ಬಿಜೆಪಿಗೆ ಯಾರ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು ಎಂಬುದೇ ದೊಡ್ಡ ಗೊಂದಲ. ಈಗ ಮೋದಿಯೇ ಈ ಚುನಾವಣೆಯ ಮುಖ ಎಂದು ಬಹುತೇಕ ಸ್ಪಷ್ಟವಾಗಿದೆ. ದುರಂತವೆಂದರೆ ಮೋದಿಯವರ ಕಳೆದ ಮೂರು ಭೇಟಿಗಳಲ್ಲಿ ಬಿಜೆಪಿಯ ಗ್ರಾಫು ಸ್ವಲ್ಪವೂ ಮೇಲೆ ಹೋಗಲಿಲ್ಲ. ತಯಾರು ಮಾಡಿಟ್ಟಿದ್ದ ತಂತ್ರಗಳೆಲ್ಲ ಕೈ ಕೊಟ್ಟಿವೆ. ಹಾಗಾಗಿ ಪಟ್ಟಿ ಬಿಡುಗಡೆ ಕಗ್ಗಂಟಾಗಿದೆ. ಮುಂದಕ್ಕೆ ಹೋಗುತ್ತಲೂ ಇದೆ
ಈ ಬಾರಿಯ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳು ನೂರಾರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಸಾಕಷ್ಟು ಸಮಯವಾಯಿತು. ಆದರೆ ನೂರಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ಆಡಳಿತಾರೂಢ ಬಿಜೆಪಿ ಕನಿಷ್ಠ ಹತ್ತು ಜನರ ಹೆಸರನ್ನು ಇನ್ನೂ ಘೋಷಿಸಿಲ್ಲ. ಇದಕ್ಕೆ ನಿಜವಾದ ಕಾರಣವೇನು? ಏಕೆಂದರೆ ಉಳಿದವರಿಗಿಂತ ಸಾಕಷ್ಟು ಮುಂಚೆಯೇ ಚುನಾವಣಾ ತಯಾರಿಯಲ್ಲಿ ತೊಡಗಿರುವ, ಹೆಚ್ಚು ಕಡಿಮೆ ಐದು ವರ್ಷಗಳೂ ಸಕ್ರಿಯ ಚುನಾವಣಾ ಯಂತ್ರಾಂಗವನ್ನು ಚಾಲ್ತಿಯಲ್ಲಿಟ್ಟುಕೊಂಡಿರುವ ಪಕ್ಷ ಬಿಜೆಪಿ ಮಾತ್ರ.
ಹಾಗಿದ್ದರೆ, ಬಿಜೆಪಿಯು ಟಿಕೆಟ್ ಘೋಷಣೆ ತಡ ಮಾಡುತ್ತಿರುವುದು ಅದರ ದೌರ್ಬಲ್ಯವೇ ಅಥವಾ ತಂತ್ರವೇ? ಇದು ಕೇವಲ ತಂತ್ರ ಎಂಬ ಒಂದು ವಾದವೂ ಇದೆ. ಅಭ್ಯರ್ಥಿ ಯಾರೇ ಆದರೂ ಗೆಲ್ಲಿಸಿಕೊಂಡು ಬರಬೇಕೆಂದರೆ ತಳಮಟ್ಟದಲ್ಲಿ ಗಟ್ಟಿ ಸಂಘಟನೆ ಇರಬೇಕು. ಆ ರೀತಿ ತನ್ನ ಸಂಘಟನೆಯ ಕುರಿತು ಯಾರಿಗಾದರೂ ವಿಶ್ವಾಸ ಇರಬಹುದಾದರೆ ಅದೂ ಬಿಜೆಪಿಗೇ. ಹಾಗಾಗಿ ಯಾರನ್ನೇ ನಿಲ್ಲಿಸಿದರೂ ಗೆದ್ದುಕೊಂಡು ಬರುವುದರಿಂದ ಅಭ್ಯರ್ಥಿಯ ಹೆಸರನ್ನು ಈಗಿಂದೀಗಲೇ ಘೋಷಿಸುವ ಅಗತ್ಯವಿಲ್ಲ; ಜೊತೆಗೆ ಇತರ ಪಕ್ಷಗಳ ಅಭ್ಯರ್ಥಿಗಳು ಅಂತಿಮಗೊಂಡ ನಂತರ ಪಟ್ಟಿ ಘೋಷಿಸಿದರೆ ಕೆಲವು ಬದಲಾಣೆಗಳನ್ನು ಮಾಡಿಕೊಳ್ಳಲು ಅನುಕೂಲ ಎಂಬುದಷ್ಟೇ ಇದಕ್ಕೆ ಕಾರಣವೇ? ಇದರ ಬಗ್ಗೆ ಬಿಜೆಪಿಯ ಒಳಗಿನ ಸಂಗತಿಗಳು ಗೊತ್ತಿರುವ ಕೆಲವರನ್ನು ಮಾತಾಡಿಸಿದಾಗ ತಿಳಿದು ಬಂದ ಸಂಗತಿಗಳು ಅಷ್ಟೇನೂ ಆಶ್ಚರ್ಯ ಮೂಡಿಸುವುದಿಲ್ಲ.
