ಲಂಕೇಶರನ್ನು ಗ್ರಹಿಸುವ, ಅವರ ಸಾಹಿತ್ಯಕ್ಕೆ ಮುಖಾಮುಖಿಯಾಗಲು ಹಾದಿ ತೋರುವ ʼಮಣ್ಣಿನ ಕಸುವುʼ

Date:

ಲಂಕೇಶರ ಕಥನವನ್ನು ಕುರಿತು ಬಂದ ಅಧ್ಯಯನಗಳಲ್ಲಿ ʼಮಣ್ಣಿನ ಕಸುವುʼ ವಿಭಿನ್ನವಾಗಿ ನಿಲ್ಲುತ್ತದೆ. ಲಂಕೇಶರಂತಹ ಸಮರ್ಥ ಬರಹಗಾರರ ಸಾಹಿತ್ಯವು ಕಾಲದ ಪರೀಕ್ಷೆಗೆ ಒಡ್ಡಿ ಅದರ ಸತ್ವವನ್ನು ಅರಿಯಲು ಈ ತರಹದ ಅಧ್ಯಯನಗಳು ಅಗತ್ಯವಾಗಿದೆ.

ಈ ಶತಮಾನದ ಕನ್ನಡದ ಪ್ರಮುಖ ಲೇಖಕರಲ್ಲಿ ಲಂಕೇಶರು ಒಬ್ಬರು. ಕನ್ನಡ ಗದ್ಯ ಬರಹಕ್ಕೆ ವಿಶೇಷ ಕಸುವನ್ನು ತುಂಬಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇಂದಿನ ತಲೆಮಾರಿನ ಯುವಕರು ಸಾಹಿತ್ಯವನ್ನು ಕುರಿತ ಚರ್ಚೆಯಲ್ಲಿ ಲಂಕೇಶರ ಹೆಸರು ಪದೇ ಪದೆ ಪ್ರಸ್ತಾಪಿಸುವಾಗುತ್ತದೆ. ಇದು ಲಂಕೇಶರ ಬರಹಕ್ಕಿರುವ ಸಾರ್ವಕಾಲೀಕ ಶಕ್ತಿಯು ಹೌದು. ಇಂದಿನ ಯುವ ತಲೆಮಾರು ಲಂಕೇಶರ ಗ್ರಹಿಸುವ ಮಾದರಿ ಯಾವುದು ಮತ್ತು ಅವರ ಸಾಹಿತ್ಯಕ್ಕೆ ಹೇಗೆ ಮುಖಾಮುಖಿಯಾಗಬೇಕು ಎಂಬ ಪ್ರಶ್ನೆಯನ್ನಿಟ್ಟುಕೊಂಡು ವಿಮರ್ಶಕರಾದ ಸುರೇಶ ನಾಗಲಮಡಿಕೆಯವರು ಲಂಕೇಶರ ಕಥನವನ್ನು ಅಧ್ಯಯನ ಮಾಡಿದ್ದಾರೆ. 

ಲಂಕೇಶರ ಕಥನವು ಹಲವು ವಿಮರ್ಶಕರ ಪರಿಶೀಲನೆಗೆ, ಚರ್ಚೆಗೆ ಗುರಿಯಾಗಿದೆ. ಆದರೆ ಈ ತರಹದ ಅಧ್ಯಯನಗಳು ಲಂಕೇಶರ ಕಥನವನ್ನು ಬಿಡಿಬಿಡಿಯಾಗಿ ಚರ್ಚೆಗೆ ಒಳಪಡಿಸಿವೆ. ಸುರೇಶರ ʼಮಣ್ಣಿನ ಕಸುವುʼ ಕೃತಿ ಲಂಕೇಶರ ಕಥನವನ್ನು ಬಿಡಿಬಿಡಿಯಾಗಿ ನೋಡದೆ ಇಡಿಯಾಗಿ ಗ್ರಹಿಸಿ ಚರ್ಚಿಸಿದೆ. ಹಾಗಾಗಿ ಬಿಡಿ ನೋಟಕ್ಕೆ ದಕ್ಕದ ಎಷ್ಟೋ ಹೊಳಹುಗಳನ್ನು ಈ ಅಧ್ಯಯನ ತನ್ನ ಒಡಲಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಿದೆ.

ನವ್ಯದ ಪ್ರಮುಖ ಕಥೆಗಾರರಲ್ಲಿ ಲಂಕೇಶರು ಒಬ್ಬರು ಎಂಬ ಗ್ರಹಿಕೆಯಲ್ಲಿ ಹೊರಟ ಅಧ್ಯಯನಗಳು ಹಲವಾರಿವೆ. ಈ ಅಧ್ಯಯನಗಳು ಲಂಕೇಶರ ಕಥನವನ್ನು ʼನವ್ಯ ವಿಮರ್ಶೆʼ ರೂಪಿಸಿದ ಮಾನದಂಡಗಳನ್ನು ಇಟ್ಟುಕೊಂಡು ಪರಿಶೀಲಿಸಿವೆ. ಹೀಗೆ ನೋಡುವಾಗ ಲಂಕೇಶರನ್ನು ನವ್ಯದ ಮಾನದಂಡಕ್ಕೆ ಒಗ್ಗಿಸುವ ಪ್ರಯತ್ನದಲ್ಲಿ ಅವರು ಕಥನವು ಗರ್ಭಿಕರಿಸಿಕೊಂಡ ಸೂಕ್ಷ್ಮಗಳು ಮರೆಯಾಗುತ್ತವೆ. ಪ್ರಸ್ತುತ ಅಧ್ಯಯನದ ಮುಖ್ಯ ಗುಣವೆಂದರೆ, ಲಂಕೇಶರ ಕಥನವನ್ನು ಚರ್ಚಿಸಲು ನವ್ಯ ವಿಮರ್ಶೆ ರೂಪಿಸಿದ ಸಿದ್ಧ ಮಾನದಂಡಗಳನ್ನು ತ್ಯಜಿಸಿ ಭಿನ್ನದಾರಿ ಹಿಡಿದಿದೆ. ಈ ಅಧ್ಯಯನಕ್ಕೆ ರೂಪಿಸಿಕೊಂಡ ವಿಧಾನ ಹೊರಗಿನಿಂದ ಎರವಲು ತಂದ ಮಾದರಿಯಲ್ಲ. ಇವರ ಕಥನದ ಒಡಲಲ್ಲಿರುವ ವಸ್ತು ವಿಷಯಗಳನ್ನು, ಪರಿಕಲ್ಪನೆಯನ್ನು ಆಧರಿಸಿ ಮೈದಾಳಿದ ಪರಿಕಲ್ಪನಾತ್ಮಕ ಅಧ್ಯಯನವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಆತ್ಮಕಥನಕ್ಕೆ ಹೊಸ ಭಾಷ್ಯ ಬರೆದ ಕೃತಿ ʼಕೀಟಲೆಯ ದಿನಗಳುʼ

ಲಂಕೇಶರ ಕಥನಗಳ ಪ್ರಧಾನ ಭಿತ್ತಿಯಲ್ಲಿರುವ ಮನುಷ್ಯನ ಸಣ್ಣತನ, ಭೂಮಿ, ಜಾತಿ, ರಾಜಕಾರಣ ಇವುಗಳ ಮೂಲಕ ಅಭಿವ್ಯಕ್ತವಾದ ಸಮಾಜದ ಪರಿಶೀಲನೆ ಈ ಅಧ್ಯಯನದ ಕೇಂದ್ರದಲ್ಲಿದೆ. ಇವುಗಳ ಮೂಲಕ ಲಂಕೇಶರ ಕಥೆಗಳು ಕಂಡರಿಸಿದ ಮನುಷ್ಯ ಸಂಬಂಧಗಳ ಶೋಧನೆಯನ್ನು ʼಮಣ್ಣಿನ ಕಸುವುʼ ಕೃತಿಯು ಸೂಕ್ಷ್ಮವಾಗಿ ಪರಿಶೀಲಿಸಿದೆ. ಕ್ಷುದ್ರರಾಜಕಾರಣ, ಭೂಮಿ ಮತ್ತು ಜಾತಿಗಳ ಮುಖಾಮುಖಿಯಲ್ಲಿ ರೂಪುಗೊಂಡ ಮನುಷ್ಯ ಸಂಬಂಧ, ಸಾಮಾಜಿಕತೆಯ ಸ್ವರೂಪ, ಹೆಣ್ಣುಲೋಕ, ಗ್ರಾಮಗಳ ಸಂರಚನೆಯ ಗರ್ಭದಲ್ಲಿನ ಸಂಘರ್ಷಗಳು ಹೀಗೆ ಎಲ್ಲ ಸಂಗತಿಗಳನ್ನು ಕತೆಗಳ ವಿವರಗಳ ಮೂಲಕ ಸೂಕ್ಷ್ಮ ಪರಿಶೀಲನೆಗೆ ಈ ಅಧ್ಯಯನ ಒಳಪಡಿಸಿದೆ. ತೀರಾ ಸಂಕೀರ್ಣವಾದ ಆಯಾಮಗಳುಳ್ಳ ಈ ಸಂಗತಿಗಳನ್ನು ಚರ್ಚೆಯ ಭಾಗವಾಗಿಸಿಕೊಂಡಿದ್ದಾರೆ. ಈ ಚರ್ಚೆಯ ಮೂಲಕ ಲಂಕೇಶರ ಕಥನವು ತನ್ನ ಸಮಕಾಲೀನ ಕಥೆಗಾರರಿಗಿಂತ ಹೇಗೆ ಭಿನ್ನ ದಾರಿಯಲ್ಲಿ ಸಾಗಿದೆ ಎಂಬುದನ್ನು ಈ ಅಧ್ಯಯನವು ಗುರುತಿಸಿದೆ.

