ಇತ್ತೀಚಿನ ವರ್ಷಗಳಲ್ಲಿ, ಶಾಲಾ ಮಟ್ಟದಲ್ಲಿ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವುದಿರಲಿ, ಕನಿಷ್ಠ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಜೊತೆಗೆ, ಕನ್ನಡವನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದ ಸಾಧನೆ ಕುಸಿಯುತ್ತಿರುವುದು ಕಂಡುಬರುತ್ತಿದೆ. ಇವೆಲ್ಲವುದರ ನಡುವೆ ಕನ್ನಡ ನಾಡಿನ ಮಕ್ಕಳು ಕನ್ನಡದಲ್ಲೇಕೆ ನಪಾಸಾಗುತ್ತಾರೆ ಎಂಬ ಬಗ್ಗೆ ಶಿಕ್ಷಣ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿ ಸಲ್ಲಿಸಿದೆ.
2016ರಿಂದ 2025 ರ ಅವಧಿಯಲ್ಲಿ ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳ ಉತ್ತೀರ್ಣತೆ ಮತ್ತು ಅನುತ್ತೀರ್ಣತೆಯ ಪ್ರಮಾಣವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪಟ್ಟಿಗಳಿಂದ ಸಂಗ್ರಹಿಸಲಾದ ದ್ವಿತೀಯಕ ದತ್ತಾಂಶವನ್ನು (secondary data) ಆಧರಿಸಿ ವಿಶ್ಲೇಷಿಸಿ ಈ ವರದಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿದೆ.
ಇದನ್ನು ಓದಿದ್ದೀರಾ? SSLC Result | ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳೇನು?
ವರದಿಯನ್ನು ಸಿದ್ಧಪಡಿಸಿದ ಶಿಕ್ಷಣತಜ್ಞರುಗಳು ಯಾರು?
- ಪ್ರೊ. (ಡಾ). ನಿರಂಜನಾರಾಧ್ಯ .ವಿ.ಪಿ, ಪ್ರಧಾನ ಸಂಶೋಧಕರು ಮತ್ತು ಮಾರ್ಗದರ್ಶಕರು, ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.
- ಪೂರ್ಣಿಮಾ ಎಸ್. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಮಾಕಳಿ, ಬೆಂಗಳೂರು ಉತ್ತರ.
- ಡಾ. ಗಜಾನಂದ ಬಸಪ್ಪ ಸೊಗಲನ್ನವರ, ಕನ್ನಡ ಅಧ್ಯಾಪಕರು, ಎಸ್.ವಿ.ಕೆ. ಸರ್ಕಾರಿ ಪ್ರೌಢ ಶಾಲೆ, ಕಾದರವಳ್ಳಿ, ಕಿತ್ತೂರು ತಾಲ್ಲೂಕು, ಬೆಳಗಾವಿ ಜಿಲ್ಲೆ.
- ಶಿವಾನಂದ ಗುಂಡಾಳಿ , ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಕೋಚರಿ, ಹುಕ್ಕೇರಿ ತಾಲ್ಲೂಕು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ.
- ನಾಗಲಕ್ಷ್ಮಿ ಎಸ್. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಹೊಸಗುಡ್ಡದಹಳ್ಳಿ, ಬೆಂಗಳೂರು ದಕ್ಷಿಣ.
- ಆಶಾ ಕೆ. ಸಿ. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ದೇವನಹಳ್ಳಿ.
- ನಿರಂಜನ ಜಿ. ಗುಡಿ, ಕನ್ನಡ ಅಧ್ಯಾಪಕರು,ಜನತಾ ಬಾಲಿಕೆಯರ ಪ್ರೌಢಶಾಲೆ, ಹಾನಗಲ್ಲ, ಹಾವೇರಿ ಜಿಲ್ಲೆ.
8.ಬಸವರಾಜ ಎಚ್. ಎಸ್. ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಯಂಟಗಾನಹಳ್ಳಿ, ನೆಲಮಂಗಲ ತಾ. - ಮಾಲತಿ ವಕ್ವಾಡಿ ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢ ಶಾಲೆ, ಮಲ್ಪೆ, ಉಡುಪಿ ಜಿಲ್ಲೆ.
ವಿದ್ಯಾರ್ಥಿಗಳು ಕನ್ನಡದಲ್ಲಿ ನಪಾಸಾಗಲು ಪ್ರಮುಖ ಕಾರಣಗಳೇನು?
- ಶಿಕ್ಷಣದಲ್ಲಿ ಏಕರೂಪತೆ ಇಲ್ಲದಿರುವುದು: ಐ.ಬಿ., ಸಿ.ಬಿ.ಎಸ್.ಇ., ಐ.ಸಿ.ಎಸ್.ಇ., ರಾಜ್ಯ ಪಠ್ಯಕ್ರಮ ಯಾವುದೇ ಇರಲಿ ಕೇಂದ್ರೀಯ, ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಯಾವುದೇ ಆಗಿರಲಿ, ಒಂದು ರಾಜ್ಯ ಒಂದು ಶಿಕ್ಷಣಕ್ರಮ ಜಾರಿಯಾಗಬೇಕು. ವಿದ್ಯಾರ್ಥಿ ಯಾವುದೇ ಶಾಲೆಯಲ್ಲಿ ಕಲಿಯಲಿ, ಕಡ್ಡಾಯ ಶಿಕ್ಷಣದ ಅವಧಿಯಲ್ಲಿ ಒಂದೇ ರೀತಿಯ ಶಿಕ್ಷಣ ನೀಡಿದಾಗ ಶಿಕ್ಷಣದಲ್ಲಿ ಅನಾರೋಗ್ಯಕರ ಸ್ಪರ್ಧೆ ತಪ್ಪುತ್ತದೆ. ಸಮಾನ ಶಾಲಾ ಶಿಕ್ಷಣ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು. ಶಿಕ್ಷಣದ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು.
- ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯವಾಗದಿರುವುದು: ನಮ್ಮ ರಾಜ್ಯ ಕರ್ನಾಟಕ ‘ಕನ್ನಡ’ ರಾಜ್ಯಭಾಷೆ. ಶಿಕ್ಷಣದ ವಿವಿಧ ಆಯಾಮಗಳಲ್ಲಿ ಅಂಗನವಾಡಿ, ಪೂರ್ವಪ್ರಾಥಮಿಕ ಹಂತದಿಂದ ಆರಂಭಿಸಿ ಪದವಿ, ವೃತ್ತಿಪರ ಕೋರ್ಸ್ ಯಾವುದೇ ಇರಲಿ, ಕನ್ನಡ, ಇಂಗ್ಲಿಷ್ ಮಾಧ್ಯಮ ಯಾವುದೇ ಆಗಿರಲಿ ಭಾಷೆಯಾಗಿ ರಾಜ್ಯದಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಬೇಕು.
- ಪ್ರಾಥಮಿಕ ಹಂತದಲ್ಲಿ ಕಲಿಕಾ ಖಾತ್ರಿ ಕಡ್ಡಾಯ ಇಲ್ಲದಿರುವುದು: ಶಾಲೆಗೆ ದಾಖಲಾದ ಎಲ್ಲಾ ಮಕ್ಕಳು ಪ್ರತಿ ತರಗತಿ ಹಂತದ ಭಾಷಾ ಸಾಮರ್ಥ್ಯಗಳನ್ನು ಸಾಧಿಸಬೇಕು. ಕಲಿಕೆಯ ಪ್ರತಿ ಹಂತದಲ್ಲೂ ಕಲಿಕಾಂಶ ಸಾಧಿತವಾದ ಮೇಲಷ್ಟೆ ಮುಂದಿನ ಕಲಿಕಾಂಶಕ್ಕೆ ಸಾಗಬೇಕು. ಅದಕ್ಕೆ ಪೂರಕವಾದ ಅವಕಾಶ ಪ್ರೋತ್ಸಾಹಗಳನ್ನು ಒದಗಿಸಬೇಕು.
- ಕನ್ನಡದ ಬಗ್ಗೆ ತಾತ್ಸಾರ ಧೋರಣೆ ಕಡಿಮೆ ಮಾಡಲು ಉತ್ತೇಜಕಗಳು ಇಲ್ಲದಿರುವುದು: ಕನ್ನಡ ವಿಷಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಯ್ಕೆಯಲ್ಲಿ ಪ್ರಾಧಾನ್ಯತೆ, ಕರ್ನಾಟಕ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ಮೊದಲಾದ ಉತ್ತೇಜಕಗಳನ್ನು ನೀಡಿದಾಗ ಕನ್ನಡ ವಿಷಯದ ಬಗೆಗಿನ ಆಸಕ್ತಿ ಸ್ವಾಭಾವಿಕವಾಗಿ ಹೆಚ್ಚಾಗಿ ಉತ್ತೀರ್ಣತೆಯ ಪ್ರಮಾಣವು ಹೆಚ್ಚುತ್ತದೆ.
- ಪಠ್ಯಪುಸ್ತಕ ರಚನೆಯಲ್ಲಿ ಭಾಷಾ ಕಲಿಕೆಗೆ ಆದ್ಯತೆ ಇಲ್ಲದಿರುವುದು: ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಭಾಷಾ ಸಾಮರ್ಥ್ಯ ಬೆಳೆವಣಿಗೆಗೆ ಹೆಚ್ಚು ಒತ್ತು ನೀಡುವಂತಿರಬೇಕು. ಮಕ್ಕಳ ಸ್ವಯಂ ಕಲಿಕೆಗೆ ಅವರಲ್ಲಿನ ಭಾಷಾ ಕೌಶಲಗಳಿಗೆ ಪೂರಕವಾದ ಚಟುವಟಿಕೆಗಳಿರಬೇಕು. ಉದಾಹರಣೆಗೆ ಸರಳ ಕಥೆ, ಕವನ, ಸಂಭಾಷಣೆ, ಬರೆಹ, ವಾಚನ ಮತ್ತು ಸ್ವಯಂ ಅಭಿವ್ಯಕ್ತಿಗೆ ಪಠ್ಯದಲ್ಲೇ ಅವಕಾಶ ಕಲ್ಪಿಸಬೇಕು. ಮೌಲ್ಯಮಾಪನದಲ್ಲಿ ಭಾಷಾ ಕಲಿಕೆಯ ಸಾಮರ್ಥ್ಯಗಳಿಗೆ ಆದ್ಯತೆ ನೀಡಬೇಕೆ ಹೊರತು ವಿಷಯಕ್ಕಲ್ಲ. ಪ್ರಾಥಮಿಕ ಹಂತದಿಂದಲೇ ಇಂತಹ ಅವಕಾಶಗಳು ದೊರೆತಾಗ ಮಕ್ಕಳು ಕನ್ನಡದಲ್ಲಿ ನಪಾಸಾಗಲು ಸಾಧ್ಯವಿಲ್ಲ.
