ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ವಿಡಿಯೋ ರೆಕಾರ್ಡ್ ಮಾಡಿ ಇಡೀ ದಿನ ಅಲ್ಲಿಯೇ ಕಳೆದಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ 23 ವರ್ಷದ ಯೂಟ್ಯೂಬರ್ ವಿಕಾಸ್ ಗೌಡರನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕದ ನಿವಾಸಿ ವಿಕಾಸ್ ಗೌಡ ಅವರು ಏಪ್ರಿಲ್ 7 ರಂದು ಮಧ್ಯಾಹ್ನ 12 ಗಂಟೆಗೆ ಚೆನ್ನೈಗೆ ಹೋಗುವ ಏರ್ ಇಂಡಿಯಾ ವಿಮಾನದ ಟಿಕೆಟ್ ಪಡೆದು ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ಆದರೆ ‘ಉದ್ದೇಶಪೂರ್ವಕವಾಗಿ’ ವಿಮಾನವನ್ನು ಹತ್ತಿಲ್ಲ. ಬದಲಿಗೆ, ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ವಿಮಾನ ನಿಲ್ದಾಣದ ಸುತ್ತಲೂ ತಿರುಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? 27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆ್ಯಂಗ್ರಿ ರಾಂಟ್‌ಮ್ಯಾನ್’ ಖ್ಯಾತಿಯ ಯೂಟ್ಯೂಬರ್ ಅಬ್ರದೀಪ್ ಸಾಹ!
ಸುಮಾರು 1.13 ಲಕ್ಷ ಚಂದಾದಾರರನ್ನು ಹೊಂದಿರುವ ಯೂಟ್ಯೂಬರ್ ವಿಕಾಸ್ ಗೌಡ ಏಪ್ರಿಲ್ 12 ರಂದು, ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿಕಾಸ್ ಗೌಡ “ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕಳೆದಿದ್ದೇನೆ ಮತ್ತು ವಿಮಾನ ನಿಲ್ದಾಣದ ಆವರಣದ ಅನೇಕ ಪ್ರದೇಶಗಳಿಗೆ ಹೋಗಿದ್ದೇನೆ” ಎಂದು ಸುಳ್ಳು ಹೇಳಿದ್ದರು ಎಂದು ವರದಿಯಾಗಿದೆ. ಈ ವಿಡಿಯೋವನ್ನು ಬಳಿಕ ವಿಕಾಸ್ ಗೌಡ ಡಿಲೀಟ್ ಮಾಡಿದ್ದಾರೆ.
“ಅವರು ವಿಮಾನ ನಿಲ್ದಾಣವನ್ನು ಪ್ರವೇಶಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ನಲ್ಲಿ ಭದ್ರತಾ ತಪಾಸಣೆ ಬಳಿಕ ಬೋರ್ಡಿಂಗ್ ಲಾಂಜ್ ಕಡೆಗೆ ಹೊರಟರು. ಆದರೆ ಅವರು ವಿಮಾನ ಹತ್ತುವ ಬದಲು ವಿಮಾನ ನಿಲ್ದಾಣದ ಆವರಣದಲ್ಲಿ ಸುತ್ತಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುಮಾರು ಆರು ಗಂಟೆಗಳ ಕಾಲ ಕಳೆದಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಾವಿನ ವಿಷ ಪ್ರಕರಣ | ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ವಿಡಿಯೋ ರೆಕಾರ್ಡ್ ಮಾಡಿದ ಬಳಿಕ ತನ್ನ ವಿಮಾನ ತಾನು ಬರುವಷ್ಟರಲ್ಲಿ ಹಾರಾಟ ನಡೆಸಿದೆ ಎಂದು ಭದ್ರತಾ ಸಿಬ್ಬಂದಿಗೆ ಸುಳ್ಳು ಹೇಳಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದಾರೆ. ಅವರು ಮಾನ್ಯವಾದ ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ಹೊಂದಿದ್ದರಿಂದ ಭದ್ರತಾ ಸಿಬ್ಬಂದಿಗೆ ಅವರ ಮೇಲೆ ಯಾವುದೇ ಅನುಮಾನ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಯೂಟ್ಯೂಬರ್ ಇದನ್ನು ಪ್ರಚಾರಕ್ಕಾಗಿ ಮಾಡಿದ್ದು ವಿಡಿಯೋದಲ್ಲಿ ಸುಳ್ಳು ಹೇಳಲಾಗಿದೆ ಎಂದು ವರದಿಯಾಗಿದೆ. ಈ ವಿಷಯ ಏಪ್ರಿಲ್ 15 ರಂದು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಯ ದೂರಿನ ಆಧಾರದ ಮೇಲೆ ವಿಕಾಸ್ ಗೌಡ ವಿರುದ್ಧ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 448 (ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದಾದ ಬಳಿಕ ಬಂಧಿಸಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.