ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಭಾಷಣ ಬಿಗಿಯುತ್ತಲೇ ಅಧಿಕಾರಕ್ಕೆ ಬಂದ ಮೋದಿ ಅವರ ಪ್ರಸಿದ್ಧ ಹೇಳಿಕೆ, "ನ ಖಾವೂಂಗಾ, ನ ಖಾನೇ ದೂಂಗ". ನಾನು ತಿನ್ನಲ್ಲ, ತಿನ್ನಲು ಅವಕಾಶ ಕೊಡಲ್ಲ ಎಂಬ ಬಣ್ಣದ ಮಾತಿಗೆ ಜನ ಮಾರು ಹೋದರು. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯಲ್ಲಿರುವ ‘ಭ್ರಷ್ಟಾಚಾರದ ಗಂಗೋತ್ರಿ’ ಗೋಚರಿಸಿತು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಕ್ರಮವನ್ನು ಖಂಡಿಸಿರುವ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ವಾಷಿಂಗ್ ಮಷಿನ್ ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆಯಲ್ಲಿ ವಾಷಿಂಗ್ ಮಷಿನ್ ಇಟ್ಟು ಕಪ್ಪು ಬಟ್ಟೆಯನ್ನು ಅದರೊಳಕ್ಕೆ ಹಾಕಿ, ಕಡೆಗೆ ಬಿಳಿ ಬಟ್ಟೆಯನ್ನು ಎತ್ತಿ ಪ್ರದರ್ಶಿಸಿ ಬಿಜೆಪಿಯಲ್ಲಿರುವ ಎಲ್ಲರೂ ಶುದ್ಧಾಂಗ ಶುದ್ಧರೇ ಎಂದು ಪ್ರಶ್ನೆ ಮಾಡಿದ್ದಾರೆ. ಅದು ನಿಜವೇ. ಬೇರೆ ಪಕ್ಷದ ನಾಯಕರನ್ನು ತಮ್ಮ ಪಕ್ಷಕ್ಕೆ ಕರೆತರಲು ಬಿಜೆಪಿ ಆಯ್ಕೆ ಮಾಡಿಕೊಳ್ಳುವುದು ಭ್ರಷ್ಟಾತಿಭ್ರಷ್ಟರನ್ನು. ಇ.ಡಿ., ಸಿಬಿಐ, ಐಟಿ ಗುಮ್ಮ ತೋರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದು, ಬಿಜೆಪಿ ಸೇರಿದ ನಂತರ ಅವರು ಎಲ್ಲ ಗಂಭೀರ ಆರೋಪಗಳಿಂದ ಮುಕ್ತರಾಗುವ ಪವಾಡವೇ ಜರುಗಿಬಿಡುತ್ತದೆ. ಅಷ್ಟೇ ಅಲ್ಲ ಹೀಗೆ ಆಪರೇಷನ್ ಕಮಲದ ಬಲೆಗೆ ಬಿದ್ದವರು ರಾಜಾರೋಷವಾಗಿ, ʼಬಿಜೆಪಿಗೆ ಬಂದ ಮೇಲೆ ಯಾವುದೇ ಭಯವಿಲ್ಲʼ ಎಂದು ಹೇಳುತ್ತಾ ತಿರುಗಾಡುತ್ತಿದ್ದಾರೆ. ಅಪ್ಪಟ ನಿರ್ಲಜ್ಜ ನಡತೆಯಿದು. ಭ್ರಷ್ಟಾಚಾರವನ್ನು, ಭ್ರಷ್ಟರನ್ನು ಮಟ್ಟ ಹಾಕುತ್ತೇವೆ ಎಂದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟರನ್ನು ಪಕ್ಷದೊಳಗೆ ಸೇರಿಸಿಕೊಂಡು ಭ್ರಷ್ಟವಾಗದೆ ಶುದ್ಧವಾಗಿ ಉಳಿದಿದೆಯೇ?
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಭಾಷಣ ಬಿಗಿಯುತ್ತಲೇ ಅಧಿಕಾರಕ್ಕೆ ಬಂದ ಮೋದಿ ಅವರ ಪ್ರಸಿದ್ಧ ಹೇಳಿಕೆ, “ನ ಖಾವೂಂಗಾ, ನ ಖಾನೇ ದೂಂಗ”. ನಾನು ತಿನ್ನಲ್ಲ, ತಿನ್ನಲು ಅವಕಾಶ ಕೊಡಲ್ಲ ಎಂಬ ಬಣ್ಣದ ಮಾತಿಗೆ ಜನ ಮಾರು ಹೋದರು. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯಲ್ಲಿರುವ ‘ಭ್ರಷ್ಟಾಚಾರದ ಗಂಗೋತ್ರಿ’ ಗೋಚರಿಸಿತು. ಆದರೆ ಅವರಿಗೆ ಮುಜುಗರ ಎಂಬುದೇ ಇಲ್ಲ.
ಕಳೆದ ಎಂಟು ವರ್ಷಗಳ ಮೋದಿ ಆಡಳಿತದಲ್ಲಿ ಬ್ಯಾಂಕುಗಳಿಂದ ಕಾರ್ಪೊರೇಟುಗಳು ಸುಮಾರು 12 ಲಕ್ಷ ಕೋಟಿ ರುಪಾಯಿಗಳನ್ನು ವ್ಯವಸ್ಥಿತವಾಗಿ ದೋಚಿವೆ. ಅದಾನಿ ಕಂಪನಿಗಳ ಲಕ್ಷಾಂತರ ಕೋಟಿ ರುಪಾಯಿಗಳ ಶೇರು ಹಗರಣ ಮೋದಿಯವರ ಮುಖದ ಮೇಲೆಯೇ ಸ್ಫೋಟಿಸಿದೆ. ಎಲ್.ಐ.ಸಿ., ಎಸ್.ಬಿ.ಐ.ನ ನೂರಾರು ಕೋಟಿ ರುಪಾಯಿ ಹೂಡಿಕೆ ಈ ಹಗರಣದಲ್ಲಿ ಮುಳುಗಿ ಹೋಗಿದೆ.
