ನೂರರ ನೆನಪು | ಸ್ಮರಿಸಲೇಬೇಕಾದ ಶೈಲೇಂದ್ರ ಎಂಬ ಜೀವಪರ ದನಿ

Date:

ಶೈಲೇಂದ್ರ ಅವರ ಕವಿತೆಗಳು ಬಡಜನರ ದುಃಖ ದುಮ್ಮಾನದ ಕುರಿತು ಹೇಳುತ್ತಲೇ ಅವು ಗದ್ಯವಾಗದಂತೆ ಗೇಯತೆಯನ್ನು ಸಹ ಸಾಧಿಸಿವೆ (ನಮ್ಮ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳಲ್ಲಿ ಗೇಯತೆಯೂ ಸಹ ಇದೇ ಮಾದರಿ). ಶೈಲೇಂದ್ರ ಅವರನ್ನು ಹೀಗೆ ಅಂತ ಒಂದು genre, styleಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರ ಕವಿತೆಗಳು ದಾರ್ಶನಿಕವೂ ಅಲ್ಲ, ನೀತಿ ಬೋಧನೆಯೂ ಅಲ್ಲ. ಕೇವಲ ಶೈಲೇಂದ್ರ ಮಾತ್ರ.

‘ನೀನು ಬದುಕಿದ್ದೀಯ, ಜೀವನದ ಗೆಲುವಿನಲ್ಲಿ ನಂಬಿಕೆ ಇಡು’ ಎಂದು ಬರೆದ ಕವಿ, ಗೀತ ರಚನೆಕಾರ ಶೈಲೇಂದ್ರ ಅವರು ಬದುಕಿದ್ದರೆ 100 ವರ್ಷ ತುಂಬುತ್ತಿತ್ತು. ಸಿನಿಮಾ ಗೀತೆ ಅಲ್ಲದ, ಘನತೆ ಮತ್ತು ನ್ಯಾಯವನ್ನು ಬಯಸುವ ಈ ಕವಿತೆ ಹೋರಾಟಗಾರರ ಹಾಡಾಗಿ ಜನಪ್ರಿಯವಾಗಿದ್ದು ಮಾತ್ರ ಚಾರಿತ್ರಿಕ ಸಂಗತಿ.

‘ಇತರರ ದುಃಖ ಮತ್ತು ವೇದನೆಯಲ್ಲಿ ಭಾಗಿದಾರರಾದರೆ ಅದೇ ಭೂಮಿಯ ಮೇಲಿನ ಸ್ವರ್ಗ’ ಎಂದು ತಮ್ಮ ಹದಿಹರೆಯದ ದಿನಗಳಲ್ಲಿ ಬರೆದ ಶೈಲೇಂದ್ರ ಬರೆದಂತೆ ಬದುಕಿದ್ದರೇ? ಇಂತಹ ಸಂದಿಗ್ಧ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಶೈಲೇಂದ್ರ ಅವರ ಸಿನಿಮಾ ಜೀವನದ ಗೆಲುವನ್ನು ಮಾತ್ರ ಸ್ಮರಿಸಿಕೊಂಡರಷ್ಟೆ ಸಾಲದೇ? ಎಂದು ಮರು ಪ್ರಶ್ನಿಸಿದರೆ ಇದಕ್ಕೆ ಉತ್ತರ ಇಲ್ಲ, ಸಾಲದು.