- ಭಾಷಾ ಕಲಿಕೆಗೆ ಪೂರಕವಾಗಿಲ್ಲದ ಕನ್ನಡ ಭಾಷಾ ಪಠ್ಯಪುಸ್ತಕಗಳು: ಪಠ್ಯಪುಸ್ತಕದಲ್ಲಿ ಸರಳ ಕಥೆ, ಕವನ, ಚಟುವಟಿಕೆ, ಸಂಭಾಷಣೆ ಮೊದಲಾದ ಭಾಷಾ ಚಟುವಟಿಕೆಗಳಿಗೆ ಅವಕಾಶ ಇರಬೇಕು. ಚಿಕ್ಕಚಿಕ್ಕ ಕಥೆ, ಕವನ, ಚಿತ್ರಗಳನ್ನು ಒಳಗೊಂಡಿರಬೇಕು. ಪಠ್ಯಪುಸ್ತಕವು ವಿಷಯ ತುರುಕಿಸುವ ಸಾಧನವಾಗಿರದೆ ಮಕ್ಕಳಲ್ಲಿ ಭಾಷಾ ಕೌಶಲ ಬೆಳೆಸಲು ಪೂರಕವಾಗಿರಬೇಕು. ಚಿತ್ರಗಳು ಹೆಚ್ಚು ಆಕರ್ಷಕವಾಗಿರಬೇಕು. ಉದಾಹರಣೆಗೆ ನೆರೆ ರಾಜ್ಯಗಳ ಪಠ್ಯಪುಸ್ತಕಗಳು ಚಿತ್ರ ಸಹಿತ ವಾಕ್ಯ, ಸಣ್ಣಕಥೆ, ಕವನಗಳ ಮೂಲಕ ಮಕ್ಕಳ ಮನ ಸೆಳೆಯುತ್ತವೆ. ತರಗತಿ ಕೋಣೆಯಲ್ಲಿ ಆಕರ್ಷಕ ಕಲಿಕಾ ಸಾಮಗ್ರಿಗಳು ಲಭ್ಯ ಇರಬೇಕು. ಶಾಲೆಯಲ್ಲಿ ಪ್ರತಿ ವರ್ಷ ತರಗತಿವಾರು ಮಕ್ಕಳ ಹಸ್ತಪತ್ರಿಕೆ ಮಾಡಬೇಕು. ಅದರಲ್ಲಿ ಅವರ ಸ್ವಂತ ರಚನೆಯ ಕವನ, ಲೇಖನ, ಕಥೆ, ಚಿತ್ರ, ಅನುಭವಗಳನ್ನು ಒಳಗೊಂಡ ಬರೆಹಗಳು ಇರಬೇಕು. ಇದಕ್ಕೆ ಶಿಕ್ಷಕರ ಕ್ರಿಯಾಶೀಲತೆ ಮತ್ತು ಪ್ರೋತ್ಸಾಹ ಮುಖ್ಯ. ನಿರುತ್ಸಾಹಗೊಳಿಸುವ ಕೆಲಸ ಆಗಬಾರದು.
- ಕನ್ನಡ ಭಾಷೆಯ ಕಲಿಕೆಗೆ ಆದ್ಯತೆ ನೀಡದಿರುವುದು: ಕನ್ನಡದ ಬಗ್ಗೆ ಒಲವು ಮೂಡಿಸುವ ಕಾರ್ಯವಾಗಬೇಕು. ವೃತ್ತಿಪರ ಅರ್ಹತೆ ಜೊತೆಗೆ ಕನ್ನಡ ಕಲಿಕೆಗೆ ನಿಗದಿತ ಅಂಕಗಳನ್ನು ಮೀಸಲಿರಿಸಬೇಕು. ಕನ್ನಡಕ್ಕೆ ಕೃಪಾಂಕ ನೀಡಬೇಕು. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಕನ್ನಡದಲ್ಲಿ ವಿಶೇಷ ಸಾಧನೆ ಗೈದವರಿಗೆ ಪುರಸ್ಕಾರ, ಉದ್ಯೋಗದಲ್ಲಿ ಪ್ರಥಮ ಆದ್ಯತೆ ಒದಗಿಸಿದಾಗ ಸಹಜವಾಗಿ ಭಾಷೆಯ ಬಗ್ಗೆ ಒಲವು ಮೂಡುವುದರಿಂದ ಕನ್ನಡದಲ್ಲಿ ಅನುತ್ತೀರ್ಣತೆ ಕಡಿಮೆ ಆಗುವುದು.
- ಪ್ರಾಥಮಿಕ ಹಂತದಲ್ಲಿ ಭಾಷಾ ಕೌಶಲಗಳಿಗೆ ಹೆಚ್ಚಿನ ಒತ್ತು ಕೊಡದಿರುವುದು: ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳು ಬುನಾದಿ ಭಾಷಾ ಕೌಶಲಗಳನ್ನು (ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು) ಗಳಿಸುವಂತೆ ಮಾಡುವುದು. ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕನ್ನಡ ಭಾಷಾ ಕಲಿಕೆ ಸಮರ್ಪಕವಾಗಿ ಆಗಿದೆ ಎನ್ನುವುದನ್ನು ಇಲಾಖೆ ದೃಢಪಡಿಸಿಕೊಳ್ಳುವುದು. ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸುವುದು. ಒಂದರಿಂದ ನಾಲ್ಕನೇ ತರಗತಿಯ ಒಳಗೆ ಮಗು ಮೂಲಭೂತ ಭಾಷಾ ಕೌಶಲಗಳನ್ನು ಸಾಧಿಸುವಂತೆ ನೋಡಿಕೊಳ್ಳಬೇಕು. ಗುಣಿತಾಕ್ಷರ, ಒತ್ತಕ್ಷರಸಹಿತ ತಪ್ಪಿಲ್ಲದೇ ಓದುವುದು, ಬರೆಯುವುದು, ವಾಕ್ಯರಚಿಸುವುದು ಮೊದಲಾದ ಭಾಷಾ ಕೌಶಲಗಳನ್ನು ಕಡ್ಡಾಯವಾಗಿ ಸಾಧಿಸುವಂತೆ ಮಾಡಬೇಕು. ಭಾಷಾ ಕಲಿಕೆಗೆ ಅಗತ್ಯವಾದ ಕಲಿಕಾ ಪರಿಕರಗಳನ್ನು ತರಗತಿವಾರು ಒದಗಿಸುವುದು. ವರ್ಣಮಾಲೆಯನ್ನು ಗುಣಿತಾಕ್ಷರ ಸಂಯುಕ್ತಾಕ್ಷರಗಳೊಂದಿಗೆ ವಿಭಾಗಾನುಸಾರ ಕಲಿಸಿ ದೃಢಪಡಿಸುವುದು. ಎಲ್ಲಾ ವಿದ್ಯಾರ್ಥಿಗಳು ನಿರ್ದಿಷ್ಟ ಸಾಮರ್ಥ್ಯ ಗಳಿಸಿರುವುದನ್ನು ಖಚಿತಪಡಿಸಿಕೊಳ್ಳುವುದು.
- ಭಾಷಾ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲದಿರುವುದು: ಪ್ರಾಥಮಿಕ ಹಂತದಿಂದಲೂ ಭಾಷಾ ಕಲಿಕೆಗೆ ಪ್ರತ್ಯೇಕವಾದ ಭಾಷಾ ಕೋಣೆಯನ್ನು ಸೃಜಿಸಿ ಭಾಷಾ ಕೌಶಲಗಳನ್ನು ಬೆಳೆಸುವುದು. ಕಂಠಪಾಠ ಪದ್ಧತಿಯನ್ನು ತಪ್ಪಿಸುವುದು. ಭಾಷಾ ಕಲಿಕೆಗೆ ಆಸಕ್ತಿದಾಯಕ ಚಟುವಟಿಕೆಗಳನ್ನು ರೂಪಿಸುವುದು. ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು. ಪ್ರಶ್ನೆ ಪತ್ರಿಕೆಗಳು ಭಾಷಾ ಕೌಶಲ ಪರೀಕ್ಷಿಸಬೇಕೇ ಹೊರತು, ವಿಷಯವನ್ನಲ್ಲ (Content). ಅಂಕಗಳಿಗಿಂತ ಭಾಷಾ ಸಾಮರ್ಥ್ಯಕ್ಕೆ ಒತ್ತು ನೀಡುವುದು. ವ್ಯಾಕರಣ ಕಲಿಕಾ ದೋಷಗಳನ್ನು ಸುಧಾರಿಸುವುದು.
- ಪ್ರೌಢಶಾಲಾ ಹಂತದಲ್ಲಿ ಭಾಷೆಯನ್ನು ಸದೃಢಗೊಳಿಸದಿರುವುದು: ಪ್ರೌಢಶಾಲಾ ಹಂತದಲ್ಲಿ 8ನೆಯ ತರಗತಿಯಿಂದಲೇ ವಿದ್ಯಾರ್ಥಿ ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಪಡೆಯುವಂತೆ ಹಂತ ಹಂತವಾಗಿ ಕ್ರಮ ಕೈಗೊಳ್ಳುವುದು. ಪ್ರಬಂಧ, ಭಾಷಣ, ಗಾದೆ ವಿಸ್ತರಣೆ ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳ ಅಭಿವ್ಯಕ್ತಿಗೆ ಹೆಚ್ಚು ಆದ್ಯತೆ ನೀಡುವಂತಿರಬೇಕೆ ಹೊರತು ಗೂಗಲ್ ಪ್ರಬಂಧಕ್ಕೆ ಅಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ಸೃಜನಶೀಲತೆಗೆ ಅವಕಾಶವಿರಬೇಕು. ಮಕ್ಕಳಿಗೆ ಪರಿಚಿತವಾಗಿರುವ ಸಾಮರ್ಥ್ಯಕ್ಕೆ ನಿಲುಕುವ ವಿಷಯಗಳನ್ನು ನೀಡಬೇಕು. ಕನ್ನಡ ಕಲಿಕೆ ಪ್ಯಾಕೆಜ್ ಆಗಬಾರದು. ಕನ್ನಡ ಕಲಿಕೆ ಎಂದರೆ, ನಿರ್ದಿಷ್ಟ ಪ್ರಶ್ನೆಗಳನ್ನು ಬಾಯಿಪಾಠ ಮಾಡುವುದಲ್ಲ ಎಂಬುದನ್ನು ಉನ್ನತ ಹಂತದಿಂದ ಕೆಳಹಂತದವರೆಗೂ ಅರಿವು ಮೂಡಿಸುವುದು. ಹೆಚ್ಚುಹೆಚ್ಚು ಮಕ್ಕಳು ಸ್ವತಃ ಭಾಷಾ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಅನುಕೂಲಕರ ಭಾಷಾ ಪರಿಸರವನ್ನು ಸೃಷ್ಟಿಸುವುದು.
- ಪಠ್ಯಪುಸ್ತಕ ರಚನೆಯಲ್ಲಿ ತರಗತಿಯ ಶಿಕ್ಷಕರಿಗೆ ಹೆಚ್ಚಿನ ಅವಕಾಶಗಳಿಲ್ಲದಿರುವುದು: ಪಠ್ಯಪುಸ್ತಕವು ಭಾಷಾ ತಜ್ಞರಿಂದ ಹಾಗೂ ಭಾಷಾ ಶಿಕ್ಷಕರಿಂದ ತಯಾರಾಗಬೇಕು. ಸರ್ಕಾರ ಬದಲಾದಂತೆ ಪಠ್ಯಪುಸ್ತಕಗಳು ಬದಲಾಗಬಾರದು. ಪ್ರತಿ ಹಂತದಲ್ಲಿ ಅಗತ್ಯ ಸಂಖ್ಯೆಯ ಭಾಷಾ ಶಿಕ್ಷಕರ ನೇಮಕ ಮಾಡುವುದು. ಭಾಷಾ ಕಲಿಕೆಗೆ ನಿಗದಿಪಡಿಸಿದ ಅವಧಿಗಳನ್ನು ಇತರ ವಿಷಯಕ್ಕೆ ಹಂಚಿಕೆ ಮಾಡದೆ ಭಾಷಾ ಕಲಿಕೆಗೆ ಕಡ್ಡಾಯಗೊಳಿಸಿ ಆ ಅವಧಿಯಲ್ಲಿ ಭಾಷಾ ಶಿಕ್ಷಕರಿಂದ ಕಲಿಕೆ ಆಗುವಂತೆ ನೋಡಿಕೊಳ್ಳುವುದು.