ವಾಸ್ತವದಲ್ಲಿ ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಬಿಜೆಪಿಯು 2013ರ ಚುನಾವಣೆಯಲ್ಲೂ ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿರಲಿಲ್ಲ. ಆಗ ಬಿಜೆಪಿ ಒಡೆದು ಹೋಗಿತ್ತು. ಪಕ್ಷದ ದೊಡ್ಡ ನಾಯಕ ಯಡಿಯೂರಪ್ಪನವರು ಹೊಸ ಪಕ್ಷ ಕೆಜೆಪಿ ಕಟ್ಟಿದ್ದರು. ಭಾರೀ ಸಂಪನ್ಮೂಲ ಹೊಂದಿದ್ದ ಶ್ರೀರಾಮುಲು ಸಹಾ ಬಿಎಸ್ಆರ್ ಪಕ್ಷ ಕಟ್ಟಿದ್ದರು. ಕೆಲವು ಹಾಲಿ ಶಾಸಕರು ಮತ್ತು ನಾಯಕರುಗಳು ಕೆಜೆಪಿಯಿಂದ ಸ್ಪರ್ಧಿಸ್ತಾರಾ, ಬಿಜೆಪಿಯಿಂದಲಾ ಎಂಬ ಸಂದೇಹವೂ ಇತ್ತು. ಹಾಗಿದ್ದರೂ, ಬಿಜೆಪಿಯ ನಾಯಕತ್ವ ಗೊಂದಲದಲ್ಲಿರಲಿಲ್ಲ. ತೀರಾ ಯಡಿಯೂರಪ್ಪನವರ ಅತ್ಯಂತ ಆಪ್ತರೆಂಬುವರೂ ಪಕ್ಷ ಬಿಟ್ಟು ಹೋಗಿರಲಿಲ್ಲ; ಹೋದರೂ ಚಿಂತೆ ಮಾಡದೇ ಪಕ್ಷವನ್ನು ಸನ್ನದ್ಧವಾಗಿಸಿ ವಿರೋಧ ಪಕ್ಷದಲ್ಲಿ ಕೂರಲು ಬೇಕಾದ ಸಿದ್ಧತೆಯನ್ನು ನಾಯಕರು ಮಾಡಿಕೊಂಡಿದ್ದರು. ಅಂದರೆ ಗೊಂದಲವಿರಲಿಲ್ಲ. ಈ ಸ್ಪಷ್ಟತೆಯೇ ಬಿಜೆಪಿಯ ಶಕ್ತಿ. ಈ ಸಾರಿಯ ದೌರ್ಬಲ್ಯವೂ ಅದೇ. ಅಸ್ಪಷ್ಟತೆ.
ಯಾರ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು ಎಂಬುದೇ ದೊಡ್ಡ ಗೊಂದಲ. ಹಾಗೆ ನೋಡಿದರೆ ಈ ಸಮಸ್ಯೆ ಯಡಿಯೂರಪ್ಪನವರನ್ನು ತೆಗೆಯಲು ತೀರ್ಮಾನಿಸಿದಾಗಲೇ ಇತ್ತು. ತೆಗೆಯುವುದು ಖಚಿತ, ಆದರೆ ಆ ಜಾಗಕ್ಕೆ ಯಾರು ಎಂಬುದು ಬಗೆಹರಿಯಲು ಬಹಳ ಸಮಯ ಬೇಕಾಯಿತು. ಅದಕ್ಕಿಂತ ದೊಡ್ಡ ಗೊಂದಲ ಬಂದಿದ್ದು ಬೊಮ್ಮಾಯಿಯವರನ್ನು ತೆಗೆಯುವ ಆಲೋಚನೆ ಬಂದಾಗ. ಹಲವು ಚುನಾವಣೆಗಳಲ್ಲಿ ಸೋಲತೊಡಗಿದ ಅವರು ಪಕ್ಷಕ್ಕೆ ಹೊರೆ ಎಂಬ ಚರ್ಚೆ ಶುರುವಾಯಿತು. ಬಿಟ್ ಕಾಯಿನ್ ಹಗರಣದಲ್ಲಿ ಸಾರ್ವಜನಿಕವಾಗಿ ಅವರ ಹೆಸರು ಕೇಳಿ ಬಂದಿದ್ದಕ್ಕಿಂತ ಹೆಚ್ಚು ಆಂತರಿಕವಾಗಿ ಆತಂಕ ತಂದಿತ್ತು. ಅವರ ಜಾಗಕ್ಕೆ ಇನ್ನೊಬ್ಬರನ್ನು ತರುವುದಾದರೆ, ಆ ಇನ್ನೊಬ್ಬರು ಯಾರು ಎಂಬುದು ಬಗೆಹರಿಯದೇ ಈಗೊಂದು ಒಂಭತ್ತು ತಿಂಗಳ ಹಿಂದೆ ಚುನಾವಣೆತನಕ ಬೊಮ್ಮಾಯಿಯೇ ಎಂಬುದು ಖಚಿತವಾಯಿತು. ಸರಿಯಾಗಿ ಆ ಸಂದರ್ಭದಲ್ಲಿ 40% ಸರ್ಕಾರ ಎಂಬ ಇಮೇಜು ಬಲವಾಗುತ್ತಾ ಹೋಗಿತ್ತು. ಆ ಹೊತ್ತಿನಲ್ಲೆ ಬೊಮ್ಮಾಯಿಯವರಿಗೆ ಅಗ್ರೆಸಿವ್ ಆಗಲು ಸೂಚಿಸಲಾಯಿತು. ಅಗ್ರೆಸಿವ್ ಆಗುವುದೆಂದರೆ ʼದಮ್ಮಿದ್ದರೆ, ತಾಕತ್ತಿದ್ದರೆʼ ಥರದ ಪದಪುಂಜಗಳನ್ನು ಉದುರಿಸುವುದು ಎಂದು ಅವರು ತಪ್ಪಾಗಿ ಅರ್ಥ ಮಾಡಿಕೊಂಡು ಅಪಹಾಸ್ಯಕ್ಕೀಡಾದರು. ಆ ನಂತರ ಸಿಎಂ ಬೊಮ್ಮಾಯಿ – ಕಾಮನ್ ಮ್ಯಾನ್ ಬೊಮ್ಮಾಯಿ ಎಂದು ಬಿಂಬಿಸುವ ಪ್ರಯತ್ನ ಸ್ವಲ್ಪದಿನ ನಡೆಯಿತು. ಅದೂ ಕೆಲಸ ಮಾಡಲಿಲ್ಲ. ಅದನ್ನೂ ಕೈಬಿಟ್ಟರು.
ಈಗ ಮೋದಿಯೇ ಈ ಚುನಾವಣೆಯ ಮುಖ ಎಂದು ಬಹುತೇಕ ಸ್ಪಷ್ಟವಾಗಿದೆ. ದುರಂತವೆಂದರೆ ಮೋದಿಯವರ ಕಳೆದ ಮೂರು ಭೇಟಿಗಳಲ್ಲಿ ಬಿಜೆಪಿಯ ಗ್ರಾಫು ಸ್ವಲ್ಪವೂ ಮೇಲೆ ಹೋಗಲಿಲ್ಲ. ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ಆದ ಎಡವಟ್ಟು ಮತ್ತು ನಾಗಮಂಗಲದ ರೌಡಿಶೀಟರ್ ಫೈಟರ್ ರವಿಯ ಮೋದಿ ಭೇಟಿಯಿಂದ ಆದ ನೆಗೆಟಿವ್ಅನ್ನು ಮೀರಿದ ಸಂಚಲನ ಏನೂ ಮೂಡಲಿಲ್ಲ. ನಂತರದ್ದು ಹಾಗೆ ನೋಡಿದರೆ ದಾವಣಗೆರೆಯ ಭಾರೀ ಕಾರ್ಯಕ್ರಮ ಮತ್ತು ಸದ್ಯದ ಪ್ರಭಾವಿ ಮಂತ್ರಿ ಸುಧಾಕರ್ ಕ್ಷೇತ್ರದ ಕಾರ್ಯಕ್ರಮ. ಎರಡರಲ್ಲೂ ಎದ್ದು ಕಾಣುವ ಏನೂ ನಡೆಯಲಿಲ್ಲ. ಈ ಹೊತ್ತಿಗಾಗಲೇ ಮಾಡಾಳು ವಿರೂಪಾಕ್ಷಪ್ಪ ಪ್ರಕರಣ ನಡೆದು, ಬಿಜೆಪಿಯ ಇಮೇಜು ಕುಗ್ಗಿತ್ತು. ಮೋದಿಯವರು ಭ್ರಷ್ಟಾಚಾರದ ಕುರಿತು ಹೆಚ್ಚೇನೂ ಮಾತಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಇವೆಲ್ಲದರ ನಡುವೆ ಹುಲಿದಿನದ ಕಾರ್ಯಕ್ರಮಕ್ಕೆ ಕರ್ನಾಟಕಕ್ಕೆ ಬರಲಿರುವ ಮೋದಿಯವರ ಇಡೀ ಶೆಡ್ಯೂಲ್ ಹುಲಿ ಮತ್ತು ಹುಲಿಗಣತಿಯ ವರದಿಯ ಬಿಡುಗಡೆಗೆ ಸೀಮಿತವಾಗಿದೆ. ನೀತಿಸಂಹಿತೆ ಘೋಷಣೆಯಾದ ಮೇಲೆ ಬರುತ್ತಿರುವ ಪ್ರಧಾನಿ ಭೇಟಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳದೇ ಇರುವುದು ಈ ಹಿಂಜರಿಕೆಯಿಂದಲೇ ಆಗಿದೆ.
