ಸಾಮಾನ್ಯ ಮನುಷ್ಯನ ಲೋಕವನ್ನು ತೆರೆಗೆ ತಂದ ಕೆ. ಭಾಗ್ಯರಾಜ್

Date:

ತಮಿಳು ಚಿತ್ರರಂಗದಲ್ಲಿ ಪ್ರೀತಿಯಿಂದ ʼಚಿತ್ರಕಥೆಯ ಚಕ್ರವರ್ತಿʼ ಎಂದೇ ಹೆಸರಾಗಿದ್ದ ಕೆ. ಭಾಗ್ಯರಾಜ್, 1980ರ ದಶಕದ ವಾಣಿಜ್ಯ ಚಲನಚಿತ್ರಗಳ ಸ್ವರೂಪವನ್ನೇ ಬದಲಾಯಿಸಿದವರು. ಅಬ್ಬರದ, ಅತಿಮಾನುಷ ಸಾಹಸ ಪ್ರಧಾನ ನಾಯಕರೇ ಅಧಿಪತ್ಯ ಸಾಧಿಸುತ್ತಿದ್ದ ಆ ಕಾಲದಲ್ಲಿ, ಭಾಗ್ಯರಾಜ್ ಅವರು ಒಬ್ಬ ನಟ-ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮಗಾಗಿಯೇ ಒಂದು ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿಕೊಂಡರು.

ಕೇವಲ ಸಿನೆಮಾ ಬಗೆಗಿನ ಕಡು ವ್ಯಾಮೋಹದಿಂದ ಚಿತ್ರರಂಗವೆಂಬ ಚಕ್ರವ್ಯೂಹ ಪ್ರವೇಶಿಸಿ ವಿಫಲರಾದವರೇ ಹೆಚ್ಚು. ಆದರೆ ತಮ್ಮ ತೀವ್ರ ಆಸಕ್ತಿ, ಕಠಿಣ ಶ್ರಮ ಮತ್ತು ಕೃತು ಶಕ್ತಿಯಿಂದ ಚಿತ್ರರಂಗದ ಪಥವನ್ನು ಬದಲಾಯಿಸಿದ ಅನೇಕ ಪ್ರತಿಭೆಗಳು ತಮಿಳು ಚಿತ್ರರಂಗದಲ್ಲಿ ರಾರಾಜಿಸಿವೆ. ಚಿತ್ರ ನಿರ್ದೇಶನದಲ್ಲಿ ನವಪಂಥವನ್ನು ಹುಟ್ಟು ಹಾಕಿ ಹಲವು ಪೀಳಿಗೆಗಳನ್ನು ಪ್ರಭಾವಿಸಿದ ಅಂಥ ಅನೇಕ ಪಂಥ ಸೃಷ್ಟಿಕಾರರಲ್ಲಿ ಇತ್ತೀಚಿಗೆ ನಿಧಾನರಾದ ಭಾರತಿರಾಜ ಅಗ್ರಗಣ್ಯರು. ಅವರ ಗರಡಿಯಲ್ಲಿ ಬೆಳೆದು ಮನರಂಜನೆಯ ಗಡಿಗಳನ್ನು ವಿಸ್ತರಿಸಿದ ಅವರ ಶಿಷ್ಯ ಕೆ. ಭಾಗ್ಯರಾಜ್ ಗುರುವನ್ನು ಅನುಸರಿಸಿ ಇಹಲೋಕ ತ್ಯಜಿಸಿದ ಆಘಾತಕಾರಿ ಸುದ್ದಿ ಬಂದಿದೆ.

- Advertisement -

ತಮಿಳು ಚಿತ್ರರಂಗದಲ್ಲಿ ಪ್ರೀತಿಯಿಂದ ʼಚಿತ್ರಕಥೆಯ ಚಕ್ರವರ್ತಿʼ ಎಂದೇ ಹೆಸರಾಗಿದ್ದ ಕೆ. ಭಾಗ್ಯರಾಜ್, 1980ರ ದಶಕದ ವಾಣಿಜ್ಯ ಚಲನಚಿತ್ರಗಳ ಸ್ವರೂಪವನ್ನೇ ಬದಲಾಯಿಸಿದವರು. ಅಬ್ಬರದ, ಅತಿಮಾನುಷ ಸಾಹಸ ಪ್ರಧಾನ ನಾಯಕರೇ ಅಧಿಪತ್ಯ ಸಾಧಿಸುತ್ತಿದ್ದ ಆ ಕಾಲದಲ್ಲಿ, ಭಾಗ್ಯರಾಜ್ ಅವರು ಒಬ್ಬ ನಟ-ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮಗಾಗಿಯೇ ಒಂದು ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿಕೊಂಡರು. ಅವರು ಸಾಮಾನ್ಯ, ತಪ್ಪುಗಳನ್ನು ಮಾಡುವ, ಮಧ್ಯಮ ವರ್ಗದ ಅಸಹಾಯಕ ವ್ಯಕ್ತಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಿನೆಮಾಗಳಿಗೆ ಕಥೆ ಸಂಭಾಷಣೆ ಬರೆದು, ನಿರ್ದೇಶಿಸಿ, ನಟಿಸಿದ ಅಸಾಮಾನ್ಯ ಸಿನೆಮಾ ಆಲ್ ರೌಂಡರ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಜೀವನಚರಿತ್ರೆ: ಸ್ವಯಂ-ನಿರ್ಮಿತ ಚಲನಚಿತ್ರ ಬ್ರಹ್ಮ (The Self-Made Auteur)
ಕೃಷ್ಣಸ್ವಾಮಿ ಭಾಗ್ಯರಾಜ್ ಅವರು ಜನವರಿ 7, 1953ರಂದು ತಮಿಳುನಾಡಿನ ಗೋಪಿಚೆಟ್ಟಿಪಾಳ್ಯಂ ಬಳಿಯ ವೆಲ್ಲಂಕೋವಿಲ್‌ನಲ್ಲಿ ಜನಿಸಿದರು. ಸಿನೆಮಾ ಎಂದರೆ ಅತಿಯಾದ ವ್ಯಾಮೋಹ ಹೊಂದಿದ್ದ ಅವರು, ಎಂ.ಜಿ. ರಾಮಚಂದ್ರನ್(MGR) ಮತ್ತು ಬಾಲಿವುಡ್‌ನ ರಾಜೇಶ್ ಖನ್ನಾ ಅವರನ್ನು ಆರಾಧಿಸುತ್ತಾ ಬೆಳೆದರು. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟ ಅವರು, ತಮ್ಮ ಚಲನಚಿತ್ರದ ಕನಸುಗಳನ್ನು ಬೆನ್ನಟ್ಟಿ ಅಂದಿನ ಮದ್ರಾಸ್‌ಗೆ (ಈಗಿನ ಚೆನ್ನೈ) ಬಂದರು. ಆದರೆ ಚಿತ್ರರಂಗದಲ್ಲಿ ನಿರ್ದೇಶಕರ ಜೊತೆ ಕೆಲಸ ಮಾಡಿ ಚಲನಚಿತ್ರ ರಂಗದ ಮಾಯಾಲೋಕದಲ್ಲಿ ಮೈ ಮರೆಯುವ ಏಕೈಕ ಉದ್ದೇಶದಿಂದ ಅವರು ಚೆನ್ನೈಗೆ ಬಂದರು. ಅಲ್ಲಿ ಇಲ್ಲಿ ಕೆಲಸ ಮಾಡುತ್ತಾ ಕೊನೆಗೆ ಅವರು ಬಂದುಸೇರಿದ್ದು ಆಗತಾನೆ ಸ್ವತಂತ್ರ ನಿರ್ದೇಶಕರಾಗಿ ವೃತ್ತಿ ಬದುಕನ್ನು ಆರಂಭಿಸಿದ್ದ ಭಾರತಿರಾಜ ಅವರ ಬಳಗವನ್ನು.