- ಕನ್ನಡ ಭಾಷೆಯ ಬಗ್ಗೆ ತಾತ್ಸಾರ ಮನೋಭಾವ: ಅಧಿಕಾರಿ ವರ್ಗದವರಿಂದ ಹಿಡಿದು ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗದವರಿಗೂ ಸೇರಿದಂತೆ ಪ್ರತಿಯೊಬ್ಬರಿಗೂ ಇರುವ ಕನ್ನಡದ ಬಗೆಗಿನ ತಾತ್ಸಾರವನ್ನು ಹೋಗಲಾಡಿಸಿ ಭಾಷಾ ಕಲಿಕೆಯ ಔಚಿತ್ಯವನ್ನು ಪ್ರಸ್ತುತಪಡಿಸುವುದು, ಹೆತ್ತವರು, ವಿದ್ಯಾರ್ಥಿಗಳ ಭಾಷಾ ಕಲಿಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡುವುದು. ಪೋಷಕರ ಸಭೆಗಳಲ್ಲಿ ಭಾಷಾ ಕಲಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ.
- ಆರಂಭಿಕ ತರಗತಿಗಳಲ್ಲಿ ಕನ್ನಡಾಸಕ್ತಿ ಮೂಡಿಸದಿರುವುದು: ಕನ್ನಡ ಓದುವ ಪ್ರೀತಿಯನ್ನು ಬೆಳೆಸಬೇಕು. ತರಗತಿಯಲ್ಲಿ ಓದುವ ಸ್ಥಳ ಸರಿಯಾಗಿ ಅನುಷ್ಠಾನವಾಗಬೇಕು. ಅಲ್ಲಿ ಬಣ್ಣಬಣ್ಣದ ಚಿತ್ರ-ಪದಗಳು, ವಾಕ್ಯಗಳು ಇರುವ ಕಾರ್ಡ್, ಪುಸ್ತಕಗಳು, ಚಿತ್ರಕಥೆಗಳು ಬಹಳಷ್ಟು ಇರಬೇಕು. ಮಕ್ಕಳಿಗೆ ಓದಲು, ಬರೆಯಲು, ಅಭಿವ್ಯಕ್ತಿಗೆ ಶಿಕ್ಷಕರು ಪ್ರೋತ್ಸಾಹ ಕೊಡಬೇಕು. ಪ್ರತಿ ತರಗತಿಯಲ್ಲಿ ಭಿತ್ತಿಪತ್ರಿಕೆ (ಮಕ್ಕಳ ಹಸ್ತಪತ್ರಿಕೆ) ಇರಬೇಕು. ಶಿಕ್ಷಕರ ತೊಡಗಿಸಿಕೊಳ್ಳುವಿಕೆ ಬೇಕು. ಮಕ್ಕಳ ರಚನೆಗಳನ್ನು ಓದಿ ತಿದ್ದಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಐದನೆಯ ತರಗತಿ ತನಕ ಇದೆಲ್ಲಾ ಆದರೆ ಅವರು ಭಾಷೆಯಲ್ಲಿ ಹಿಡಿತ ಸಾಧಿಸುತ್ತಾರೆ.
- ಪ್ರಾಂತೀಯ ಭಾಷೆಗಳ ಭಿನ್ನತೆಯ ಸಮಸ್ಯೆ: ಪ್ರಾಂತೀಯ ಭಾಷೆಗಳ ಭಿನ್ನತೆಯನ್ನು ಆಕರ್ಷಕವಾಗಿ ಅಧ್ಯಾಪಕರು ಪ್ರಸ್ತುತಪಡಿಸಬೇಕು.
- ಭಾಷಾ ಚಟುವಟಿಕೆಗೆ ಆದ್ಯತೆ ಇಲ್ಲದಿರುವುದು: ಶಾಲೆಯಲ್ಲಿ ಹೆಚ್ಚುಹೆಚ್ಚು ಭಾಷಾ ಚಟುವಟಿಕೆಗಳನ್ನು ನಡೆಸಬೇಕು. ಕಡ್ಡಾಯ ಓದಿಗೆ ಪ್ರತಿದಿನ ಅರ್ಧ ಗಂಟೆಯನ್ನಾದರೂ ಮೀಸಲಿಡಬೇಕು. ಅದು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಕಥಾ ಪುಸ್ತಕ ಯಾವುದೇ ಆಗಿರಬಹುದು. ಆಲಿಸಲು ಮತ್ತು ಮಾತನಾಡಲು ಹೆಚ್ಚಿನ ಅವಕಾಶವನ್ನು ವೇಳಾಪಟ್ಟಿಯಲ್ಲಿ ಒದಗಿಸುವುದು. ವಾಚನಾಲಯ, ಮೌಲ್ಯಶಿಕ್ಷಣ, ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯದ ಅವಧಿಗಳನ್ನು ವಿಷಯ ಬೋಧನೆಗೆ ಬಳಸಿಕೊಳ್ಳದೆ ಕಡ್ಡಾಯವಾಗಿ ಅದೇ ಚಟುವಟಿಕೆಯನ್ನು ನಡೆಸುವಂತೆ ಮಾಡುವುದು.
ಒಟ್ಟಾರೆ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿದರೆ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗಲು ಸಾಧ್ಯವೇ ಇಲ್ಲ.
ಪ್ರಮುಖ ಶಿಫಾರಸುಗಳು
- ಪೋಷಕರಲ್ಲಿ ಮತ್ತು ಮಕ್ಕಳಲ್ಲಿ ಆಂಗ್ಲ ಭಾಷೆ ಕಲಿಯುವುದು ಶ್ರೇಷ್ಠ, ಕನ್ನಡ ಭಾಷೆ ಕಲಿಯುವುದು ಕನಿಷ್ಠ ಎಂಬ ಮನೋಭಾವ ಹೆಚ್ಚಾಗಿದೆ. ಮಿಥ್ಯೆಯಿಂದ ಕೂಡಿದ ಮನೋಧೋರಣೆಯನ್ನು ತೊಡೆದುಹಾಕುವಲ್ಲಿ ಸರ್ಕಾರಗಳು ಕ್ರಮಕೈಗೊಳ್ಳಬೇಕು. ಸಮಾನ ಶಾಲಾ ಶಿಕ್ಷಣ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು.
