ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆಗಾಗಿ ಜಾರಿಗೊಳಿಸಿರುವ ‘ಕರ್ತವ್ಯ’ (KAAMS) ಆಪ್‌ನಲ್ಲಿ “2.13 ಲಕ್ಷ ಉದ್ಯೋಗಿಗಳು ನೋಂದಣಿಯಾಗಿಲ್ಲ” ಎಂಬ ಮಾಧ್ಯಮಗಳ ವರದಿಗೆ ರಾಜ್ಯ ಸರ್ಕಾರವು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ನೋಂದಣಿ ಪ್ರಕ್ರಿಯೆಯು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ಶೇಕಡಾ 70.6ರಷ್ಟು ನೌಕರರು ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ದತ್ತಾಂಶದ ಪ್ರಕಾರ, 43 ಪ್ರಮುಖ ಇಲಾಖೆಗಳು ಹಾಗೂ 137 ಸರಣಿ ಇಲಾಖೆಗಳು ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 4,78,181 ಸರ್ಕಾರಿ ನೌಕರರಿದ್ದಾರೆ. ಈ ಒಟ್ಟು ನೌಕರರ ಪೈಕಿ ಜೂನ್ 18ರ ವೇಳೆಗೆ 3,37,748 (ಶೇಕಡಾ 70.6) ನೌಕರರು ಆಪ್‌ನಲ್ಲಿ ಯಶಸ್ವಿಯಾಗಿ ತಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
ಹಳೆಯ ಅಂಕಿ-ಅಂಶಗಳಿಂದ ಉಂಟಾಗಿದ್ದ ಗೊಂದಲದ ಬಗ್ಗೆ ವಿವರಿಸಿರುವ ಸರ್ಕಾರ, ದಿಢೀರ್ ಪ್ರಗತಿಯ ವಿವರಗಳನ್ನು ನೀಡಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ 2,13,925 ನೌಕರರ ಅಪೂರ್ಣ ನೋಂದಣಿಯ ಅಂಕಿ-ಅಂಶಗಳು ಜೂನ್ 12ಕ್ಕೆ ಸಂಬಂಧಿಸಿದ ಮಾಹಿತಿಯಾಗಿತ್ತು. ಆದರೆ, ಆ ಬಳಿಕ ಕೈಗೊಂಡ ವಿಶೇಷ ನೋಂದಣಿ ಆಂದೋಲನದಿಂದಾಗಿ ಕೇವಲ 4-5 ದಿನಗಳಲ್ಲಿ ಪ್ರಸ್ತುತ ನೋಂದಣಿ ಬಾಕಿ ಇರುವವರ ಸಂಖ್ಯೆ 1,40,433ಕ್ಕೆ (ಶೇಕಡಾ 29.4) ಕುಸಿದಿದೆ. ಅಂದರೆ, ಕೇವಲ ಒಂದು ವಾರದಲ್ಲಿ ನೋಂದಣಿಯಾಗದ ನೌಕರರ ಸಂಖ್ಯೆಯಲ್ಲಿ 73,492 ನೌಕರರಷ್ಟು (ಶೇಕಡಾ 34.4) ಭಾರಿ ಇಳಿಕೆಯಾಗಿದೆ ಹಾಗೂ ನೋಂದಣಿ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಫಿಫಾ 2026: ಆಕರ್ಷಕ ಗೋಲು ಬಾರಿಸಿದರೂ ರೆಫರಿಗಳು ಅದನ್ನು ತಿರಸ್ಕರಿಸುವುದೇಕೆ?
ದೈನಂದಿನ ಹಾಜರಾತಿ ಹಾಗೂ ಆಪ್‌ನ ಸಕ್ರಿಯ ಬಳಕೆಯ ಬಗ್ಗೆಯೂ ಮಾಹಿತಿ ನೀಡಲಾಗಿದ್ದು, ನೋಂದಾಯಿತ ನೌಕರರು ಆಪ್ ಅನ್ನು ದೈನಂದಿನ ನೆಲೆಯಲ್ಲಿ ಸಕ್ರಿಯವಾಗಿ ಬಳಸುತ್ತಿದ್ದಾರೆ. ಜೂನ್ 18, 2026ರ ಬೆಳಿಗ್ಗೆ 11:00 ಗಂಟೆಯ ಒಳಗೆ ಒಟ್ಟು ನೋಂದಾಯಿತ ಬಳಕೆದಾರರಲ್ಲಿ ಸುಮಾರು ಶೇಕಡಾ 57ರಷ್ಟು, ಅಂದರೆ 1,92,605 ನೌಕರರು ಆಪ್ ಮೂಲಕವೇ ತಮ್ಮ ದೈನಂದಿನ ಹಾಜರಾತಿಯನ್ನು ಯಶಸ್ವಿಯಾಗಿ ದಾಖಲಿಸಿದ್ದಾರೆ.
ಬಾಕಿ ಉಳಿದಿರುವ ಶೇಕಡಾ 29.4ರಷ್ಟು ನೌಕರರ ನೋಂದಣಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಶೇಕಡಾ 100ರಷ್ಟು ನೋಂದಣಿ ಸಾಧಿಸಲು ಸರ್ಕಾರ ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇ-ಆಡಳಿತ ಕೇಂದ್ರದ (CeG) ವತಿಯಿಂದ ವಿಶೇಷ ನೋಂದಣಿ ಶಿಬಿರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ, ನೋಂದಣಿ ವೇಳೆ ಎದುರಾಗುವ ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ನೋಡಲ್ ಅಧಿಕಾರಿಗಳ ನೇಮಕ, ಮೀಸಲಾದ ಸಹಾಯವಾಣಿ ಮತ್ತು ಎಐ (AI) ಆಧಾರಿತ ವಾಯ್ಸ್ ಬಾಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ನಿಗದಿತ ಸಮಯದೊಳಗೆ ಶೇಕಡಾ 100ರಷ್ಟು ನೋಂದಣಿಯನ್ನು ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನವನ್ನು ನೀಡಿದ್ದಾರೆ. ‘ಕರ್ತವ್ಯ’ (KAAMS) ತಂತ್ರಾಂಶವು ಕೇವಲ ಹಾಜರಾತಿಗಷ್ಟೇ ಸೀಮಿತವಲ್ಲದೆ, ಸರ್ಕಾರಿ ಆಡಳಿತದಲ್ಲಿ ದಕ್ಷತೆ, ನೌಕರರ ಹಾಜರಾತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ರೂಪಿಸಲಾದ ಕ್ರಾಂತಿಕಾರಿ ಡಿಜಿಟಲ್ ಹೆಜ್ಜೆಯಾಗಿದೆ ಎಂದು ಸರ್ಕಾರ ತನ್ನ ಸ್ಪಷ್ಟನೆಯಲ್ಲಿ ಪುನರುಚ್ಚರಿಸಿದೆ.