ನಿದರ್ಶನಾರ್ಥವಾಗಿ ಕೆಲವು ಅಂಶಗಳನ್ನು ಗಮನಿಸೋಣ. ಲಂಕೇಶರ ʼಒಬ್ಬಂಟಿʼ, ʼಮುಟ್ಟಿಸಿಕೊಂಡವನುʼ ಮುಂತಾದ ಕಥೆಗಳನ್ನು ಜಾತಿ ತರತಮ ಪ್ರಜ್ಞೆಯಿಂದ ಮೂಡಿದ ಮನುಷ್ಯ ಸಂಬಂಧವನ್ನು ಆಧರಿಸಿ ಚರ್ಚೆಯನ್ನು ಬೆಳೆಸಿದ್ದಾರೆ. ಮುಟ್ಟಿಸಿಕೊಂಡವನು ಕಥೆಯ ಡಾ. ತಿಮ್ಮಪ್ಪನವರ ಪಾತ್ರವನ್ನು ಚಿತ್ರಿಸುವಲ್ಲಿ ಕಥನಕಾರರು ತೋರಿದ ಸಂಯಮವನ್ನು ವಿಶೇಷವಾಗಿ ಗುರುತಿಸಿದ್ದಾರೆ. ಈ ದಲಿತ ಪಾತ್ರವನ್ನು ಹೊಡಿ, ಕೊಚ್ಚು ಎಂಬ ಪ್ರತಿಭಟನೆಯ ನೆಲೆಯಲ್ಲಿ ರೂಪಿಸಿದ್ದರೆ ಅದು ಬಹುಶಃ ಪೇಲವ ಕಥೆಯಾಗುತ್ತಿತ್ತು ಎಂದು ಗುರುತಿಸುತ್ತಾರೆ. ಈ ಕಥೆಯಲ್ಲಿ ಡಾ.ತಿಮ್ಮಪ್ಪ ಪಾತ್ರವು ತೋರುವ ಸಂಯಮ, ಮೌನ, ಕರುಣೆ, ಮನುಷ್ಯನ ಸಣ್ಣತನವನ್ನು ಸ್ವೀಕರಿಸಿದ ರೀತಿ ಎಲ್ಲವು ಕಥೆಯ ಧ್ವನಿಪೂರ್ಣ ಸಾಧ್ಯತೆಗಳನ್ನು ಹೆಚ್ಚಿಸಿದೆ ಎಂಬ ಈ ಅಧ್ಯಯನದ ನಿಲುವು ಹೊಸತನದಿಂದ ಕೂಡಿದೆ(ಪುಟ.40). ಜಾತಿ ಪ್ರಜ್ಞೆಯನ್ನು ಮೀರಿ ಅದು ಮನುಷ್ಯ ಸಂಬಂಧಗಳ ಹತಾಶೆ, ಸಣ್ಣತನಗಳ ತೊಳಲಾಟವಾಗಿ ಮಾರ್ಪಾಡದ ಬಗೆಯನ್ನು ಈ ಅಧ್ಯಯನವು ಚರ್ಚಿಸುತ್ತದೆ. ʼಸಹಪಾಠಿʼ, ʼಕಲ್ಲು ಕರಗುವ ಸಮಯʼ ಕತೆಗಳ ಚರ್ಚೆಯಲ್ಲಿಯು ಮನುಷ್ಯನ ಆಳವಾದ ಭಾವ ಕಂಪನಗಳನ್ನು ಕಥೆಗಾರರು ಹೇಗೆ ಶೋಧಿಸುತ್ತಾರೆ ಎಂಬ ಸೂಕ್ಷ್ಮ ಚರ್ಚೆಯನ್ನು ಬೆಳಸಿದ್ದಾರೆ. ಹೀಗೆ ಕತೆಯ ಆಂತರ್ಯದಲ್ಲಿನ ಸಣ್ಣ ವಿವರಗಳು ಚರ್ಚೆಯ ಕಕ್ಷೆಯಿಂದ ಹೊರಗುಳಿಯದಂತೆ ಎಚ್ಚರದಿಂದ ಪರಿಶೀಲಿಸಿದ್ದಾರೆ.