ಏಕೆಂದರೆ ಹಿಂದಿ ಸಿನಿಮಾರಂಗದಲ್ಲಿ ಎರಡು ದಶಕಗಳ ಕಾಲ ಮಾರ್ಕ್ಸಿಸಂನ ಒಡಲೊಳಗಿಂದ ಬಡವರ ನೋವಿನ ಪ್ರಾಣ ಮಿತ್ರನಂತಹ ಕವಿತೆಗಳನ್ನು ರಚಿಸಿದ ಶೈಲೇಂದ್ರ ದಲಿತರು ಎಂದು ಅವರ ಮಗ 2016ರಲ್ಲಿ ಬಹಿರಂಗಗೊಳಿಸಿದರು. 43 ವರ್ಷಗಳ ಜೀವಿತದ ಅವಧಿಯಲ್ಲಿ ಯಾಕೆ ತಮ್ಮ ದಲಿತ ಐಡೆಂಟಿಟಿಯನ್ನು ಹೇಳಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರವೂ ಸಹ ಸಂಕೀರ್ಣವಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಿನಿಮಾರಂಗದಲ್ಲಿ ದಲಿತ ಕವಿಯಾಗಿ ಬರೆಯುವುದೆಂದರೆ ಏನು ಎಂಬುದು ಐವತ್ತರ ದಶಕದಲ್ಲಿಯೇ ಶೈಲೇಂದ್ರ ಅವರಿಗೆ ಅರ್ಥವಾಗಿತ್ತು. ದಲಿತ ಕವಿಯಾಗಿ tryst with Marxism ಮೂಲಕ ಭಾರತದ ಅಂತರಂಗವನ್ನು ಶೋಧಿಸಿದ ಶೈಲೇಂದ್ರರ ಮಹತ್ವ ಅವರ ಜನಪ್ರಿಯ ಸಿನಿಮಾ ಗೀತೆಗಳಾಚೆಗಿದೆ. ಇದನ್ನು ಗ್ರಹಿಸಲು ನಮ್ಮ ಮನಸ್ಸುಗಳು ಮುಕ್ತವಾಗಿರಬೇಕು. ಇಲ್ಲಿನ ಜಾತಿ ಸಮಾಜದ ಆಳ ಅಗಲದ ಪ್ರಜ್ಞೆ ಇರಬೇಕು.

ನಲವತ್ತರ ದಶಕದ ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಸಾಂಸ್ಕೃತಿಕ ಸಂಘಟನೆ ‘ಇಪ್ಟಾ’ದೊಂದಿಗೆ ಗುರುತಿಸಿಕೊಂಡಿದ್ದ ಶೈಲೇಂದ್ರ ಬರೆದ ‘ಹರ ಜೋರ್ ಜುಲ್ಮ್ ಕಿ ಟಕ್ಕರ್ ಮೆ, ಹರತಾಳ ಹಮಾರ ನಾರಾ ಹೈ’ (ಪ್ರತಿಯೊಂದು ದೌರ್ಜನ್ಯದ ವಿರುದ್ಧ ಹೋರಾಟದಲ್ಲಿ ಮುಷ್ಕರ ನಮ್ಮ ಆಯುಧ) ಎನ್ನುವ ಸಾಲುಗಳು ಅಂದಿಗೆ ತುಂಬಾ ಜನಪ್ರಿಯ ಘೋಷಣೆಯಾಗಿತ್ತು. ಹೋರಾಟಗಾರರ ರಾಷ್ಟ್ರಗೀತೆಯಾಗಿತ್ತು.

ಮುಂಬೈನ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶೈಲೇಂದ್ರ ಮುಶಾಯಿರಾಗಳಲ್ಲಿ ತಮ್ಮ ಕವಿತೆ ಓದುತ್ತಿದ್ದರು. ಇಂತಹ ಒಂದು ಕಾವ್ಯ ಸಂಜೆಯಲ್ಲಿ ಶೈಲೇಂದ್ರ ಓದಿದ ‘ಜಲ್ತಾ ಹೈ ಪಂಜಾಬ್’ ಕವಿತೆಯನ್ನು ಕೇಳಿಸಿಕೊಂಡ ನಟ ರಾಜಕಪೂರ್ ಅದನ್ನು ಕೊಂಡುಕೊಳ್ಳಲು ಬಯಸಿದರು. ಆದರೆ ‘ನನ್ನ ಕವಿತೆ ಮಾರಾಟಕ್ಕಿಲ್ಲ’ ಎಂದು ಪ್ರತಿಭಟಿಸಿದ ಶೈಲೇಂದ್ರ ನಂತರ ಎರಡು ದಶಕಗಳ ಕಾಲ ರಾಜಕಪೂರ್ ರವರ ‘ಆರ್‌ಕೆ ಫಿಲ್ಮಸ್’ನ ಭಾಗವಾಗಿದ್ದು, ಕೆ.ಎ.ಅಬ್ಬಾಸ್ ಜೊತೆಗೂಡಿ ಆ ಬ್ಯಾನರ್ ಸಿನಿಮಾಗಳಿಗೆ ಸಾಮಾಜಿಕತೆಯ ಸ್ಪರ್ಶ ಕೊಟ್ಟಿದ್ದು (ಆವಾರ, ಶ್ರೀ 420, ಜಾಗ್ತೇ ರಹೋ, ಬೂಟ್ ಪಾಲೀಶ್, ಜಿಸ್ ದೇಶ್ ಮೆ ಗಂಗಾ ಬಹತೀ ಹೈ) ಇಂದು ಇತಿಹಾಸವಾಗಿದೆ.  ಜೊತೆಗೆ ಅನಾರಿ, ತೀಸ್ರೀ ಕಸಮ್ ಸಿನಿಮಾಗಳು, ಬಿಮಲ್ ರಾಯ್ ಅವರ ‘ದೋ ಬಿಘಾ ಜಮೀನ್, ಸುಜಾತ, ಬಂಧಿನಿ’, ದೇವ್ ಆನಂದ್‌ರವರ ‘ಕಾಲಾ ಬಜಾರ್, ಗೈಡ್’, ಕಿಶೋರ್ ಕುಮಾರ್ ನಿರ್ದೇಶನದ ‘ದೂರ್ ಗಗನ್ ಕಿ ಚಾಹೋ ಮೆ’ ಮುಂತಾದ ಸಿನಿಮಾಗಳ ಮಾನವೀಯ ಕಾಳಜಿಯ, ಸಾಮಾಜೀಕರಣದ ದನಿಗೆ ಶೈಲೇಂದ್ರರವರ ಮಾರ್ಕ್ಸಿಸಂನ ಸ್ಪರ್ಶವಿತ್ತು.