ಎರಡನೆಯದ್ದು ಏನನ್ನು ಹೇಳಿಕೊಂಡು ಜನರ ಮಧ್ಯೆ ಹೋಗುವುದು? ಇದೂ ಸಹಾ ಗೊಂದಲದಲ್ಲೇ ಇದೆ. ಮೊದಮೊದಲು ತಾವು ಭ್ರಷ್ಟರಲ್ಲ ಎಂದು ಹೇಳಹೊರಟಿದ್ದರು; ಅದು ಸಾಧ್ಯವಿಲ್ಲ ಎಂದಾದಾಗ, ಸಿದ್ದರಾಮಯ್ಯನವರು ಭ್ರಷ್ಟರು ಎಂದು ಸಾಬೀತು ಮಾಡಲು ಹರಸಾಹಸ ಪಟ್ಟು ಆಗದೇ ಹೋಯಿತು. ಮಾಡಾಳು ಪ್ರಕರಣದ ನಂತರ ಇನ್ನು ಭ್ರಷ್ಟಾಚಾರದ ಚರ್ಚೆ ಮಾಡಲೇಬಾರದು ಎಂದು ತೀರ್ಮಾನಿಸಿದಂತೆ ಕಾಣುತ್ತಿದೆ. ಬಿಜೆಪಿಯೇ ಭರವಸೆ ಎಂಬ ಘೋಷಣೆಯ ಮೇಲೆ ಬಿಜೆಪಿಗೆಷ್ಟು ಭರವಸೆ ಇದೆ ಗೊತ್ತಾಗುತ್ತಿಲ್ಲ. ಏಕೆಂದರೆ ರಾಜ್ಯದ ಯಾವ ಮೂಲೆಗೆ ಹೋಗಿ ʼಈ ಸರ್ಕಾರದ ಯೋಜನೆಗಳಲ್ಲಿ ನೀವು ಮೆಚ್ಚಿಕೊಳ್ಳುವ ಒಂದು ಯೋಜನೆಯ ಹೆಸರು ಹೇಳಿʼ ಎಂದು ಕೇಳಿದರೆ ಯಾರೊಬ್ಬರಿಗೂ ಏನು ಹೇಳುವುದು ಎಂದು ಗೊತ್ತಾಗುತ್ತಿಲ್ಲ. ಕೆಲವರು ಉಜ್ವಲಾ ಗ್ಯಾಸ್, ಕಿಸಾನ್ ಸಮ್ಮಾನ್ ನಿಧಿ ಎನ್ನುತ್ತಾರೆ. ಅವೆರಡೂ ಕೇಂದ್ರ ಸರ್ಕಾರದ ಯೋಜನೆಗಳು.
ಮೂರನೆಯದ್ದು ಮೀಸಲಾತಿ ಹೆಚ್ಚಳದ್ದು. ಈ ವಿಚಾರದಲ್ಲಂತೂ ಬಿಜೆಪಿಗೆ ಅನಿರೀಕ್ಷಿತ ಸಮಸ್ಯೆಗಳು ಎದುರಾದವು. ಲಂಬಾಣಿ, ಬೋವಿ ಸಮುದಾಯಗಳಿಗೆ ಮೂರರಿಂದ ನಾಲ್ಕೂವರೆ ಪರ್ಸೆಂಟಿಗೆ ಏರಿಸಿದ್ದರೂ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಲಂಬಾಣಿಗಳಿಂದ ನಡೆದು ಹೋಯಿತು. ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಲಾಯಿತು. ಈ ಒಳಮೀಸಲಾತಿಯನ್ನು ಕಗ್ಗಂಟು ಮಾಡಿ ಕೊಟ್ಟಿದ್ದರಿಂದ ಮಾದಿಗ ಸಮುದಾಯವೂ ಅಷ್ಟೇನೂ ಸಂಭ್ರಮಿಸಲಿಲ್ಲ. ಆ ಕಗ್ಗಂಟನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಮುಂದೆ ಇಡದೇ ಇರುವುದರಿಂದ ಅಲ್ಪಸ್ವಲ್ಪ ಲಾಭದ ಕನಸನ್ನು ಬಿಜೆಪಿ ಈಗಲೂ ಕಾಣುತ್ತಿದೆ. ಆದರೆ ಅದನ್ನು ಬಹಳ ಗಟ್ಟಿದನಿಯಲ್ಲಿ ಹೇಳುವ ಧೈರ್ಯ ಮಾಡುತ್ತಿಲ್ಲ. ಏಕೆಂದರೆ ಮೀಸಲಾತಿ ಹೆಚ್ಚಳದ ಮಾತು ಬಂದರೆ ಮೇಲ್ಜಾತಿಗಳ, ನಗರದ ಮಧ್ಯಮವರ್ಗದ ಬೆಂಬಲ ಕಳೆದುಕೊಳ್ಳುವ ಭಯ. ಮೀಸಲಾತಿ ಕುರಿತ ಅಭಿನಂದನಾ ಸಮಾವೇಶವನ್ನು ನಡೆಸಿದ್ದು ಬೆಂಗಳೂರಿನಲ್ಲೂ ಅಲ್ಲ, ರಾಯಚೂರಿನಲ್ಲೂ ಅಲ್ಲ, ಅಷ್ಟೇನೂ ಮಾದಿಗ ಸಮುದಾಯ ಇರದ ಹುಬ್ಬಳ್ಳಿಯಲ್ಲಿ ಎಂಬುದನ್ನು ಗಮನದಲ್ಲಿಡಬೇಕು.