ಲಂಕೇಶರು ನವ್ಯ ಸಾಹಿತ್ಯದ ಪ್ರಮುಖ ಕಥೆಗಾರರಾಗಿ ಗುರುತಿಸಿಕೊಂಡವರು. ಇವರ ಕಥನದ ಮೇಲೆ ನವ್ಯ ಸಾಹಿತ್ಯ ಸಿದ್ದಾಂತದ ಪ್ರಭಾವವಿದೆ ಎಂದು ಗ್ರಹಿಸುವುದು ತಪ್ಪಲ್ಲ. ಆದರೆ ಹೀಗೆ ನೋಡುವಾಗ ಈ ಕಥನದ ಇತರ ಆಯಾಮಗಳನ್ನು ಅರಿಯದೆ ಹೋಗುವ ಅಪಾಯವಿದೆ. ಇಂದಿಗೂ ಲಂಕೇಶರನ್ನು ನವ್ಯದ ಪ್ರವರ್ತಕರಾಗಿ ಕಾಣುವ ಧೋರಣೆಯನ್ನು ಪೂರ್ಣವಾಗಿ ತ್ಯಜಿಸಿಲ್ಲ. ಡಿ.ಆರ್.ನಾಗರಾಜ ಅವರು ನವ್ಯವನ್ನು ಮೂಲ ನವ್ಯ, ಪರಿವರ್ತನಶೀಲ ನವ್ಯ ಎಂದು ಸ್ಪಷ್ಟ ಗಡಿಯನ್ನು ಕೊರೆದುಕೊಂಡು ಪರಿಶೀಲಿಸಿದ್ದಾರೆ. ಹೀಗೆ ನೋಡುವಾಗ ಲಂಕೇಶರ ತರಹದ ಲೇಖಕರು ಹೇಗೆ ಮೂಲ ನವ್ಯದಿಂದ ಬಿಡಿಸಿಕೊಂಡು ಪರಿವರ್ತನಶೀಲ ನವ್ಯದ ಕಡೆ ಚಲಿಸಿದರು ಎಂದು ವಿಶ್ಲೇಷಿಸಿದ್ದಾರೆ.

ಪ್ರಸ್ತುತ ಅಧ್ಯಯನದಲ್ಲಿ ಸುರೇಶರು ಲಂಕೇಶರ ಕಥೆಗಳು ಮನುಷ್ಯನ ಅಂತರಂಗವನ್ನು ಶೋಧಿಸುವಾಗ ಕೆಲವೊಮ್ಮೆ ನವ್ಯದ ಸಿದ್ಧಾಂತಗಳಿಗೆ ಮಾರು ಹೋಗುವುದನ್ನು ಗುರುತಿಸುತ್ತಾರೆ. ಆದರೆ ಲಂಕೇಶರ ಕಥನ ಅಲ್ಲಿಂದ ಬಹಳ ಬೇಗ ಬಿಡಿಸಿಕೊಂಡು ಮನುಷ್ಯ ಸಮಾಜದೊಂದಿಗೆ ರೂಪಿಸಿಕೊಳ್ಳುವ ಸಂಬಂಧಗಳು, ಪ್ರೀತಿ, ಕಾಮ ಇತ್ಯಾದಿಗಳ ಹುಡುಕಾಟದ ಕಡೆ ಚಲಿಸುತ್ತವೆ. ನವ್ಯದ ವ್ಯಕ್ತಿಕೇಂದ್ರದ ನೆಲೆಯಿಂದ ಬಿಡಿಸಿಕೊಳ್ಳುವ ಈ ಚಲನೆ ಲಂಕೇಶರ ಮೊದಲ ಸಂಕಲನದಿಂದಲೇ ಆರಂಭವಾಯಿತು ಎಂಬ ಹೊಸ ಹೊಳಹುಗಳನ್ನು ಈ ಅಧ್ಯಯನ ನಮ್ಮ ಮುಂದಿರಿಸಿದೆ. ಮೂಲ ನವ್ಯ, ಪರಿವರ್ತನಶೀಲ ನವ್ಯದ ಗಡಿಗಳು ಅಳಿದು ಒಂದರೊಡನೆ ಒಂದು ಬೆರೆತು ಭಿನ್ನವಾಗುವ ಬಗೆಯನ್ನು ಚರ್ಚಿಸಿದ್ದಾರೆ.

