ಜೆನ್ ಆಲ್ಫಾ ಪ್ರತಿಭಟನೆಗಳು ಇದುವರೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದಿವೆ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ಮಾಡಿದ್ದಾರೆ ಆಲ್ಫಾಗಳು! ಮಕ್ಕಳೂ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ, ತಮ್ಮ ಸುತ್ತಲಿನ ಸಮಸ್ಯೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ಬದಲಾವಣೆಯ ಸೂಚನೆ. ಕಳೆದ ಹದಿನೈದು ದಿನಗಳಲ್ಲಿ ಮಕ್ಕಳು ತರಗತಿಗಳಿಂದ ಹೊರಬಂದು, ಸರ್ಕಾರಿ ಕಚೇರಿಗಳಿಗೆ ಮೆರವಣಿಗೆ ಮಾಡಿ, ರಸ್ತೆಗಳಲ್ಲಿ ಕುಳಿತು ಅಧಿಕಾರಿಗಳಿಂದ ಉತ್ತರ ಕೇಳಿದ್ದಾರೆ.
ತಾವು ಆಡಿದ್ದೇ ಆಟ ಎಂಬ ಅಹಂಕಾರದಲ್ಲಿದ್ದ ಪಟ್ಟಭದ್ರರ ಕುರ್ಚಿ ಅಲ್ಲಾಡಿಸುವ ತಾಕತ್ತು ತೋರಿದ ಜೆನ್ ಝಿ ಪ್ರತಿಭಟನೆ, ಒಂದು ಸಣ್ಣ ಪ್ರತಿಕ್ರಿಯೆಯಾಗಿ ಹುಟ್ಟಿದ ಕಾಕ್ರೋಚ್ ಪಾರ್ಟಿ ದೇಶದಲ್ಲಿ ಹುಟ್ಟಿಸಿದ ಭರವಸೆ ಅಷ್ಟಿಷ್ಟಲ್ಲ. ನಿರುದ್ಯೋಗಿ ಯುವಜನರ ಬಗ್ಗೆ ಸಿಜೆಐ ಸೂರ್ಯಕಾಂತ್ ನೀಡಿದರೆನ್ನಲಾದ ಅವಹೇಳನಕಾರಿ ಹೇಳಿಕೆಗೆ ವಿದೇಶದಲ್ಲಿದ್ದ ಭಾರತದ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಎಕ್ಸ್‌ನಲ್ಲಿ ಕೊಟ್ಟ ಪ್ರತಿಕ್ರಿಯೆ ಕಾಕ್ರೋಚ್ ಜನತಾ ಪಾರ್ಟಿಗೆ ಸೇರಿ ಎಂಬ ಕರೆಯಾಗಿತ್ತು. ಮಿಲಿಯಗಟ್ಟಲೆ ಜನ ರಾತ್ರಿ ಬೆಳಗಾಗುವುದರೊಳಗೆ ʼನಾನೂ ಕಾಕ್ರೋಚ್ʼ ಎಂದು ಎದ್ದು ಕೂತರು. ಅದೇ ಸರಿ ವೇಳೆಗೆ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆದ ವಿಷಯ ಬಹಿರಂಗಗೊಂಡಿತ್ತು. ಅದನ್ನು ಪತ್ತೆ ಹಚ್ಚಿದ್ದು ಕೂಡ ಒಬ್ಬ ವಿದ್ಯಾರ್ಥಿ. ಆಗಷ್ಟೇ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ಯುವಜನರ ಹೋರಾಟಕ್ಕೆ ಧುಮುಕಿ ಐವತ್ತು ದಿನಗಳ ಹೋರಾಟ, ಮೋದಿ ಸರ್ಕಾರವನ್ನು ನಡುಗಿಸಿ ದೇವೇಂದ್ರ ಪ್ರಧಾನ್ ರಾಜೀನಾಮೆ ಕೊಡುವಂತಾಗಿದ್ದು ಹನ್ನೆರಡು ವರ್ಷಗಳಲ್ಲಿಯೇ ಮರೆಯಲಾರದ ವಿದ್ಯಮಾನ. ಈ ದೇಶದ ಯುವಜನರು ನಿರುದ್ಯೋಗ, ಶಿಕ್ಷಣದ ಖಾಸಗೀಕರಣದಿಂದ ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿಸಬೇಕಿದ್ದ ಸರ್ಕಾರಗಳು ಸ್ವಜನ ಪಕ್ಷಪಾತ, ಶ್ರೀಮಂತರ ಪರ ಕೆಲಸ ಮಾಡುತ್ತಾ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಜನರಿಗೆ ಆಮಿಷಗಳನ್ನು ಕೊಡುತ್ತಾ ಮಂಗ ಮಾಡುತ್ತಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಧ್ವನಿಯಾಗುವ ಪಕ್ಷಗಳೇ ಇಲ್ಲದಂತಾಗಿದೆ. ವಿದ್ಯಾರ್ಥಿ ಚಳವಳಿಯ ವೈಭವ ಮರೆಯಾಗಿ ದಶಕಗಳೇ ಸಂದಿವೆ. ಅಂತಹ ಗತ ವೈಭವ ಮರುಕಳಿಸಿದ್ದು ಕಾಕ್ರೋಚ್ ಜನತಾ ಪಾರ್ಟಿಯ ಕಾರಣದಿಂದ. ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವಲ್ಲಿಂದ ಪರೀಕ್ಷೆಗಳನ್ನು ಎದುರಿಸುವ ಸಮಯದಲ್ಲಿ, ಪದವಿ ಪಡೆದು ಹೊರಬಂದು ಉದ್ಯೋಗ ಪಡೆಯುವವರೆಗೆ ವಿಪರೀತ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆಗಳು ಪೋಷಕರನ್ನು ಹೈರಾಣವಾಗಿಸುತ್ತಿವೆ. ಶಿಕ್ಷಣದ ಖಾಸಗೀಕರಣ, ಹಣವಂತರ ನಡುವೆ ಬಡ ಮಕ್ಕಳು ಪೈಪೋಟಿ ನೀಡಲಾರದಷ್ಟು ಅಂತರ ಹೆಚ್ಚಿದೆ. ಈ ಮಧ್ಯೆ ಸರ್ಕಾರಗಳು ನಡೆಸುವ ಪರೀಕ್ಷೆಯಲ್ಲಿ ಅಕ್ರಮಗಳು ನಡೆದು, ಹಣಕ್ಕೆ ಪ್ರಶ್ನೆ ಪತ್ರಿಕೆ ಮಾರಿಕೊಳ್ಳುವ ಅಧಿಕಾರಸ್ಥರು ಬಡ ಮಕ್ಕಳ ಶಿಕ್ಷಣ- ಉದ್ಯೋಗದ ಆಸೆಯ ಮೇಲೆ ಕಲ್ಲು ಚಪ್ಪಡಿ ಎಳೆಯುತ್ತಿದ್ದಾರೆ.
ದೇವೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಘೋಷಿಸಿದ್ದ ಕೆಜಿಪಿ ಸಂಸ್ಥಾಪಕ ದೀಪ್ಕೆ ಭಾರತಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರು, ಸಮಾನ ಮನಸ್ಕರು ಸ್ವಯಂಪ್ರೇರಿತರಾಗಿ ಸೇರತೊಡಗಿದರು. ದೇಶದ ಪ್ರಮುಖ ನಗರಗಳಲ್ಲಿ ನಡೆದ ಪ್ರತಿಭಟನೆಗೆ ಜನ ಸೇರುತ್ತಿದ್ದ ಪರಿ ಅಚ್ಚರಿಗೆ ಕಾರಣವಾಗಿತ್ತು. ನಂತರ ಕೆಜಿಪಿ ಜಂತರ್ ಮಂತರ್‌ನಲ್ಲಿ ಶುರು ಮಾಡಿದ ಪ್ರತಿಭಟನೆ ಉಪವಾಸ ಸತ್ಯಾಗ್ರಹ, ಜು. 20ರಂದು ಸಂಸತ್ ಭವನ ಚಲೋ, ಪೊಲೀಸರ ಲಾಟಿಯೇಟು ತಿಂದ ಯುವಜನರು ಇನ್ನಷ್ಟು ಗಟ್ಟಿಯಾಗಿದ್ದರು. ಪ್ರಧಾನ್ ರಾಜೀನಾಮೆ ಕೊಡಲೇಬೇಕಾಯ್ತು. 2024ರಲ್ಲೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಇಂತಹದ್ದೊಂದು ಪ್ರತಿಭಟನೆ ನಡೆದು ಬದಲಾವಣೆಗೆ ಕಾರಣವಾಗಿದ್ದರೆ, 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಅದೇನೇ ಇರಲಿ ಈಗ ಈ ಜೆನ್ ಝಿ ಪ್ರತಿಭಟನೆ ಹೊಸದೊಂದು ಮನ್ವಂತರಕ್ಕೆ ಕಾರಣವಾಯ್ತು. ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಯಿತು. ಅಲ್ಲೂ ವಿಧಾನಸೌಧ ಮುತ್ತಿಗೆ ವೇಳೆ ಪ್ರತಿಭಟನಾಕಾರರ ಮೇಲೆ ಹಲ್ಲೆಗಳಾದವು. ಬಿಜೆಪಿಯೇತರ ಸರ್ಕಾರ ಇರುವ ಕಾರಣ ಅಲ್ಲಿ ಬಿಜೆಪಿ ನೇರವಾಗಿ ಪ್ರತಿಭಟನೆಯ ಲಾಭ ಪಡೆಯಲು, ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ತಿರುಗಿಸುವ ಸಂಚು ಹೂಡಿತ್ತು.
ಈ ಮಧ್ಯೆ ಇನ್ನೊಂದು ಅಚ್ಚರಿಯ ಬೆಳವಣಿಗೆಗೆ ದೇಶ ಸಾಕ್ಷಿಯಾಗುತ್ತಿದೆ. ಅದೇ ಜೆನ್ ಆಲ್ಫಾ (2010ರಿಂದ 2025 ನಡುವೆ ಹುಟ್ಟಿದ ಮಕ್ಕಳು)ಗಳ ಪ್ರತಿಭಟನೆ. ಒಂದಲ್ಲ ಐದು ರಾಜ್ಯಗಳಲ್ಲಿ ಇನ್ನೂ ಮತದಾನದ ಹಕ್ಕು ಪಡೆಯದ ಆಲ್ಫಾ ಮಕ್ಕಳು ತಮ್ಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲ, ರಸ್ತೆ ಸರಿಯಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಕೇವಲ ಮನವಿ ಪತ್ರ ಕೊಡುವುದರಿಂದ ದಪ್ಪ ಚರ್ಮದ ಅಧಿಕಾರಿಗಳು, ರಾಜಕಾರಣಿಗಳಿಗೆ ಬಿಸಿ ಮುಟ್ಟಲ್ಲ ಎಂಬ ಅರಿವು ಈಗ ಪುಟ್ಟ ಮಕ್ಕಳಿಗೂ ಆಗಿದೆ. ಮಕ್ಕಳು ಬೀದಿಗೆ ಇಳಿದಾಗ ಮಾತ್ರ ವಾಸ್ತವ ಅರಿವಾಗುತ್ತದೆ.