ಉರಿಗೌಡ, ನಂಜೇಗೌಡ ಪ್ರಕರಣ ಬಿಜೆಪಿಗೆ ತೀರಾ ಮುಖಭಂಗ ಮಾಡಿದ್ದು ಅವರ ವ್ಯೂಹತಂತ್ರಕ್ಕೆ ಅಡ್ಡಿಯುಂಟು ಮಾಡಿದೆ. ಏಕೆಂದರೆ ಸ್ಥಳೀಯ ಹೊಂದಾಣಿಕೆಗಳೇನೇ ಇದ್ದರೂ, ಅಮಿತ್ ಶಾ ಸ್ಪಷ್ಟ ಸೂಚನೆ ಒಕ್ಕಲಿಗ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಪ್ರಯತ್ನ ಆಗಬೇಕು ಮತ್ತು ಚುನಾವಣೆಗೆ ಮುಂಚೆಯೇ ಆಪರೇಷನ್ ಕಮಲ ನಡೆದು ಅಭ್ಯರ್ಥಿಗಳನ್ನು ʼಎತ್ತಾಕಿಕೊಂಡುʼ ಬರಬೇಕು ಎಂಬುದಾಗಿತ್ತು. ಆ ಪ್ಯಾಕೇಜಿನ ಭಾಗವಾಗಿ ದೀರ್ಘಕಾಲದಿಂದ ಪ್ರಯತ್ನ ನಡೆದಿತ್ತು. ಕೆಂಪೇಗೌಡ ಪ್ರತಿಮೆ, ಒಕ್ಕಲಿಗ ಅಭಿವೃದ್ಧಿ ಮಂಡಳಿ, ಜೂನಿಯರ್ ಅಶ್ವತ್ಥನಾರಾಯಣರಿಗೆ ಡಿಸಿಎಂ ಪಟ್ಟ, ಈ ಭಾಗದಲ್ಲಿ ಆರೆಸ್ಸೆಸ್ ಗಮನ ಹೆಚ್ಚಿಸಿದ್ದು, ಸುಮಲತಾರನ್ನು ಸೆಳೆದುಕೊಂಡಿದ್ದರ ಜೊತೆಗೆ ಒಂದು ಕಮ್ಯುನಲ್ ನೆರೇಟಿವ್ ಅಗತ್ಯವಿತ್ತು. ಅದಕ್ಕೆ ಆರಿಸಿಕೊಂಡಿದ್ದು ಉರಿ-ನಂಜುಗಳ ಫೇಕ್ ಪಾತ್ರಸೃಷ್ಟಿ. ಆದರೆ ಅದು ಪೂರಾ ನೆಗೆದುಬಿತ್ತು. ಅದರಲ್ಲೂ ರಾಜ್ಯ ಒಕ್ಕಲಿಗರ ಸಂಘ ಮತ್ತು ಚುಂಚನಗಿರಿ ಸ್ವಾಮೀಜಿಯವರ ಖಡಕ್ ಹೇಳಿಕೆಗಳು ಅಂತಿಮ ಮೊಳೆ ಹೊಡೆದುಬಿಟ್ಟವು. ಈ ವಿಚಾರದಲ್ಲಿ ಬಿಜೆಪಿಯ ಮಂತ್ರಿಗಳಾದ ಮುರುಗೇಶ್ ನಿರಾಣಿ ಮತ್ತು ಸುಧಾಕರ್ ನೀಡಿದ ಹೇಳಿಕೆಗಳು ಬಿಜೆಪಿಯೊಳಗೇ ಸಹಮತವಿಲ್ಲ ಎಂಬುದನ್ನು ಧ್ವನಿಸಿದವು. ಇನ್ನೂ ಹೆಚ್ಚು ಕಮ್ಯುನಲ್ ಅಜೆಂಡಾಗೆ ಹೋದರೆ ರಿವರ್ಸ್ ಹೊಡೆಯುತ್ತದೆ ಎಂದು ಬಿಜೆಪಿಯೊಳಗೆ ಒಂದು ಗುಂಪು ಒತ್ತಡ ತಂದಿರುವುದು ಸ್ಪಷ್ಟ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮಹಿಳೆಯರಿಗೆ ಶೇ.33ರ ಪ್ರಾತಿನಿಧ್ಯ ಕನ್ನಡಿ ಗಂಟಾಗಿಯೇ ಉಳಿಯಿತು
