ಬೀದರ್‌ | ʼಜಲ ಜೀವನʼಕ್ಕೆ ಗ್ರಹಣ, ಹನಿ ನೀರಿಗೂ ತತ್ವಾರ; ಬೇಕಿದೆ ದೂರಗಾಮಿ ಪರಿಹಾರ-ಭಾಗ-1

Date:

ದಶಕಗಳಿಂದಲೂ ಮುಂದುವರಿಯುತ್ತಿರುವ ‘ಟ್ಯಾಂಕರ್ ಸಂಪ್ರದಾಯ’ಕ್ಕೆ ಇತಿಶ್ರೀ ಹಾಡಬೇಕೆಂದರೆ, ಸರ್ಕಾರಗಳು ಕೆರೆಗಳ ಹೂಳೆತ್ತುವುದು, ಅಂತರ್ಜಲ ಮರುಪೂರಣ ಮತ್ತು ಸಮರ್ಪಕ ನೀರು ಹಂಚಿಕೆಯಂತಹ ಜನಪರ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ.

- Advertisement -

ಬೇಸಿಗೆಯ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದಂತೆ, ರಾಜ್ಯದ ಗ್ರಾಮೀಣ ಭಾಗದ ಜನರಿಗೆ ʼಜಲ ಕಂಟಕʼ ಎದುರಾಗಿದೆ. ಬಯಲು ಸೀಮೆಯ ವಿಶೇಷವಾಗಿ ಬೀದರ್‌ನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಮಿತಿ ಮೀರಿದೆ. ಈ ವರ್ಷದ ಮಾತ್ರ ತಲೆದೋರಿರುವ ಸಮಸ್ಯೆಯಲ್ಲ; ಪ್ರತಿವರ್ಷ ಮಾರ್ಚ್ ಬಂತೆಂದರೆ ಸಾಕು, ಹನಿ ನೀರಿಗಾಗಿ ಕೊಡ ಹಿಡಿದು ಕಿಲೋಮೀಟರ್‌ಗಟ್ಟಲೆ ಅಲೆಯುವುದು ಇಲ್ಲಿನ ಜನರಿಗೆ ಒಂದು ಕಟು ʼಸಂಪ್ರದಾಯ’ʼವಾಗಿ ಮಾರ್ಪಟ್ಟಿರುವುದು ದುರಂತ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಹೀಗಾಗಿ ಯಾರಾದ್ರೂ ಕುಶಲೋಪರಿ ವಿಚಾರಿಸಲು ನೆಂಟರು ಫೋನ್‌ ಮಾಡಿದಾಗ ಮೊದಲು, ʼಆರಾಮ ಇದ್ದೀರಾʼ ಅಂತ ಕೇಳೋದು, ಆ ಕಡೆಯಿಂದ ʼಹೂss.. ಆರಾಮ್‌ ಇದೀವಿʼ ಅಂತ ಹೇಳೋದು ವಾಡಿಕೆ. ಆದರೆ, ಬೇಸಿಗೆಯಲ್ಲಿ ಈ ವಾಡಿಕೆ ನಮ್ಮ ಬೀದರ್‌ ಸೀಮೆಯ ಕಡೆ ಅದು ಥೋಡೆ ಅಲಗ್‌ ಅದಾ. ಆ ಕಡೆಯಿಂದ ʼಆರಾಮ ಇದೀರಾʼ ಅಂತ ಕೇಳಿದಾಗ ಈ ಕಡೆಯಿಂದ ‌ʼಐ ಏನ್ ಆರಾಮ್‌ ಇದೀವಿ ಏನೋ, ಈ ಬ್ಯಾಸಕಿ ಬಂತಂದ್ರೆ ನಮಗ್‌ ನೀರಿಂದೇ ಭಾಳ್‌ ತಕಲೀಪ್ ಅದಾ ನೋಡ್ರೀ, ಬೇಗೂ ಹಗ್ಲೂ ನೀರಿನ ಸಲೇಕ್‌ ಬಡ್ಕೋಬೇಕ್‌, ನಮ್ಮೂರಾಗ ನೀರಿನ ಬರ ಭಾಳ್‌ ಅದಾʼ ಅಂತ ಸರಳವಾಗಿ ಹೇಳೋದು ಇಲ್ಲಿ ಮಾಮೂಲಿ.