ಜೆನ್ ಆಲ್ಫಾ ಪ್ರತಿಭಟನೆಗಳು ಇದುವರೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದಿವೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ಮಾಡಿದ್ದಾರೆ ಆಲ್ಫಾಗಳು! ಮಕ್ಕಳೂ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ, ತಮ್ಮ ಸುತ್ತಲಿನ ಸಮಸ್ಯೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದು ಬದಲಾವಣೆಯ ಸೂಚನೆ. ಕಳೆದ ಹದಿನೈದು ದಿನಗಳಲ್ಲಿ ಮಕ್ಕಳು ತರಗತಿಗಳಿಂದ ಹೊರಬಂದು, ಸರ್ಕಾರಿ ಕಚೇರಿಗಳಿಗೆ ಮೆರವಣಿಗೆ ಮಾಡಿ, ರಸ್ತೆಗಳಲ್ಲಿ ಕುಳಿತು ಅಧಿಕಾರಿಗಳಿಂದ ಉತ್ತರ ಕೇಳಿದ್ದಾರೆ. ತರಗತಿಗಳಲ್ಲಿ ಫ್ಯಾನ್, ಸ್ವಚ್ಛ ಕುಡಿಯುವ ನೀರು, ಕಾರ್ಯನಿರ್ವಹಿಸುವ ಶೌಚಾಲಯಗಳು, ಶಿಕ್ಷಕರು, ಉತ್ತಮ ಆಹಾರ, ಡೆಸ್ಕ್‌ಗಳು, ಗ್ರಂಥಾಲಯಗಳು ಬೇಕು ಎಂದು ಕೇಳಿದ್ದಾರೆ. ಶಾಲೆಗೆ ಹೋಗುವ ರಸ್ತೆ ಸರಿಪಡಿಸಲು ಪ್ರತಿಭಟಿಸಿದ್ದಾರೆ. ಶಿಕ್ಷಕರಿಂದ ಲೈಂಗಿಕ ಕಿರುಕುಳದ ವಿರುದ್ಧ ದನಿ ಎತ್ತಿದ್ದಾರೆ ಬಾಲೆಯರು. ಈ ಎಳೆಯರಿಗೆ ‘ಬಾಯಿ’ ಬಂದಿರುವುದು ಅತ್ಯಂತ ಆರೋಗ್ಯಕರ ಬೆಳವಣಿಗೆ.
ಆಗಸ್ಟ್ 11ರಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಚಂದು ಪುರ್ ಗ್ರಾಮ ಪಂಚಾಯತಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸುಮಾರು 5 ಕಿ.ಮೀ. “ತಿರಂಗಾ ಯಾತ್ರೆ”ಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೋದರು. ಮಕ್ಕಳು ತಮ್ಮ ಶಾಲೆಗೆ ಪಕ್ಕಾ ರಸ್ತೆ ಕೇಳಿದರು. ಮಳೆಗಾಲದಲ್ಲಿ ಮಣ್ಣಿನಲ್ಲಿ ನಡೆಯಬೇಕಾಗುತ್ತದೆ ಮತ್ತು ಸ್ವಾತಂತ್ರ್ಯದ ನಂತರ ಈ ಪ್ರದೇಶದಲ್ಲಿ ಯಾವುದೇ ಪಕ್ಕಾ ರಸ್ತೆ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದರು. ಅವರು ಜಿಲ್ಲಾಧಿಕಾರಿಯ ಕಚೇರಿ ಬಾಗಿಲ ಬಳಿ ಕುಳಿತು ಕೆಲಸ ಪ್ರಾರಂಭವಾಗುವವರೆಗೆ ಅಲ್ಲೇ ಇರುವುದಾಗಿ ಪಟ್ಟು ಹಿಡಿದರು.
