಯು ವಂಶವಾಹಿಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ‘ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣಲಿಲ್ಲವೇ?’ ಎಂದು ‘ಕುಲ ಕುಲ ಕುಲವೆನ್ನುತಿಹರು’ ಎಂಬ ಕೀರ್ತನೆಯಲ್ಲಿ ಕನಕದಾಸರು ಬರೆದರು. ಇದು ವೈಜ್ಞಾನಿಕ ಚಿಂತನೆಯಲ್ಲಿ ಮೂಡಿದ ನುಡಿಗಟ್ಟು. ಕ್ಷೀರವು ಉತ್ಪತ್ತಿಯಾಗುವುದು ಕೆಚ್ಚಲಿನಲ್ಲಿ ಎಂಬುದು ಈ ಕೀರ್ತನೆಯ ಸಾಲಿನ ಅರ್ಥ. ಮತ್ತೂ ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ, ಕೆಚ್ಚಲಿನ ಎಪಿಥೇಲಿಯಲ್ ಕೋಶ ಅಥವಾ ಆಲ್ವಿಯೋಲಾರ್ ಕೋಶಗಳಲ್ಲಿ ಹಾಲಿನ ಉತ್ಪಾದನೆಯಾಗುತ್ತದೆ.
ದನಗಳು ತಿನ್ನುವ ಮೇವು ಅದರ ಸಂಕೀರ್ಣವಾದ ಮೆಲುಕು ಹೊಟ್ಟೆಯಲ್ಲಿ ಹುದುಗುವಿಕೆಗೆ ಒಳಗಾಗಿ ಆವಿಯಾಗುವ ಕೊಬ್ಬಿನ ಆಮ್ಲಗಳು (Volatile Fatty Acids : VFAs) ತಯಾರಾಗುತ್ತವೆ. ಅವೆಂದರೆ, ಅಸಿಟಿಕ್ ಆಮ್ಲ, ಬ್ಯುಟಿರಿಕ್ ಆಮ್ಲ ಮತ್ತು ಪ್ರೋಪಿಯೋನಿಕ್ ಆಮ್ಲ. ಅವು ಜಠರದ ಭಾಗವಾದ ರೂಮೆನ್ ಮತ್ತು ರೆಟಿಕ್ಯುಲಮ್‍ನಲ್ಲಿ ಹೀರುವಿಕೆಗೆ ಒಳಗಾಗಿ ರಕ್ತ ಸೇರಿ, ಅಂತಿಮವಾಗಿ ಕೆಚ್ಚಲಿನ ಎಪಿಥೇಲಿಯಲ್ ಕೋಶಗಳಲ್ಲಿ ಹಾಲಿನ ವಿವಿಧ ಅಂಶಗಳಾದ ಜಿಡ್ಡು, ಸಸಾರಜನಕ ಮತ್ತು ಲ್ಯಾಕ್ಟೋಸ್ ತಯಾರಿಯಲ್ಲಿ ಭಾಗಿಯಾಗುತ್ತವೆ. ಕೋಶಗಳ ವಂಶವಾಹಿಗಳ ಕಾರ್ಯಕ್ಷಮತೆಯು ಈ ಪದಾರ್ಥಗಳ ತಯಾರಿಗೆ ಅತ್ಯಗತ್ಯ.

ಹಾಲಿನಲ್ಲಿ ಲವಣಗಳ ಪ್ರಮಾಣ ಶೇ. 0.8ರಷ್ಟು. ಸುಣ್ಣ (ಕ್ಯಾಲ್ಶಿಯಂ) ಪ್ರಧಾನ ಲವಣ. ಜೊತೆಗೆ, ರಂಜಕ, ಪೊಟ್ಯಾಸಿಯಂ, ಮೆಗ್ನೀಸಿಯಂ, ಕ್ಲೋರೈಡ್, ಸೋಡಿಯಂ ಮತ್ತಿತರ ಲವಣಗಳಿರುತ್ತವೆ. ಇವೆಲ್ಲವೂ ರಕ್ತದಿಂದ ಹಾಲಿಗೆ ಸರಿಯಲ್ಪಡುತ್ತವೆ. ಅದೇ ರೀತಿಯಾಗಿ ರಕ್ತದಲ್ಲಿರುವ ಜೀವಸತ್ವಗಳು ಹಾಲಿಗೆ ಬರುತ್ತವೆ.