- ಸಂಪನ್ಮೂಲಗಳ ಕೊರತೆ ಇರಬಾರದು: ಇಂದು ಭಾಷೆಯನ್ನು ಭಾಷೆಯಾಗಿ ಆಸ್ವಾದಿಸುತ್ತಿಲ್ಲ. ಕಲಿಕೆ ಎಂಬುದು ಅಂಕಗಳಿಗೆ ಸೀಮಿತವಾಗಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಕಲಿಕೆಯನ್ನು ಮುಂದುವರೆಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆ ಇರುವುದರಿಂದ ಪ್ರಾರಂಭದಿಂದಲೇ ಕನ್ನಡದ ಬಗ್ಗೆ ನಿರಾಸಕ್ತಿ ಮೂಡುತ್ತಿದೆ.
- ಪ್ರಾಥಮಿಕ ಹಂತದಲ್ಲಿ ಬೆಳೆಯಬೇಕಾದಂತಹ ಕನಿಷ್ಠ ಭಾಷಾ ಸಾಮರ್ಥ್ಯಗಳು ಕೂಡ ಸಾಧಿತವಾಗುತ್ತಿಲ್ಲ. ಭಾಷೆಯನ್ನು ಕಲಿಸುವ ವಿಧಿವಿಧಾನಗಳಲ್ಲಿ ಮತ್ತು ನೀತಿನಿರೂಪಣೆಗಳಲ್ಲಿ ಮೇಲಿಂದ ಮೇಲೆ ಬದಲಾವಣೆಗಳಾಗುತ್ತಿದ್ದು ಒಂದು ಪ್ರಮಾಣೀಕರಿಸಿದ ವಿಧಾನವನ್ನು ಕೂಡಲೇ ಕಂಡುಕೊಳ್ಳಬೇಕಾಗಿದೆ.
- ಅಂಕಗಳೇ ಪ್ರಧಾನವಾಗಿರಬಾರದು: ಭಾಷಾ ಕಲಿಕೆಗಿಂತ ಅಂಕಗಳೇ ಮುಖ್ಯವಾಗಿವೆ. ವಿಪರೀತ ಆಂಗ್ಲ ವ್ಯಾಮೋಹ, ಕನ್ನಡದ ಬಗೆಗಿನ ತಾತ್ಸಾರ, ಕನ್ನಡದ ಅಂಕಗಳನ್ನು ವೃತ್ತಿಪರ ಆಯ್ಕೆಯಲ್ಲಿ ಪರಿಗಣಿಸದೇ ಇರುವುದು ಕೂಡ ಕನ್ನಡದ ಬಗೆಗಿನ ಒಲವು ಕಡಿಮೆ ಆಗಲು ಕಾರಣವಾಗಿದೆ. ಇಲಾಖೆಗಳ ಕನ್ನಡದ ಬಗೆಗಿನ ತಾತ್ಸಾರ, ಗಣಿತ ವಿಜ್ಞಾನ ಮೊದಲಾದ ವಿಷಯಗಳಿಗೆ ಕೊಡುವ ಪ್ರಾಮುಖ್ಯತೆ ಕನ್ನಡಕ್ಕಿಲ್ಲದೇ ಇರುವುದು, ಭಾಷಾ ಸಾಮರ್ಥ್ಯಗಳ ಬೆಳೆವಣಿಗೆಗೆ ಉತ್ತೇಜನ ನೀಡದೇ ಇರುವುದು ಕೂಡ ಕನ್ನಡ ಕಲಿಕೆಯ ಗುಣಮಟ್ಟ ಕುಸಿಯುವಲ್ಲಿ ಪ್ರಭಾವ ಬೀರಿದೆ.
- ಹೆತ್ತವರ ಕನ್ನಡ ಬಳಕೆ : ಮನೆಯಲ್ಲಿ ತಂದೆ ತಾಯಿ ಮಾತನಾಡುವ ಭಾಷೆ ಬೇರೆಯಾಗಿರುವ ಸಂದರ್ಭಗಳಲ್ಲಿ ಪದ ಬಳಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಹೆತ್ತವರು ಕನ್ನಡವನ್ನು ಹೆಚ್ಚು ಬಳಸಬೇಕು.
- ಪ್ರತಿ ವರ್ಷವೂ ವರದಿ ಸಿದ್ದಪಡಿಸಬೇಕು : ಕರ್ನಾಟಕದ ವಿದ್ಯಾರ್ಥಿಗಳು ಕನ್ನಡದಲ್ಲಿ ಏಕೆ ಅನುತ್ತೀರ್ಣರಾಗುತ್ತಾರೆ ಎಂಬುದಕ್ಕೆ ನಿಖರ ಕಾರಣಗಳನ್ನು ತಿಳಿದು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾಥಮಿಕ ದತ್ತಾಂಶಗಳನ್ನೊಳಗೊಂಡ ಅಧ್ಯಯನವು ಅಗತ್ಯವಾಗಿರುವುದರಿಂದ 2025ರಲ್ಲಿ ಅನುತ್ತೀರ್ಣರಾಗಿರುವ ಮತ್ತು 2026ರಲ್ಲಿ ಅನುತ್ತೀರ್ಣರಾಗುವ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ತಯಾರಿಸಲು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಸಂಶೋಧನೆ ಕೈಗೊಳ್ಳಬೇಕು. ಈ ಪ್ರಕ್ರಿಯೆ ಕನ್ನಡದಲ್ಲಿ ಅನುತ್ತೀರ್ಣರಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯುವವರೆಗೂ ಮುಂದುವರೆಸಬೇಕು.
- ಎಲ್ಲ ಹಂತಗಳಲ್ಲೂ ಕನ್ನಡ ಒಂದು ಭಾಷೆಯಾಗಿಯಾದರೂ ಇರಬೇಕು : ಶಿಕ್ಷಣದ ವಿವಿಧ ಹಂತಗಳಲ್ಲಿ ಅಂದರೆ ಅಂಗನವಾಡಿ, ಪೂರ್ವ ಪ್ರಾಥಮಿಕ ಹಂತದಿಂದ ಆರಂಭಿಸಿ ಪದವಿ, ವೃತ್ತಿಪರಕೋರ್ಸ್ ಯಾವುದೇ ಇರಲಿ, ಮಾಧ್ಯಮ ಯಾವುದೇ ಆಗಿರಲಿ ಕನ್ನಡವನ್ನು ಒಂದು ಭಾಷೆಯನ್ನಾಗಿಯಾದರೂ ಕಡ್ಡಾಯಗೊಳಿಸಬೇಕು.