ಅಭ್ಯರ್ಥಿಗಳ ವಿಚಾರಕ್ಕೆ ಬಂದರೆ, ಗಂಭೀರ ಭಿನ್ನಾಭಿಪ್ರಾಯಗಳಿರುವುದು ಯಾವ ತಂತ್ರ ಅನುಸರಿಸಬೇಕೆಂಬ ಮ್ಯಾಕ್ರೋ ಸ್ಟ್ರಾಟೆಜಿಯಲ್ಲಿ. ಉತ್ತರದ ಕೆಲವು ರಾಜ್ಯಗಳಲ್ಲಿ ಮಾಡಿದಂತೆ ಕನಿಷ್ಠ ಐವತ್ತು ಕ್ಷೇತ್ರಗಳಲ್ಲಿ ಹಿಂದಿನ ಶಾಸಕರನ್ನು ಬದಲಾಯಿಸದಿದ್ದರೆ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಲಾಗದು ಎಂಬ ಒಂದು ತಂತ್ರ ಒಂದು ಗುಂಪಿನದ್ದು. ದೆಹಲಿಯ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿಯು ನೂರಕ್ಕೆ ನೂರು ಭಾಗ ಹೊಸಬರಿಗೆ ಟಿಕೆಟ್ ಕೊಟ್ಟು ಗೆದ್ದಿತ್ತು. ಆದರೆ, ಕರ್ನಾಟಕದಲ್ಲಿ ಬಿಜೆಪಿಗೆ ಬಲ ಇರುವುದು ಅದರ ಸ್ಥಳೀಯ ಶಾಸಕರಿಂದಲೇ, ಏಕೆಂದರೆ ಆಡಳಿತ ವಿರೋಧಿ ಅಲೆ ಉಂಟಾಗಿರುವುದು ಮೇಲ್ಮಟ್ಟದ – ಅದರಲ್ಲೂ ಮುಖ್ಯಮಂತ್ರಿ ಮಟ್ಟದ ನೀತಿಗಳಿಂದ. ಹೀಗಿರುವಾಗ ಒಂದೆಡೆ ರಾಜ್ಯಮಟ್ಟದ ಮುಖವನ್ನು ಬದಲಿಸದೇ, ಸ್ಥಳೀಯ ಶಾಸಕರನ್ನು ಬದಲಿಸುವುದು ಹೇಗೆ ಎಂಬುದು ಅವರನ್ನು ಚಿಂತೆಗೀಡು ಮಾಡಿದೆ.
ಅಷ್ಟೇ ಅಲ್ಲದೇ, ಈ ಹಿಂದೆ ಕಾಂಗ್ರೆಸ್ಸನ್ನು ಕಾಡುತ್ತಿದ್ದ ಸಮಸ್ಯೆ ಬಿಜೆಪಿಯನ್ನು ಕಾಡುತ್ತಿದೆ. ಅದು ಪ್ರತೀ ಕ್ಷೇತ್ರದಲ್ಲಿ ಹೊಸ ಹೊಸ ಅಭ್ಯರ್ಥಿಗಳ ಪಡೆಯಿರುವುದು. ಅವರುಗಳಲ್ಲಿ ಹೆಚ್ಚಿನವರು ಕಳೆದ ಐದು ವರ್ಷಗಳಲ್ಲಿ ವಿಪರೀತ ʼಸಂಪಾದನೆʼ ಮಾಡಿಕೊಂಡಿರುವ ಯುವಕರಿದ್ದಾರೆ. ಇಂತಹ ಯುವಕರ ಗಾಡ್ ಫಾದರ್ ವಿಜಯೇಂದ್ರ ಆಗಿದ್ದಾರೆ. ಉದಾಹರಣೆಗೆ ಬಾಗೇಪಲ್ಲಿಯ ಮುನಿರಾಜು, ದೊಡ್ಡಬಳ್ಳಾಪುರದ ಧೀರಜ್ ಮುನಿರಾಜು, ಬ್ಯಾಟರಾಯನಪುರದಲ್ಲಿ ಹಳೆಯ ಅಭ್ಯರ್ಥಿಗೆ ಸೆಡ್ಡು ಹೊಡೆದಿರುವ ತಮ್ಮೇಶ್ ಗೌಡ ಥರದವರೆಲ್ಲರೂ ಅದೇ ಗುಂಪಿನವರು. ಒಂದು ಅಂದಾಜಿನಂತೆ ಕನಿಷ್ಠ ಐವತ್ತು ಜನ ಇಂತಹವರು ಅಲ್ಲಲ್ಲಿ ಟಿಕೆಟ್ ಕೇಳಿದ್ದಾರೆ. ಇವರಲ್ಲಿ ಶೇ.90ರಷ್ಟು ಜನಕ್ಕೂ ಮೂಲ ಬಿಜೆಪಿಗೂ ಸಂಬಂಧವಿಲ್ಲ. ಮುಂದೆ ಇವರುಗಳು ಪಕ್ಷ ಬದಲಿಸುವುದಿಲ್ಲ ಎಂಬ ಖಾತರಿಯೂ ಇಲ್ಲ. ಹೀಗಾಗಿ ಹೊಸಬರು ಎಂಬ ಹೆಸರಿನಲ್ಲಿ ಇವರಿಗೆ ಟಿಕೆಟ್ ನೀಡುವುದು ದೀರ್ಘಕಾಲದಲ್ಲಿ ಪಕ್ಷಕ್ಕೆ ಡ್ಯಾಮೇಜು ಎಂಬುದು ʼಉನ್ನತ ಮಟ್ಟದಲ್ಲಿರುವವರʼ ಆಕ್ಷೇಪ.
