ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ತಾಂಡಾ ಗ್ರಾಮದ ಸರ್ವೇ ನಂ.181ರಲ್ಲಿ 2018ರಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಾಲಕ್ಷ್ಮಿ ಎಂ-ಸ್ಯಾಂಡ್ ಘಟಕ ಹಾಗೂ ಕಲ್ಲುಪುಡಿ ಕೈಗಾರಿಕೆಯಿಂದ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರ ನೇತೃತ್ವದಲ್ಲಿ ಓಬಳಾಪುರ ಹಾಗೂ ರಾಮಾಪುರ ತಾಂಡಾ ಗ್ರಾಮಸ್ಥರು ಓಬಳಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಘಟಕದ ಕಾನೂನುಬದ್ದತೆ ಕುರಿತು ಸಮಗ್ರ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಘಟಕವನ್ನು ಬಂದ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಎಂ-ಸ್ಯಾಂಡ್ ಘಟಕದಿಂದ ಉಂಟಾಗುತ್ತಿರುವ ಧೂಳು ಮತ್ತು ಶಬ್ದಮಾಲಿನ್ಯದಿಂದ ಸಮೀಪದ ಜನವಸತಿ ಪ್ರದೇಶದ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೃಷಿ ಬೆಳೆಗಳಿಗೂ ಹಾನಿಯಾಗುತ್ತಿದ್ದು, ಕಲ್ಲು ಸಾಗಾಟದಿಂದ ಗ್ರಾಮೀಣ ರಸ್ತೆಗಳು ಹಾಳಾಗಿ ಅಪಘಾತದ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಘಟಕಕ್ಕೆ ಅಗತ್ಯ ಪರವಾನಗಿ, ನಿರಾಕ್ಷೇಪಣಾ ಪತ್ರ ಹಾಗೂ ಉದ್ಯಮ ಪರವಾನಗಿ ಇದೆಯೇ ಮತ್ತು ಅವುಗಳನ್ನು ನಿಯಮಾನುಸಾರ ನವೀಕರಿಸಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಕರ್ನಾಟಕ ಕಲ್ಲು ಪುಡಿಮಾಡುವ ಘಟಕಗಳ ನಿಯಂತ್ರಣ ಕಾಯ್ದೆ-2011, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957 ಹಾಗೂ ಸಂಬಂಧಿತ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟಕದ ಸಮೀಪ ಸರ್ವೇ ನಂ.180(ಅ)ರಲ್ಲಿ ಸುಮಾರು 60 ಎಕರೆ ಅರಣ್ಯ ಪ್ರದೇಶವಿದ್ದು, ಗಣಿಗಾರಿಕೆ ಚಟುವಟಿಕೆಯಿಂದ ಅರಣ್ಯ ಸಂಪತ್ತು ಹಾಗೂ ಪರಿಸರಕ್ಕೆ ಹಾನಿಯಾಗಿದೆಯೇ ಎಂಬುದನ್ನೂ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಂಟು ವರ್ಷಗಳಿಂದ ನಡೆಯುತ್ತಿರುವ ಘಟಕದ ಬಗ್ಗೆ ಸಮಗ್ರ ತನಿಖೆ ನಡೆಸಿ, ನಿಯಮಬಾಹಿರತೆ ಕಂಡುಬಂದರೆ ದಂಡ ವಿಧಿಸಿ, ಪರಿಸರ ಹಾಗೂ ಗ್ರಾಮಸ್ಥರಿಗೆ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಬೆಳಗಾವಿ ಜಿಲ್ಲಾಡಳಿತ ಹಾಗೂ ರಾಮದುರ್ಗ ತಾಲೂಕಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ರಾಮದುರ್ಗ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ವಿಠಲ ಲಮಾಣಿ, ನಾಮದೇವ ನಾಯಕ, ಗುರಪ್ಪ ಹಾಲಿಗೆರಿ, ಸಂತೋಷ ಜಾದವ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