ವಿಷಾದವು ಶೈಲೇಂದ್ರ ಅವರ ಕವಿತೆಗಳ ಸ್ಥಾಯೀ ಭಾವವಾಗಿದ್ದರೂ ಸಹ ಭಕ್ತಿ ಪಂಥದ ಕಬೀರರ ದೋಹದ ಜೀವಪರತೆ ಇವರ ಕಾವ್ಯದಲ್ಲಿ ಹೊಳೆಯಾಗಿ ಹರಿಯುತ್ತಿತ್ತು. ಸಜನ್ ರೆ ಜೂಟ್ ಮತ್ ಬೋಲೋ ಖುದಾ ಕೆ ಪಾಸ್ ಜಾನಾ ಹೈ (ಸಂಗಾತಿಯೇ ಸುಳ್ಳು ಹೇಳ ಬೇಡ, ದೇವರ ಬಳಿ ಹೋಗಬೇಕು), ದುನಿಯಾ ಬನಾನೆವಾಲೆ ಕ್ಯಾ ತೇರೆ ಮನ್ ಮೆ ಸಮಾಯಿ, ಕಾ ಹೆ ಕೊ ದುನಿಯಾ ಬನಾಯಿ (ವಿಶ್ವವನ್ನು ರೂಪಿಸುವವನೆ ನಿನ್ನ ಮನಸ್ಸಿನಲ್ಲಿ ಏನಿದೆ, ಯಾತಕ್ಕೆ ಜಗತ್ತನ್ನು ನಿರ್ಮಿಸಿದೆ), ಕಿಸಿ ಕಿ ಮುಸ್ಕುರಾಹ ತೋ ಪೆ ಹೋ ನಿಸಾರ್ ಕಿಸಿ ಕ ದರ್ದ ಕೊ ಹೋ ಸಕೆ ತೋ ಲೇ ಉಟಾ (ಬೇರೆಯವರ ನಗುವಿನ ಕುರಿತು ವಿಸ್ಮಯ ವ್ಯಕ್ತಪಡಿಸು, ಬೇರೆಯವರ ದುಃಖವನ್ನು ಸಾಧ್ಯವಾದರೆ ಹೊತ್ತುಕೋ) ಮುಂತಾದ ಕವಿತೆಗಳು 15ನೇ ಶತಮಾನದ ಭಕ್ತಿ ಪಂಥ ಘರಾಣದ ಮುಂದುವರಿಕೆಯಾಗಿದೆ.