ನಾವು ಚಿಕ್ಕವರಿದ್ದಾಗ ಮದುವೆ, ಭಾಷುಣಕಿ, ಮುಂಜಿ, ಜವಾಳ ಕಾರ್ಯಕ್ರಮ ಇದ್ದಾಗ ಎತ್ತಿನ ಬಂಡಿಯಲ್ಲಿ ಕೊಡ, ಬ್ಯಾರಲ್ ಇಟ್ಕೊಂಡು ದೂರದ ಬಾವಿಯಿಂದ ನೀರು ತರುವುದು ನೋಡಿರ್ತೀವಿ. ಕೆಲ ಊರಿನಲ್ಲಿ ಕತ್ತೆ ಮೇಲೆ ಕೊಡ ಹಾಕೊಂಡು, ಇನ್ನು ರಟ್ಟೆ ಗಟ್ಟಿ ಇದ್ದೋರು ʼಬಾರಂ ಬಾವಿ ನೀರು ಸೇದಿʼ ತಲೆ ಮ್ಯಾಲೆ ಕೊಡ ಇಟ್ಕೊಂಡು ಬರೋದು ಕಂಡಿರ್ತೀವಿ. ಈ ಪರಿಸ್ಥಿತಿ ಈಗಲೂ ಗ್ರಾಮೀಣ ಭಾಗದ ಹಳ್ಳಿ, ತಾಂಡಾಗಳಲ್ಲಿ ಇದೆ ಎಂದರೆ, ನಂಬಲೇಬೇಕು. ಕೊಡ ನೀರಿಗಾಗಿ ಮಕ್ಕಳು, ವೃದ್ಧರು ಬಾವಿ, ಕೆರೆ ಹುಡುಕುವ ದುಸ್ಥಿತಿ ಇನ್ನೂ ತಪ್ಪಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನೀರಿನ ಸಮಸ್ಯೆ ಸಂಬಂಧ ಇತ್ತೀಚೆಗೆ ಸಭೆ ನಡೆಸಿ, “ಔರಾದ್ ಮತ್ತು ಭಾಲ್ಕಿ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ನೀಡಿದೆ. ಈ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ 24 ಗಂಟೆಗಳೊಳಗೆ ಪರಿಹಾರ ಕಲ್ಪಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ʼಆಯ್ತುʼ ಎಂಬಂತೆ ತಲೆಯಾಡಿಸಿದರು.

“ಬೋರವೆಲ್ ಬತ್ತಿದರೆ ಅಥವಾ ಬಾವಿಯಲ್ಲಿ ನೀರು ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಅಗತ್ಯವಿದ್ದಲ್ಲಿ ಖಾಸಗಿ ಬೋರವೆಲ್‌ಗಳನ್ನು ಬಾಡಿಗೆ ಪಡೆದು ನೀರು ಒದಗಿಸಬೇಕು. ಜಿಲ್ಲೆಯ ಗ್ರಾಮ, ತಾಂಡಾ ಪ್ರದೇಶಗಳಲ್ಲಿಯೂ ಸೇರಿದಂತೆ ಎಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದರೆ, ಶೀಘ್ರ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು” ಎಂದೂ ಹೇಳಿದ್ದರು.

ಇದೇ ರೀತಿ ಜಿಲ್ಲೆಯ ಕೆಲ ಶಾಸಕರು ಕ್ಷೇತ್ರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಜಲಮೂಲಗಳು ಬತ್ತಿ ಹೋಗುವುದರಿಂದ ನೀರಿಗೆ ತತ್ವಾರ ಉಂಟಾಗುತ್ತದೆ. ನೀರಿಗಾಗಿ ಜನಸಾಮಾನ್ಯರ ತಾಪತ್ರಯ ಹೇಳತೀರದು. ಆದರೆ, ಜನರ ಬಾಯಾರಿಕೆ ನೀಗಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಹವಾನಿಯಂತ್ರಿತ ಕೊಠಡಿಗಳಲ್ಲಿ ಸಭೆ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸುವುದಕ್ಕೇ ಸೀಮಿತವಾಗಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

