ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಾ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಜ್ಞಾನ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೂ ಮಹಿಳೆಯರನ್ನು ನೋಡುವ ದೃಷ್ಟಿಕೋನ ಇಂದಿಗೂ ಪೂರ್ಣವಾಗಿ ಪ್ರಜಾತಾಂತ್ರಿಕವಾಗಿಲ್ಲ. ಸಮಾಜದಲ್ಲಿ ಇನ್ನೂ ಹೆಣ್ಣನ್ನು ಭೋಗದ ವಸ್ತುವಿನಂತೆಯೇ ನೋಡುವ ಮೂಲಕ ಊಳಿಗಮಾನ್ಯ ಮೌಲ್ಯಗಳು ಅವಳನ್ನು ದಾಸ್ಯದಲ್ಲಿರಿಸಿವೆ ಎಂದು AIMSS (ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಸ್ಥಾನ) ಜಿಲ್ಲಾ ಅಧ್ಯಕ್ಷೆ ಗೀತಾ ಎಚ್ ಟಿ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ನಗರದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಅಶ್ಲೀಲ ಸಿನಿಮಾ ಸಾಹಿತ್ಯ, ಜಾಹೀರಾತುಗಳು, ಪೋರ್ನ್ ವೆಬ್ ಸೈಟ್ ಗಳು, ಮದ್ಯ-ಮಾದಕ ವಸ್ತುಗಳ ಹಾವಳಿಯಿಂದಾಗಿ ಸಾಮಾಜಿಕ ವಾತಾವರಣ ಕಲುಷಿತಗೊಂಡು ಮಹಿಳೆ ಜೀವ-ಜೀವನದ ಮೇಲೆ ನಿರಂತರವಾಗಿ ದಾಳಿಗಳು ಹೆಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡುಗುಳಿ ಮಾತನಾಡಿ, ರಾಜ್ಯದಲ್ಲಿ ಗಣನೀಯವಾಗಿ ಮರ್ಯಾದೆಗೇಡು ಹತ್ಯೆ, ಮಹಿಳೆಯರು-ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ, ದಾಳಿ, ಕೌಟುಂಬಿಕ ದೌರ್ಜನ್ಯದಂತಹ ಘಟನೆಗಳು ಜನತೆಯನ್ನು ಆಕ್ರೋಶಭರಿತರನ್ನಾಗಿಸಿವೆ. ಕಣ್ಣು ಬಿಡುವ ಮುನ್ನವೇ ಉಸಿರು ನಿಲ್ಲಿಸಿ ತಿಪ್ಪೆಗೆ ಎಸೆಯುವ ಸ್ತ್ರೀ ಭ್ರೂಣ ಹತ್ಯೆ ಅವ್ಯಾಹತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಭ್ರೂಣ ಲಿಂಗ ಪತ್ತೆ ನಡೆಯುತ್ತಿರುವುದು ಸಮಸ್ಯೆಯ ಆಳವನ್ನು ತೋರಿಸುತ್ತದೆ. ಇನ್ನು ಅತ್ಯಾಚಾರ ಮತ್ತು ಗುಂಪು ಅತ್ಯಾಚಾರ ಪ್ರಕರಣಗಳು 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025ರ ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲೇ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ.
ಇದನ್ನೂ ಓದಿ: ವಿಜಯಪುರ | ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸಲು ರೈತ ಸಂಘ ಒತ್ತಾಯ
ಇತ್ತೀಚಿಗೆ ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿವೆ. ಇವು ಕೇವಲ ದಾಖಲಾದ ಅಂಕಿ ಅಂಶಗಳಾದರೆ, ಕೌಟುಂಬಿಕ ಗೌರವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣಗಳಿಗಾಗಿ ದಾಖಲಾಗದೆ ಉಳಿದಿರುವ ಎಷ್ಟೋ ಪ್ರಕರಣಗಳು ಇನ್ನೂ ಇವೆ. ಇತ್ತೀಚಿಗೆ 340 ವರದಕ್ಷಣೆ ಸಾವುಗಳು ವರದಿಯಾಗಿವೆ. ಕೌಟುಂಬಿಕ ದೌರ್ಜನ್ಯದಲ್ಲಂತೂ ಕರ್ನಾಟಕ, ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಇಂತಹ ಸಮಸ್ಯೆಗಳಿಂದ ವಿಜಯಪುರ ಜಿಲ್ಲೆಯು ಕೂಡಾ ಹೊರತಾಗಿಲ್ಲ. ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಪರಿಹಾರಕ್ಕಾಗಿ ಎಲ್ಲಾ ಮಹಿಳಾ ಸಮುದಾಯದ ಧ್ವನಿಯಾಗಿ ಎಐಎಂಎಸ್ಎಸ್ ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ ಈ ಸಮಸ್ಯೆಗಳನ್ನು ಸರ್ಕಾರದ ಮುಂದಿಡುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವರಂಜಿನಿ ಹಾಗೂ ಸದಸ್ಯರಾದ ಪವಿತ್ರ ಚಾಂದ್‌ಬಿ ಇದ್ದರು.