ಲಂಕೇಶರ ʼಅಕ್ಕʼ ಕಾದಂಬರಿಯು ನಗರದ ಕೊಳಗೇರಿಯ ಬದುಕನ್ನು ವಸ್ತುವಾಗಿಸಿಕೊಂಡಿದೆ. ಆದರೆ ಈ ಕಾದಂಬರಿಯು ನವ್ಯದ ಮಾದರಿಯನ್ನು ತ್ಯಜಿಸಿ ಭಿನ್ನವಾದ ಫಥವನ್ನು ಹಿಡಿಯುವುದನ್ನು ಈ ಅಧ್ಯಯನ ಗುರುತಿಸಿದೆ. ಕ್ಯಾತನ ಸ್ವಗತದ ಮೂಲಕ ಕಾದಂಬರಿ ಹೇಗೆ ಲಂಕೇಶರ ಶೈಲಿಯಲ್ಲಿ ಒಡಮೂಡಿದೆ ಎಂಬುದನ್ನು ಚರ್ಚಿಸಿದ್ದಾರೆ. ʼಬಿರುಕುʼ ಕಾದಂಬರಿಯು ಅಪ್ಪಟ ನಗರದ ಕೃತಿಯಾಗಿದೆ. ಇಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವಿನ ಬಿರುಕನ್ನು ಈ ಕಥನವು ನಮ್ಮ ಮುಂದಿರಿಸಿದೆ. ಇಲ್ಲಿಯು ಲಂಕೇಶರು ನವ್ಯ ಮಾದರಿಯನ್ನು ಕಳಚಿಕೊಂಡು ಎಂದಿನ ತನ್ನ ಲಯಕ್ಕೆ ಹೊರಳುವುದನ್ನು ಈ ಅಧ್ಯಯನ ಗುರುತಿಸಿದೆ. ಡಿ.ಆರ್.ನಾಗರಾಜರು ಇದನ್ನು ʼಮೂಲ ನವ್ಯʼದ ಕೃತಿಯೆಂದು ಗುರುತಿಸುವುದನ್ನು ಉಲ್ಲೇಖಿಸುತ್ತಾರೆ. ʼಬಿರುಕುʼ ಕಾದಂಬರಿಯನ್ನು ಈ ಅಧ್ಯಯನವು ನವ್ಯದ್ದು ಎಂದು ಸೀಮಿತವಾಗಿ ಗ್ರಹಿಸುವುದಿಲ್ಲ. ಲಂಕೇಶರ ಸಮಾಜ ಮತ್ತು ವ್ಯಕ್ತಿಯ ಕುರಿತು ಚಿಂತನೆ ಭಿನ್ನವಾದದ್ದು ಎಂದು ಖಚಿತ ಪಡಿಸುತ್ತಾರೆ. ಈ ಕಥನದಲ್ಲಿ ವ್ಯಕ್ತಿ ಕೇಂದ್ರವಾದರು ಅಲ್ಲಿ ಸಮಾಜ ಎಂದಿಗೂ ಗೌಣವಾಗುದಿಲ್ಲ(ಪು.117) ಎಂಬ ಸುರೇಶ ನಾಗಲಮಡಿಕೆಯವರ ನೋಟವು ವರ್ತಮಾನದಲ್ಲಿ ಲಂಕೇಶರ ಕಥನದ ಚರ್ಚೆಯ ನೆಲೆಗಳು ಯಾವ ಹಾದಿಯನ್ನು ಹಿಡಿಯಬೇಕು ಎಂಬುದನ್ನು ಸ್ಪಷ್ಟವಾಗಿ ನಮ್ಮ ಮುಂದಿರಿಸಿದೆ.