ಇದನ್ನೂ ಓದಿ ಕಿಚ್ಚ ಸುದೀಪ್ ನಟನೆಯ ಜಾಹೀರಾತುಗಳಿಗೆ ನಿರ್ಬಂಧ ಹೇರಲು ಆಯೋಗಕ್ಕೆ ಜೆಡಿಎಸ್ ಮನವಿ
ಇದನ್ನು ಸರಿಯಾಗಿ ನಿಭಾಯಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂಬುದು ಕೆಲವು ಪಕ್ಷಾಂತರಗಳಿಂದ ಗೊತ್ತಾಗಿದೆ. ಅದು ಆಯನೂರು ಮಂಜುನಾಥ್, ಮೋಹನ ಲಿಂಬಿಕಾಯಿ ಥರದ ಯಡಿಯೂರಪ್ಪ ಆಪ್ತರ ಪಕ್ಷಾಂತರ. ಅಂದರೆ, ಸ್ವಲ್ಪ ಮಾರ್ಜಿನ್ನಿನಲ್ಲಿರುವ ಕೆಲವರನ್ನು ಆ ಕಡೆಗೆ ಹೋಗಲು ಯಡಿಯೂರಪ್ಪ ಸೂಚಿಸಿಲ್ಲ ಎಂದು ನಂಬಲೂ ಆಗದೇ, ನೇರವಾಗಿ ಹೇಳಲೂ ಆಗದೇ ʼವರಿಷ್ಠರುʼ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಆಯನೂರು ಅಂತೂ ಈಶ್ವರಪ್ಪನವರನ್ನು ಮಾತಿನಲ್ಲೂ ಎದುರು ಹಾಕಿಕೊಳ್ಳಲು ಸಿದ್ಧರಾಗಿಯೇ ತೊಡೆ ತಟ್ಟಿದ್ದಾರೆ. ಈಶ್ವರಪ್ಪನವರೇನಾದರೂ ನಾಲಿಗೆ ಚಾಚಿದರೆ, ಪ್ರತಿದಿನವೂ ನೋಡುಗರಿಗೆ ಹಬ್ಬವಾಗುವಷ್ಟು ಮಾತುಗಳನ್ನು ಆಯನೂರು ಆಡಲಿದ್ದಾರೆ. ಆಯನೂರರನ್ನು ಯಡಿಯೂರಪ್ಪನವರು ತಡೆಯಲು ಸಾಧ್ಯವಿರಲಿಲ್ಲವೇ? ಇನ್ನೂ ಕೆಲವು ವರ್ಷಗಳ ವಿಧಾನಪರಿಷತ್ ಸದಸ್ಯತ್ವ ಇದ್ದರೂ ಮೂವರು ಬಿಜೆಪಿಯನ್ನು ಬಿಟ್ಟು ಹೋಗಿರುವುದು ಯಾವ ರೀತಿಯಲ್ಲೂ ಒಳ್ಳೆಯ ಸೂಚನೆಯಲ್ಲ ಎಂಬುದು ಯಾರಿಗಾದರೂ ಗೊತ್ತಾಗುವ ಸಂಗತಿ. ಮೂವರೂ ಸಹಾ ನಾಲ್ಕೈದು ಸಾರಿ ಗೆದ್ದು ಬಂದಿರುವವರು. ಇದ್ದಿದ್ದರೆ ಮಂತ್ರಿಯಾಗುವ ಅವಕಾಶ ಇತ್ತು. ಹಾಗಿದ್ದೂ ಬಿಡುತ್ತಿದ್ದಾರೆಂದರೆ ಅವೆಲ್ಲಾ ಯಾವ ಸೂಚನೆ?
