ಪ್ರತಿಕೃತಿ ಸುಟ್ಟು ’ಮಹಾಧರಣಿ’ ಸಮಾಪ್ತಿ; ಬಿಜೆಪಿ ಸೋಲಿಸಲು ನಿರ್ಧಾರ

Date:

ಬಿಜೆಪಿಯನ್ನು ಸೋಲಿಸುವ ಒಕ್ಕೊರಲ ನಿರ್ಧಾರವನ್ನು ಕೈಗೊಳ್ಳುವ ಜೊತೆಗೆ ನಡುರಸ್ತೆಯಲ್ಲಿ ಪ್ರತಿಕೃತಿ ದಹಿಸುವ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾಧರಣಿ ಸಮಾಪ್ತಿಯಾಗಿತು.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆಯಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 72 ಗಂಟೆಗಳ ಕಾಲ ನಡೆದ ದುಡಿಯುವ ಜನರ ಮಹಾ ಧರಣಿ, ರಾಜಭವನ್ ಚಲೋ ಅಂತ್ಯವಾಯಿತು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಹೋರಾಟದ ಹಾಡುಗಳನ್ನು ಹೋಡುತ್ತಾ, ಪಕ್ಕದ ಶೇಷಾದ್ರಿ ರಸ್ತೆಗೆ ಬಂದ ಹೋರಾಟಗಾರರು, “ಭ್ರಷ್ಟಾಚಾರ, ಕೋಮುವಾದ ಮೊದಲಾದ ಕೆಡುಕುಗಳನ್ನು ಪ್ರತಿನಿಧಿಸುವ ಪ್ರತಿಕೃತಿ”ಗೆ ಬೆಂಕಿ ಇಟ್ಟರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದಕ್ಕೂ ಮೊದಲು ಎರಡು ಮಹತ್ವದ ನಿರ್ಧಾರಗಳನ್ನು ಮಹಾಧರಣಿ ಕೈಗೊಂಡಿತು. “ಅಧಿಕಾರದಿಂದ ಬಿಜೆಪಿಯನ್ನು ಕಿತ್ತೊಗೆಯದೆ ಜನರಿಗೆ ಮುಕ್ತಿ ಇಲ್ಲ ಎಂಬುದು ನಿಚ್ಚಳವಾಗಿ ಗೊತ್ತಾಗಿದೆ. ಇಷ್ಟುದಿನ ಅನುಭವಿಸಿದ್ದು ಸಾಕು, ಬಿಜೆಪಿಯನ್ನು ಅಧಿಕಾರದಿಂದ ಇಳಿಸಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಇವರಿಗೆ ಮಣ್ಣುಮುಕ್ಕಿಸಲು ಈಗಿನಿಂದಲೇ ಕೆಲಸ ಶುರು ಮಾಡುತ್ತೇವೆ ಮತ್ತು ಸಮಾನ ಮನಸ್ಕರು ಚಳವಳಿಯೊಂದಿಗೆ ಮನೆಮನೆಗೆ ತಲುಪುತ್ತೇವೆ. ದಿಲ್ಲಿಗಿಂತ ಹಳ್ಳಿ ಬಲಶಾಲಿ ಎಂಬುದನ್ನು, ಬಂಡವಾಳಶಾಹಿಗಳಿಗಿಂತ ದುಡಿಯುವವರೇ ಬಲಿಷ್ಠರು ಎಂಬುದನ್ನು ತೋರಿಸುತ್ತೇವೆ” ಎಂಬ ಘೋಷಣೆಗಳನ್ನು ಮಾಡಲಾಯಿತು.

ಹೋರಾಟಗಾರ ನೂರ್‌ ಶ್ರೀಧರ್‌ ಅವರು ಮಾತನಾಡಿ, “ಆಳುವವರು ನಮ್ಮ ಕಡೆ ತಿರುಗಿ ನೋಡುವಂತೆ ಹೋರಾಟವನ್ನು ಮಾಡಿದ್ದೇವೆ. ಮುಂದೆ ಒಂದು ಹೊಸ ಇತಿಹಾಸ ಬರೆಯುವ ಮಹಾ ಹೋರಾಟಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನಮ್ಮ ಭರವಸೆಗಳನ್ನೆಲ್ಲ ಈಡೇರಿಸುತ್ತದೆ ಎಂದು ಹೇಳಲಾಗದಿದ್ದರೂ ಒಂದಿಷ್ಟನ್ನಾದರೂ ಮಾಡುತ್ತದೆ ಎಂದು ನಂಬಬಹುದು. ಕಾಂಗ್ರೆಸ್ ಸರ್ಕಾರದೊಂದಿಗೆ ಒಂದಿಷ್ಟು ಗುದ್ದಾಡಬಹುದು. ಆದರೆ ಬಿಜೆಪಿಯದ್ದು ಭಂಡ ಹಾಗೂ ದುಷ್ಟ ಸರ್ಕಾರ” ಎಂದು ಎಚ್ಚರಿಸಿದರು.

ಪ್ರೊ.ಬಾಬು ಮ್ಯಾಥ್ಯೂ ಅವರು ಮಾತನಾಡಿ, 1980ನೇ ಇಸವಿಯಲ್ಲಿ ನರಗುಂದ, ನವಲಗುಂದ ಚಳವಳಿ ರೈತರಿಂದ ನಡೆದಿತ್ತು. ಅಂದು ಕೆಂಬಾವುಟ, ಹಸಿರು ಬಾವುಟ ಜೊತೆಯಲ್ಲಿ ಸಾಗಿದ್ದವು. ಅದರ ರಾಜಕೀಯ ಪರಿಣಾಮ ಏನೆಂಬುದು ಗೊತ್ತಿದೆ. ಆ ಹೋರಾಟ ಇಂದು ನೆನಪಾಗುತ್ತಿದೆ. ರೈತ, ಕಾರ್ಮಿಕರು ಜೊತೆಗೂಡಿದ್ದರಿಂದ ರಷ್ಯಾಕ್ರಾಂತಿ ನಡೆದಿತ್ತು” ಎಂದು ವಿವರಿಸಿದರು.

ದೆಹಲಿಯಲ್ಲಿ ನಡೆದ ರೈತರ ಹೋರಾಟ ಅವಿಸ್ಮರಣೀಯ. ಅಂತಹ ಚಳವಳಿ ಇತ್ತೀಚಿನ ದಿನಗಳಲ್ಲಿ ನಡೆದಿರಲಿಲ್ಲ ಎಂದ ಅವರು, “ಅಸಂಘಟಿತ ಕಾರ್ಮಿಕರ ರಕ್ಷಣೆಗೆ ಕಾನೂನು ರೂಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.

ಜನಶಕ್ತಿ ಸಂಘಟನೆಯ ಮಲ್ಲಿಗೆ ಸಿರಿಮನೆಯವರು ಮಾತನಾಡಿ, “ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಸಂವಿಧಾನ ನಮಗೆ ಕೊಟ್ಟಿದೆ. ಸರ್ಕಾರ ಜವಾಬ್ದಾರಿ ಮರೆತಾಗ ಅದನ್ನು ಎಚ್ಚರಿಸುವುದು ಪ್ರಜೆಗಳ ಕರ್ತವ್ಯ. ಬಿಜೆಪಿ ಸರ್ಕಾರ ನಮ್ಮನ್ನು ರಕ್ಷಿಸಿದೆಯಾ? ಮಣಿಪುರದಲ್ಲಿ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಹೇಗೆ ನಡೆಯಿತು? ಕುಕಿ, ಮೈತೇಯಿ ಸಮುದಾಯಗಳ ಕಲಹಕ್ಕೆ ಬಿಜೆಪಿ ಸರ್ಕಾರ ಕಾರಣ. ಮಹಿಳೆಯರು, ದಲಿತರ ಹಕ್ಕುಗಳು ರಕ್ಷಣೆ ಆಗುತ್ತಿಲ್ಲ. ಸರ್ಕಾರವನ್ನು ಪ್ರಶ್ನಿಸಿದವರನ್ನು ಬಂಧಿಸಲಾಗುತ್ತಿದೆ. ಈ ಸರ್ಕಾರ ಯಾರನ್ನು ರಕ್ಷಿಸುತ್ತಿದೆ ಗೊತ್ತೆ? ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಮಾಡಿ, ಅವರ ಕುಟುಂಬವನ್ನು ಕೊಂದವರನ್ನು ಕೇಂದ್ರ ಸರ್ಕಾರದ ಮೌನ ಸಮ್ಮಿತಿಯೊಂದಿಗೆ ಗುಜರಾತ್‌ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸನ್ನಡತೆಯ ಕಾರಣವನ್ನು ನೀಡಲಾಗಿದೆ. ಬಿಜೆಪಿ ಸರ್ಕಾರ ಅತ್ಯಾಚಾರಿಗಳಿಗೆ ಮತ್ತು ಭ್ರಷ್ಟರಿಗೆ ರಕ್ಷಣೆ ನೀಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

“ಇಂದು ಅಭಿವೃದ್ಧಿಯಾದವರು ಯಾರು? ದೇಶವು ಕರಾಳ ಕೋವಿಡ್‌ನಲ್ಲಿ ನರಳುತ್ತಿದ್ದ ಸಮಯದಲ್ಲಿ ಬಂಡವಾಳಶಾಹಿಗಳ ಸಂಪತ್ತು ಹೆಚ್ಚಿತು” ಎಂದ ಅವರು, “ನೀವು ಸಣ್ಣದೊಂದು ತೊರೆಯನ್ನು ಅಡ್ಡಹಾಕಬಹುದು, ನದಿಗೆ ಅಣೆಕಟ್ಟು ಕಟ್ಟಿ ನಿಲ್ಲಿಸಬಹುದು. ನಾವು ಸುನಾಮಿಯಂತೆ ಎದ್ದು ನಿಂತರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಗುಡುಗಿದರು.

ರೈತ ಮುಖಂಡ ನಿರ್ವಾಣಪ್ಪ ಅವರು ಮಾತನಾಡಿ, “ಇಂದು ರೈತ, ಕಾರ್ಮಿಕರಿಗಿಂತ ಕೆಳಮಟ್ಟದಲ್ಲಿ ಆದಿವಾಸಿಗಳು, ಅಲೆಮಾರಿಗಳು ಇದ್ದಾರೆ. ಅಂಥವರಿಗೂ ಈ ಹೋರಾಟದ ಫಲ ಸಿಗಬೇಕು” ಎಂದರು.

ಮುಖಂಡರಾದ ಯೂಸುಫ್‌ ಕನ್ನಿ ಮಾತನಾಡಿ, “ಅಲ್ಪಸಂಖ್ಯಾತ ಸಂಘಟನೆಗಳು, ಅಲ್ಪಸಂಖ್ಯಾತರು ಈ ಸತ್ಯಾಗ್ರಹದಲ್ಲಿ ಇದ್ದೇವೆ. ಮುಂದೆಯೂ ನಾವು ಒಟ್ಟಾಗಿ ಹೋರಾಡೋಣ. ನಾವೆಲ್ಲ 85 ಪರ್ಸೆಂಟ್‌ ಇದ್ದೇವೆ. ಆದರೆ ನಮ್ಮ ಸ್ಥಿತಿ ಏನಾಗಿದೆ? ಎಜುಕೇಷನ್ ಸಿಸ್ಟಮ್ ಏನಾಗಿದೆ? ಹೀಗಾಗಿ ನಾವು ಒಂದಾಗಿ, ಒಟ್ಟಾಗಿ ಹೋರಾಡಬೇಕು. ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು” ಎಂದು ತಿಳಿಸಿದರು.

ಹೋರಾಟಗಾರ್ತಿ ಮಾಳಮ್ಮ ಮಾತನಾಡಿ, “ಮಣಿಪುರ ಹೊತ್ತಿ ಉರಿಯುವ ಸಂದರ್ಭದಲ್ಲಿ ಎರಡು ಹೆಣ್ಣುಮಕ್ಕಳನ್ನು ಬೆತ್ತಲು ಮಾಡಿ ಅತ್ಯಾಚಾರ ಎಸಗಿದ್ದನ್ನು ನೋಡಿದ್ದೇವೆ. ಯಾವುದೇ ಕಾರಣಕ್ಕೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು” ಎಂದು ಹೇಳಿದರು.

ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುತ್ತಿಗೆದಾರರಿಂದ ಐದು ಪೈಸೆ ಲಂಚ ಪಡೆದಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ: ಸಿಎಂ

ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್...

ಕಡಬ | ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ; ಕಿಡಗೇಡಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಮುಸುಕುದಾರಿ ಯುವಕನೊಬ್ಬ...

ನಕಲಿ ಎಫ್‌ಎಸ್‌ಎಲ್ ವರದಿ: ಯಾರು ಈ ಫಣೀಂದ್ರ? ಆತನ ಹಿನ್ನೆಲೆಯೇನು?

ವಿಧಾನಸೌಧದ ಆವರಣದಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಎಂದೇ ಕೂಗಲಾಗಿತ್ತು ಎಂದು ಬಿಂಬಿಸಲು ಬಲಪಂಥೀಯ...

ಖಾಸಗಿ ಸಂಸ್ಥೆ ನೀಡಿರುವ ಎಫ್​ಎಸ್​ಎಲ್ ವರದಿ ಗಣನೆಗೆ ತೆಗೆದುಕೊಳ್ಳಲ್ಲ: ಸಚಿವ ಪರಮೇಶ್ವರ್

ಖಾಸಗಿ ಸಂಸ್ಥೆಯವರು ನೀಡಿರುವ ಎಫ್​ಎಸ್​ಎಲ್ ವರದಿಯನ್ನು ಗಣನೆಗೆ ತೆಗೆದುಕೊಳ್ಳಲ್ಲ ಎಂದು ಗೃಹ...