ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್‌ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಹೆಚ್‌ಎಂಟಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಸಚಿವರು, “ಒಂದು ವೇಳೆ ರಾಜ್ಯ ಸರ್ಕಾರ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಹೆಚ್‌ಎಂಟಿಗೆ ಜಮೀನನ್ನು ಪುಕ್ಕಟೆ ಕೊಟ್ಟಿಲ್ಲ
“ಅರಣ್ಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಿವಿಧ ಸರ್ಕಾರಿ ಸಂಸ್ಥೆ, ಇಲಾಖೆಗಳಿಗೆ ಮತ್ತು ಖಾಸಗಿಯವರಿಗೆ ಸಂಸ್ಥೆ ಮಾರಾಟ ಮಾಡಿದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಮೈಸೂರು ಮಹಾರಾಜರ ಕಾಲದಲ್ಲಿ ಜಗತ್ಪ್ರಸಿದ್ಧ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ, ಪುಕ್ಕಟೆಯಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ” ಎಂದರು.
ಜಮೀನು ವಾಪಸ್ ಪಡೆದು ಯಾವ ಬಿಲ್ಡರ್‌ಗೆ ಧಾರೆ ಎರೆಯುತ್ತೀರಿ?
“ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ? ಹಿಂದೆ ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಿಮ್ಮ ಪಕ್ಷದ ನಾಯಕರು ಮಾಡಿದ್ದೇನು ಎಂಬುದನ್ನು ಸ್ವಲ್ಪ ತಿಳಿದುಕೊಂಡು ಮಾತನಾಡಿ” ಎಂದು ಟಾಂಗ್ ಕೊಟ್ಟರು.
“ಹೆಚ್‍ಎಂಟಿಗೆ 599 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವರು ಪರಿಶೀಲಿಸುವುದು ಒಳ್ಳೆಯದು. ರಾಜ್ಯ ಸರಕಾರ ಇದೇ ರೀತಿ ಕಂಪನಿಗೆ ಕಿರುಕುಳ ನೀಡಿದರೆ, ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ” ಎಂದು ಗುಡುಗಿದರು.
ಕುದುರೆಮುಖ ಕಂಪನಿ ಯೋಜನೆಗೂ ಅಡ್ಡಿ
“ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ಕಾಯಕಲ್ಪ ನೀಡಲು ದೇವದಾರಿ ಗಣಿಗಾರಿಕೆ ಯೋಜನೆಗೆ ಆರ್ಥಿಕ ನೆರವು ನೀಡುವ ಕಡತಕ್ಕೆ ಸಹಿ ಹಾಕಿದೆ. ಆ ಕಡತವನ್ನು ಹಣಕಾಸು ಇಲಾಖೆಗೆ ಕಲಿಸುವುದಕ್ಕೆ ಮಾತ್ರ ನಾನು ಒಪ್ಪಿಗೆ ಕೊಟ್ಟೆ. ಆದರೆ, ಕುಮಾರಸ್ವಾಮಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ಕೊಟ್ಟು ಅರಣ್ಯ ನಾಶಕ್ಕೆ ಕಾರಣ ಆಗುತ್ತಿದ್ದಾರೆ ಎಂದು ರಾಜ್ಯ ಮತ್ತು ಇನ್ನೂ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸಿದರು” ಎಂದರು.
“ಬಳ್ಳಾರಿಯ ಸಂಡೂರಿನಲ್ಲಿ ಗಣಿಗಾರಿಕೆ ನಡೆಸಲು ಸಿದ್ದರಾಮಯ್ಯನವರೇ ಸಿಎಂ ಆಗಿದ್ದ ವೇಳೆಯೇ ದೇವದಾರಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ನೀಡಿದ್ದರು. ಅವರೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದಕ್ಕೆ ಕೇಂದ್ರದ ಪರಿಸರ ಇಲಾಖೆಯ ಅನುಮತಿಯೂ ಸಿಕ್ಕಿದೆ. ಇದೆಲ್ಲ ಆದ ಮೇಲೆಯೇ ನಾನು ನಾನು ಹಣಕಾಸು ಗ್ಯಾರಂಟಿ ಕಡತಕ್ಕೆ ಸಹಿ ಹಾಕಿದೆ” ಎಂದು ಹೇಳಿದರು.
ಶೀಘ್ರವೇ ಒಳ್ಳೆಯ ಸುದ್ದಿ ಕೊಡುತ್ತೇನೆ
“ಪ್ರಧಾನಿಗಳ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು? ಯಾವಾಗ? ಎಂದು ಈಗಲೇ ಹೇಳಲಾರೆ. ಅದು ಯಶಸ್ವಿ ಆದರೆ ಪ್ರಧಾನಿಗಳಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ ಹಂತವಾಗಿ ಸರಿ ಹೋಗುತ್ತವೆ. ಆ ಪ್ರಯತ್ನ ದಲ್ಲಿ ನಾನು ಇದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ಹೇಳಲಿದ್ದೇನೆ” ಎಂದು ಸಚಿವರು ಹೇಳಿದರು.