WhatsApp Image 2026 03 23 at 6.16.48 PM
ಜೆಜೆಎಂ ಯೋಜನೆಯಡಿ ನಲ್ಲಿ

ಸಭೆಗಳೇನೋ ಆಗುತ್ತಲೇ ಇರುತ್ತವೆ. ಆದರೆ, ಹನಿ ನೀರಿಗಾಗಿ ಪರದಾಡುವ ಜನರು ಪ್ರತಿವರ್ಷದಂತೆ ಬಣ್ಣ ಬಣ್ಣದ ಕೊಡಗಳನ್ನು ಹಿಡಿದು ಮೆರವಣಿಗೆ ಹೊರಡದಂತೆ ಹೊಸದೇನಾದರೂ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದಾರೆಯೇ? ತೊರೆ, ನದಿ-ಜಲಾಶಯಗಳ ಪ್ರವಾಹ ಉಂಟಾದರೂ ಬೇಸಿಗೆಯಲ್ಲಿ ಬಾಯಾರುವ ಕೆರೆ, ಬಾವಿ-ಬೋರ್‌ವೆಲ್ ಅಂತರ್ಜಲ ಹೆಚ್ಚಿಸುವ ಕಾರ್ಯ ಆಗಿದೆಯೇ? ಹರಿದು ಹೋಗುವ ನೀರನ್ನು ಹಿಡಿದು ಕೆರೆ-ಬಾವಿಗಳಿಗೆ ತುಂಬಿಸುವ ಯೋಜನೆಗಳು ಏನಾದವು? ಎಂಬಿತ್ಯಾದಿ ಕುರಿತು ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಉತ್ತರಗಳಿಲ್ಲ.

ಕಳೆದ ವರ್ಷ ಐಎಎಸ್‌ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿ ನಡೆಸಿದರು, ಜಿಲ್ಲೆಯಲ್ಲಿ ಇಂತಿಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು. ಅಲ್ಲೇ ಇದ್ದ ಪತ್ರಕರ್ತರೊಬ್ಬರು ʼಸರ್‌, ಪ್ರತಿವರ್ಷ ನೀರಿನ ಸಮಸ್ಯೆ ಗೋಳು ಇದ್ದೇ ಇರುತ್ತೆ. ಅದಕ್ಕೆ ಶಾಶ್ವತ ಪರಿಹಾರ ಅನ್ನೋದು ಏನಾದ್ರು ಇದೇನಾ? ಪ್ರತಿವರ್ಷ ನೀರಿನ ಸಮಸ್ಯೆ ನಿವಾರಣೆಗೆ ʼಬೋರವೆಲ್‌ ಹಾಕ್ಸೋದು, ಟ್ಯಾಂಕರ್‌ ಕಳಿಸೋದೇʼ ನೀರಿನ ಸಮಸ್ಯೆಗೆ ಪರಿಹಾರವೇ? ಜಿಲ್ಲೆಯ ಪ್ರತಿ ಊರಿನಲ್ಲಿ ಪುರಾತನ ಕೆರೆ, ಕಟ್ಟೆ, ಬಾವಿಗಳಿದ್ದವು. ಅವೆಲ್ಲ ಏನಾದವು,? ಅಲ್ಲಿರುವ ನೀರು ಸದ್ಬಳಕೆಯಾದರೆ ನೀರಿನ ಬರ ತಪ್ಪಿಸಬಹುದು ಅಲ್ವಾ? ಅಂತ ಕೊಂಚ ಸಿಟ್ಟಿನಿಂದಲೇ ಕೇಳಿದ್ದರು.