ಇಲ್ಲಿ ಆದರ್ಶವೂ ಇದೆ, ದಾರ್ಶನಿಕತೆಯೂ ಇದೆ ಮತ್ತು ಮುಖ್ಯವಾಗಿ ಲೌಕಿಕತೆ ಇದರ ಆತ್ಮವಾಗಿದೆ. ಇದು ಶೈಲೇಂದ್ರ. ‘ವಹಾ ಕೌನ್ ಹೈ ತೇರಾ, ಮುಸಾಫಿರ್ ಜಾಯೇ ಗಾ ಕಹಾ (ಅಲ್ಲಿ ಯಾರಿದ್ದಾರೆ? ಪಯಣಿಗನೆ ನೀನು ಎಲ್ಲಿಗೆ ಹೊರಟಿರುವೆ) ಸಾಲುಗಳು ಎಲ್ಲವನ್ನೂ ಅನುಭವಿಸಿದರೂ ಸಹ ಬದುಕೆಂಬುದು ಮರೀಚಿಕೆ ಎಂದು ಧ್ಯಾನಿಸುತ್ತದೆ. ‘ಮೇರೆ ಸಾಜನ್ ಹೈ ಉಸ್ ಪಾರ್, ಮೈ ಮನ್ ಮಾರ್, ಹೂ ಇಸ್ ಪಾರ್ (ನನ್ನ ಸಂಗಾತಿ ಆ ದಡದಲ್ಲಿದ್ದಾನೆ, ನಾನು ಈ ದಡದಲ್ಲಿದ್ದೇನೆ) ಎನ್ನುವ ಕವಿತೆಯ ಆರ್‍ದ್ರತೆ ಮತ್ತು ಕಾರುಣ್ಯದ ಆಳ ಬಿಡದೆ ಕಾಡುತ್ತದೆ. ‘ಮನ್ ಕಿ ಕಿತಾಬ್ ಸೆ ತುಮ್ ಮೇರಾ ನಾಮ್ ಮಿಟಾ ದೇನಾ (ಮನಸ್ಸಿನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು) ಎನ್ನುವ ನಿವೇದನೆಯೂ ಹೌದು. ‘ತೂ ಪ್ಯಾರ್ ಕ ಸಾಗರ್ ಹೈ, ತೇರಿ ಇಸ್ ಬೂಂದ್ ಕೆ ಪ್ಯಾಸೆ ಹೈ ಹಂ’ (ನೀನು ಪ್ರೀತಿಯ ಸಾಗರ, ನಿನ್ನ ಒಂದು ಹನಿಗಾಗಿ ಬಾಯಾರಿಕೆಯಿಂದ ಕಾತರಿಸುತ್ತಿದ್ದೇವೆ) ಮೇಲ್ನೋಟಕ್ಕೆ ಪ್ರಾರ್ಥನಾ ಗೀತೆಯಾದರೂ ಸಹ ಬದುಕು ಮತ್ತು ಸಾವಿನ ನಡುವೆ ಜೀವಂತಿಕೆ ಎಂದರೆ ಅದು ಪ್ರೀತಿ ಎಂದು ದನಿಸುತ್ತದೆ. ‘ಆ ಚಲ್ ಕೆ ತುಜೆ ಮೈ ಲೇಕೆ ಚಲೂ ಎಕ್ ಐಸೆ ಗಗನ್ ಪೆ ಚಲೆ, ಜಹಾ ಗಮ್ ಭಿ ನ ಹೋ, ಆಸೂ ಭಿ ನ ಹೋ’ (ನಡಿ ನಿನ್ನನ್ನು ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ದುಃಖವಿಲ್ಲ, ಕಣ್ಣೀರಿಲ್ಲ) ಕವಿತೆ ಭರವಸೆಯೊಂದಿಗಿನ ಪಯಣದ ಆಶಯವನ್ನು ಹೇಳುತ್ತಲೇ ತಲುಪಬೇಕಾದ ಗಮ್ಯವನ್ನು ನಿಗೂಢವಾಗಿಸುತ್ತದೆ.

