ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ವಾರ ಬಾಂಗ್ಲಾದೇಶದ ಕವಿ ಸಂಖ ಘೋಷ್ ಅವರ ʼಮಣ್ಣುʼ ಕವಿತೆಯನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್ ಭಾಗ್ಯ
ಮಣ್ಣು
ನನ್ನ ಸ್ಪರ್ಶದಲ್ಲಿರುವ ಪ್ರೀತಿ ಈ ನವಿರುಗಂಧದ ಸುಗಂಧರಾಜನನ್ನು ಅರಳಿಸಿದೆ.
ಪ್ರತಿ ಹುಲ್ಲಿನ ದಳವೂ ನನ್ನ ಪಾದದ ನೆನಪನ್ನು ಎತ್ತಿ ಹಿಡಿದಿವೆ.
ಸಂತಸದ ತೊರೆ ನನ್ನ ಪಕ್ಕದಲ್ಲೇ ಹುಟ್ಟಿ
ನನ್ನ ಮೊದಲ ಅನುಭೂತಿಯೊಡನೆ ಕೆಳಗೆ ಹರಿದಿದೆ.
ಅಂಗಳದ ಮೂಲೆಯಲಿ ಮುರಿದುಬಿದ್ದ ಕಂಬದಲ್ಲಿರುವ ಪಾರಿವಾಳಗಳು
ಮಧ್ಯಾಹ್ನದ ವೇಳೆ ನನ್ನ ಉಸಿರಿನಲ್ಲಿ ತಮ್ಮ ದನಿಯನ್ನು ಕಂಡುಕೊಂಡಿವೆ.
ಸಾಗುವಾನಿಮರಗಳ ತೋಪಿನಾಚೆಯ ಹುಲ್ಲುಹಾಸಿನ ಮೇಲೆ
ಗೋಷ್ಠಿಯ ನಂತರ
ಪಾಡ್ಯದ ಚಂದಿರನು ಸ್ತಬ್ಧವಾಗಿ
ನನ್ನ ಪಕ್ಕದಲ್ಲಿ ವಿರಮಿಸಿದ್ದಾನೆ.
ನನ್ನ ಪ್ರತಿಹೆಜ್ಜೆಯೂ ನಿನ್ನ ಹೆಜ್ಜೆಯೊಡನೆ ಬೆಸೆದುಕೊಂಡಿದೆ.
ನಿನಗದು ಗೊತ್ತಿಲ್ಲ.
ನೀವ್ಯಾರೂ ಅದನ್ನು ಹಿಂದಿರುಗಿ ನೋಡಿಲ್ಲ.
ಸುತ್ತ ನೋಡು
ಎಲ್ಲ ಸೇತುವೆಗಳೂ ಮುರಿದಿವೆ
ನನ್ನನ್ನು.
.’ ಹೊರಟುಹೋಗು’
ಎಂದರೆ ಎಲ್ಲಿಗೆ ಹೋಗಲಿ?
ಸಂಧ್ಯಾಕಿರಣ ಗುಡಿಸಲುಗಳಮೇಲೆ ಚೆಲ್ಲಿದೆ
ಅಲ್ಲಿಂದ ಅಜ಼ಾನ್ ಕೇಳುತ್ತಿದೆ.
ನಾನಿಲ್ಲಿ ನನ್ನ ಅಂಗಳದಲ್ಲಿ ಕುಳಿತಿದ್ದೇನೆ
ಜಗತ್ತನ್ನೇ ಅತಿಥಿಯಾಗಿ ಕನಸಿ.
ಈಗಲೂ ನಡುಕಹುಟ್ಟಿಸುವ ಸಮಾಜ
ನನಗೆ ಪರೀಕ್ಷೆ ಒಡ್ಡುತ್ತಿದೆ
ಹೇಳು
ಈ ಮಣ್ಣು ನನ್ನದೂ ಎಂದು
ಎಲ್ಲರೆದುರು ಹೇಗೆ ಸಾಬೀತುಪಡಿಸಲಿ?