ಹಿಮಂತ ಬಿಸ್ವ ಸರ್ಮ, ಸುವೇಂದು ಅಧಿಕಾರಿ, ಭಾವನಾ ಗೌಳಿ, ನಾರಾಯಣ ರಾಣೆ, ಪ್ರತಾಪ ಸರನಾಯಕ, ಮುಕುಲ್ ರಾಯ್, ಯಶವಂತ ಜಾಧವ್ ಅವರ ಮೇಲಿದ್ದ ಎಲ್ಲ ಅಕ್ರಮಗಳು ಮತ್ತು ಭ್ರಷ್ಟಾಚಾರಗಳ ಕೇಸುಗಳು ಬಿಜೆಪಿ ಸೇರಿದ ತಕ್ಷಣವೇ ಮಾಯವಾಗಿದ್ದು ಹೇಗೆ?
2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶದ ನಂತರ ಅಧಿಕಾರ ಹಿಡಿದ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಬೀಳಿಸಲು ಮೋದಿ- ಅಮಿತ್ ಶಾ ಜೋಡಿ ಮಾಡಿದ ಕಸರತ್ತು ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಹದ್ದು. 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಬರುತ್ತಿದ್ದಂತೆ ಈ ಜೋಡಿ ಮಾಡಿದ ಮೊದಲ ಕೆಲಸ ಕರ್ನಾಟಕ ಸರ್ಕಾರವನ್ನು ಪತನಗೊಳಿಸಿದ್ದು. ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ಮುಂಬೈನಲ್ಲಿ ಕೂಡಿ ನಡೆಸಿದ ದುಷ್ಟ ರಾಜಕಾರಣವನ್ನು ನೋಡಿದ್ದೇವೆ. ಅದೇ ಚುನಾವಣೆಯಲ್ಲಿ ಅಕ್ರಮ ಮತದಾರರ ಗುರುತಿನ ಚೀಟಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ತುಳಸಿಮುನಿರಾಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಲೋಕಸಭಾ ಚುನಾವಣೆಯ ವೇಳೆ ಮೋದಿ ಅವರು ಮುನಿರತ್ನ ಪ್ರಕರಣವನ್ನು ಉಗ್ರವಾಗಿ ಟೀಕಿಸಿ ಭಾಷಣ ಬಿಗಿದಿದ್ದರು. ಆದರೆ ಅದಾಗಿ ಒಂದೆರಡು ತಿಂಗಳಲ್ಲೇ ಮುನಿರತ್ನ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ಕೇಸಿನ ವಿಚಾರಣೆ ಇನ್ನೂ ಮುಗಿದಿಲ್ಲ. ದೂರುದಾರ ತುಳಸಿಮುನಿರಾಜು ಅವರನ್ನು ಎಂ.ಎಲ್.ಸಿ ಮಾಡಿ ತೆಪ್ಪಗಿರಿಸಲಾಗಿದೆ.
2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರಾಗಿದ್ದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಸೆಟ್ಟಿ ಜೈಲು ಸೇರಿದರು. ಈ ಸರ್ಕಾರದಲ್ಲೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಂಧನದಲ್ಲಿದ್ದಾರೆ. ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತು ಸಚಿವ ನೆಹರು ಓಲೇಕಾರ್ ಚೆಕ್ ಬೌನ್ಸ್, ವಂಚನೆಯ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಗುತ್ತಿಗೆದಾರರ ಸಂಘದವರು ಮಾಡಿರುವ 40% ಕಮಿಷನ್ ಆರೋಪ, ಪಿಎಸ್‌ಐ ನೇಮಕಾತಿ ಹಗರಣ, ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ಹೀಗೆ ಸಾಲು ಸಾಲು ಹಗರಣದ ಆರೋಪ ಈ ಸರ್ಕಾರದ ಮೇಲಿದೆ. ಪುನಃ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಇವರೆಲ್ಲ ‘ಪರಿಶುದ್ಧ’ರಾಗಿ ಹೊರಬಿದ್ದರೆ ಅಚ್ಚರಿಯಿಲ್ಲ.
ಇಷ್ಟಾಗಿಯೂ ಎರಡು ದಿನಗಳ ಹಿಂದೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಿಂತು ಪ್ರಧಾನಿ ಮೋದಿ ಅವರು, ʼಭ್ರಷ್ಟಾಚಾರದ ವಿರುದ್ಧ ತಾವು ಕೈಗೊಂಡ ಕ್ರಮಗಳು ವಿರೋಧಿಗಳಲ್ಲಿ ನಡುಕ ಹುಟ್ಟಿಸಿದೆʼ ಎಂದು ಏರುದನಿಯಲ್ಲಿ ಭಾಷಣ ಮಾಡಿದ್ದಾರೆ. ಇದಲ್ಲವೇ ಪ್ರಜಾಪ್ರಭುತ್ವದ ವ್ಯಂಗ್ಯ ವಿಡಂಬನೆ?