‘ಧರ್ತಿ ಕಹೇ ಪುಕಾರ್ ಕೆ, ಗೀತ್ ಗಾಲೆ ಪ್ಯಾರ್ ಕೆ, ಮೌಸಮ್ ಬೀತಾ ಜಾಯ್, ಅಪ್ನಿ ಕಹಾನಿ ಚೋಡ್ ಜಾ, ಕುಚ್ ತೊ ನಿಶಾನಿ ಚೋಡ್ ಜಾ’ (ಭೂಮ್ತಾಯಿ ಕರೆಯುತ್ತಿದ್ದಾಳೆ, ಪ್ರೀತಿಯ ಹಾಡು ಗುನುಗನಿಸುತ್ತಿದ್ದಾಳೆ, ಋತುಮಾನ ಬದಲಾಗುತ್ತಿರುತ್ತದೆ, ನನ್ನ ಕತೆ ಬಿಡು, ಗುರುತು ಉಳಿಸಿ ಹೋಗು) ರೈತ ಹೊಟ್ಟೆ ಪಾಡಿಗಾಗಿ ನಗರಕ್ಕೆ ವಲಸೆ ಹೋಗುತ್ತಿರುವಾಗ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ರೈತರು, ಕೂಲಿ ಕಾರ್ಮಿಕರು ಹಾಡುವ ಹಾಡು. ಮನುಷ್ಯನ ಬದುಕಿನ ದ್ವಂದ ಮತ್ತು ಯಾತನೆಗಳಿಂದ ಬಿಡುಗಡೆ ಸಾಧ್ಯವೇ ಎಂದು ಮಾರ್ಮಿಕವಾಗಿ ಗುನುಗುತ್ತಾ ನಮ್ಮ ಎದೆಯಾಳಕ್ಕೆ ಇಳಿಯುತ್ತಲೇ ನಿರೀಕ್ಷೆಗಳನ್ನು ಸಹ ಹುಟ್ಟು ಹಾಕುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ರಾಷ್ಟ್ರೀಯತೆಯಾಗುವ ಅಪಾಯವಿರುವ ‘ಮೇರಾ ಜೂತಾ ಹೈ ಜಪಾನಿ, ಯೇ ಪತಲೂ ಇಂಗ್ಲೀಷ್‌ಸ್ತಾನಿ, ಫಿರ್ ಭಿ ದಿಲ್ ಹೈ ಹಿಂದುಸ್ತಾನಿ’ (ನನ್ನ ಚಪ್ಪಲಿಗಳು ಜಪಾನಿ ಬಟ್ಟೆಗಳು ಇಂಗ್ಲೆಂಡ್, ಆದರೂ ನನ್ನ ಮನಸ್ಸು ಮಾತ್ರ ಹಿಂದುಸ್ತಾನಿ) ಹಾಡು ಶೈಲೇಂದ್ರರ ಕ್ರಿಯಾಶೀಲ ಲೇಖನಿಯಲ್ಲಿ ಸ್ವಾಯತ್ತತೆಯ, ಗ್ರಾಮೀಣ ಭಾಗದ ಬಡವರ ಘನತೆಯ ಅಭಿವ್ಯಕ್ತಿಯಾಗುತ್ತದೆ. ‘ದಿಲ್ ಕಾ ಹಾಲ್ ಸುನೇ ದಿಲ್ ವಾಲಾ, ಸೀದಿ ಸಿ ಬಾತ್ ಹೈ ನ ಮಿರ್ಚಿ ಮಸಾಲ, ಕಹನೇ ಹೈ ಮೈ ಕಹನೇ ವಾಲಾ’ (ಮನಸ್ಸಿನ ಮಾತನ್ನು ಕೇಳು, ಸಾದಾ ಸೀದಾ ಮಾತನಾಡುತ್ತೇನೆ, ಇದರಲ್ಲಿ ಖಾರ, ಉಪ್ಪು, ಹುಳಿ ಇಲ್ಲ, ಹೇಳಬೇಕಾಗಿದೆ, ಹೇಳಿಯೇ ತಿರುತ್ತೇನೆ) ವರ್ಗ ಸಂಘರ್ಷದ ಕುರಿತು ಹಾಡುತ್ತದೆ. ‘ಆವಾರ ಹೂ, ಗರ್ದಿಶ್ ಮೇ ಹೂ ಆಸಮಾನ್ ಕಾ ತಾರಾ ಹೂ’ (ನಾನೊಬ್ಬ ಅಲೆಮಾರಿ, ಆಗಸದ ನಕ್ಷತ್ರದಂತೆ ಕ್ಷಿತಿಜದ ಅಂಚಿನಲ್ಲಿದ್ದೇನೆ) ಹಾಡು ನಾನು ಛಿದ್ರಗೊಂಡಿರಬಹುದು ಆದರೆ ಸಂತೋಷದಿಂದ ಹಾಡುತ್ತೇನೆ, ಮನಸ್ಸಿನ ಗಾಯಗಳನ್ನು ಮರೆಯುತ್ತೇನೆ ಎನ್ನುವ ಸಬಾಲ್ಟ್ರನ್ ಕಥನದ ಲಾವಣಿಯಂತಿದೆ. ‘ಸೂರಜ್ ಜರಾ ಆ ಪಾಸ್ ಆ, ಆಜ್ ಸಪ್ನೋ ಕಿ ರೋಟಿ ಪಕಾನಿ ಹೈ (ಸೂರ್ಯನೆ ಸ್ವಲ್ಪ ಹತ್ತಿರ ಬಾ, ಕನಸಿನ ರೊಟ್ಟಿಗಳನ್ನು ಬೇಯಿಸಬೇಕಾಗಿದೆ) ಕೆಂಡದಲ್ಲಿ ಬೆಂದವರ ಬದುಕಿನ ಜೀವಂತಿಕೆಯ ಅಭಿವ್ಯಕ್ತಿಯಾಗಿದೆ.