ಅಧಿಕಾರಿಗಳು ಸುಮಾರು 1 ಕೋಟಿ ರೂ. ವೆಚ್ಚದ ರಸ್ತೆ ಯೋಜನೆ ವರ್ಷಗಳಿಂದ ಬಾಕಿ ಇದೆ. ಅರಣ್ಯ ಇಲಾಖೆಯಿಂದ NOC ಬಂದಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮೋದನೆಯ ನಂತರ ಟೆಂಡರ್ ಹಾಕಲಾಗುವುದು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ಜುಲೈ 28ರಂದು ಇದೇ ರೀತಿಯ ಪರಿಸ್ಥಿತಿ ಉಂಟಾಯಿತು. ಕಿಶನ್‌ಪುರ ಪಟ್ಟಣದ ಸರ್ವೋದಯ ಇಂಟರ್ ಕಾಲೇಜಿನ ಸುಮಾರು 1,500 ವಿದ್ಯಾರ್ಥಿಗಳು ತರಗತಿಗಳಿಂದ ಹೊರಬಂದು ಸಂಸ್ಥೆಯ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸಿದರು. ಅವರ ಬೇಡಿಕೆಗಳಲ್ಲಿ ಸರಿಯಾದ ಡೆಸ್ಕ್ ಮತ್ತು ಬೆಂಚ್‌ಗಳು, ಶೌಚಾಲಯಗಳು, ಕುಡಿಯುವ ನೀರು, ಮಧ್ಯಾಹ್ನದ ಊಟ ಮತ್ತು ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮುಂತಾದ ಸೌಲಭ್ಯಗಳ ಕೊರತೆ ಸೇರಿವೆ. ಶಾಲಾ ಆಡಳಿತ ಒಪ್ಪಬೇಕಾಯಿತು. ಅಧಿಕಾರಿಗಳು ಪ್ರತಿ ತರಗತಿಯಲ್ಲಿ ನಾಲ್ಕು ಫ್ಯಾನ್‌ಗಳನ್ನು ಅಳವಡಿಸುವುದು, ವಿದ್ಯುತ್ ವೈರಿಂಗ್ ದುರಸ್ತಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಸೇರಿದಂತೆ ಬೇಡಿಕೆಗಳನ್ನು ಪೂರೈಸುವುದಾಗಿ ಹೇಳಿದರು.
ಬಿಹಾರದಲ್ಲಿ ಗಯಾದ ಸಿಮುಆರಾ ಮಧ್ಯಮ ಶಾಲೆಯ ಸುಮಾರು 40-50 ವಿದ್ಯಾರ್ಥಿಗಳು ಸುಮಾರು ನಾಲ್ಕು ಕಿ.ಮೀ. ನಡೆದು SDM ಕಚೇರಿಗೆ ನೇರವಾಗಿ ಹೋಗಿ ಮಾತನಾಡಿದರು. ಅವರ ದೂರುಗಳಲ್ಲಿ ಮಧ್ಯಾಹ್ನದ ಊಟ, ಶೌಚಾಲಯಗಳ ಸ್ವಚ್ಛತೆ, ತರಗತಿಗಳಲ್ಲಿ ಫ್ಯಾನ್‌ಗಳು, ಮುರಿದ ಬೆಂಚ್‌ಗಳ ಬದಲಿಸುವುದು ಮತ್ತು ಮುರಿದ ಕೈಪಂಪ್ ದುರಸ್ತಿ ಸೇರಿವೆ.
ರಾಜಸ್ಥಾನದ ಬಾರ್ಮೇಡದಲ್ಲಿ ವಿದ್ಯಾರ್ಥಿಗಳು ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯಿಸಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ತಕ್ಷಣ ಮೂವರು ಶಿಕ್ಷಕರನ್ನು ನಿಯೋಜಿಸುವುದಾಗಿ ಭರವಸೆ ನೀಡುವವರೆಗೆ ಪ್ರತಿಭಟನೆ ಮುಂದುವರೆಯಿತು. ಜಾಲೋರ್‌ನಲ್ಲಿಯೂ ಶಿಕ್ಷಕರ ಕೊರತೆಯ ವಿರುದ್ಧ ವಿದ್ಯಾರ್ಥಿಗಳು ಇದೇ ರೀತಿ ಪ್ರತಿಭಟಿಸಿದರು. ಮಧ್ಯಪ್ರದೇಶದ ಛಿಂದ್ವಾಡಾದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕಳಪೆ ಆಹಾರದ ವಿರುದ್ಧ ಪ್ರತಿಭಟಿಸಿದರು. ಬೇಳೆ ಮತ್ತು ತರಕಾರಿಗಳಲ್ಲಿ ಹುಳುಗಳು ಕಂಡುಬಂದಿವೆ ಎಂದು ಆರೋಪಿಸಿದರು. ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳು ಶೌಚಾಲಯ, ನೀರಿನ ಪೂರೈಕೆ ಮತ್ತು ಶಿಕ್ಷಕರ ಗೈರುಹಾಜರಿ ವಿರುದ್ಧ ಸಿಡಿದೆದ್ದರು.
