ಔರಾದ್‌ | ಮೀಸಲು ಕ್ಷೇತ್ರದಲ್ಲಿ ‘ಕೈ – ಕಮಲ’ ನೇರ ಹಣಾಹಣಿ

Date:

ಔರಾದ್‌ ಕ್ಷೇತ್ರದಲ್ಲಿ ಹಿಂದಿಗಿಂತಲೂ ಈ ಬಾರಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿದೆ. ಲಿಂಗಾಯತ, ಮಾರಾಠ ಹಾಗೂ ಲಂಬಾಣಿ ಸಮುದಾಯ ಕೈ ಹಿಡಿದರೆ ಮಾತ್ರ ಪ್ರಭು ಚವ್ಹಾಣ ಅವರ ಗೆಲುವಿಗೆ ಲಗಾಮು ಹಾಕುವ ಕಾಂಗ್ರೆಸ್ಸಿನ ಕನಸು ಫಲಿಸಬಹುದು. ಆದರೆ, ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಭು ಚವ್ಹಾಣ ತಮ್ಮ ಇನ್ನಿಲ್ಲದ ಕಸರತ್ತು ನಡೆಸಿ ಗೆಲ್ಲುವ ತವಕದಲ್ಲಿದ್ದಾರೆ.

ಬೀದರ್ ಜಿಲ್ಲೆಯ ಗಡಿ ತಾಲೂಕು ಔರಾದ ವಿಧಾನಸಭಾ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿರುವ ‘ಕಮಲ’ವನ್ನು ಬಾಡಿಸಲು ‘ಕೈ’ಪಡೆ ಈ ಬಾರಿ ನೇರ ಪೈಪೋಟಿ ಒಡ್ಡಿದೆ.

2008 ರಿಂದ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರವಾಗಿ ಮಾರ್ಪಟ್ಟ ಔರಾದ್‌, ಬೀದರ್‌ ಜಿಲ್ಲೆಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ. ಮೀಸಲು ಕ್ಷೇತ್ರವಾದ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಬಿಜೆಪಿ ಭದ್ರಕೋಟೆ ಮಾಡಿಕೊಂಡಿರುವ ಸಚಿವ ಪ್ರಭು ಚವ್ಹಾಣ ಅವರನ್ನು ಮಣಿಸಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ.

ಲಿಂಗಾಯತ, ಲಂಬಾಣಿ ಹಾಗೂ ಮರಾಠ ಸಮುದಾಯದ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಔರಾದ್ ಕ್ಷೇತ್ರದಲ್ಲಿ ಕಮಲನಗರ ತಾಲೂಕು ಒಳಗೊಂಡಂತೆ 255 ಮತಗಟ್ಟೆಗಳಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2008ರ ಕ್ಷೇತ್ರ ಮರುವಿಂಗಡಣೆಯಾದಾಗ ನಡೆದ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಲಂಬಾಣಿ ಸಮುದಾಯದ ಪ್ರಭು ಚವ್ಹಾಣ ಶಾಸಕರಾದರು. 2013 ಹಾಗೂ 2018ರ ಚುನಾವಣೆಯಲ್ಲಿಯೂ ಗೆದ್ದು ಹಾಲಿ ಪಶು ಸಂಗೋಪನೆ ಇಲಾಖೆ ಸಚಿವರಾಗಿದ್ದಾರೆ.

2008 ಮತ್ತು 2018ರಲ್ಲಿ ಬಿಜೆಪಿಯೊಂದಿಗೆ ಪ್ರಬಲ ಪೈಪೋಟಿ ಒಡ್ಡಿದ ಕಾಂಗ್ರೆಸ್‌ಗೆ ಬಿಜೆಪಿ ಮಣಿಸಲು ಸಾಧ್ಯವಾಗಲಿಲ್ಲ. 2013ರಲ್ಲಿ ಬಿಜೆಪಿ ಹಣಿಯಲು ಕೆಜೆಪಿ ಪೈಪೋಟಿ ನಡೆಸಿದಾಗ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು.