ಲಂಕೇಶರ ಕಥನ ಸೃಜಿಸಿದ ಜಾತಿ, ಗ್ರಾಮ, ಸಮಾಜ ಇವುಗಳ ಗ್ರಹಿಕೆಯ ಹಿಂದೆ ಲೋಹಿಯಾ, ಜಯಪ್ರಕಾಶ್ ನಾರಾಯಣರ ಸಮಾಜವಾದಿ ಚಿಂತನೆಗಳ ಪ್ರಭಾವವಿದೆ ಎಂದು ಗುರುತಿಸಿದ್ದಾರೆ. ಅದು ಕಥನದ ಒಳ ಎಳೆಗಳಲ್ಲಿ ಸೂಕ್ಷ್ಮವಾಗಿ ಅಭಿವ್ಯಕ್ತವಾಗಿದೆ ಎಂದು ಈ ಅಧ್ಯಯನ ಪ್ರತಿಪಾದಿಸಿದೆ. ಉದಾಹರಣೆಗೆ ಈ ಅಧ್ಯಯನ ಗುರುತಿಸುವಂತೆ ಲಂಕೇಶರ ಕಥನ ಗ್ರಹಿಸಿದ ಗ್ರಾಮದ ಸ್ವರೂಪ ಪಾರಂಪರಿಕ ಗ್ರಾಮಕ್ಕಿಂತ ಭಿನ್ನವಾದುದು, ಹೆಚ್ಚು ಪರಿವರ್ತನಶೀಲವಾದುದು. ಪಾರಂಪರಿಕ ಗ್ರಾಮಗಳಲ್ಲಿ ಜಾತಿಗಳ ಕಟ್ಟು ಬಿಗಿಯಾಗಿದೆ. ಅದು ಕ್ರೂರವು, ತರತಮ ಪ್ರಜ್ಞೆ, ಅಸ್ಪೃಶ್ಯತೆಯ ಮನೋಭಾವದಿಂದ ಸಂಕೀರ್ಣವೂ ಆಗಿದೆ. ಆದರೆ ʼಮುಸ್ಸಂಜೆ ಕಥಾಪ್ರಸಂಗʼ ಕಾದಂಬರಿಯು ಪರಿಕಲ್ಪಸಿದ ಗ್ರಾಮದಲ್ಲಿ(ಕಂಬಳ್ಳಿ) ಜಾತಿಗಳು ಬೆರೆಯುವಿಕೆಯ ಮೂಲಕ ಇಲ್ಲಿ ಸಂಕರಗೊಂಡಿದೆ. ಅಂತರ್‌ಜಾತಿ ವಿವಾಹಗಳಿಂದ ಜಾತಿಯ ಕಟ್ಟು ಸಡಿಲವಾದ ಚಿತ್ರಣವಿದೆ. ಸಾವಂತ್ರಿ-ಮಂಜ, ಮಾದಿಗರ ದುರುಗ–ದೇವಿ, ಉಡುಪ–ಮುಮ್ತಾಜ್‌ ಈ ತರಹದ ಅಂತರ್‌ಜಾತೀಯ ಮದುವೆಗಳು ಏರ್ಪಟ್ಟಿರುವುದನ್ನು ಈ ಕೃತಿ ಗುರುತಿಸಿದೆ.

ಈ ಅಂತರ್‌ಜಾತಿ ವಿವಾಹದ ಸಂಬಂಧಗಳು ಜಾತಿಯನ್ನು ಕಳೆದುಕೊಳ್ಳುವುದರತ್ತ ಇಟ್ಟ ಹೆಜ್ಜೆಯಾಗಿದೆ ಎಂಬ ನಿಲುವನ್ನು ತಾಳುತ್ತಾರೆ. ಈ ರೀತಿಯ ಗ್ರಹಿಕೆಯ ಹಿಂದೆ ಸಮಾಜವಾದಿ ಚಿಂತನೆಗಳ ಪ್ರಭಾವ ಇರುವುದನ್ನು ಈ ಅಧ್ಯಯನ ಪ್ರತಿಪಾದಿಸಿದೆ(ಪು.137). ಇದು ಜಾತಿಯ ವಿನಾಶಕ್ಕೆ ಕಾರಣವಾಗುತ್ತದೆಂಬ ಸರಳೀಕೃತ ತೀರ್ಪನ್ನು ಈ ಅಧ್ಯಯನ ನೀಡುವುದಿಲ್ಲ. ʼಅಂತರ್‌ಜಾತಿ ವಿವಾಹಗಳು ಜಾತಿಯನ್ನು ಒಗ್ಗೂಡಿಸಬಹುದು ಆದರೆ ಜಾತಿ ವ್ಯವಸ್ಥೆಯನ್ನು ವಿಚ್ಛಿದ್ರಗೊಳಿಸಲು ಸಾಧ್ಯವಾಗಲಾರದುʼ(ಪು.137) ಎಂಬ ಸೂಕ್ಷ್ಮ ನಿಲುವನ್ನು ಈ ಅಧ್ಯಯನ ತಳೆದಿದೆ. ಈ ತರಹದ ಸೂಕ್ಷ್ಮ ಎಚ್ಚರ ಅಧ್ಯಯನದುದ್ದಕ್ಕೂ ಕ್ರಿಯಾಶೀಲವಾಗಿರುವುದು ಈ ಕೃತಿಯ ಮುಖ್ಯ ಗುಣವಾಗಿದೆ.

