ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ 'ಪ್ರಜಾವಾಣಿ ಸಿನಿ ಸಮ್ಮಾನ್'ನ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಗಿದೆ. ಮಹಿಳಾ ಲೋಕದ ಅನನ್ಯ ಕಥನಕಾರ ಗಿರೀಶ್ ಅವರಿಗೆ ಈ ಪುರಸ್ಕಾರ ಎಲ್ಲ ದೃಷ್ಟಿಯಿಂದಲೂ ಅರ್ಹ ಗೌರವ. ಅವರ ಚಿತ್ರಜೀವನದತ್ತ ಒಂದು ಝಲಕ್...
‘ಪ್ರಜಾವಾಣಿ ಸಿನಿ ಸಮ್ಮಾನ್’ನ ಇತ್ತೀಚಿನ ಆವೃತ್ತಿಯಲ್ಲಿ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಪುರಸ್ಕರಿಸಲಾಗಿದೆ. ಎಲ್ಲ ದೃಷ್ಟಿಯಿಂದಲೂ ಇದೊಂದು ಅರ್ಹ ಗೌರವ. ವಾಣಿಜ್ಯ ಚಲನಚಿತ್ರಗಳ ಝಗಮಗಿಸುವಿಕೆ ಮತ್ತು ಅಬ್ಬರದ ನಡುವೆ, ಕಥನಗಳ ಪರ್ಯಾಯ ಹಾದಿಯನ್ನೇ ನಂಬಿ ನಡೆದ ಭಾರತೀಯ ಸಿನೆಮಾ ರಂಗದಲ್ಲಿ ಗಿರೀಶ್ ಕಾಸರವಳ್ಳಿ ಅವರು ಕಲಾತ್ಮಕ ಸಿನೆಮಾದ ತಾರೆಯಾಗಿ ನಿಲ್ಲುತ್ತಾರೆ. ಕನ್ನಡ ಚಿತ್ರರಂಗದ ಅಪ್ಪಟ ‘ಆಟಿಯರ್'(Auteur) ಎನಿಸಿರುವ ಕಾಸರವಳ್ಳಿ ಅವರು, ಕಳೆದ ಐದು ದಶಕಗಳಿಂದ ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳಲ್ಲೇ ಅರಳುವ, ಆದರೆ ಜಾಗತಿಕ ಮಟ್ಟದಲ್ಲಿ ಮನುಷ್ಯನ ನೈತಿಕತೆ, ಸಾಂಸ್ಥಿಕ ದಬ್ಬಾಳಿಕೆ ಹಾಗೂ ವ್ಯಕ್ತಿಗತ ಘನತೆಯನ್ನು ಶೋಧಿಸುವಂತಹ ಅಪರೂಪದ ಕಲಾಕೃತಿಗಳನ್ನು ಸೃಷ್ಟಿಸುತ್ತಾ ಬಂದಿದ್ದಾರೆ. ರಾಜಕೀಯ ಆಕ್ರೋಶದ ಭಾಷಣಗಳನ್ನಾಗಲಿ ಅಥವಾ ನಾಟಕೀಯ ಭಾವಾವೇಶಗಳನ್ನಾಗಲಿ ನೆಚ್ಚಿಕೊಳ್ಳದ ಅವರ ಸಿನೆಮಾಗಳು, ಬದಲಾಗುತ್ತಿರುವ ಭಾರತದ ಅಂತಃಸಾಕ್ಷಿಯನ್ನು ನಿರ್ಲಿಪ್ತ ಭಾವದಿಂದ ನಿರುದ್ವಿಗ್ನ ಶೈಲಿಯಲ್ಲಿ ಪ್ರೇಕ್ಷಕರೆದುರು ತೆರೆದಿಡುತ್ತವೆ. ತಮ್ಮ ವಿಶಿಷ್ಟ ಕಲಾತ್ಮಕ ದೃಷ್ಟಿಕೋನದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ತಂದುಕೊಟ್ಟು, ಭಾರತದ ಸಮಾನಾಂತರ ಚಲನಚಿತ್ರ ಚಳವಳಿಯ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಇಲ್ಲಿ ಅವರ ಚಿತ್ರಗಳ ಕಥಾವಿವರಗಳಿಗೆ ಹೋಗದೆ ಅವರ ಬದುಕು ಮತ್ತು ಅವರ ನಿರ್ದೇಶನದ ಹಿಂದಿನ ತಾತ್ವಿಕತೆಯನ್ನು ಅವರ ಒಟ್ಟು ಚಿತ್ರಗಳ ಹಿನ್ನೆಲೆಯಲ್ಲಿ ಗ್ರಹಿಸಲು ಯತ್ನಿಸುತ್ತೇನೆ.