ಸಾಧಾರಣ ಚಿತ್ರಕತೆ ಮತ್ತು ಜಾಳು ಜಾಳಾದ ನಿರೂಪಣೆಯ ‘ಗೈಡ್’ ಸಿನಿಮಾದಲ್ಲಿ ‘ಆಜ್ ಫಿರ್ ಭಿ ಜೀನೆ ಕಿ ತಮನ್ನಾ ಹೈ, ಆಜ್ ಭಿ ಮರ್‌ನೇ ಕಾ ಇರಾದಾ ಹೈ’ (ಇಂದೇ ಬದುಕುವ ಆಸೆ ಇದೆ, ಇಂದೇ ಸಾಯುವ ಆಸೆಯೂ ಇದೆ), ‘ಗಾತಾ ರಹೇ ಮೇರಾ ದಿಲ್, ತೂ ಹಿ ಮೇರಿ ಮಂಜಲ್’ (ಹಾಡುತ್ತಿರು ಓ ನನ್ನ ಮನಸೇ, ನೀನೆ ನನ್ನ ಗಮ್ಯ) ದಂತಹ ಸುಶ್ರಾವ್ಯ ಕಾವ್ಯದ ಸೌಂದರ್ಯವು ಗೈಡ್ ಸಾಧಾರಣ ಸಿನಿಮಾವಾಗುವ ಅಪಾಯದಿಂದ ಪಾರು ಮಾಡಿದ್ದು ಸುಳ್ಳಲ್ಲ. ಜೊತೆಗೆ ಹೈ ಮೇರೆ ದಿಲ್ ಕಹೀ ಔರ್ ಚಲ್ ಗಮ್ ಕಿ ದುನಿಯಾ ಸೆ ದಿಲ್ ಭರ್ ಗಯಾ, ಖೋಯಾ ಖೋಯಾ ಚಾಂದ್, ಸುಹಾನಾ ಸಫರ್, ಕುಚ್ ಔರ್ ಜಮಾನಾ ಕಹೆತಾ ಹೈ, ಮಿಟ್ಟಿ ಸೆ ಖೇಲ್ತೇ ಹೋ ಬಾರ್ ಬಾರ್ ಕಿಸ್ ಲಿಯೇ, ಓ ಸಜನಾ ಬರಖಾ ಬಹಾರ್ ಆಯಿ, ಯೇ ಮೇರಾ ದೀವಾನ ಪಲ್ ಹೈ, ವೋ ಚಾಂದ್ ಕಿಲಾ ವೋ ತಾರೆ ಹಸೀನ್, ಅಜೀಬ್ ದಾಸ್ತಾನ್ ಹೈ ಮುಂತಾದ ಹಾಡುಗಳು ಸದಾ ಕಾಡುವ ಕಾವ್ಯದ ಚಿಲುಮೆ. ಮೊಗೆದಷ್ಟೂ ಮುತ್ತುಗಳು.