ಅದಕ್ಕೆ ಐಎಎಸ್‌ ಅಧಿಕಾರಿ ಅವರು, ʼಜಲ ಜೀವನ್‌ ಮಿಷನ್ ಯೋಜನೆʼ ಕಾಮಗಾರಿ ಪೂರ್ಣಗೊಂಡ ಊರುಗಳಲ್ಲಿ ನೀರಿನ ಸಮಸ್ಯೆ ಇಲ್ʼ ಎಂದು ಉತ್ತರ ಕೊಟ್ಟು ಉಳಿದ ಪ್ರಶ್ನೆಗಳಿಗೆ ಉತ್ತರಿಸಿದೆ ಜಾರಿಕೊಂಡರು. ಇಂತಹ ಜಟಿಲ ಸಮಸ್ಯೆಗೆ ಪರಿಹಾರ ಎಂದು ತಂದಿರುವ ʼಜೆಜೆಎಂʼನಡಿ ಕೂಡ ಹೇಳಿಕೊಳ್ಳುವಂತಹ ಕೆಲಸಗಳೇನೂ ಆಗುತ್ತಿಲ್ಲ.

ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರ ʼಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ʼ ಎಂಬ ಕೃತಿಯ ಕನ್ನಡ ಅನುವಾದಿತ ʼಬರ ಅಂದರೆ ಎಲ್ಲರಿಗೂ ಇಷ್ಟʼ ಪುಸ್ತಕದ ಶೀರ್ಷಿಕೆಯಂತೆ ಬೀದರ್‌ ಜಿಲ್ಲೆಯ ಕೆಲ ತಾಲೂಕಿನಲ್ಲಿ ಬೇಸಿಗೆ ಬಂತಂದ್ರೆ ಸಾಕು, ನೀರಿನ ಹಾಹಾಕಾರ! ಇದು ದಶಕಗಳಿಂದ ಇರುವ ಗಂಭೀರ ಸಮಸ್ಯೆ. ನೀರಿನ ʼಬರʼ ಅಂದ್ರೆ ಜನ ಸಾಮಾನ್ಯರಿಗೆ ಕಷ್ಟವಾಗಬಹುದು, ಅಧಿಕಾರಿಗಳಿಗೇನಲ್ಲ. ಜೂನ್‌ ಮಳೆ ಆಗೋವರೆಗೂ ಹೇಗಾದರೂ ಮ್ಯಾನೇಜ್‌ ಮಾಡಿದ್ರೆ ಮುಗೀತು ʼಖೇಲ್‌ ಖತಂʼ ಎಂಬುದು ಮನದಟ್ಟಾಗಿದೆ. ಹಾಗಾಗಿಯೇ ಅವರೂ, ಆದಂಗಾಗಲಿ ಮಾದಪ್ಪನ ಜಾತ್ರೆ ಎನ್ನುವಂತೆ ಬೇಕಾಬಿಟ್ಟಿ ಕೆಲಸ ಮಾಡಿಕೊಂಡು ಇರುತ್ತಾರೆ.

ಔರಾದ್‌, ಕಮಲನಗರ, ಭಾಲ್ಕಿ, ಚಿಟಗುಪ್ಪ ಸೇರಿದಂತೆ ಹಲವು ಗ್ರಾಮ-ತಾಂಡಾಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಪ್ರತಿವರ್ಷ ಅತ್ಯಧಿಕ ನೀರಿನ ಸಮಸ್ಯೆ ತಾಂಡವಾಡುವುದು ಔರಾದ್-ಕಮಲನಗರ ತಾಲೂಕಿನಲ್ಲಿ, ಮುಂದಿನ ದಿನಗಳಲ್ಲಿ 32 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ನೀರಿನ ಸಮಸ್ಯೆ ಇರುವ ಕೆಲ ಕಡೆ ಖಾಸಗಿ ಬೋರ್‌ವೆಲ್ ಬಾಡಿಗೆ, ಟ್ಯಾಂಕರ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಬೇಸಿಗೆ ಧಗೆಯಲ್ಲಿ ಜನರಿಗೆ ʼಕುಡಿಯುವ ನೀರು ಎಲ್ಲಿಂದ ತರೋದುʼ ಎಂಬ ಚಿಂತಿ ಕಾಡುತ್ತಿದ್ದರೆ, ಪಂಚಾಯತ್‌ ರಾಜ್‌ ಇಲಾಖೆಯ ಮೇಲಾಧಿಕಾರಿಗಳಿಂದ ವಾಟರ್‌ ಮ್ಯಾನ್‌ ತನಕ ಎಲ್ಲರೂ ʼನೀರಿನ ಟೆನ್ಷನ್ ಡ್ಯೂಟಿʼ ಮಾಡುವುದರಲ್ಲಿ ಬೆವರುತ್ತಾರೆ. ಬೇಸಿಗೆ ಮುಗಿಯುವ ತನಕ ಅಧಿಕಾರಿಗಳಿಗೆ ʼಸಾರ್‌ ನೀರಿನ ಸಮಸ್ಯೆ ಭಾಳ್‌ ಆಗ್ಯಾದ್, ಏನಾದ್ರು ವ್ಯವಸ್ಥೆ ಮಾಡ್ರೀʼ ಎಂಬ ಮಾತು ಕೇಳುವುದು, ಅದನ್ನು ಬಗೆಹರಿಸಲು ಹರಸಾಹಸ ಪಡುವುದು ನಿತ್ಯವೂ ಇದ್ದೇ ಇದೆ. ಅದಕ್ಕಾಗಿ ಸಹಾಯವಾಣಿ ಆರಂಭಿಸುವುದು ಈಚೆಗೆ ಫ್ಯಾಶನ್‌ ಎಂಬಂತಾಗಿದೆ.