ಲಂಕೇಶರ ಕಥೆಗಳನ್ನು ಇಡಿಯಾಗಿ ಗ್ರಹಿಸಿ ಪರಿಕಲ್ಪನಾತ್ಮಕವಾಗಿ ಚರ್ಚಿಸಿದಂತೆ ಕಾದಂಬರಿಗಳ ಇಡಿಯಾದ ಪರಿಕಲ್ಪನಾತ್ಮಕ ಚರ್ಚೆಯಿಲ್ಲ. ಅವನ್ನು ಬಿಡಿಬಿಡಿಯಾಗಿ ಪರಿಶೀಲಿಸಲಾಗಿದೆ. ಕಾದಂಬರಿಯನ್ನು ಪರಿಕಲ್ಪನಾತ್ಮಕವಾಗಿ ಚರ್ಚಿಸಲು ಹೊರಟರೆ ಅದರ ಸೂಕ್ಷ್ಮ ಸಂಗತಿಗಳು, ಎಲ್ಲಾ ಆಯಾಮಗಳನ್ನು ಹಿಡಿಯಲು ಸಾಧ್ಯವಾಗುದಿಲ್ಲ. ಅಂದರೆ ಕೆಲವು ಸಂಗಂತಿಗಳು ಚರ್ಚೆಯ ಕೇಂದ್ರಕ್ಕೆ ಬರದೆ ಅಂಚಿನಲ್ಲಿಯೆ ಉಳಿಯಬಹುದು. ಹಾಗಾಗಿ ಈ ಅಧ್ಯಯನವು ಬಹಳ ಎಚ್ಚರಿಕೆಯಿಂದ ಇವನ್ನು ಬಿಡಿಯಾಗಿ ಚರ್ಚಿಸುವ ಜಾಣ್ಮೆ ತೋರಿದ್ದಾರೆ ಎನ್ನಿಸುತ್ತದೆ.

ಇದನ್ನು ಓದಿದ್ದೀರಾ?: ಬೆಲೆ ಏರಿಕೆ ಯಾಕಾಗುತ್ತಿದೆ? ಅದರ ಲಾಭ ಯಾರಿಗೆ? ಪ್ರೊ. ಚಂದ್ರ ಪೂಜಾರಿ ಬರೆಹ

ಕಥನವನ್ನು ಪ್ರಧಾನವಾಗಿರಿಸಿಕೊಂಡ ಈ ಅಧ್ಯಯನದಲ್ಲಿ ಇದೇ ಲೇಖಕರ ನಾಟಕಗಳು, ಟೀಕೆ ಟಿಪ್ಪಣಿ, ಮರೆಯುವ ಮುನ್ನ ಇತ್ಯಾದಿ ಪ್ರಕಾರಗಳನ್ನು ಚರ್ಚೆಗೆ ಎತ್ತಿಕೊಳ್ಳಬಹುದಿತ್ತು. ಆದರೆ ಈ ತರಹದ ತೌಲನಿಕ ಅಧ್ಯಯನವು ವಿಸ್ತೃತ ವ್ಯಾಪ್ತಿಯನ್ನು ಹೊಂದಿ ಬೇರೆಯದೆ ಚರ್ಚೆಯತ್ತ ನಮ್ಮನ್ನು ಕರೆದೊಯ್ಯುವುದರಿಂದ ಬಹುಶ ಈ ಅಧ್ಯಯನ ಕಥನಕ್ಕೆ ತನ್ನನ್ನು ನಿರ್ದಿಷ್ಟಗೊಳಿಸಿಕೊಂಡಿದೆ. ಅಗತ್ಯವಿರುವಲ್ಲಿ ಲಂಕೇಶರ ಇತರ ಪ್ರಕಾರಗಳಲ್ಲಿನ ವಿಚಾರಗಳನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿ ಚರ್ಚೆಯನ್ನು ಬೆಳೆಸಿದ್ದಾರೆ. ಆದರೆ ಅದು ವಿಸ್ತೃತವಾಗಿಲ್ಲ. ಲಂಕೇಶರು ತಾನು ಓದಿ ಮೆಚ್ಚಿದ ಪಾಶ್ಚಾತ್ಯ ಸಾಹಿತಿಗಳ ಬರಹಗಳ ʼಮನಕೆ ಕಾರಂಜಿಯ ಸ್ಪರ್ಶʼ ಸಂಕಲನದ ಬರಹಗಳನ್ನು ʼಸಂವೇದಿತಾ ಕಥಾಲೋಕʼ ಎಂಬ ಕಿರು ಅಧ್ಯಾಯದಲ್ಲಿ ಪರಿಶೀಲಿಸಿರುವುದು ವಿಶೇಷವಾಗಿದೆ. ಈ ಚರ್ಚೆಯು ಪ್ರಾಸಂಗಿಕವಾಗಿ ಮೂಡಿಬಂದಿದೆ.