ಗಿರೀಶ್ ಕಾಸರವಳ್ಳಿಯವರು 1950ರ ಡಿಸೆಂಬರ್ 3ರಂದು ಜನಿಸಿದರು. ಅಂದಿನ ಕಾಲಕ್ಕೆ ತೀರ್ಥಹಳ್ಳಿಯ ಸುಂದರ ಮಲೆನಾಡಿನ ಪರಿಸರದಲ್ಲಿದ್ದ ಕಾಸರವಳ್ಳಿಯವರ ಕುಟುಂಬ ಆರ್ಥಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿದ್ದ ಕುಟುಂಬ. ಸಾಹಿತ್ಯದ ಒಲವಿದ್ದ, ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳನ್ನು ಪೋಷಿಸುತ್ತಿದ್ದ, ಸ್ವಾತಂತ್ರ್ಯ ಹೋರಾಟಗಾರರೂ ಕೃಷಿಕರೂ ಆಗಿದ್ದ ಮತ್ತು ವೈಚಾರಿಕ ಹಿನ್ನೆಲೆಯ ತಂದೆಯ ನೆರಳಿನಲ್ಲಿ ಬೆಳೆದ ಅವರಿಗೆ ಸಾಹಿತ್ಯ ಮತ್ತು ಸಂಗೀತ ಕಲೆಗಳ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಮೂಡಿತ್ತು. ಸಿನೆಮಾದ ಆಸಕ್ತಿ ಬಾಲ್ಯದಲ್ಲಿ ಮೂಡಿದ ಆಸಕ್ತಿಯ ಸಹಜ ವಿಸ್ತರಣೆಯಾಗಿತ್ತು.
ಫಾರ್ಮಸಿ ಪದವಿ ಪಡೆದ ಅವರು, ದೃಶ್ಯ ಮಾಧ್ಯಮ ಕಲಿಯಲು ಹೊರಟಿದ್ದು ಆಕಸ್ಮಿಕವಾಗಿ. ಆದರೆ ಅವರ ಶ್ರದ್ಧೆ ಅವರನ್ನು ಒಬ್ಬ ಚಿಂತಕ ಮತ್ತು ಪ್ರಯೋಗಶೀಲನನ್ನಾಗಿ ರೂಪಿಸಿತು. ಪುಣೆಯ ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (FTII) ಸೇರಿದ ಅವರು, ಅಲ್ಲಿ ಸತೀಶ್ ಬಹದ್ದೂರ್ ಅವರ ಮಾರ್ಗದರ್ಶನದಲ್ಲಿ ಯಾಸುಜಿರೋ ಒಜು, ಸತ್ಯಜಿತ್ ರೇ, ಅಂತೋನಿಯೋನಿ ಮತ್ತು ಕುರೊಸಾವಾರಂತಹ ಜಾಗತಿಕ ಸಿನೆಮಾ ಮಾಂತ್ರಿಕರ ಕಲಾತ್ಮಕ ನಿರ್ದೇಶನದ ಪಟ್ಟುಗಳನ್ನು ತೀವ್ರ ಶ್ರದ್ಧೆಯಿಂದ ಅಧ್ಯಯನ ಮಾಡಿದರು. ಇಟಾಲಿಯನ್ ನವ್ಯ-ವಾಸ್ತವವಾಗಲೀ, ಫ್ರೆಂಚ್‌ನ ಹೊಸ ಅಲೆಯ ಚಿತ್ರ ಪಂಥವಾಗಲೀ ಅವು ಕೇವಲ ಒಂದು ಶೈಲಿಯಲ್ಲ, ಬದಲಿಗೆ ಸಮಾಜದ ಬದಲಾವಣೆಗೆ ಸ್ಪಂದಿಸುವ ಒಂದು ನೈತಿಕ ಹೊಣೆಗಾರಿಕೆ ಎಂಬುದನ್ನು ಅವರು ಮನಗಂಡರು. ಸಿನೆಮಾ ವಿದ್ಯಾರ್ಥಿಯಾಗಿ ತಮ್ಮ ಕೋರ್ಸ್‌ನ ಭಾಗವಾಗಿ ಅವರು ನಿರ್ದೇಶಿಸಿದ ಕಿರುಚಿತ್ರ ʼಅವಶೇಷ್ʼ ಸಿನೆಮಾ ವ್ಯಾಕರಣವನ್ನು ಮುರಿದು ಕಟ್ಟಿದ ಕೃತಿಯಾಗಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ಸ್ವರ್ಣ ಪದಕ ಪುರಸ್ಕಾರ ಪಡೆದ ‘ಅವಶೇಷ್’ ಚಿತ್ರವು ಅವರ ಪ್ರತಿಭೆಯನ್ನು ಬಿಂಬಿಸಿದ ಮೊದಲ ಪ್ರಯೋಗವಾಗಿತ್ತು. ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೀಸುತ್ತಿದ್ದ ‘ನವ್ಯ ಸಾಹಿತ್ಯ ಚಳವಳಿ’ ಮತ್ತು ಯು.ಆರ್. ಅನಂತಮೂರ್ತಿ, ಕೆ. ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳು ಕಾಸರವಳ್ಳಿಯವರ ಸಿನೆಮಾ ಪ್ರಜ್ಞೆಯನ್ನು ಮತ್ತಷ್ಟು ಹಸನುಗೊಳಿಸಿದವು. ಈ ಜಾಗತಿಕ ಸಿನೆಮಾಗಳ ದೃಶ್ಯ ವ್ಯಾಕರಣ ಮತ್ತು ಸ್ಥಳೀಯ ಸಾಹಿತ್ಯದ ಪ್ರಯೋಗಶೀಲತೆ ಅವರ ವಿಶಿಷ್ಟ ಸಿನೆಮಾ ಶೈಲಿಗೆ ಭದ್ರ ಬುನಾದಿಯಾಯಿತು.
ಇದನ್ನು ಓದಿದ್ದೀರಾ?: ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ
ಪುಣೆಯ ಸಂಸ್ಥೆಯಿಂದ ಡಿಪ್ಲೋಮಾ ಕೋರ್ಸ್ ಮುಗಿಸುವ ಮೊದಲೇ ಬಿ.ವಿ. ಕಾರಂತರ ʼಚೋಮನ ದುಡಿʼ ಚಿತ್ರಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿದ ಗಿರೀಶ್ ಕಾಸರವಳ್ಳಿ ಅವರು 1977ರಲ್ಲಿ ಕನ್ನಡ ಚಲನಚಿತ್ರರಂಗದ ಮೈಲುಗಲ್ಲು ಎನಿಸಿದ ʼಘಟಶ್ರಾದ್ಧʼ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ತಮ್ಮ ಸಿನೆಮಾ ಪ್ರಯಾಣವನ್ನು ಆರಂಭಿಸಿದರು. ಯು.ಆರ್. ಅನಂತಮೂರ್ತಿ ಅವರ ಅದೇ ಹೆಸರಿನ ನೀಳ್ಗತೆಯನ್ನು ಆಧರಿಸಿದ ಘಟಶ್ರಾದ್ಧವು ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿತು. ಈ ಚಿತ್ರ ರಾಷ್ಟ್ರಪತಿ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿತು. ಈ ಚಿತ್ರವು ಜಾತಿ ವ್ಯವಸ್ಥೆ, ಧಾರ್ಮಿಕ ಕಠೋರತೆ ಮತ್ತು ಪಿತೃಪ್ರಧಾನ ಸಮಾಜದ ಅಮಾನವೀಯತೆಯ ವಿರುದ್ಧದ ಪ್ರಬಲ ಟೀಕೆಯಾಗಿದೆ. ಬಾಲಕನೊಬ್ಬನ ದೃಷ್ಟಿಕೋನದಿಂದ ಕಥೆಯನ್ನು ಹೇಳುವ ಮೂಲಕ ಕಾಸರವಳ್ಳಿ ಸಮಾಜದ ಕ್ರೂರತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ. ಇದು ಭಾರತೀಯ ಚಲನಚಿತ್ರದ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೇವಲ 27 ವಯಸ್ಸಿನ ಯುವಕನೊಬ್ಬನ ಈ ಅಸೀಮ ಸಾಧನೆಯನ್ನು ಕಂಡು ಸತ್ಯಜಿತ್ ರೇ ಅವರೂ ಬೆರಗಾಗಿ ಅಭಿನಂದಿಸಿದ್ದರು. ಘಟಶ್ರಾದ್ಧದಿಂದ ಆರಂಭವಾದ ಕಾಸರವಳ್ಳಿಯವರ ಚಿತ್ರಯಾನವು ಈವರೆಗೆ ಒಂದು ಟೆೆಲಿ ಚಿತ್ರವೂ ಸೇರಿದಂತೆ ಹದಿನಾಲ್ಕು ಕಥಾ ಚಿತ್ರಗಳು, ಟೆಲಿವಿಷನ್‌ಗಾಗಿ ಒಂದು ಧಾರಾವಾಹಿ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ ಎರಡು ಸಾಕ್ಷ್ಯ ಚಿತ್ರಗಳ ಜೊತೆಗೆ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಗಿರೀಶ್ ಕಾಸರವಳ್ಳಿಯವರ ಸಿನೆಮಾಗಳು ಭಾರತೀಯ ಸಮಾಜವು ಆಧುನಿಕತೆ, ಪಿತೃಪ್ರಧಾನ ವ್ಯವಸ್ಥೆ ಮತ್ತು ಆಡಳಿತ ಯಂತ್ರದೊಂದಿಗೆ ನಡೆಸುವ ಸಂಘರ್ಷದ ನಿಧಾನಗತಿಯ, ಆಳವಾದ ದಾಖಲೆಗಳಾಗಿವೆ. ಕಾಸರವಳ್ಳಿ ಅವರ ಒಟ್ಟು ಚಿತ್ರಗಳನ್ನು ಅವಲೋಕಿಸಿದಾಗ (ನಾನು ಇನ್ನೊಂದು ಲೇಖನದಲ್ಲಿ ವಿವರಿಸಿರುವಂತೆ) ಒಂದು ಸಮಾನ ಅಂಶ ಎದ್ದು ಕಾಣುವುದು ಅವರು ತಮ್ಮ ಚಿತ್ರಗಳಲ್ಲಿ ನಿರ್ವಚಿಸಿರುವ ಹಲವು ಬಗೆಯ ಸಾಮಾಜಿಕ ಕ್ರೌರ್ಯ ಮತ್ತು ಹಿಂಸೆ. ಕ್ರೌರ್ಯದ ಜೊತೆಗೆ ಸರಿಸುಮಾರು ಎಲ್ಲ ಚಿತ್ರಗಳು ಸಾಮಾಜಿಕ ಅವನತಿಯ ಸಂಕಥನಗಳೇ ಆಗಿವೆ. ಈ ಅವನತಿಯನ್ನು ಕೇವಲ ರೂಢಿಯಲ್ಲಿರುವ ಯುಗ್ಮ ವೈರುಧ್ಯಗಳ ನೆಲೆಯಲ್ಲಿ ನೋಡುವುದಿಲ್ಲ. ಸಾಮಾಜಿಕ ಅವನತಿಯ ಜೊತೆಯಲ್ಲಿಯೇ ಮನುಷ್ಯನ ವಿಮೋಚನೆಯ ದಾರಿಗಳನ್ನು ತೆರೆಯುವುದನ್ನು ಅವರು ಗುರುತಿಸುತ್ತಾರೆ. ಮನೆ, ತಬರನ ಕಥೆ ಮತ್ತು ಬಣ್ಣದ ವೇಷ ಚಿತ್ರಗಳನ್ನು ಹೊರತುಪಡಿಸಿದರೆ, ಅವರ ಉಳಿದೆಲ್ಲ ಚಿತ್ರಗಳೂ ಹೆಣ್ಣಿನ ಜಗತ್ತನ್ನು ಶೋಧಿಸುವ ಚಿತ್ರಗಳಾಗಿ ಗಮನ ಸೆಳೆಯುತ್ತವೆ. ಇಲ್ಲಿ ಹಲವು ಲೋಕಗಳನ್ನು ಪ್ರತಿನಿಧಿಸುವ ಹೆಣ್ಣುಗಳ ಚಿತ್ರಣವಿದೆ. ಧರ್ಮ, ರಾಜಕೀಯ, ಜಾತಿಯ ಸಂಪ್ರದಾಯಗಳು, ನಂಬಿಕೆಗಳು, ಗಂಡಸಿನ ಪೂರ್ವಗ್ರಹಗಳು, ಪ್ರಭುತ್ವದ ಅಮಾನವೀಯ ಕಟ್ಟುಪಾಡುಗಳಿಗೆ ಮುಖಾಮುಖಿಯಾಗಿ ಅಸಹಾಯಕತೆ ಮತ್ತು ಸೋಲುವ ಹಾಗೆಯೇ ದೃಢವಾಗಿ ನಿಂತು ಗೆಲ್ಲುವ ಹೆಣ್ಣುಗಳ ಕಥನವಿದೆ. ಯಮುನ, ಲಕ್ಷ್ಮಿ, ನಂದಿನಿ, ರಂಗಜ್ಜಿ, ನರ್ಮದಾ, ಹಸೀನಾ, ನಾಗಿ, ವೆಂಕಟಲಕ್ಷ್ಮಿ, ಗುಲಾಬಿ, ರುದ್ರಿ ಅವರು ವೈವಿಧ್ಯಮಯ ಮಹಿಳಾ ಜಗತ್ತು ಇವರ ಚಿತ್ರಗಳಲ್ಲಿ ಅನಾವರಣವಾಗಿದೆ. ಬಹುತೇಕ ಚಿತ್ರಗಳಲ್ಲಿ ಪೋಷಕಸ್ಥಾನದಲ್ಲೇ ಉಳಿಯುವ ಮಹಿಳಾ ಪಾತ್ರಗಳು ಕಾಸರವಳ್ಳಿಯವರ ಚಿತ್ರಗಳಲ್ಲಿ ಪ್ರಧಾನ ಪಾತ್ರ ವಹಿಸಿ ಕಥೆಯ ಕೇಂದ್ರಬಿಂದುವಾಗಿವೆ. ಆ ಮೂಲಕ ಜಗತ್ತನ್ನು ನೋಡುವ, ಅರಿಯುವ ಭಿನ್ನ ದೃಷ್ಟಿಕೋನವೊಂದು ಅವರ ಚಿತ್ರಗಳಲ್ಲಿ ಪ್ರಾಪ್ತವಾಗುತ್ತದೆ.
ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ
ಗಿರೀಶ್ ಕಾಸರವಳ್ಳಿಯವರ ಸಿನೆಮಾದ ಇತರ ವೈಶಿಷ್ಟ್ಯಗಳೆಂದರೆ ಪ್ರತಿಯೊಂದು ಚಿತ್ರದಲ್ಲೂ ಇರುವ ಸಾಹಿತ್ಯದ ಗಟ್ಟಿಯಾದ ಹಿನ್ನೆಲೆ. ಅವರು ಸಾಹಿತ್ಯ ಕೃತಿಯನ್ನು ತಮ್ಮದೇ ರೀತಿಯಲ್ಲಿ ಮರು ವ್ಯಾಖ್ಯೆಗೆ ಒಳಪಡಿಸಿ ನಿರ್ದೇಶಕನ ಸೃಜನಶೀಲ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾರೆ. ಆ ಮೂಲಕ ಸಮಕಾಲೀನ ಸಮಾಜವನ್ನು ವ್ಯಾಖ್ಯಾನಿಸುತ್ತಾ ಕೃತಿಯ ಆಶಯವನ್ನು ವಿಸ್ತರಿಸುತ್ತಾರೆ. ಅವರ ಚಿತ್ರಗಳು ಕನ್ನಡದ ಸಾಹಿತ್ಯ ಕೃತಿಗಳನ್ನು ಆಧರಿಸಿರುವ ಕಾರಣ ಕೃತಿಯ ಹೊಸ ಓದು ಸಹ ಅವರ ದೃಶ್ಯಮಾಧ್ಯಮದ ಮೂಲಕ ಸಾಧ್ಯವಾಗುತ್ತದೆ.