ಹ್ಯಾಟ್ರಿಕ್ ಜಯ ಬಾರಿ‌ಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಪ್ರಭು ಚವ್ಹಾಣ ಈ ಬಾರಿಯೂ ಅಬ್ಬರದ ಪ್ರಚಾರದಲ್ಲಿದ್ದಾರೆ. ಪ್ರಭು ಚವ್ಹಾಣ ಅವರನ್ನು ಮಣಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್ ನಿವೃತ್ತ ಅಧಿಕಾರಿ ಡಾ. ಭೀಮಸೇನರಾವ ಶಿಂಧೆ ಅವರನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್‌ನಿಂದ ಜಯಸಿಂಗ್ ರಾಠೋಡ್, ಆಮ್ ಆದ್ಮಿ, ಕೆಆರ್‌ಎಸ್, ಬಿಎಸ್‌ಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

“ಕಳೆದ 15 ವರ್ಷಗಳಿಂದ ನಿರಂತರವಾಗಿ ಗೆದ್ದು ಬರುತ್ತಿರುವ ಶಾಸಕ, ಸಚಿವ ಪ್ರಭು ಚವ್ಹಾಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಭ್ರಷ್ಟಾಚಾರ, ಜಾತಿ ರಾಜಕಾರಣ ನಡೆಸಿದ್ದಾರೆ. ಇದರಿಂದ ಕ್ಷೇತ್ರದ ಜನತೆ ಬೇಸತ್ತು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್‌ ಬೆಂಬಲಿಸಿ ಬದಲಾವಣೆ ಬಯಸಿದ್ದಾರೆ” ಎಂದು ಕಾಂಗ್ರೆಸ್ ಅಭ್ಯರ್ಥಿ ಶಿಂಧೆ ಪ್ರಚಾರದಲ್ಲಿ ಹೇಳುತ್ತಿದ್ದಾರೆ.

“ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯೊಂದಿಗೆ ತನ್ನ ವ್ಯಾಪ್ತಿ ಹಂಚಿಕೊಂಡ ಹಿಂದುಳಿದ ಔರಾದ್‌ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ. ಕ್ಷೇತ್ರದ ಎಲ್ಲ ಜಾತಿ – ಧರ್ಮದ ಜನರೊಂದಿಗೆ ಉತ್ತಮ ಒಡನಾಟವಿದೆ. ಈ ಬಾರಿಯೂ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ನಾಲ್ಕನೇ ಬಾರಿಗೆ ವಿಜಯ ಪತಾಕೆ ಹಾರಿಸುವುದು ನಿಶ್ಚಿತ” ಎಂದು ಸಚಿವ ಪ್ರಭು ಚವ್ಹಾಣ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಕೈ – ಕಮಲಕ್ಕೆ ಪಕ್ಷಾಂತರ ಬಿಸಿ

ಕ್ಷೇತ್ರದಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಬಾರಿ ಪ್ರಭು ಚವ್ಹಾಣ ಅವರನ್ನು ಶತಾಯಗತಾಯ ಸೋಲಿಸಲೇಬೇಕೆನ್ನುವ ಪಡೆಯೊಂದು ಸಿದ್ಧವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದೆ. ಈ ಹಿಂದೆ ಪ್ರಭು ಚವ್ಹಾಣ ಅವರೊಂದಿಗೆ ಗುರುತಿಸಿಕೊಂಡಿದ್ದ ಬಿಜೆಪಿಯ ಮುಖಂಡರು ಕಮಲ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಮೇಲ್ನೋಟಕ್ಕೆ ನಿಜ ಎನ್ನುವಂತಾಗಿದೆ.

ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದ ರವೀಂದ್ರ ಸ್ವಾಮಿ ಅವರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆ ಅವರೂ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು, ಬಲ ಬಂದಂತಾಗಿದೆ. ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಕೂಟ ‘ಪ್ರಭುವಿಗೆ’ ಮಣಿಸಲು ಒಗ್ಗಟ್ಟಿನ ಮಂತ್ರ ಪ್ರದರ್ಶಿಸಿದ್ದು, ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿ ಮಾಜಿ ಶಾಸಕ ಗುಂಡಪ್ಪ ವಕೀಲ 2004ರಲ್ಲಿ ಜೆಡಿಎಸ್ ಸೇರಿ ಸ್ಪರ್ಧಿಸಿ ಸೋತಿದ್ದರು. ನಂತರ ಕಾಂಗ್ರೆಸ್ ಸೇರಿ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿ ಚವ್ಹಾಣ ಪರ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್ಸಿಗೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.

ಜಾತಿವಾರು ಸಮೀಕರಣ

ಔರಾದ ಮತಕ್ಷೇತ್ರದಲ್ಲಿ 1,13,956 ಪುರುಷ ಮತ್ತು 1,05,254 ಮಹಿಳೆರು ಸೇರಿದಂತೆ ಒಟ್ಟು 2,19,210 ಮಂದಿ ಮತದಾರರಿದ್ದಾರೆ.

ಕ್ಷೇತ್ರದಲ್ಲಿ ಲಿಂಗಾಯತ, ಲಂಬಾಣಿ, ಮರಾಠ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಹಾಗೂ ಇತರೆ ಸಮುದಾಯದ ಮತಗಳಿವೆ. ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ, ಲಂಬಾಣಿ ಹಾಗೂ ಮರಾಠ ಸಮುದಾಯದ ಮತಗಳ ಮೇಲೆ ಮೂವರೂ ಕೇಂದ್ರೀಕರಿಸಿದ್ದಾರೆ. ಈವರೆಗೆ ಕೈ ಹಿಡಿದು ಗೆಲ್ಲಿಸಿದ ಲಂಬಾಣಿ ಸಮುದಾಯ ಮತ್ತೊಮ್ಮೆ ತಮ್ಮ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕುವುದು ಹೆಚ್ಚು ಎಂದು ಹೇಳಲಾಗುತ್ತಿದೆ. ಒಮ್ಮೆಯೂ ದಲಿತರಿಗೆ ಅಧಿಕಾರ ದಕ್ಕದ ಕ್ಷೇತ್ರದಲ್ಲಿ ಈ ಬಾರಿ ಜಯ ಸಾಧಿಸಲೇಬೇಕು ಎಂಬ ಸವಾಲಾದರೆ ಸಚಿವ ಪ್ರಭು ಚವ್ಹಾಣ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆ.

ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನೇರ ಪೈಪೋಟಿ ನಿಶ್ಚಿತ ಎನ್ನುವಂತಿದೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಜಯಸಿಂಗ್ ರಾಠೋಡ್ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಲಂಬಾಣಿ ಸಮುದಾಯದ ಮೇಲೆ ಹಿಡಿತ ಸಾಧಿಸಿದ ಪ್ರಭು ಚವ್ಹಾಣ ಅವರನ್ನು ಮಣಿಸಲು ಅದೇ ಸಮುದಾಯದ ಅಭ್ಯರ್ಥಿಯನ್ನು ದಳಪತಿಗಳು ಕಣಕ್ಕಿಳಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕಾರಣಕ್ಕಾಗಿ ಕೈ – ಕಮಲಕ್ಕೆ ಮತ ವಿಭಜನೆಯಾಗುವ ಭೀತಿ ಎದುರಾಗಿದೆ.

ಈ ಸುದ್ದಿ ಓದಿದ್ದೀರಾ? ಹೊಳೆನರಸೀಪುರ ಕ್ಷೇತ್ರ | ಬದಲಾವಣೆ ಬಯಸುತ್ತಿದ್ದಾರೆಯೇ ಮತದಾರರು?