- ಕನ್ನಡ ಭಾಷಾ ಕಲಿಕಾ ವಿಧೇಯಕ 2015 ಜಾರಿಯಾಗಬೇಕು : ಶಾಲೆಗಳನ್ನು ವಿವಿಧ ಪಠ್ಯಕ್ರಮದ ಆಧಾರದಲ್ಲಿ ವರ್ಗೀಕರಿಸುವ ಬದಲು ಕರ್ನಾಟಕದಲ್ಲಿನ ಎಲ್ಲಾ ವಿಧದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ಭಾಷಾ ಕಲಿಕಾ ವಿಧೇಯಕ 2015ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
- ಕನ್ನಡ ನಿರ್ಲಕ್ಷಿಸುವ ಅಧಿಕಾರಿಗಳ ಮೇಲೆ ಕ್ರಮ : ಕನ್ನಡ ಕಲಿಕಾ ಅಧಿನಿಯಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲರಾಗುವ ಅಧಿಕಾರಿಗಳ ಮೇಲೆ ಮತ್ತಷ್ಟು ಕಠಿಣ ಕ್ರಮ ಜರುಗಿಸಲು ಅನುವಾಗುವಂತೆ ಕನ್ನಡ ಕಲಿಕಾ ಅಧಿನಿಯಮ 2015ಕ್ಕೆ ಸೂಕ್ತ ತಿದ್ದುಪಡಿಯನ್ನು ತರುವುದು.
- ದ್ವಿಭಾಷಾ ಕಲಿಕೆ ಸಾಕು : ಕನ್ನಡ ಕಲಿಕೆಯನ್ನು ಜ್ಞಾನ ವಿಸ್ತರಣೆ ದೃಷ್ಟಿಯಿಂದ ಮತ್ತಷ್ಟು ಸದೃಢಗೊಳಿಸಲು ಮತ್ತು ಅನಗತ್ಯ ಭಾಷಾ ಕಲಿಕೆಗಳ ಹೊರೆ ತಗ್ಗಿಸಲು ಈಗಿರುವ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವುದು.
- ಭಾಷಾ ತರಬೇತಿ ಪಡೆದ ಶಿಕ್ಷಕರಿರಬೇಕು : ತರಬೇತಿ ಪ್ರಾಥಮಿಕ ಹಂತದಿಂದಲೇ ಮಕ್ಕಳು ಕನ್ನಡ ಹಾಗೂ ಆಂಗ್ಲ ಭಾಷೆಗಳನ್ನು ಪ್ರಭುತ್ವದ ಮಟ್ಟಕ್ಕೆ ಕಲಿಯಲು ಮತ್ತು ಕಲಿಸಲು ಎಲ್ಲಾ ಬಗೆಯ ಏರ್ಪಾಡುಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಭಾಷಾ ಕಲಿಕೆಗೆ ಆಯಾ ಭಾಷೆಗಳ ಮೇಲೆ ಪ್ರಭುತ್ವ, ತಜ್ಞತೆ, ತರಬೇತಿ ಮತ್ತು ವೃತ್ತಿ ನೈಪುಣ್ಯತೆ ಹೊಂದಿರುವ ಶಿಕ್ಷಕರನ್ನು ಪೂರ್ವ ಪ್ರಾಥಮಿಕದಿಂದಲೇ ನೇಮಕಾತಿ ಮಾಡಬೇಕು.
- ನಿರಂತರ ತರಬೇತಿ: ಭಾಷಾ ಶಿಕ್ಷಕರು ತಮ್ಮ ಭಾಷಾ ಕಲಿಕೆಯ ವೃತ್ತಿ ನೈಪುಣ್ಯತೆಯನ್ನು ನಿರಂತರವಾಗಿರಿಸಿಕೊಳ್ಳಲು ನಿರಂತರ ವೃತ್ತಿ ನೈಪುಣ್ಯತೆ ಅಭಿವೃದ್ಧಿ ತರಬೇತಿಗಳನ್ನು ಆಯೋಜಿಸಬೇಕು.
- ಪ್ರೋತ್ಸಾಹದ ಅವಶ್ಯಕತೆ : ಕನ್ನಡ ಭಾಷಾ ವಿಷಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ, ಮುಂದಿನ ಹಂತದ ವಿದ್ಯಾಭ್ಯಾಸದ ಆಯ್ಕೆಯಲ್ಲಿ ಆದ್ಯತೆ, ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ಇತ್ಯಾದಿ ಉತ್ತೇಜಕಗಳನ್ನು ಜಾರಿಗೊಳಿಸಬೇಕು.
- ಉದ್ಯೋಗದಲ್ಲಿ ಮೀಸಲಾತಿ : ಕರ್ನಾಟಕದಲ್ಲಿ ಮತ್ತು ದೇಶದ ಯಾವುದೇ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕನಿಷ್ಠ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಮಕ್ಕಳಿಗೆ ಕರ್ನಾಟಕದಲ್ಲಿನ ಸರ್ಕಾರಿ ಉದ್ಯೋಗಗಳಲ್ಲಿ ಕನಿಷ್ಠ ಶೇಕಡಾ 25ರಷ್ಟು ಉದ್ಯೋಗಗಳನ್ನು ಮೀಸಲಿಡಬೇಕು. ಇದರಿಂದ ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತೇಜನ ನೀಡಿದಂತಾಗುತ್ತದೆ.