ಎರಡನೆಯದಾಗಿ ಅವರು ಅತಿ ನಾಟಕೀಯತೆ ಮತ್ತು ಭಾವಾತಿರೇಕವಿಲ್ಲದೆ ಬದುಕನ್ನು ನಿರುದ್ವಿಗ್ನವಾಗಿ ಅದರ ಎಲ್ಲ ಸಾಧ್ಯತೆಗಳೊಡನೆ ನೈಜವಾಗಿ ಮತ್ತು ಪ್ರಾಮಾಣಿಕವಾಗಿ ಚಿತ್ರಿಸುತ್ತವೆ. ವ್ಯಕ್ತಿಗಳನ್ನಾಗಲೀ, ಸಮಾಜವನ್ನಾಗಲೀ ವ್ಯಾಖ್ಯಾನಿಸುವಾಗ ಯುಗ್ಮ ವೈರುಧ್ಯ(ಬೈನರಿ ಆಪೋಸಿಟ್ಸ್)ಗಳಲ್ಲಿ ನೋಡದೆ ಸಮಾಜವನ್ನು ಟೀಕಿಸುವಾಗಲೂ ವ್ಯಕ್ತಿಗಳ ಬಗ್ಗೆ ಆಳವಾದ ಸಹಾನುಭೂತಿಯನ್ನು ನಿರ್ದೇಶಕರು ತೋರಿಸುತ್ತಾರೆ. ಯುಗ್ಮ ವೈರುಧ್ಯದಿಂದಾಗುವ ಸೋಲು-ಗೆಲುವುಗಳನ್ನು ಸೀಮಿತ ಅರ್ಥದಲ್ಲಿ ಬಿಂಬಿಸುವುದು ತಮ್ಮ ಶೈಲಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿನೆಮಾವನ್ನು ತಮ್ಮದೇ ಆದ ದೃಶ್ಯ ವ್ಯಾಕರಣದಿಂದ ಕಟ್ಟುವ ಅವರು, ವಚನಕಾರರು ಹೇಳುವ ಅರಿವು-ಅನುಭವದ ಉಪಾಧಿಗಳಾದ ಸ್ಪರ್ಶ, ಶಬ್ದ, ರಸ, ರೂಪ, ಗಂಧಗಳನ್ನು ಅಳವಡಿಸಿ ತಮ್ಮ ಚಿತ್ರಗಳ ನಿರೂಪಣೆಯನ್ನು ಭಿನ್ನ ಹಾದಿಯಲ್ಲಿ ನಡೆಸಿರುವುದು ಅವರ ಚಿತ್ರಗಳ ಮತ್ತೊಂದು ವಿಶೇಷ. ಅವರ ಹಲವು ಚಿತ್ರಗಳನ್ನು ವಿಶೇಷವಾಗಿ ತಾಯಿ ಸಾಹೇಬ, ಮನೆ, ಕನಸೆಂಬೋ ಕುದುರೆಯನೇರಿ ಚಿತ್ರಗಳ ಹಲವು ದೃಶ್ಯಗಳನ್ನು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿದಾಗ ಮೇಲಿನ ಮಾತಿಗೆ ಉತ್ತರ ವಿವರಣೆ ದೊರೆಯುತ್ತದೆ. ಮನೆ (1990) ಚಿತ್ರದಲ್ಲಿ, ನಗರದ ಬದುಕಿನ ಅನಿಶ್ಚಿತತೆಯನ್ನು ತೋರಿಸಲು ಕಾಸರವಳ್ಳಿಯವರು ಹಳದಿ ಬಣ್ಣವನ್ನು ಒಂದು ವಿಚಿತ್ರ ಸಂಕೇತವಾಗಿ ಬಳಸುತ್ತಾರೆ. ಕೊನೆಯಲ್ಲಿ ಹಳದಿ ಬುಲ್ಡೋಜರ್ ಒಂದು ಇಡೀ ಬದುಕನ್ನು ಧ್ವಂಸಗೊಳಿಸುವ ದೃಶ್ಯ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗುತ್ತದೆ. ದ್ವೀಪದಲ್ಲಿ ಸುರಿಯುವ ಮಳೆ ಕೇವಲ ಪ್ರಕೃತಿಯಲ್ಲ; ಅದು ಪಾತ್ರಗಳ ಬದುಕಿನ ಎಲ್ಲೆಗಳನ್ನು ಕಿರಿದುಗೊಳಿಸುತ್ತಾ ಹೋಗುವ ಒಂದು ಭೀಕರ ಅಸ್ತಿತ್ವವಾಗಿ ಕಾಡುತ್ತದೆ. ಇನ್ನೂ ಮುಂದೆ ಹೋಗಿ ಚಿತ್ರದಲ್ಲಿ ಬಳಸುವ ಬಣ್ಣ, ವಾಸನೆ, ಶಬ್ದಗಳು ಸಹ ಒಂದು ಸಶಕ್ತ ಘಟಕವಾಗಬಲ್ಲ ವಿವರಗಳೂ ಇವೆ. ತಾಯಿ ಸಾಹೇಬದಲ್ಲಿ ಬಳಕೆಯಾಗುವ ಅತ್ತರಿನ ಘಮಲು ಊಳಿಗಮಾನ್ಯ ಬದುಕನ್ನು ಪ್ರತಿನಿಧಿಸಿದರೆ ಕನಸೆಂಬೋ ಚಿತ್ರದ ಅತ್ತರು ಮತ್ತು ಧೂಪ ಸತ್ಯವನ್ನು ಮರೆಮಾಚುವ ಸಾಧನವಾಗಿದೆ. ಚಿತ್ರದ ತೆರೆಯ ಮೇಲೆ ಕಾಣಿಸದ ಗುಲಾಬಿ ಟಾಕೀಸಿನ ಸುಲೇಮಾನ್ ಬ್ಯಾರಿಯ ಪ್ರಸ್ತಾಪ ಮತ್ತು ದ್ವೀಪದಲ್ಲಿ ಶಬ್ದ ಮಾತ್ರವಾಗಿ ತಲ್ಲಣ ಸೃಷ್ಟಿಸುವ ಹುಲಿಯ ಕೂಗು, ಮನುಷ್ಯನ ಅಂತರಂಗದ ಭಯ ಅಸೂಯೆಯನ್ನು ಶೋಧಿಸುವ, ಹೊರಹಾಕುವ ಮಾರ್ಗಗಳನ್ನು ತೆರೆಯಿಸುತ್ತದೆ.
