“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದೇ ಮನನೊಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದು, ಯಾವುದೇ ಒತ್ತಡ, ಆಸೆಆಮಿಷಗಳಿಗೆ ಮಣಿದು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿರುವ ಸ್ವತಂತ್ರ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ದಾವಣಗೆರೆಯಲ್ಲಿ ಸ್ಪಷ್ಟಪಡಿಸಿದರು.
ಮಾಧ್ಯಮವೊಂದರಲ್ಲಿ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸ್ಪರ್ಧಾಕಣದಿಂದ ಹಿಂದೆ ಸರಿದು, ಯು ಟರ್ನ್ ಹೊಡೆದಿದ್ದು ಚುನಾವಣಾ ಕಣದಿಂದ ಹೊರ ಹೋಗಲಿದ್ದಾರೆ ಎಂದು ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಅವರು “ಸುಳ್ಳು ಸುದ್ದಿ ಪ್ರಸಾರವಾಗುತ್ತಿದ್ದು, ಸ್ಪರ್ದೆಯಿಂದ ಹಿಂದೆ ಸರಿಯಲು ಹಲವು ನಾಯಕರು ಒತ್ತಾಯಿಸಲು ಹಾಗೂ ಮನವೊಲಿಸಲು ಸಂಪರ್ಕಿಸಿದ್ದು, ನಾನು ಯಾವುದೇ ಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ” ಎಂದು ತಿಳಿಸಿದರು.

“ನನ್ನನ್ನು ಮನವೊಲಿಸುವ ಬದಲು ಅಲ್ಪಸಂಖ್ಯಾತ, ಅಹಿಂದ ಸಮುದಾಯ ಮನವೊಲಿಸಿ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ. ನೂರಕ್ಕೆ ನೂರು ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ನನ್ನ ಹಿಂದೆ ಇರುವ ನಮ್ಮ ಸಮಾಜ, ಯುವಕರ ನಿರ್ಧಾರವೇ ನನ್ನ ನಿರ್ಧಾರ. ದಕ್ಷಿಣ ಕ್ಷೇತ್ರದ, ಸಮಾಜದ ಜನ ಆಕ್ರೋಶಗೊಂಡಿದ್ದು, ಮುಂಬರುವ 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ. ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಮೊದಲು ಸಮಾಜದ ಮನವೊಲಿಸಲಿ, ಆನಂತರ ನನ್ನ ಬಳಿ ಬರಲಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನಾಮಪತ್ರ ಪರಿಶೀಲನೆ ವೇಳೆ ಮೂರು ತಿರಸ್ಕೃತ; 37 ಅಭ್ಯರ್ಥಿಗಳ ನಾಮಪತ್ರ ಸಿಂಧು
ಡಾ. ಶಾಮನೂರು ಶಿವಶಂಕರಪ್ಪನವರ ಅಕಾಲಿಕ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಈ ಬಾರಿ ಅಲ್ಪಸಂಖ್ಯಾತ ವರ್ಗ ಟಿಕೆಟ್ ಬೇಡಿಕೆ ಇಟ್ಟಿದ್ದು. ಕಾಂಗ್ರೇಸ್ ನಲ್ಲಿ ಟಿಕೆಟ್ ನೀಡದೇ ಇರುವ ಹಿನ್ನೆಲೆಯಲ್ಲಿ ಬರೋಬ್ಬರಿ 22 ಮುಸ್ಲಿಂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.