ಕೊನೆಯ ಮಾತು
ಕನಿಷ್ಠ ಶೇ. 4ರಷ್ಟು ಜಿಡ್ಡು ಮತ್ತು ಶೇ. 8.5ರಷ್ಟು ಜಿಡ್ಡೇತರ ಘನ ಪದಾರ್ಥಗಳಿದ್ದರೆ ಹಾಲಿನ ಗುಣಮಟ್ಟ ಕಾಯ್ದುಕೊಂಡಂತಾಗಿ ಹಾಲಿಗೆ ಉತ್ತಮ ಬೆಲೆ ಸಿಗುತ್ತದೆ. ಅಧಿಕ ಮತ್ತು ಪರಿಶುದ್ಧ ಹಾಲಿನ ಉತ್ಪಾದನೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳಿತು.

ಕೆಲವು ಸಂಶೋಧನೆಗಳ ಫಲಿತಾಂಶಗಳಲ್ಲಿ ಜಿಡ್ಡೇತರ ಘನ ಪದಾರ್ಥಗಳು ತೀರಾ ಕಮ್ಮಿಯೆಂದರೆ ಶೇ. 7.8ರಿಂದ 8.3ರ ಆಸುಪಾಸಿನಲ್ಲಿರುವುದು ಕಂಡುಬಂದಿದೆ. ಇಂತಹ ಫಲಿತಾಂಶಗಳು ಹೋಲ್‍ಸ್ಟೀನ್ ಫ್ರೀಸಿಯನ್ ಮಿಶ್ರತಳಿಗಳಲ್ಲಿ ಕಂಡುಬರುವುದು ಸರ್ವೇ ಸಾಮಾನ್ಯ. ಸಂತಾನೋತ್ಪತ್ತಿ ನೀತಿಯ ಪ್ರಕಾರ ಮಿಶ್ರ ತಳೀಕರಣದಲ್ಲಿ ವಿದೇಶೀ ತಳಿಗಳ ರಕ್ತವು ಶೇ. 50ರಿಂದ 62.5ರ ಮಿತಿಯೊಳಗಿರಬೇಕು. ಆದರೆ, ಕಳೆದ 50ರಿಂದ 60 ವರ್ಷಗಳ ಅವಧಿಯಲ್ಲಿ ಹೋಲ್‍ಸ್ಟೀನ್ ಫ್ರೀಸಿಯನ್ ತಳಿಯ ವೀರ್ಯವನ್ನು ವಿವೇಚನೆಯಿಲ್ಲದೆ ಬಳಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ, ಜರ್ಸಿ, ಹಳ್ಳಿಕಾರ್, ಅಮೃತ್ ಮಹಲ್, ಸಾಹಿವಾಲ್, ದೇವಣಿಯಂತಹ ತಳಿಗಳ ವೀರ್ಯದ ಬಳಕೆಯನ್ನು ಉತ್ತೇಜಿಸಲು ಸಂತಾನೋತ್ಪತ್ತಿ ನೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಹೈನುಗಾರ ರೈತರು ಸ್ಪಂದಿಸುತ್ತಿದ್ದಾರೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ!

ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು....

ಅಲ್ಲಮನ ಅನನ್ಯ ಪದಪ್ರಯೋಗಗಳು | ನಡೆದಡೆ ನುಡಿದಡೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಅವಳ ಕಣ್ಣೋಟ | ‘ಗಾಂಧಾರಿ’: ಕಣ್ಣು ಕಳೆದುಕೊಂಡವಳು, ಕುರುಡಳಂತೆ ನಟಿಸಿದವಳು

ಮಕ್ಕಳ ಕಳ್ಳಸಾಗಣೆಯ ಜಾಲವನ್ನು ಚಿತ್ರದ ಕೇಂದ್ರ ಸಮಸ್ಯೆಯಾಗಿ ಇಟ್ಟಿರುವುದು ಮಹತ್ವದ ಸಂಗತಿ....