ಇದನ್ನು ಓದಿದ್ದೀರಾ?: ಜಾಗತಿಕ ಚಿತ್ರರಂಗಕ್ಕೆ ‘ವಾಸ್ತವ’ದ ಹೊಸ ದೃಷ್ಟಿಕೋನ ನೀಡಿದ ಗ್ಲೌಬರ್ ರೋಚಾ ಸಿನೆಮಾಗಳು
ಹಾಗೆಯೇ ಕಾಸರವಳ್ಳಿಯವರ ಕಥೆಗಳ ಕೇಂದ್ರಬಿಂದು ಸಮಾಜದ ಒಳಗೊಳ್ಳುವಿಕೆ (Inclusion) ಮತ್ತು ಹೊರದೂಡುವಿಕೆಯ(Exclusion) ನಡುವಿನ ಜಿಜ್ಞಾಸೆ. ಸಮಾಜ ಸೃಷ್ಟಿಸಿರುವ ನಿಯಮಗಳ ಆಟದಲ್ಲಿ ಯಾರಿಗೆ ಒಳಗಿರಲು ಅವಕಾಶವಿದೆ? ಯಾರು ಹೊರದೂಡಲ್ಪಡುತ್ತಾರೆ? ಎಂಬುದನ್ನು ಅವರ ಚಿತ್ರಗಳು ಪ್ರಶ್ನಿಸುತ್ತವೆ. ಅದು ‘ಘಟಶ್ರಾದ್ಧ’ದ ಅಗ್ರಹಾರವಿರಬಹುದು, ‘ತಬರನ ಕಥೆ’ಯ ಸರ್ಕಾರಿ ಕಚೇರಿ ಇರಬಹುದು ಅಥವಾ ‘ದ್ವೀಪ’ದ ಮುಳುಗುತ್ತಿರುವ ಒಂಟಿ ಜಾಗವಿರಬಹುದು, ಅಥವಾ ಗುಲಾಬಿ ವಾಸಿಸುತ್ತಿದ್ದ ಕುದ್ರುವಾಗಿರಬಹುದು. ಪಾತ್ರಗಳ ಮಾನಸಿಕ ಬಂಧನವನ್ನು ತೋರ್ಪಡಿಸಲು ಕಾಸರವಳ್ಳಿಯವರು ಭೌತಿಕ ಜಾಗವನ್ನು (Space) ಬಳಸಿಕೊಳ್ಳುವ ರೀತಿ ಅನನ್ಯ. ಕತ್ತಲು ಮತ್ತು ಬೆಳಕಿನ ಆಟದ ನಡುವೆ, ಬಾಗಿಲ ಚೌಕಟ್ಟುಗಳು, ಕಿಟಕಿ ಕಂಬಗಳು ಅಥವಾ ಕಂಬಗಳ ನಡುವಿನಿಂದಲೇ ಪಾತ್ರಗಳನ್ನು ಕ್ಯಾಮೆರಾ ಸೆರೆಹಿಡಿಯುತ್ತದೆ. ಇದು ಸಮಾಜವು ಮಹಿಳೆಯರ ಅಥವಾ ಶೋಷಿತರ ಸುತ್ತ ನಿರ್ಮಿಸಿರುವ ಅದೃಶ್ಯ ಬೇಲಿಗಳನ್ನು ನೆನಪಿಸುತ್ತದೆ.