ಇದನ್ನು ಓದಿದ್ದೀರಾ?: ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಕಾಸರವಳ್ಳಿ

ಭಾರತಿರಾಜ ಅವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಭಾಗ್ಯರಾಜ್ ಅವರು ತಮ್ಮ ಕೌಶಲ್ಯಗಳಿಗೆ ಸಾಣೆ ಹಿಡಿದರು. ಸಂಭಾಷಣೆ ರಚನೆ, ತಿದ್ದುಪಡಿ, ಕಲಾವಿದರಿಗೆ ಸಂಭಾಷಣೆ ಹೇಳಿಕೊಡುವುದರಿಂದ ಹಿಡಿದು ಸಿನೆಮಾ ಉಪಕರಣಗಳನ್ನು ಸಾಗಿಸುವ ಜೋಡಿಸುವ ಸಮಸ್ತ ಕೆಲಸಗಳಿಗೂ ಅವರು ಕೈ ಚಾಚುತ್ತಿದ್ದರು. ಭಾರತಿರಾಜ ಅವರಿಗೆ ಅಚ್ಚುಮೆಚ್ಚಿನವರಾಗಿದ್ದರು. ಭಾರತಿರಾಜ ಅವರ ಕಲ್ಟ್ ಸಿನಿಮಾಗಳಾದ ’ಪದಿನಾರು ವಯದಿನಿಲೆ’(1977) ಮತ್ತು ‘ಸಿಗಪ್ಪು ರೋಜಾಕ್ಕಳ್’(1978) ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಲ್ಲದೆ, ಆಕಸ್ಮಿಕವಾಗಿ ಕೆಲವು ಸಣ್ಣ ಪಾತ್ರಗಳಲ್ಲೂ ಕಾಣಿಸಿಕೊಂಡರು. ಪದಿನಾರು ವಯದಿನಲೆ ಚಿತ್ರದಲ್ಲಿ ಹೊಸಬರಾದ ತಮಗೆ ಪಾತ್ರದ ಸ್ವಭಾವಕ್ಕೆ ತಕ್ಕಂತೆ ಸಂಭಾಷಣೆ ಒಪ್ಪಿಸುವ ನುಡಿ ವಿನ್ಯಾಸವನ್ನು ಕಳಿಸಿದವರೇ ಭಾಗ್ಯರಾಜ್ ಎಂದು ರಜನಿಕಾಂತ್ ಸಮಾರಂಭವೊಂದರಲ್ಲಿ ನೆನಪಿಸಿಕೊಂಡಿದ್ದರು.

ಭಾಗ್ಯರಾಜ್1
ವಿವಿಧ ಪಾತ್ರಗಳಲ್ಲಿ ಭಾಗ್ಯರಾಜ್

ಭಾರತಿರಾಜ ಅವರು ಗ್ರಾಮೀಣ ಸಿನೆಮಾಗಳಿಗೆ ಕಾವ್ಯಾತ್ಮಕ ಮತ್ತು ವಾಸ್ತವಿಕ ರೂಪ ನೀಡುತ್ತಿದ್ದರೆ, ಭಾಗ್ಯರಾಜ್ ಅವರು ಸಂಭಾಷಣೆ-ಪ್ರಧಾನ ಮತ್ತು ವ್ಯವಸ್ಥಿತ ಕಥೆಗಾರಿಕೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಅವರ ಚಿತ್ರಗಳ ಭಿತ್ತಿಯಲ್ಲಿ ಕಸೂತಿ ಬಿಡಿಸಿದರು. ಭಾಗ್ಯರಾಜ್ ಅವರು 1979ರಲ್ಲಿ ‘ಸುವರಿಲ್ಲಾದ ಚಿತ್ರಂಗಳ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು ಮತ್ತು ಅದೇ ವರ್ಷ ಭಾರತಿರಾಜ ಅವರ ‘ಪುದಿಯ ವಾರ್ಪುಗಳ್’ ಚಿತ್ರದ ನಾಯಕ ನಟನಾಗಿಯೂ ಯಶಸ್ವಿಯಾಗಿ ಪ್ರವೇಶ ಮಾಡಿದರು. ಅಲ್ಲಿಂದಾಚೆಗೆ ಭಾಗ್ಯರಾಜ್ ಪಂಥವೊಂದು ತಮಿಳು ಚಿತ್ರರಂಗದಲ್ಲಿ ಆರಂಭವಾಯಿತು.

