ಪಶ್ಚಿಮ ಬಂಗಾಳದ 2026ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಗಳಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಚುನಾವಣೋತ್ತರ ಹಿಂಸಾಚಾರ ವರದಿಯಾಗಿದೆ. ತಮ್ಮ ಅನೇಕ ಪಕ್ಷದ ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗಂಭೀರ ಆರೋಪ ಮಾಡಿದೆ. ಚುನಾವಣೆ ಫಲಿತಾಂಶ ಹೊರಬಂದ ಸೋಮವಾರದ ನಂತರ ರಾಜ್ಯದ ವಿವಿಧೆಡೆ ಈ ಘಟನೆಗಳು ನಡೆದಿವೆ ಎಂದು ಪೊಲೀಸರು ಕೂಡ ದೃಢಪಡಿಸಿದ್ದಾರೆ.
ಕೋಲ್ಕತ್ತಾ ಮತ್ತು ಉಪನಗರಗಳಲ್ಲಿ ಟಿಎಂಸಿ ಕಚೇರಿಗಳನ್ನು ದುಷ್ಕರ್ಮಿಗಳ ಗುಂಪು ಧ್ವಂಸ ಮಾಡಿದೆ. ಟಾಲಿಗಂಜ್, ಕಸ್ಬಾ, ಬರುಯಿಪುರ್, ಕಮರ್ಹಟಿ, ಬಾರಾನಗರ್, ಹೌರಾ ಮತ್ತು ಬಹರಾಂಪುರದಲ್ಲಿ ದಾಳಿಗಳು ನಡೆದಿವೆ. ಟಾಲಿಗಂಜ್ ನಲ್ಲಿ ಮಾಜಿ ಸಚಿವ ಹಾಗೂ ಟಿಎಂಸಿ ಅಭ್ಯರ್ಥಿ ಅರೂಪ್ ಬಿಸ್ವಾಸ್ ಅವರ ಕಚೇರಿಯನ್ನು ಗುಂಪು ಧ್ವಂಸ ಮಾಡಿದೆ. ರೂಬಿ ಕ್ರಾಸಿಂಗ್ ನಲ್ಲಿ ಬಿಜೆಪಿ ಬಾವುಟ ಹಿಡಿದ ಗುಂಪು ಟಿಎಂಸಿ ಕಾರ್ಪೊರೇಟರ್ ಸುಶಾಂತ್ ಘೋಷ್ ಅವರ ಕಚೇರಿಯ ಮೇಲೆ ಎರಗಿ ದಾಂಧಲೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಮಾಣಿಕ್ತಲಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಶ್ರೇಯಾ ಪಾಂಡೆ ಅವರು ತಮ್ಮ ಚುನಾವಣಾ ಏಜೆಂಟ್ ರಕ್ತಸಿಕ್ತರಾಗಿ ಗಾಯಗೊಂಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮತ ಎಣಿಕೆಯ ನಂತರ ಬಿಜೆಪಿ ಕಾರ್ಯಕರ್ತರು ಅವರನ್ನು ತೀವ್ರವಾಗಿ ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಶ್ರೇಯಾ ಅವರು ಬಿಜೆಪಿಯ ತಪಸ್ ರಾಯ್ ವಿರುದ್ಧ 15,644 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಇದರ ಜೊತೆಗೆ, ಸಿಲಿಗುರಿಯಲ್ಲೂ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಈ ಘಟನೆಗೆ ಸಂಬಂಧಿಸಿದಂತೆ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ, “ಅಧಿಕಾರಕ್ಕೆ ಬಂದ ತಕ್ಷಣ ಬಿಜೆಪಿ ತನ್ನ ಅಸಲಿ ಬಣ್ಣ ತೋರಿಸಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಮುರ್ಷಿದಾಬಾದ್‌ನಲ್ಲಿ ನಮ್ಮ ಪಕ್ಷದ ಕಚೇರಿಯ ಮೇಲೆ ಅವರ ಗೂಂಡಾಗಳು ಹಿಂಸಾತ್ಮಕ ದಾಳಿ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ಅಲ್ಲ; ಇದು ಕೇವಲ ಗೂಂಡಾಗಿರಿ,” ಎಂದು ಪಕ್ಷ ತನ್ನ ಅಧಿಕೃತ ಖಾತೆಯಲ್ಲಿ ಅಸಮಾಧಾನ ಹೊರಹಾಕಿದೆ ಹಾಗೂ ಈ ಹಿಂಸಾಚಾರವನ್ನು ಖಂಡಿಸಿದೆ.
ಟಿಎಂಸಿಯ ಈ ಆರೋಪಗಳನ್ನು ಸ್ಥಳೀಯ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ದಾಳಿಗಳಲ್ಲಿ ಬಿಜೆಪಿ ಕಾರ್ಯಕರ್ತರ ಯಾವುದೇ ಪಾತ್ರವಿಲ್ಲ, ಇದು ಟಿಎಂಸಿಯ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಅವರ ಗುಂಪುಗಾರಿಕೆಯ ಪರಿಣಾಮ ಆಗಿರಬಹುದು ಎಂದು ಅವರು ಹೇಳಿದ್ದಾರೆ. ಜೊತೆಗೆ, 2021ರ ಚುನಾವಣೆಯ ನಂತರ ಟಿಎಂಸಿ ತಮ್ಮ ಕಚೇರಿಗಳ ಮೇಲೆ ನಡೆಸಿದ ದಾಳಿಗಳಿಗೆ ಈ ಘಟನೆಗಳನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಅವರು ತಮ್ಮ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.