ಕಾಸರವಳ್ಳಿಯವರ ಸಿನೆಮಾವನ್ನು ಆಸ್ವಾದಿಸುವುದೆಂದರೆ ತಾಳ್ಮೆ, ದೃಶ್ಯದೊಳಗಿನ ರಾಜಕೀಯ ಮತ್ತು ನೈತಿಕ ದ್ವಂದ್ವಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವುದು. “ಒಬ್ಬ ನಿರ್ದೇಶಕ ತಾನು ಆರಿಸಿಕೊಳ್ಳುವ ಸಿನೆಮಾದ ವೇಗವೇ ಅವನ ರಾಜಕೀಯ ನಿಲುವು” ಎನ್ನುತ್ತಾರೆ ಕಾಸರವಳ್ಳಿ. ಅವರು ದೃಶ್ಯಗಳನ್ನು ವೇಗವಾಗಿ ಕತ್ತರಿಸಿ ಪ್ರೇಕ್ಷಕರ ಭಾವನೆಗಳೊಂದಿಗೆ ಆಟವಾಡುವುದಿಲ್ಲ; ಬದಲಿಗೆ ದೀರ್ಘ ಶಾಟ್‌ಗಳ ಮೂಲಕ ಪ್ರೇಕ್ಷಕನಿಗೂ ಯೋಚಿಸುವ, ಆ ದೃಶ್ಯದ ಭಾಗವಾಗುವ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತಾರೆ.

ಗಿರೀಶ್ ಕಾಸರವಳ್ಳಿಯವರ ಕೊಡುಗೆಯು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ದಶಕಗಳ ಕಾಲ ತನ್ನ ಕಲಾತ್ಮಕ ಗುಣಮಟ್ಟವನ್ನು ಅಬಾಧಿತವಾಗಿ ಕಾಯ್ದುಕೊಂಡು ಬಂದ ಅಪರೂಪದ ನಿರ್ದೇಶಕರಲ್ಲಿ ಅವರು ಪ್ರಮುಖರು.
ಗಿರೀಶ್ ಕಾಸರವಳ್ಳಿಯವರ ಸಿನೆಮಾಗಳು ಭಾರತೀಯ ಚಿತ್ರರಂಗದ ನೈತಿಕ ದಿಕ್ಸೂಚಿಯಂತೆ ಕೆಲಸ ಮಾಡುತ್ತವೆ. ವಾಣಿಜ್ಯ ಚಿತ್ರಗಳ ಯಾವುದೇ ಪ್ರಲೋಭನೆಗೆ ಒಳಗಾಗದೆ, ಕಲಾತ್ಮಕ ಸಿನೆಮಾದ ತತ್ವಗಳಿಗೆ ಬದ್ಧರಾಗಿ, ಅವರು ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯ ನಡುವೆ ಮೂಲೆಗುಂಪಾದ ಜೀವಗಳ ಮೌನ ರೋದನವನ್ನು ಸಿನೆಮಾದಲ್ಲಿ ದಾಖಲಿಸಿದ್ದಾರೆ. ಅವರ ಪರಂಪರೆ ಇರುವುದು ದೃಶ್ಯದ ಜಗಮಗಿಸುವಿಕೆಯಲ್ಲಲ್ಲ, ಬದಲಾಗಿ ಮನುಷ್ಯನ ಬದುಕಿನ ನೋವಿಗೆ ಸ್ಪಂದಿಸುವ ಅವರ ಆಳವಾದ ಮಾನವೀಯ ಅಂತಃಕರಣದಲ್ಲಿ. ಇದೇ ಕಾರಣಕ್ಕಾಗಿ ಅವರು ಆಧುನಿಕ ಭಾರತದ ಸಾಂಸ್ಕೃತಿಕ ಲೋಕದ ಅಪರೂಪದ ನಿರ್ದೇಶಕರಾಗಿ ಮನ್ನಣೆ ಗಳಿಸಿದ್ದಾರೆ. ʼಪ್ರಜಾವಾಣಿ ಸಿನೆಮಾ ಸಮ್ಮಾನ್ʼನಲ್ಲಿ ಜೀವಮಾನ ಸಾಧನೆ ಗೌರವ ಪಡೆದ ಅವರಿಗೆ ಅಭಿನಂದನೆಗಳು.

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.