1980ರ ದಶಕದುದ್ದಕ್ಕೂ ಅವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪ್ರಚಂಡ ಯಶಸ್ಸನ್ನು ಗಳಿಸಿದವು. ಅವರ ಚುರುಕಾದ ಹಾಸ್ಯಪ್ರಜ್ಞೆ ಮತ್ತು ಕೌಟುಂಬಿಕ ಘರ್ಷಣೆಗಳ ನಿರೂಪಣೆ ಎಲ್ಲರನ್ನೂ ಸೆಳೆಯಿತು. ಎಂಜಿಆರ್ ಅವರು ಭಾಗ್ಯರಾಜ್ ಅವರನ್ನು ತಮ್ಮ ʼಸಿನಿಮಾ ವಾರಸುದಾರʼ(ಕಲೈಉಲಗ ವಾರಿಸು) ಎಂದು ಸಾರಿದ್ದರು. ಭಾಗ್ಯರಾಜ್ ಅವರ ಸಿನೆಮಾಗಳು ರಚನಾತ್ಮಕ ನಿಖರತೆ, ದೈನಂದಿನ ಜೀವನದ ವಾಸ್ತವತೆ ಮತ್ತು ಸಾಂಪ್ರದಾಯಿಕ ʼಹೀರೋʼ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದ ಶೈಲಿಗೆ ಹೆಸರುವಾಸಿಯಾಗಿವೆ. ಇಂದಿನ ಯುವ ನಿರ್ದೇಶಕರು ಸಹ ಪಕ್ಕಾ ಚಿತ್ರಕಥೆಯನ್ನು ಕಲಿಯಲು ಅವರ 1980ರ ಸಿನೆಮಾಗಳನ್ನು ಅಧ್ಯಯನ ಮಾಡುವಷ್ಟು ಅವರ ರಚನಾ ಕೌಶಲ್ಯ ಪ್ರಸಿದ್ಧವಾಗಿದೆ.

ಇದನ್ನು ಓದಿದ್ದೀರಾ?: ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ

ಭಾಗ್ಯರಾಜ್ ನಾಯಕನಿಗೆ ಹೊಸದೊಂದು ಪರಿಕಲ್ಪನೆ ನೀಡಿದವರು. ಅಸಹಾಯಕ ಸಾಮಾನ್ಯ ಮನುಷ್ಯನೇ ಅವರ ಸಿನೆಮಾಗಳಲ್ಲಿ ನಾಯಕನ ಸ್ಥಾನ ಪಡೆದರು.
ಭಾಗ್ಯರಾಜ್ ಬರುವ ಮುನ್ನ ಸಿನೆಮಾ ನಾಯಕ ಎಂದರೆ ಎಲ್ಲರನ್ನೂ ರಕ್ಷಿಸುವ ಸಾಹಸಿಯಾಗಿದ್ದ. ಆದರೆ ಭಾಗ್ಯರಾಜ್ ಅವರ ನಾಯಕರು ಸಣ್ಣ ಶರೀರದ, ಕನ್ನಡಕ ಧರಿಸಿದ, ನಿರುದ್ಯೋಗಿ ಅಥವಾ ವಿಶೇಷವಾದ ಪ್ರತಿಭೆಯೇನು ಇಲ್ಲದ ಮತ್ತು ತಮಗಿರುವ ಕೊರತೆಗಳ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುವ ಸಾಮಾನ್ಯ ವ್ಯಕ್ತಿಗಳಾಗಿದ್ದರು. ‘ಅಂದ 7 ನಾಟ್ಕಳ್’ ಚಿತ್ರದ ಬಡ ಸಂಗೀತಗಾರನಾಗಿರಲಿ ಅಥವಾ ಕೌಟುಂಬಿಕ ಗೊಂದಲಗಳಲ್ಲಿ ಸಿಲುಕುವ ʼಸುವರಿಲ್ಲಾದ ಚಿತ್ರಂಗಳ್ʼ ಅಥವಾ ʼಮುಂದಾನೈ ಮೂಡಿಚ್ಚುʼವಿನ ವಿದುರ ಸಾಮಾನ್ಯ ಮೇಷ್ಟ್ರೇ ಇರಲಿ, ʼದಾವಣಿ ಕನವುಗಳ್ʼನ ಅಸಹಾಯಕ ಅಣ್ಣನಾಗಲಿ, ʼಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ʼನ ಪೇಚುಬಿದ್ದ ಪ್ರೇಮಿಯಿರಲಿ ಅವರು ನಾಯಕನನ್ನು ಅತಿಮಾನುಷ ಬಿಂಬದಿಂದ ಕೆಳಗಿಳಿಸಿದರು.

