ಖ್ಯಾತ ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಶಿವಾಜಿ ಕಾಗಣಿಕರ ಅವರ ‘ಸರ್ವೋದಯಚಾ ವಾಟಸರೂ’ ಮರಾಠಿ ಆತ್ಮಚರಿತ್ರೆ ಹಾಗೂ ‘ಗುಡ್ಡಗಾಡಿನ ಗಾಂಧಿ’ ಕನ್ನಡ ಜೀವನಚರಿತ್ರೆ ಕೃತಿಗಳನ್ನು ಖ್ಯಾತ ಸಾಮಾಜಿಕ ಕಾರ್ಯಕರ್ತೆ, ಪರಿಸರವಾದಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೆಳಗಾವಿ ನಗರದ ಗೋಗಟೆ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಶಿವಾಜಿ ಕಾಗಣಿಕರ, ಜಯಂತ ನಾರ್ವೇಕರ, ಸುಭಾಷ್ ಓವುಳಕರ್, ಮಾಲೋಜಿರಾವ್ ಅಸ್ತೇಕರ್, ವಿಕ್ರಮ ಪಾಟೀಲ, ವಿಜಯ ದಿವಾಣ, ನೀಲಾ ಅಷ್ಟೆ, ಇಂದ್ರಜಿತ್ ಮೋರೆ, ಸವಿತಾ ಪವಾರ ಸೇರಿದಂತೆ ಗಣ್ಯರು, ಲೇಖಕರು ಹಾಗೂ ಶಿವಾಜಿ ಕಾಗಣಿಕರ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಮೇಧಾ ಪಾಟ್ಕರ್, ಶಿವಾಜಿ ಕಾಗಣಿಕರ ಅವರ ನೆಲ-ಜಲ ಸಂರಕ್ಷಣೆ, ಪರಿಸರ ಹಿತರಕ್ಷಣೆ, ಕಾರ್ಮಿಕರ ಹಿತಾಸಕ್ತಿ, ಸಾಮಾಜಿಕ ದುಶ್ಚಟಗಳ ನಿರ್ಮೂಲನೆ, ಗೋಬರ್ ಗ್ಯಾಸ್ ನಿರ್ಮಾಣ, ಮಹಿಳಾ ಹಾಗೂ ದಲಿತ ಶೋಷಣೆಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಕಾರ್ಯಗಳು ಗ್ರಾಮ ಸ್ವರಾಜ್ಯದ ಮಹೋನ್ನತ ಉದ್ದೇಶವನ್ನು ಹೊಂದಿವೆ ಎಂದು ಹೇಳಿದರು.
ವೈಯಕ್ತಿಕ ಬದುಕನ್ನು ಸಂಪೂರ್ಣವಾಗಿ ತ್ಯಾಗಗೊಳಿಸಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಜೀವನದುದ್ದಕ್ಕೂ ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ಅತ್ಯಂತ ವಿನಮ್ರತೆಯಿಂದ ಗುರುತರವಾದ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕ ವಿನಾಶ ನಿರಂತರವಾಗಿ ನಡೆಯುತ್ತಿದೆ. ಪ್ರಾಕೃತಿಕ ಸಂರಕ್ಷಣೆಯೊಂದಿಗೆ ಅಭಿವೃದ್ಧಿ ಸಾಧ್ಯವಿದೆ ಎಂಬುದಕ್ಕೆ ಶಿವಾಜಿ ಕಾಗಣಿಕರ ಅವರ ಕಾರ್ಯಸಾಧನೆಗಳು ಉತ್ತಮ ನಿದರ್ಶನಗಳಾಗಿವೆ ಎಂದು ಮೇಧಾ ಪಾಟ್ಕರ್ ತಿಳಿಸಿದರು

ಶಿವಾಜಿ ಅವರ ಆತ್ಮಚರಿತ್ರೆ ಕೇವಲ ಜೀವನ ಹಾಗೂ ಕೆಲಸಗಳ ಸಾಧನೆಯ ಪಟ್ಟಿಗೆ ಸೀಮಿತವಾಗಿಲ್ಲ. ಅವರ ಸಾಮಾಜಿಕ ಬದ್ಧತೆಯ ಜೀವನಕ್ರಮ ಹಾಗೂ ಗ್ರಾಮ ಸ್ವರಾಜ್ಯ ಅನುಷ್ಠಾನದ ವೈಚಾರಿಕ ಚಿಂತನೆಯ ಕ್ರಮಬದ್ಧತೆ ಕೃತಿಯಲ್ಲಿ ವ್ಯಕ್ತವಾಗಿದೆ. ವಿಚಾರಗಳೊಂದಿಗೆ ಸರಳತೆ ಹಾಗೂ ವಿನಮ್ರತೆಯೂ ಮಡುಗಟ್ಟಿದೆ ಎಂದರು.
ನಿರಂತರ 55 ವರ್ಷಗಳ ಅವರ ಕಾರ್ಯಸಾಧನೆ ಮಾತುಗಳ ವರ್ಣನೆಗೆ ಮೀರಿದ್ದಾಗಿದೆ. ಇಂತಹ ಅಪರೂಪದ ವ್ಯಕ್ತಿತ್ವ ನಿರ್ಮಾಣದ ಹಿಂದೆ ತಾಯಿಯ ಮಮಕಾರ, ವಂಚಿತ ಸಮುದಾಯಗಳ ಕಣ್ಣೀರು, ಬಡತನ, ಹಸಿವು, ಹಿಂಸೆ, ಶೋಷಣೆ ಹಾಗೂ ಮಹಿಳೆಯರ ವೇದನೆಗಳು ಪಾಠ ಕಲಿಸಿವೆ ಎಂದು ಮೇಧಾ ಪಾಟ್ಕರ್ ವಿವರಿಸಿದರು.
ಕೊನೆಯ ಉಸಿರಿನವರೆಗೂ ಸಮಾಜ ಸೇವೆ
ಇದುವರೆಗೆ ಮಾಡಿದ ಕೆಲಸಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವುದು ಸಂತಸ ತಂದಿದೆ. ಮತ್ತಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೊಸ ಚೈತನ್ಯ ದೊರೆತಿದೆ. ಕೊನೆಯ ಉಸಿರುವವರೆಗೂ ಸಮಾಜದ ಕಲ್ಯಾಣಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಡಾ. ಶಿವಾಜಿ ಕಾಗಣಿಕರ ತಿಳಿಸಿದರು.



