ಪತ್ನಿ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಳಗಾವಿ ಜಿಲ್ಲೆಯ ಯರಗಟ್ಟಿ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಕೇಳಿಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕರನ್ನು ಸತ್ತಿಗೇರಿ ಗ್ರಾಮದ ನಿವಾಸಿ ಸಂತೋಷಸಿಂಗ್ ಮಾರುತಿಸಿಂಗ್ ರಜಪೂತ (38) ಎಂದು ಗುರುತಿಸಲಾಗಿದೆ. ಅವರು ಸಮೀಪದ ಅಕ್ಕಿಸಾಗರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಉತ್ತಮ ಶಿಕ್ಷಕರಾಗಿ ಹೆಸರುವಾಸಿಯಾಗಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಯರಗಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಮೃತ ಸಂತೋಷಸಿಂಗ್ ಅವರು ತಂದೆ, ತಾಯಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶಿಕ್ಷಕರ ಅಕಾಲಿಕ ನಿಧನದಿಂದ ಸತ್ತಿಗೇರಿ ಗ್ರಾಮ ಹಾಗೂ ಅಕ್ಕಿಸಾಗರ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.