ʼಸಂಕಷ್ಟದಿಂದಲೇ ಹಾಸ್ಯ ಹುಟ್ಟುತ್ತದೆʼ ಎಂಬುದು ಭಾಗ್ಯರಾಜ್ ಅವರ ಬಲವಾದ ನಂಬಿಕೆಯಾಗಿತ್ತು. ತಮಿಳು ಸಿನೆಮಾಗಳಲ್ಲಿ ಸಾಂಪ್ರದಾಯಿಕವಾಗಿ ಇರುತ್ತಿದ್ದ ಪ್ರತ್ಯೇಕ ಕಾಮಿಡಿ ಟ್ರ್ಯಾಕ್ ನೆಚ್ಚಿಕೊಳ್ಳದೆ, ಅವರು ಹಾಸ್ಯವನ್ನು ಮುಖ್ಯ ಕಥೆಯಲ್ಲೇ ಮಿಳಿತಗೊಳಿಸುತ್ತಿದ್ದರು. ಕಥೆಯ ಗಂಭೀರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತಲೇ, ಸಂದರ್ಭಗಳಿಂದಲೇ ಪ್ರೇಕ್ಷಕರು ನಗುವಂತೆ ಮಾಡುತ್ತಿದ್ದರು.‌

K. Bhagyaraj and Radhika seen in a tamil movie Dhavani Kanavugal. Circa September 1984 PHOTO THE HINDU ARCHIVES
ದಾವನಿ ಕನವುಗಳ್‌ ಚಿತ್ರದಲ್ಲಿ ರಾಧಿಕಾ ಜೊತೆ ಭಾಗ್ಯರಾಜ್

ಸಾಂಸ್ಕೃತಿಕ ಸಂಕೇತಗಳು ಮತ್ತು ವಯಸ್ಕರ ಹಾಸ್ಯ (The ʼBawdyʼ Touch)
ಭಾಗ್ಯರಾಜ್ ಅವರಿಗೆ ತಮಿಳು ಸಂಸ್ಕೃತಿಯ ಗಲ್ಲಿ ಗಾಸಿಪ್‌ಗಳು, ಅವಿಭಕ್ತ ಕುಟುಂಬದ ಜಗಳಗಳು ಮತ್ತು ಲೈಂಗಿಕ ಮುಜುಗರಗಳ ಬಗ್ಗೆ ಆಳವಾದ ಅರಿವಿತ್ತು. ʼಮುಂದಾನೈ ಮುಡಿಚ್ಚು’(1983) ಚಿತ್ರದ ನಂತರ, ಅವರ ಬರವಣಿಗೆಯಲ್ಲಿ ವಯಸ್ಕರ ಹಾಸ್ಯ ಮತ್ತು ದ್ವಂದ್ವಾರ್ಥದ ಸಂಭಾಷಣೆಗಳು ಹೆಚ್ಚಾಗತೊಡಗಿದವು. ‘ಮುಂದಾನೈ ಮುಡಿಚ್ಚು’ ಚಿತ್ರದಲ್ಲಿ ಭಾಗ್ಯರಾಜ್ ಅವರು ‘ನುಗ್ಗೆಕಾಯಿ’ಯನ್ನು ಲೈಂಗಿಕ ಶಕ್ತಿಯ ಸಂಕೇತವಾಗಿ ಹಾಸ್ಯಮಯವಾಗಿ ಬಳಸಿದ್ದರು. ಇದು ತಮಿಳು ಪಾಪ್-ಸಂಸ್ಕೃತಿಯಲ್ಲಿ ಎಷ್ಟು ಪ್ರಸಿದ್ಧವಾಯಿತೆಂದರೆ, ಇಂದಿಗೂ ಅದು ಭಾಗ್ಯರಾಜ್ ಅವರ ಕೌಟುಂಬಿಕ ಹಾಸ್ಯ ಶೈಲಿಯ ಸಿಗ್ನೇಚರ್ ಗುರುತಾಗಿದೆ. ಕನ್ನಡಕ್ಕೂ ನಂತರ ಅದು ಬಂದದ್ದು ಬೇರೆ ಕತೆ.
ಭಾಗ್ಯರಾಜ್ ಅವರ ಸಿನೆಮಾ ಶಕ್ತಿಯನ್ನು ಅರ್ಥಮಾಡಿಕೊಳ್ಳಲು 1981ರ ಒಂದೇ ವರ್ಷದಲ್ಲಿ ಅವರು ನೀಡಿದ ವಿಭಿನ್ನ ಶೈಲಿಯ ಹಿಟ್ ಚಿತ್ರಗಳನ್ನು ನೋಡಬೇಕು.

ಭಾವನಾತ್ಮಕ ಪ್ರೇಮಕಥೆ: ‘ಅಂದ 7 ನಾಟ್ಕಳ್’(1981) ಅವರ ಅತ್ಯುತ್ತಮ ಕಲಾಕೃತಿ ಎಂದು ಪರಿಗಣಿಸಲ್ಪಟ್ಟ ಈ ಚಿತ್ರವು ಪಾಲಕ್ಕಾಡ್ ಮಾಧವನ್ ಎಂಬ ಬಡ ಸಂಗೀತಗಾರನ ಕಥೆಯಾಗಿದೆ. ಅವನ ಪ್ರೇಯಸಿ (ಅಂಬಿಕಾ) ಶ್ರೀಮಂತ ವಿಧುರನೊಬ್ಬನನ್ನು ಮದುವೆಯಾಗಬೇಕಾಗಿ ಬರುತ್ತದೆ. ಗಂಡನಿಗೆ ಅವಳ ಹಳೆಯ ಪ್ರೇಮದ ವಿಷಯ ತಿಳಿದಾಗ ಅವಳನ್ನು ಪ್ರೇಮಿಯೊಂದಿಗೆ ಸೇರಿಸಲು ಮುಂದಾಗುತ್ತಾನೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಮಾಧವನ್, ಮಾಂಗಲ್ಯದ ಪವಿತ್ರತೆಯನ್ನು ಗೌರವಿಸಿ ಅವಳನ್ನು ಸ್ವೀಕರಿಸಲು ನಿರಾಕರಿಸುತ್ತಾನೆ. ಈ ಚಿತ್ರ ಕಣ್ಣೀರು ಮತ್ತು ಹಾಸ್ಯದ ಅದ್ಭುತ ಮಿಶ್ರಣವಾಗಿದೆ. ಆದರೆ ಅವರು ಪ್ರತಿಪಾದಿಸಿದ ಮಾಂಗಲ್ಯ ಪಾವಿತ್ರತೆ ಸ್ತ್ರೀ ಪರ ವಾದಿಗಳು ಸಕಾರಣವಾಗಿಯೇ ವಿರೋಧಿಸಿದರು.

ಕೌಟುಂಬಿಕ ಕಾವ್ಯ: ‘ಮೌನ ಗೀತಂಗಳ್’(1981) ವೈವಾಹಿಕ ಜೀವನ ಮತ್ತು ಜವಾಬ್ದಾರಿಯ ಬಗ್ಗೆ ಮೂಡಿಬಂದ ಅತ್ಯಂತ ಪ್ರಬುದ್ಧ ಚಿತ್ರ. ಗಂಡನ ನಂಬಿಕೆದ್ರೋಹದಿಂದಾಗಿ ವಿಚ್ಛೇದನ ಪಡೆದ ದಂಪತಿಗಳು (ಭಾಗ್ಯರಾಜ್ ಮತ್ತು ಸರಿತಾ) ವರ್ಷಗಳ ನಂತರ ಮತ್ತೆ ಎದುರಾಗುವ ಕಥೆ ಇದು. ಗಂಡನ ಅಹಂಕಾರ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಯಾವುದೇ ಅತಿರೇಕವಿಲ್ಲದೆ ಅದ್ಭುತವಾಗಿ ನಿರೂಪಿಸಲಾಗಿದೆ.

ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ

ನಗರದ ಯುವಕರ ಪೇಚಾಟಗಳ ಹಾಸ್ಯ ಚಿತ್ರ: ‘ಇಂಡ್ರು ಪೋಯ್ ನಾಳೈ ವಾ’(1981) ಒಂದೇ ಹುಡುಗಿಯನ್ನು ಪ್ರೀತಿಸುವ ಮೂವರು ನಿರುದ್ಯೋಗಿ ಯುವಕರ ಕಥೆ. ಅಂದಿನ ಯುವ ಪೀಳಿಗೆಯ ಹತಾಶೆ ಮತ್ತು ಆಸೆಗಳನ್ನು ಈ ಸಿನಿಮಾ ಹಾಸ್ಯದ ಮೂಲಕ ತೋರಿಸಿಕೊಟ್ಟಿತು. ಈ ಚಿತ್ರದ ʼಏಕ್ ಗಾಂವ್ ಮೇ ಏಕ್ ಕಿಸಾನ್ ರಘು ತಾತʼ ಎಂಬ ಮುರಿದ ಹಿಂದಿಯ ಡೈಲಾಗ್ ಇಂದಿಗೂ ಪ್ರಸಿದ್ಧವಾಗಿದೆ.

ವಿಭಿನ್ನ ಕ್ರೈಮ್ ಥ್ರಿಲ್ಲರ್: ‘ವಿಡಿಯುಮ್ ವರೈ ಕಾತಿರು’(1981) ತಮ್ಮ ಕೌಟುಂಬಿಕ ಇಮೇಜ್‌ನಿಂದ ಹೊರಬಂದು ಭಾಗ್ಯರಾಜ್ ಅವರು ಬರೆದು ನಟಿಸಿದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು. ಭಾಗ್ಯರಾಜ್ ಅವರ ಚಿತ್ರಕಥಾ ಸೂತ್ರಗಳು ಕೇವಲ ಹಾಸ್ಯಕ್ಕೆ ಮಾತ್ರವಲ್ಲದೆ, ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುವುದಕ್ಕೂ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದನ್ನು ಈ ಸಿನಿಮಾ ಸಾಬೀತುಪಡಿಸಿತು.

ಹಾಸ್ಯದ ರಾಸದೌತಣ: ʼಮುಂದಾನೈ ಮುಡಿಚ್ಚು’(1983) ಈ ಸಿನೆಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಚಿಂದಿ ಮಾಡಿತು. ಹಳ್ಳಿಯ ಬುದ್ಧಿವಂತ ಶಾಲಾ ಶಿಕ್ಷಕನನ್ನು ಸ್ಥಳೀಯ ಹುಡುಗಿ (ಊರ್ವಶಿ ಅವರ ಮೊದಲ ಚಿತ್ರ) ಉಪಾಯವಾಗಿ ಮದುವೆಯಾಗುವ ಕಥೆ ಇದು. ಗ್ರಾಮೀಣ ರಾಜಕೀಯ ಮತ್ತು ಕೌಟುಂಬಿಕ ಮೌಲ್ಯಗಳನ್ನು ಈ ಚಿತ್ರ ಸೊಗಸಾಗಿ ಬಿಂಬಿಸಿತು.

maxresdefault 646

ಭಾಗ್ಯರಾಜ್ ಅವರು ಮನರಂಜನೆಯ ಮಾಂತ್ರಿಕರಾಗಿದ್ದರೂ, ಆಧುನಿಕ ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡಿದಾಗ ಅವರ ಚಿತ್ರಗಳಲ್ಲಿ ಕೆಲವು ವೈಚಾರಿಕ ಲೋಪಗಳು ಕಾಣಿಸುತ್ತವೆ: ಪ್ರಗತಿಪರ ಆಲೋಚನೆಗಳಿಗಿಂತ ಹೆಚ್ಚಾಗಿ, ಭಾಗ್ಯರಾಜ್ ಅವರ ಸಿನೆಮಾಗಳ ಕ್ಲೈಮ್ಯಾಕ್ಸ್ ಯಾವಾಗಲೂ ಹಳೆಯ ಸಾಂಪ್ರದಾಯಿಕ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನೇ ಎತ್ತಿಹಿಡಿಯುತ್ತಿತ್ತು. ‘ಅಂದ 7 ನಾಟ್ಕಳ್’ ಚಿತ್ರದಲ್ಲಿ ಮಹಿಳೆಯ ವೈಯಕ್ತಿಕ ಆಯ್ಕೆಗಿಂತ ಮದುವೆಯ ಸಾಂಪ್ರದಾಯಿಕ ಪವಿತ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅವರ ಹಲವು ಚಿತ್ರಗಳಲ್ಲಿ ಲಿಂಗ ರಾಜಕೀಯಕ್ಕೆ ಸಂಬಂಧಿಸಿದಂತೆ ಕುಟುಂಬದ ಗೌರವವನ್ನು ಕಾಪಾಡುವ ಜವಾಬ್ದಾರಿ ಯಾವಾಗಲೂ ಮಹಿಳೆಯ ಮೇಲೆಯೇ ಇರುತ್ತಿತ್ತು. ಗಂಡನ ತಪ್ಪುಗಳನ್ನು (ಚಿನ್ನ ವೀಡು ಚಿತ್ರದಲ್ಲಿರುವಂತೆ) ಹೆಣ್ಣು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತಿತ್ತು.‌