ಶಾಲಾ ವಿದ್ಯಾರ್ಥಿಗಳು ಜೆನ್ ಝಿಯಿಂದ ಪಾಠ ಕಲಿತು ತಮ್ಮ ಸಮಸ್ಯೆಗಳನ್ನು ಬೀದಿಗೆ ತೆಗೆದುಕೊಂಡು ಹೋಗುತ್ತಿರುವಂತೆ ಕಾಣುತ್ತಿದೆ. ಇದು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ, ಉತ್ತರಾಖಂಡದಿಂದ ಮಧ್ಯಪ್ರದೇಶ, ಉತ್ತರ ಪ್ರದೇಶದವರೆಗೆ, ಹಠಾತ್ ಪ್ರತಿಭಟನೆಗಳು ಮತ್ತು ವೈರಲ್ ವಿಡಿಯೋಗಳು ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿವೆ.
ಭಾರತದಲ್ಲಿ ಕೆಜಿಪಿ ಹುಟ್ಟಿಕೊಂಡ ನಂತರ, ನೀಟ್ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆಯು ವರ್ಷದ ಹಿಂದೆ ನೇಪಾಳದಲ್ಲಿ ನಡೆದ ಯುವಜನರ ಪ್ರತಿಭಟನೆಯನ್ನು ನೆನಪಿಸಿತ್ತು. ನೇಪಾಳದಂತೆ ಭಾರತದಲ್ಲೂ ಸರ್ಕಾರವನ್ನು ಉರುಳಿಸುವ ಶಕ್ತಿ ನಮಗಿದೆ ಎಂಬ ಸಂದೇಶವನ್ನು ಯುವಜನರು ನೀಡಿದ್ದಾರೆ. ಆದರೆ ಆಲ್ಫಾಗಳು ಮತದಾನದ ಹಕ್ಕು ಇಲ್ಲದವರು. ಅವರಿಂದ ತಕ್ಷಣಕ್ಕೆ ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೆ ಸೋಲಾಗದಿರಬಹುದು. ಆದರೆ ಅವರು ಸರ್ಕಾರಗಳನ್ನು ಬಗ್ಗಿಸುವ ಮಾರ್ಗಗಳನ್ನು ಕಲಿತಿದ್ದಾರೆ. ಜೆನ್ ಝಿ ಪ್ರತಿಭಟನೆಯನ್ನು ಅವರು ಕಂಡಿದ್ದಾರೆ. ಅವರಿಗೊಂದು ಮಾದರಿ ಕಣ್ಣ ಮುಂದಿದೆ. ಒಬ್ಬ ಬಲಾಢ್ಯ ಸಚಿವ ರಾಜೀನಾಮೆ ನೀಡಿದ್ದನ್ನು ಕಣ್ಣಾರೆ ಕಂಡಿದ್ದಾರೆ. ಮುಂದಿನ ಜೆನ್ ಝಿಗಳವರು. ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ, ಸೌಲಭ್ಯಗಳಿಗಾಗಿ ಹೋರಾಡುವುದು ಅಗತ್ಯ ಎಂಬುದೂ ಅವರಿಗೆ ಗೊತ್ತಾಗಿದೆ.
ಅಧಿಕಾರ ಇಲ್ಲದ ಒಂದು ವರ್ಗ ವಿದ್ಯಾರ್ಥಿಗಳು, ನಿರುದ್ಯೋಗಿ ಯುವ ಸಮೂಹ. ಆದರೆ, ಅವರ ಇಂದಿನ ಅಸಹಾಯಕ ಪರಿಸ್ಥಿತಿಗೆ ಅಧಿಕಾರ ಇರುವವರು, ಸರ್ಕಾರಗಳು ಕಾರಣ. ಇದು ಹೀಗೇ ಮುಂದುವರಿದರೆ ಯುವಕರ ಕೈಗೆ ಉದ್ಯೋಗ ಕೊಡದಿದ್ದರೆ ಮುಂದೆ ಪ್ರಭುತ್ವ ಅತಿ ಕೆಟ್ಟ ದಿನಗಳನ್ನು ಕಾಣಲಿದೆ.