ಶೈಲೇಂದ್ರ ಅವರ ಕವಿತೆಗಳು ಬಡಜನರ ದುಃಖ ದುಮ್ಮಾನದ ಕುರಿತು ಹೇಳುತ್ತಲೇ ಅವು ಗದ್ಯವಾಗದಂತೆ ಗೇಯತೆಯನ್ನು ಸಹ ಸಾಧಿಸಿದೆ (ನಮ್ಮ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳಲ್ಲಿ ಗೇಯತೆಯೂ ಸಹ ಇದೇ ಮಾದರಿ). ಶೈಲೇಂದ್ರ ಅವರನ್ನು ಹೀಗೆ ಅಂತ ಒಂದು genre, styleಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರ ಕವಿತೆಗಳು ದಾರ್ಶನಿಕವೂ ಅಲ್ಲ, ನೀತಿ ಬೋಧನೆಯೂ ಅಲ್ಲ. ಕೇವಲ ಶೈಲೇಂದ್ರ ಮಾತ್ರ. ಕಾವ್ಯದ ಸಂಕೀರ್ಣತೆಯನ್ನು, ವಿಭಿನ್ನ ಪದರುಗಳನ್ನು ಸರಳವಾದ ಹಿಂದಿ, ಉರ್ದು ನುಡಿಯಲ್ಲಿ ಹೇಳುವ, ಆ ಮೂಲಕ ನಮ್ಮ ಎದೆಯಾಳಕ್ಕೆ ದಾಟಿಸುವ ಕಲೆ ಶೈಲೇಂದ್ರರಿಗೆ ಮಾತ್ರ ಸಾಧ್ಯ. ಗುಲ್ಝಾರ್, ‘ಸಿನಿಮಾರಂಗ ಕಾವ್ಯ ಮತ್ತು ರಂಗಭೂಮಿ ಮಾಧ್ಯಮಕ್ಕಿಂತಲೂ ಭಿನ್ನ ಎಂದು ಶೈಲೇಂದ್ರ ಅವರಿಗೆ ಮನವರಿಕೆಯಾಗಿತ್ತು. ಅದನ್ನು ಅಳವಡಿಸಿಕೊಂಡಿದ್ದು ಮಾತ್ರ ಅದ್ಭುತ’ ಎಂದು ಹೇಳುತ್ತಾರೆ. ಶೈಲೇಂದ್ರ ವೈಶಿಷ್ಟ್ಯತೆಗೆ ಇದು ಉದಾಹರಣೆ.

ಶೈಲೇಂದ್ರ ಮತ್ತು ಅವರ ಸಮಕಾಲೀನರಾಗಿದ್ದ ಹಸರತ್ ಜೈಪುರಿ, ಮಜರೂಹ್, ಸಾಹಿರ್, ಜಾನ್ ನಿಸಾರ್ ಅಕ್ತರ್, ಶಕೀಲ್ ಬದ್ವಾಯಿ ಮುಂತಾದ ಗೀತ ರಚನೆಕಾರರು ಮಾನವೀಯತೆಯಿಂದ, ಜೀವಪರ ಧೋರಣೆಯಿಂದ ಬರೆದರು. ತಮ್ಮ ಕಾಲಘಟ್ಟವನ್ನು ಸಹನೀಯವಾಗಿಡಲು ಶ್ರಮಿಸಿದರು. ಮತಾಂಧತೆಯ ಭಾರತಕ್ಕೆ ಈ ಮಹನೀಯರು ಅರ್ಥವಾದರೆ, ಗ್ರಹಿಕೆಗೆ ದಕ್ಕಿದರೆ ಕೊಂಚ ಉಸಿರಾಡಬಹುದೇನೋ.

ಶೈಲೇಂದ್ರ ಅವರ ನೂರು(ಜನ್ಮದಿನ 30 ಆಗಸ್ಟ್ 1923) ವರ್ಷಗಳ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ ‘ಇಂತಹ ಮಹಾನ್ ಪ್ರತಿಭಾವಂತ ಯಾಕೆ ತನ್ನ ದಲಿತ ಐಡೆಂಟಿಟಿಯನ್ನು ಬಹಿರಂಗಗೊಳಿಸಲಿಲ್ಲ?’. ಉತ್ತರಿಸಬೇಕೆಂದರೆ ಕಡು ಪ್ರಾಮಾಣಿಕತೆ ಮತ್ತು ನ್ಯಾಯಪ್ರಜ್ಞೆ ಬೇಕು. ಜೈ ಭೀಮ್ ಕಾಮ್ರೇಡ್.

ಬಿ ಶ್ರೀಪಾದ್ ಭಟ್
+ posts

ಲೇಖಕರು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು

ಪೋಸ್ಟ್ ಹಂಚಿಕೊಳ್ಳಿ:

ಬಿ ಶ್ರೀಪಾದ್ ಭಟ್
ಬಿ ಶ್ರೀಪಾದ್ ಭಟ್
ಲೇಖಕರು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...