ಲಂಕೇಶರ ಕಥೆಗಳ ಭಾಷೆ ಮತ್ತು ತಂತ್ರ ಹಾಗೂ ಭಾಷಿಕ ಆಯಾಮಗಳ ಪರಿಶೀಲನೆಗೆ ಪ್ರತ್ಯೇಕ ಭಾಗವನ್ನೆ ಮೀಸಲಾಗಿರಿಸಿದ್ದಾರೆ. ಆದರೆ ಈ ಚರ್ಚೆ ಇನ್ನಷ್ಟು ನಿರ್ದಿಷ್ಟವಾಗಿ ಕಥನದ ಭಾಷಿಕ ನೆಲೆ, ತಂತ್ರಗಳನ್ನು ಚರ್ಚಿಸಬಹುದಿತ್ತು. ಕಥೆಗಳ ಪರಿಕಲ್ಪನಾತ್ಮಕ ಚರ್ಚೆಯಲ್ಲಿ ಭಾಷಿಕ ಆಯಾಮ, ತಂತ್ರಗಳ ಹೊಳಹುಗಳು ಕಾಣಿಸುತ್ತವೆ. ಆದರೆ ಇಡಿಯಾದ ಭಾಷಿಕ ಆಯಾಮದ ಚರ್ಚೆಯಲ್ಲಿ ಈ ಹೊಳಹುಗಳು ನಿರ್ದಿಷ್ಟವಾಗದೆ ತೆಳುವಾಗುತ್ತವೆ. ಕಾದಂಬರಿಗಳ ಭಾಷಿಕ ಆಯಾಮದ ಚರ್ಚೆಯು ನಿರ್ದಿಷ್ಟವಾಗಿ ಹೆಚ್ಚು ವಿಸ್ತೃತವಾಗಿ ಮೂಡಿಬಂದಿದೆ. ʼಅಕ್ಕʼ ಕಾದಂಬರಿಯ ಭಾಷಿಕ ಆಯಾಮವನ್ನು ಕುರಿತ ಚರ್ಚೆಯು ಹಲವು ಒಳನೋಟಗಳಿಂದ ಕೂಡಿದೆ. ಸುರೇಶರಿಗೆ ಕಥನದ ಭಾಷಿಕ ಸೂಕ್ಷ್ಮಗಳನ್ನು ಗ್ರಹಿಸುವ ಸಾಮರ್‍ಥ್ಯವಿದೆ. ಅದು ಕಾದಂಬರಿ ಕುರಿತ ಚರ್ಚೆಯಲ್ಲಿ ಸ್ಪಷ್ಟವಾಗಿ ಒಡಮೂಡಿದೆ.

ಲಂಕೇಶರ ಕಥನವನ್ನು ಕುರಿತು ಬಂದ ಅಧ್ಯಯನಗಳಲ್ಲಿ ʼಮಣ್ಣಿನ ಕಸುವುʼ ವಿಭಿನ್ನವಾಗಿ ನಿಲ್ಲುತ್ತದೆ ಎಂಬುದನ್ನು ಈ ಮೇಲಿನ ವಿಚಾರಗಳು ಸ್ಪಷ್ಟಪಡಿಸುತ್ತವೆ. ಲಂಕೇಶರಂತಹ ಸಮರ್ಥ ಬರಹಗಾರರ ಸಾಹಿತ್ಯವು ಕಾಲದ ಪರೀಕ್ಷೆಗೆ ಒಡ್ಡಿ ಅದರ ಸತ್ವವನ್ನು ಅರಿಯಲು ಈ ತರಹದ ಅಧ್ಯಯನಗಳು ಅಗತ್ಯವಾಗಿದೆ.

– ಡಾ.ಸುಧಾಕರ ದೇವಾಡಿಗ ಬಿ.

ಪುಸ್ತಕಕ್ಕಾಗಿ: ಅಮೂಲ್ಯ ಪುಸ್ತಕ 94486 76770

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

"ಧರ್ಮ, ಧರ್ಮ"ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ...

ಕೃಷಿ ಸಚಿವರ ಸೂಚನೆಯನ್ನು ಗೌರವಿಸದ ಕುಲಪತಿ: ಕೃಷಿ ವಿವಿಗಳಿಗೇ ‘ಕಿಸಾನ್ ಸತ್ಯಾಗ್ರಹ’ ಬೇಡವಾಯಿತೇ?

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಹೋರಾಟದ 'ಕಿಸಾನ್ ಸತ್ಯಾಗ್ರಹ'ವನ್ನು ನೋಡುವ, ಆ ಮೂಲಕ...

ಸತ್ಯಶೋಧನೆ | ಮಂಗಳೂರಿನ ಸೇಂಟ್‌ ಜೆರೋಸಾ ಶಾಲೆ ಹಿಂದೂ ವಿರೋಧಿಯೇ?

ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ,...

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಸ್ವಾಯತ್ತತೆ ಉಳಿಸಿಕೊಳ್ಳಲೋ, ಸ್ವಪ್ರತಿಷ್ಠೆ ಪ್ರದರ್ಶಿಸಲೋ?

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು. ಹಾಗೇ ಅದು ನಿಷ್ಪಕ್ಷಪಾತವಾಗಿ...