ಯಾವ ಆಂತರಿಕ ಸಮೀಕ್ಷೆಯಲ್ಲೂ ಮೂರಂಕಿಗೆ ತಲುಪುವ ಸೂಚನೆ ಬಿಜೆಪಿಗಿಲ್ಲ. ಹಾಗಾಗಿ ಚುನಾವಣೋತ್ತರ ಬೆಳವಣಿಗೆಗಳಿಗೆ ಬಿಜೆಪಿ ಸಿದ್ಧವಾಗುತ್ತಿದೆ. ಸ್ವತಃ ಬೊಮ್ಮಾಯಿ ಮತ್ತು ಸುಧಾಕರ್ ಇಬ್ಬರೂ ಚುನಾವಣೆ ನಂತರ ಈ ಕಡೆಗೆ ಬರಬಹುದಾದವರ ಜೊತೆಗೆ ಮಾತುಕತೆ ಆರಂಭಿಸಿದ್ದಾರೆ. ಸುಧಾಕರ್ ಗೆ ಸಿಗುತ್ತಿರುವ ಪ್ರಾಶಸ್ತ್ಯವು ಇನ್ನು ಕೆಲವರ ಕಣ್ಣು ಕೆಂಪಗಾಗಿಸುತ್ತಿದೆ.
ಒಟ್ಟಿನಲ್ಲಿ ಗೊಂದಲ ಮಾತ್ರವೇ ಪ್ರಧಾನವಾಗಿರುವ ರಾಜ್ಯ ಬಿಜೆಪಿಯು ಅಭ್ಯರ್ಥಿ ಆಯ್ಕೆಯನ್ನು ಎತ್ತಿಕೊಳ್ಳುವ ಧೈರ್ಯ ಮಾಡಿಲ್ಲದಿರುವುದೇ ಪಟ್ಟಿ ವಿಳಂಬವಾಗಲು ಕಾರಣ. ಕಾಂಗ್ರೆಸ್, ಜೆಡಿಎಸ್ಸುಗಳಲ್ಲೂ ಪಟ್ಟಿ ಪ್ರಕಟವಾದ ಮೇಲೆ ಗೊಂದಲ, ವಿರೋಧ, ಬಂಡಾಯ ಸಹಜವೇ. ಆದರೆ ಈ ಸದ್ಯ ಅದು ವಿಪರೀತ ಇರುವುದು ಬಿಜೆಪಿಯಲ್ಲಿ. ಹಾಗಾಗಿಯೇ ಮೊದಲು ಬಂಡಾಯ ಶಮನಕ್ಕೆ ತಂಡ ರಚಿಸಿ ನಂತರ ಪಟ್ಟಿ ರೆಡಿ ಮಾಡಲು ಕೂರಲು ರಾಜ್ಯ ನಾಯಕತ್ವ ಯೋಚಿಸಿದೆ. ಒಂದೆಡೆ ಪಕ್ಷದ ಟಿಕೆಟ್ ಬೇಡ ಎನ್ನುವವರೂ ಇದ್ದಾರೆ, ಆದರೆ ಹೊರಗೆ ಹೋಗಲಾದವರೂ ಹಲವರಿದ್ದಾರೆ.
ಇದನ್ನೂ ಓದಿ ವಿವಾದಾತ್ಮಕ ಮೋದಿ ಆಪ್ತ ಕಿರಣ್ ಪಟೇಲ್ ಬಂಧಿಸಿದ ಪೊಲೀಸರು
ಇದ್ದುದರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯ ಲಾಭವೊಂದನ್ನು ನೆಚ್ಚಿಕೊಂಡಿರುವ ಬಿಜೆಪಿಯು ರಾಜ್ಯಮಟ್ಟದಲ್ಲಿ ಅಬ್ಬರಕ್ಕಿಂತ ತಳಮಟ್ಟದ ಧ್ರುವೀಕರಣ ಹಾಗೂ ಬಿಜೆಪಿ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಒಗ್ಗೂಡಿಸುವ ಆಲೋಚನೆಯಲ್ಲಿದೆ. ರಾಜ್ಯ ಬಿಜೆಪಿಯಲ್ಲಿ ಅದರ ಬಗ್ಗೆ ಭರವಸೆಯಿಲ್ಲ; ಆದರೆ ಅದರ ಕೇಂದ್ರ ನಾಯಕತ್ವ ಮತ್ತು ಚುನಾವಣಾ ಯಂತ್ರಾಂಗವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಫಲವಾಗುತ್ತವೆಯೇ ಇಲ್ಲವೇ ಎಂಬುದರ ಮೇಲೆ ಬಿಜೆಪಿಯ ಸೋಲಿನ ಗಾತ್ರ ತೀರ್ಮಾನವಾಗುತ್ತದೆ.