2008ರಿಂದ ಕ್ಷೇತ್ರದ ಸಾಂಪ್ರದಾಯಿಕ ಮತಗಳು ಬಿಜೆಪಿಗೆ ವರವಾಗಿದ್ದವು. ಆದರೆ, ಈ ಬಾರಿ ಲಿಂಗಾಯತ ಮತ್ತು ಮರಾಠ ಸಮುದಾಯದ ಪ್ರಮುಖರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆ ತಮ್ಮ ಸಮುದಾಯದ ಅಧಿಕ ಮತಗಳು ವಿಭಜಿಸುವ ಸಾಧ್ಯತೆಯಿದೆ. ಲಂಬಾಣಿ ಸಮುದಾಯದ ಮತಬುಟ್ಟಿಗೆ ಕೈ ಹಾಕಲು ಹೊರಟ ಕೈ – ದಳಕ್ಕೆ ಎಷ್ಟು ಲಾಭವಾಗುತ್ತೊ ನಷ್ಟವಾಗುತ್ತೊ ಎಂಬುದನ್ನು ಕಾದು ನೋಡಬೇಕಷ್ಟೇ.

ಕ್ಷೇತ್ರದಲ್ಲಿ ಹಿಂದಿಗಿಂತಲೂ ಈ ಬಾರಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವ ಕಾರಣ ಕಾಂಗ್ರೆಸ್ ಗೆಲ್ಲುವ ವಿಶ್ವಾಸದಲ್ಲಿದೆ. ಲಿಂಗಾಯತ, ಮಾರಾಠ ಹಾಗೂ ಲಂಬಾಣಿ ಸಮುದಾಯ ಕೈ ಹಿಡಿದರೆ ಮಾತ್ರ ಪ್ರಭು ಚವ್ಹಾಣ ಅವರ ಗೆಲುವಿಗೆ ಲಗಾಮು ಹಾಕುವ ಕಾಂಗ್ರೆಸ್ಸಿನ ಕನಸು ಫಲಿಸಬಹುದು. ಆದರೆ, ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಭು ಚವ್ಹಾಣ ತಮ್ಮ ಇನ್ನಿಲ್ಲದ ಕಸರತ್ತು ನಡೆಸಿ ಗೆಲ್ಲುವ ತವಕದಲ್ಲಿದ್ದಾರೆ. ಯಾವ ಸಮುದಾಯ ಯಾರಿಗೆ ವಿಜಯ ಮಾಲೆ ಹಾಕುತ್ತದೆ ಎಂಬುದಕ್ಕೆ ಮೇ 13ರ ತನಕ ಕಾಯಲೇಬೇಕು.

ಬಾಲಾಜಿ ಕುಂಬಾರ್
+ posts

ಕವಿ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಲ್ಲಾ ಗೌಡ್ರೇ, ಇದು ನ್ಯಾಯ ಅಲ್ಲ, ಇನ್ನು ನಿಲ್ಲಿಸ್ಬಿಡಿ ಸಾಕು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮನವಿ

ಪ್ರಜ್ವಲ್‌ ರೇವಣ್ಣನ ವಿಡಿಯೋಗಳನ್ನ ನೋಡಿ ಹಾಸನದ ಜನ ಬೆಚ್ಚಿ ಬಿದ್ದಿದ್ದಾರೆ. ಮೊದಮೊದಲು...

ದಾವಣಗೆರೆ | ಕಾಂಗ್ರೆಸ್‌ಗೆ ಮಡಿವಾಳ ಸಮಾಜ ಬೆಂಬಲ; ಬೇಡಿಕೆಗಳ ಈಡೇರಿಕೆಗೆ ಆಗ್ರಹ

ರಾಜ್ಯದಲ್ಲಿನ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ರಾಜ್ಯದ ಎಲ್ಲ ತಾಲೂಕಿನಲ್ಲಿ...

ಚಿಕ್ಕಮಗಳೂರು | ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ ಕರೆ

ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ...