ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರ ಆಶಾಕಿರಣವಾಗಿರುವ ಹಳ್ಳಿಖೇಡ್ (ಬಿ) ಸಮೀಪದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್ಎಸ್ಕೆ) ಸೆ.2ರಂದು ಹರಾಜು ಮಾಡಲು ಡಿಸಿಸಿ ಬ್ಯಾಂಕ್ ಹೊರಡಿಸಿದ್ದ ನೋಟಿಫಿಕೇಶನ್ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತಡೆ ನೀಡಿರುವುದನ್ನು ಬಿಜೆಪಿ ಸ್ವಾಗತಿಸಿದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮತ್ತು ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಡಿಸಿಸಿ ಬ್ಯಾಂಕ್ ನಡೆಸುತ್ತಿದ್ದ ಬಿಎಸ್ಎಸ್ಕೆ ಹರಾಜು ಪ್ರಕ್ರಿಯೆಯನ್ನು ತಡೆದು, ಎಲ್ಆರ್ಒಟಿ (ಗುತ್ತಿಗೆ, ನವೀಕರಣ, ನಿರ್ವಹಣೆ ಹಾಗೂ ಹಸ್ತಾಂತರ) ಆಧಾರದ ಮೇಲೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಈ ಕುರಿತು ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರನ್ನು ಕಳೆದ ವಾರ ಭೇಟಿ ಮಾಡಿ ಮನವಿ ಸಲ್ಲಿಸಿ, ರೈತರು ಮತ್ತು ಕಾರ್ಮಿಕರ ಹಿತ ಕಾಪಾಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವರು ಹರಾಜು ಪ್ರಕ್ರಿಯೆಗೆ ತಡೆ ನೀಡುವ ಭರವಸೆ ನೀಡಿದ್ದರು. ಅದರಂತೆ ಸರ್ಕಾರ ಇದೀಗ ಅಧಿಕೃತ ಆದೇಶ ಹೊರಡಿಸಿರುವುದು ಸ್ವಾಗತಾರ್ಹ” ಎಂದು ತಿಳಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಡಿಸಿಸಿ ಬ್ಯಾಂಕ್ನ ಸಿಇಒ ಅವರಿಗೆ ಪತ್ರ ಬರೆದು, ಬಿಎಸ್ಎಸ್ಕೆ ಕಾರ್ಖಾನೆಯನ್ನು ಎಲ್ಆರ್ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಅಂತಿಮ ಹಂತದಲ್ಲಿರುವ ಹಿನ್ನೆಲೆಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ನಿರ್ದೇಶಿಸಿದ್ದಾರೆ. ಸರ್ಕಾರ ಇನ್ನು ಯಾವುದೇ ವಿಳಂಬ ಮಾಡದೆ ಕಾರ್ಖಾನೆಯನ್ನು ಗುತ್ತಿಗೆಗೆ ವಹಿಸಿ, ಇದೇ ಸಾಲಿನ ಹಂಗಾಮಿನಿಂದಲೇ ಕಬ್ಬು ಅರೆಯುವಿಕೆ (ಕ್ರಷಿಂಗ್) ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಎಸ್ಎಸ್ಕೆ ಜಿಲ್ಲೆಯ ಹಳೆಯ ಸಹಕಾರ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದ್ದು, 1969ರಿಂದ ಕಬ್ಬು ಬೆಳೆಗಾರರ ಹಿತ ಕಾಪಾಡುತ್ತ ಬಂದಿದೆ. ಕಾರ್ಖಾನೆಯು ಸುಮಾರು 25 ಸಾವಿರ ಷೇರು ಸದಸ್ಯರನ್ನು ಹೊಂದಿದ್ದು, ಸಾವಿರಾರು ಕಾರ್ಮಿಕ ಕುಟುಂಬಗಳ ಬದುಕು ಕೂಡ ಇದರೊಂದಿಗೆ ಬೆಸೆದುಕೊಂಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಾಲ ವಸೂಲಿ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ 2024ರಲ್ಲಿ ಕಾರ್ಖಾನೆಯನ್ನು ಹರಾಜು ಮಾಡಲು ಮುಂದಾಗಿತ್ತು. ಆದರೆ ಬಿಜೆಪಿ ಹಾಗೂ ರೈತರ ಹೋರಾಟದ ಫಲವಾಗಿ ಸರ್ಕಾರ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಅಲ್ಲದೆ, ಬಿಎಸ್ಎಸ್ಕೆಯನ್ನು ಎಲ್ಆರ್ಒಟಿ ಆಧಾರದ ಮೇಲೆ ಗುತ್ತಿಗೆಗೆ ವಹಿಸಲು 2024 ಡಿಸೆಂಬರ್ 18ರಂದು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ನಂತರ ಸರ್ಕಾರದ ಮಟ್ಟದಲ್ಲಿ ಸುಮಾರು ಎರಡು ವರ್ಷ ಯಾವುದೇ ಗಮನಾರ್ಹ ಬೆಳವಣಿಗೆ ಕಂಡುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಡಿಸಿಸಿ ಬ್ಯಾಂಕ್ ಕಾರ್ಖಾನೆ ಹರಾಜಿಗೆ ಮುಂದಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಹಾಗೂ ರೈತರ ಹೋರಾಟದ ಫಲವಾಗಿ ಇದೀಗ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ. ಈಗಲಾದರೂ ಸರ್ಕಾರ ಕೊಟ್ಟ ಮಾತಿನಂತೆ ಖಾಸಗಿಯವರಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ವಹಿಸಿ, ತ್ವರಿತವಾಗಿ ಪುನಶ್ಚೇತನಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಈ ವಿಷಯದಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಿಎಸ್ಎಸ್ಕೆ ಕೇವಲ ಒಂದು ಕೈಗಾರಿಕಾ ಘಟಕವಲ್ಲ. ಜಿಲ್ಲೆಯ ಸಾವಿರಾರು ಕಬ್ಬು ಬೆಳೆಗಾರರ ಬದುಕು, ಕಾರ್ಮಿಕರ ಉದ್ಯೋಗ ಹಾಗೂ ಅನೇಕ ಕುಟುಂಬಗಳ ಆರ್ಥಿಕ ಭವಿಷ್ಯ ಇದರೊಂದಿಗೆ ನೇರವಾಗಿ ಸಂಬಂಧಿಸಿದೆ. ಕಾರ್ಖಾನೆ ಪುನಶ್ಚೇತನಗೊಂಡು ಮತ್ತೆ ಕಾರ್ಯಾರಂಭ ಮಾಡಿದರೆ ಕಬ್ಬು ಬೆಳೆಗಾರರಿಗೆ ಮಾರುಕಟ್ಟೆಯ ಭದ್ರತೆ ದೊರೆಯಲಿದ್ದು, ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಾರ್ಖಾನೆಗೆ ಪೂರೈಸಲು ಅನುಕೂಲವಾಗಲಿದೆ. ಇದರಿಂದ ಕಬ್ಬು ಕೃಷಿಯ ಬಗ್ಗೆ ರೈತರಲ್ಲಿ ಮತ್ತಷ್ಟು ವಿಶ್ವಾಸ ಮೂಡಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಚನ ಕಲ್ಯಾಣ | ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಹರಾಜು ಪ್ರಕ್ರಿಯೆ ತಡೆಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಬಿಜೆಪಿ ನಾಯಕರು, ಬಿಎಸ್ಎಸ್ಕೆಯನ್ನು ಶೀಘ್ರ ಗುತ್ತಿಗೆಗೆ ವಹಿಸಿ ಪುನಶ್ಚೇತನಗೊಳಿಸುವ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಈ ವಿಷಯದಲ್ಲಿ ಮತ್ತೆ ವಿಳಂಬ ಧೋರಣೆ ಅನುಸರಿಸಿದರೆ ರೈತರು ಮತ್ತು ಕಾರ್ಮಿಕರೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.




