ಬೆಳಗಾವಿ ನಗರದ ರಾಮದೇವ್ ಹೋಟೆಲ್ ಎದುರಿನ ಡಿ-ಮಾರ್ಟ್ ಕಾರ್ನರ್ ಕಡೆಗೆ ಹೋಗುವ ರಸ್ತೆಯಲ್ಲಿ ತಡರಾತ್ರಿ ಚಲಿಸುತ್ತಿದ್ದ ಸ್ವಿಫ್ಟ್ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಚಲಿಸುತ್ತಿದ್ದ ವೇಳೆ ಕಾರಿನ ಎಂಜಿನ್ ಭಾಗದಿಂದ ಮೊದಲು ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದ್ದು, ಕಾರಿನಲ್ಲಿದ್ದ ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇವಲ 10 ರಿಂದ 15 ನಿಮಿಷಗಳಲ್ಲೇ ಬೆಂಕಿಯ ಕೆನ್ನಾಲಿಗೆಗೆ ಸ್ವಿಫ್ಟ್ ಕಾರು ಸಂಪೂರ್ಣ ಆಹುತಿಯಾಗಿದೆ. ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಭಾರೀ ಪ್ರಮಾಣದ ಆಸ್ತಿ ನಷ್ಟ ಸಂಭವಿಸಿದೆ.
ರಸ್ತೆ ಮಧ್ಯೆಯೇ ಕಾರು ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದು, ಕೆಲಕಾಲ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
This video cannot be played in your browser. Open the video directly
ಬೆಳಗಾವಿ ನೋಂದಣಿ ಹೊಂದಿದ್ದ ಈ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.