- ಆಕರ್ಷಕ ಪುಸ್ತಕಗಳು : ಭಾಷಾ ಪಠ್ಯಪುಸ್ತಕ ಆಕರ್ಷಕವಾಗಿರಬೇಕು. ಭಾಷಾ ಚಟುವಟಿಕೆಗಳಿಗೆ ಅವಕಾಶ ಇರಬೇಕು.
- ಗೋಡೆ ಪತ್ರಿಕೆಗಳಿಗೆ ಉತ್ತೇಜನ : ಮಕ್ಕಳ ಭಾಷಾ ಕೌಶಲವನ್ನು ಉತ್ತೇಜಿಸಲು ಶಾಲೆಯಲ್ಲಿ ಮಕ್ಕಳ ಮಾಸಿಕ ಹಸ್ತಪತ್ರಿಕೆ / ಗೋಡೆ ಪತ್ರಿಕೆಗಳನ್ನು ಹೊರತರಬೇಕು.
- ಭಯರಹಿತ ಕಲಿಕೆ: ಪರೀಕ್ಷೆಗಳಿಗೆ ಅನವಶ್ಯಕ ಒತ್ತು ನೀಡುವ ಬದಲು, ಕಲಿಕೆ ಸಮರ್ಪಕವಾಗಿ ಮತ್ತು ಅರ್ಥಪೂರ್ಣವಾಗಿ ಆಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಶಾಲಾ ಹಂತದಲ್ಲಿ ಭಯರಹಿತ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಜಾರಿಯಾಗಬೇಕು.
- ಪಠ್ಯ ಪುಸ್ತಕಗಳು : ಭಾಷಾ ಪಠ್ಯಪುಸ್ತಕಗಳು ಭಾಷಾ ತಜ್ಞರು ಹಾಗೂ ಭಾಷಾ ಶಿಕ್ಷಕರಿಂದ ರಚನೆಯಾಗಬೇಕು.
- ರಾಜಕೀಯ ಪ್ರೇರಿತ ಪಠ್ಯಗಳು ಬೇಡ: ಸರ್ಕಾರ ಬದಲಾದಂತೆ ಪಠ್ಯಪುಸ್ತಕಗಳನ್ನು ಬದಲಾಯಿಸುವ ರಾಜಕೀಯ ಪ್ರೇರಿತ ಅವೈಜ್ಞಾನಿಕ ಕ್ರಮವನ್ನು ಕೈಬಿಡಬೇಕು.
- ಭಾಷಾ ಶಿಕ್ಷಕರೇ ಭಾಷೆಯನ್ನು ಕಲಿಸಬೇಕು : ಭಾಷಾ ಕಲಿಕೆಗೆ ನಿಗದಿಪಡಿಸಿದ ಅವಧಿಗಳನ್ನು ಇತರ ವಿಷಯಗಳಿಗೆ ಹಂಚಿಕೆ ಮಾಡದಂತೆ ಕಡ್ಡಾಯಗೊಳಿಸಬೇಕು. ಆ ಅವಧಿಯಲ್ಲಿ ಭಾಷಾ ಕಲಿಕೆಗೆ ಅವಶ್ಯವಿರುವ ಭಾಷಾ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಹಂತದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಭಾಷಾ ಶಿಕ್ಷಕರ ನೇಮಕವಾಗಬೇಕು.
- ವಿಶ್ಲೇಷಣೆ ಅಗತ್ಯ: ಶಾಲಾ ಶಿಕ್ಷಣದಲ್ಲಿ ಜಾರಿಯಾಗುವ ಹೊಸ ಬೋಧನಾ ವಿಧಾನಗಳನ್ನು ಸರಿಯಾಗಿ ವಿಶ್ಲೇಷಿಸದೆ ಕೇವಲ ಪ್ರಯೋಗದ ಯೋಜನೆಗಳನ್ನಾಗಿಸುವ ಮೂಲಕ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಬಾರದು.
- ಎಲ್ಲ ಶಾಲೆಗಳಿಗೂ ಅನ್ವಯ ಆಗಲಿ : ಕನ್ನಡ ಭಾಷಾ ಕಲಿಕೆಗೆ ಸರ್ಕಾರ ರೂಪಿಸುವ ನೀತಿ ಯೋಜನೆಗಳು ಉಳಿದೆಲ್ಲಾ ಸರ್ಕಾರೇತರ ಶಾಲೆಗಳಿಗೂ ಅನ್ವಯಿಸಬೇಕು.
- ಪ್ರಾಮಾಣಿಕ ಪ್ರಯತ್ನ: ಕುಟುಂಬ ಸಾಮಾಜಿಕ ಪರಿಸರ ಹಾಗೂ ಶಾಲೆಯಲ್ಲಿ ಬಾಲ್ಯದಿಂದಲೇ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುವ ಪರಿಸರ ಮತ್ತು ಮಾತೃ ಭಾಷೆಯನ್ನು ಕೇವಲ ಸಂವಹನ ಸಾಧನವಾಗಿ ನೋಡದೆ ಬದುಕಿನ ಭಾಗವನ್ನಾಗಿಸಿಕೊಳ್ಳುವ ಒಂದು ಪ್ರಾಮಾಣಿಕ ಪ್ರಯತ್ನ ಸಮಾಜ ಮತ್ತು ಸರ್ಕಾರದಿಂದ ನಡೆಯಬೇಕು.
ಈ ಎಲ್ಲಾ ಶಿಫಾರಸ್ಸುಗಳನ್ನು ಕೂಡಲೇ ಅನುಷ್ಠಾನ ಮಾಡಲು ಭಾಷಾ ತಜ್ಞರನ್ನು ಒಳಗೊಂಡಂತೆ ಅಧಿಕಾರಯುಕ್ತ ಸಮಿತಿಯನ್ನು ರಚಿಸಬೇಕು. ಮೇಲಿನ ಶಿಫಾರಸುಗಳು ಸರ್ಕಾರಕ್ಕೆ ಕೇವಲ ತೋರಿಕೆಯಾಗದೆ ಕನ್ನಡವನ್ನು ಉಳಿಸಿ ಬೆಳೆಸುವ ಸಂಕಲ್ಪವಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.