1990ರ ದಶಕದ ವೇಳೆಗೆ (‘ರಾಸುಕುಟ್ಟಿ’, ‘ವೇಟ್ಟಿಯ ಮಡಿಚ್ಚು ಕಟ್ಟು’) ಅವರ ಸಿನೆಮಾಗಳು ವಯಸ್ಕರ ಹಾಸ್ಯ ಮತ್ತು ದ್ವಂದ್ವಾರ್ಥದ ಸಂಭಾಷಣೆಗಳನ್ನೇ ಅತಿಯಾಗಿ ನೆಚ್ಚಿಕೊಂಡಿದ್ದರಿಂದ ಏಕತಾನತೆ ಮೂಡಿಸಿತು. ಹೊಸ ಪೀಳಿಗೆಯ ಬದಲಾದ ಅಭಿರುಚಿಗೆ ತಕ್ಕಂತೆ ಬದಲಾಗದ ಕಾರಣ ಅವರ ಚಿತ್ರಗಳ ಯಶಸ್ಸು ಕಡಿಮೆಯಾಯಿತು.
ಭಾಗ್ಯರಾಜ್ ಅವರು 2026ರ ಜೂನ್ 27ರಂದು ತಮ್ಮ 73ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ತಮ್ಮ ಪತ್ನಿ ಪೂರ್ಣಿಮಾ ಭಾಗ್ಯರಾಜ್ (ಅವರ ಸೂಪರ್ ಹಿಟ್ ಚಿತ್ರ ’ಡಾರ್ಲಿಂಗ್, ಡಾರ್ಲಿಂಗ್, ಡಾರ್ಲಿಂಗ್’ ನಟಿ) ಮತ್ತು ಮಕ್ಕಳಾದ ಶಂತನು ಮತ್ತು ಶರಣ್ಯ ಅವರನ್ನು ಅಗಲಿದ್ದಾರೆ.

ಇದನ್ನು ಓದಿದ್ದೀರಾ?: ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೆ. ಭಾಗ್ಯರಾಜ್ ಅವರ ಸ್ಥಾನ ಎಂದಿಗೂ ಅಳಿಸಲಾಗದಂಥದ್ದು. ಅವರು ಸಿನೆಮಾದ ನಾಯಕನಿಗಿದ್ದ ಕೃತಕ ಮುಖವಾಡವನ್ನು ಕಳಚಿ, ಸಾಮಾನ್ಯ ಮನುಷ್ಯನನ್ನೇ ಪರದೆಯ ಮೇಲೆ ತಂದರು. ಪ್ರೇಕ್ಷಕರನ್ನು ಒಂದೇ ದೃಶ್ಯದಲ್ಲಿ ಕಣ್ಣೀರು ಹಾಕಿಸಿ, ಅದೇ ಕ್ಷಣದಲ್ಲಿ ಮುಖದಲ್ಲಿ ನಗು ಮೂಡಿಸಬಲ್ಲ ಅದ್ಭುತ ಕಲೆ ಅವರಿಗೆ ಒಲಿದಿತ್ತು. ತಮಿಳು ಚಿತ್ರರಂಗದ ಇತಿಹಾಸದಲ್ಲಿ ಅವರು ಎಂದಿಗೂ ಮಹಾನ್ ಚಿತ್ರಕಥೆಗಾರರಾಗಿ ನೆನಪಿನಲ್ಲಿ ಉಳಿಯುತ್ತಾರೆ.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...