ನೀರಿನ ಅಭಾವಕ್ಕೆ 32 ಟ್ಯಾಂಕರ್‌

ಬೀದರ್‌ ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯುವುದು, ಟ್ಯಾಂಕರ್‌ ಮುಖಾಂತರ ನೀರು ಪೂರೈಕೆಗಾಗಿ ತುರ್ತು ಕ್ರಮಕೈಗೊಂಡಿದ್ದು, ಅದಕ್ಕಾಗಿ 58.15 ಲಕ್ಷ ಅನುದಾನ ಒದಗಿಸಿದೆಯಂತೆ. ಔರಾದ್ (9), ಕಮಲನಗರ (4), ಭಾಲ್ಕಿ (5), ಹುಮನಾಬಾದ್ (6), ಚಿಟಗುಪ್ಪ (7), ಬಸವಕಲ್ಯಾಣ (1) ಸೇರಿ ಒಟ್ಟು 32 ಟ್ಯಾಂಕರ್ ಮುಖಾಂತರ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

WhatsApp Image 2026 03 23 at 4.33.26 PM
ಔರಾದ್‌ ತಾಲೂಕಿನ ಗ್ರಾಮವೊಂದರಲ್ಲಿ ನೀರಿನ ಟ್ಯಾಂಕರ್‌ ಮೂಲಕ ಜನರಿಗೆ ನೀರು ಪೂರೈಸಿಲಾಗುತ್ತಿದೆ.

ಬೇಕಿದೆ ಶಾಶ್ವತ ಪರಿಹಾರ:

ಕಳೆದ ಮಳೆಗಾಲದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ರಸ್ತೆ, ಕೆರೆ-ಕಟ್ಟೆಗಳು ಕೊಚ್ಚಿಹೋದವು, ಬೆಳೆ ಹಾನಿಯಾಗಿ ರೈತ ಕಣ್ಣೀರಿಟ್ಟಿದ್ದೂ ಆಯಿತು. ನದಿ-ಬಾವಿಗಳು ಉಕ್ಕಿ ಹರಿದು ಇಡೀ ಜಿಲ್ಲೆ ಜಲಮಯವಾಗಿತ್ತು. ಆದರೆ, ವಿಪರ್ಯಾಸವೆಂದರೆ ಇಂದು ಅದೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ‘ಬರ’ ಉಂಟಾಗಿದೆ! ಪ್ರಕೃತಿಯ ವಿಕೋಪವೋ ಅಥವಾ ಆಡಳಿತದ ವೈಫಲ್ಯವೋ ತಿಳಿಯದು. ಅತಿವೃಷ್ಟಿಯ ನಂತರವೂ ಜನರ ಬಾಯಾರಿಕೆ ಇಂಗುತ್ತಿಲ್ಲ ಎಂದರೆ ನಮ್ಮ ಜಲ ನಿರ್ವಹಣಾ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ದಶಕಗಳಿಂದಲೂ ಜಿಲ್ಲೆಯ ಹಲವು ಹಳ್ಳಿಗಳಿಗೆ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತದೆ. ಇಷ್ಟು ವರ್ಷಗಳಲ್ಲಿ ಆ ಟ್ಯಾಂಕರ್ ಮೊತ್ತವನ್ನು ಬಳಸಿಕೊಂಡು ಒಂದು ಶಾಶ್ವತವಾದ ನೀರಿನ ಮೂಲವನ್ನು ನಿರ್ಮಿಸಲು ಸಾಧ್ಯವಿರಲಿಲ್ಲವೇ? ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣದಂತಹ ದೀರ್ಘಕಾಲದ ಯೋಜನೆಗಳು ಭಾಷಣಕ್ಕಷ್ಟೇ ಸೀಮಿತವಾದವೇ? ಅತಿವೃಷ್ಟಿಯ ಕಾಲದಲ್ಲಿ ಹರಿದು ಹೋದ ನೀರನ್ನು ಹಿಡಿದಿಡುವ ಕನಿಷ್ಠ ಜ್ಞಾನವೂ ನಮ್ಮ ಯೋಜನೆಗಳ ಅನುಷ್ಠಾನದಲ್ಲಿ ಕಾಣುತ್ತಿಲ್ಲದಿರುವುದು ವಿಪರ್ಯಾಸ.

ಇದನ್ನೂ ಓದಿ: ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಬರಿದಾದ ಕೊಡ ಹಿಡಿದು ಬಿಸಿಲಿನಲ್ಲಿ ನಿಂತಿರುವ ತಾಯಿಯ ಕಣ್ಣೀರಿಗೆ ಟ್ಯಾಂಕರ್ ನೀರು ತಾತ್ಕಾಲಿಕ ಮದ್ದಾಗಬಹುದೇ ಹೊರತು ಶಾಶ್ವತ ಪರಿಹಾರವಾಗದು. ದಶಕಗಳಿಂದಲೂ ಮುಂದುವರಿಯುತ್ತಿರುವ ಈ ‘ಟ್ಯಾಂಕರ್ ಸಂಪ್ರದಾಯ’ಕ್ಕೆ ಇತಿಶ್ರೀ ಹಾಡಬೇಕೆಂದರೆ, ಸರ್ಕಾರಗಳು ಕೇವಲ ಫೈಲ್‌ಗಳನ್ನು ವಿಲೇವಾರಿ ಮಾಡುವುದನ್ನು ಬಿಟ್ಟು, ಕೆರೆಗಳ ಹೂಳು ತೆಗೆಯುವುದು, ಅಂತರ್ಜಲ ಮರುಪೂರಣ ಮತ್ತು ಸಮರ್ಪಕ ನೀರು ಹಂಚಿಕೆಯಂತಹ ಜನಪರ ಕೆಲಸಗಳಿಗೆ ಆದ್ಯತೆ ನೀಡಬೇಕಿದೆ. ಬಾಯಾರಿದ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಿದೆ. ವ್ಯವಸ್ಥೆ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಪ್ರತಿ ಬೇಸಿಗೆಯೂ ಜನಸಾಮಾನ್ಯರ ಪಾಲಿಗೆ ʼಜಲ ಗಂಡಾಂತರʼವಾಗಿಯೇ ಉಳಿಯಲಿದೆ.

ಇದು ಈ ವರ್ಷ ತಲೆದೋರಿರುವ ಸಮಸ್ಯೆಯಲ್ಲ; ಪ್ರತಿವರ್ಷದ ಪಡಿಪಾಟಲು. ಕುಡಿಯುವ ನೀರಿಗಾಗಿ ಕೊಡ ಹಿಡಿದು ಕಿಲೋಮೀಟರ್ ಗಟ್ಟಲೆ ಅಲೆಯುವುದು ಇಲ್ಲಿನ ಜನರ ಜಂಜಾಟದ ಬದುಕಿನ ಭಾಗವಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...