ಗೌರಿ ಅವರ ಹೇಳಿಕೆಯನ್ನು ತಿರುಚಿ ಅಥವಾ ಪದೇ ಪದೇ ಪ್ರಸಾರ ಮಾಡಿದ ಕನ್ನಡದ ದೃಶ್ಯ ಮಾಧ್ಯಮಗಳು ತಮ್ಮದೇ ವೃತ್ತಿಬಾಂಧವರಾಗಿದ್ದ ಗೌರಿ ಅವರ ಕೊಲೆಯನ್ನು ಬಲವಾಗಿ ಖಂಡಿಸಿಯೂ ಇರಲಿಲ್ಲ. ಪತ್ರಕರ್ತ ವಿಶ್ವೇಶ್ವರ ಭಟ್ಟರು ಗೌರಿ ಹತ್ಯೆಯಾದಾಗ ವಿಕೃತವಾಗಿ ಬರೆದು ಕಾರಿಕೊಂಡಿದ್ದನ್ನು ನೋಡಿಲ್ಲವೇ? ಅವರ ಶಿಷ್ಯ ಇನ್ನು ಹೇಗೆ ಇರಲು ಸಾಧ್ಯ?
ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಮಂಡ್ಯದ ನವೀನ್ ಕುಮಾರ್ ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದಿದ್ದಾನೆ. ಆತನ ಮನೆಗೆ ಹೋಗಿ ಆತನ ಆರೋಗ್ಯ ವಿಚಾರಿಸಿದ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ನಡೆ ಭಾರೀ ಟೀಕೆಗೆ ಒಳಗಾಗಿದೆ. ನವೀನ್ ಕುಮಾರ್‌ನನ್ನು ಭೇಟಿಯಾಗಿ ಆತನಿಗೆ ಹಣ್ಣಿನ ಬುಟ್ಟಿ ಕೊಟ್ಟು ತೆಗೆಸಿಕೊಂಡ ಫೋಟೋಗಳನ್ನು ಸ್ವತಃ ಪ್ರತಾಪ್ ಸಿಂಹ ತನ್ನ ಫೇಸ್‌ಬುಕ್ ಖಾತೆಯಲ್ಲಿ ಯಾವುದೇ ಮುಜುಗರ, ನಾಚಿಕೆ ಇಲ್ಲದೇ ಹಂಚಿಕೊಂಡಿದ್ದಾರೆ.
ಆದರೆ, ಸಂಘಪರಿವಾರದ ಬೆಂಬಲಿಗರು, ನಾಯಕರಿಗೆ ಇದು ಹೊಸ ವಿಷಯವೇನಲ್ಲ. ಭಿನ್ನ ಸಿದ್ಧಾಂತದ, ಭಿನ್ನ ರಾಜಕೀಯ ನಿಲುವಿನ ವ್ಯಕ್ತಿಗಳನ್ನು ಕೊಂದು ಮುಗಿಸಬೇಕು ಎಂದೇ ಅವರು ಬಯಸುವುದು ಕೂಡಾ ಗುಟ್ಟಾಗಿಲ್ಲ. ತಮ್ಮ ಸಿದ್ಧಾಂತಕ್ಕೆ ವಿರುದ್ಧವಿರುವ ವ್ಯಕ್ತಿಗಳ ಹತ್ಯೆ ಆದಾಗ ಅಥವಾ ಸಹಜವಾಗಿ ಸಾವಾದಾಗ ಸಂಭ್ರಮಿಸಿರುವುದನ್ನು ನೋಡಿದ್ದೇವೆ. ಅಂತಹ ದುಷ್ಟ ಮನಸ್ಥಿತಿಯವರಿಗೆ ಗಾಂಧಿ ಹತ್ಯೆಯ ಸಂಚುಕೋರ ಸಾವರ್ಕರ್ ಮಹಾ ದೇಶಭಕ್ತ. ಆತನನ್ನು ಪೂಜಿಸುವ, ಆತ ಹೆಸರಿನಲ್ಲಿ ಪ್ರಶಸ್ತಿ ನೀಡುವ, ರಸ್ತೆ-ಸೇತುವೆಗೆ ಆತನ ಹೆಸರಿಡುವ ವಿಕೃತಿಯನ್ನು ನೋಡಿದ್ದೇವೆ. ಹಾಗಾಗಿ ಮಾಜಿ ಸಂಸದನ ಈ ನಡೆಗೆ ಹೆಚ್ಚು ಅಚ್ಚರಿಪಡುವ ಅಗತ್ಯ ಇಲ್ಲ.
ಯಾಕೆಂದರೆ ಗೌರಿ ಲಂಕೇಶ್ ಹತ್ಯೆಗೆ ಹಿಂದೂ ಕಾರ್ಯಕರ್ತರನ್ನು ಪ್ರಚೋದಿಸಿದವರಲ್ಲಿ ಕೆಲವು ಪತ್ರಕರ್ತರು, ಮಾಧ್ಯಮಸಂಸ್ಥೆಗಳೂ ಇದ್ದವು. ಗೌರಿ ಅವರ ಹೇಳಿಕೆಯನ್ನು ತಿರುಚಿ ಅಥವಾ ಪದೇ ಪದೇ ಪ್ರಸಾರ ಮಾಡಿದ ಕನ್ನಡದ ದೃಶ್ಯ ಮಾಧ್ಯಮಗಳು ತಮ್ಮದೇ ವೃತ್ತಿಬಾಂಧವರಾಗಿದ್ದ ಗೌರಿ ಅವರ ಕೊಲೆಯನ್ನು ಬಲವಾಗಿ ಖಂಡಿಸಿಯೂ ಇರಲಿಲ್ಲ. ಪತ್ರಕರ್ತ ವಿಶ್ವೇಶ್ವರ ಭಟ್ಟ ಗೌರಿ ಹತ್ಯೆಯಾದಾಗ ವಿಕೃತವಾಗಿ ಬರೆದು ಕಾರಿಕೊಂಡಿದ್ದನ್ನು ನೋಡಿಲ್ಲವೇ? ಅವರ ಶಿಷ್ಯ ಇನ್ನು ಹೇಗೆ ಇರಲು ಸಾಧ್ಯ?
ತಿಂಗಳ ಹಿಂದೆ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ರಾಜಸ್ತಾನದಿಂದ ಬಂದಿದ್ದ ಕುರಿ ಮಾಂಸದ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ ಎಂದು ಗಲಾಟೆ ಮಾಡಿದ್ದಲ್ಲದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನಲ್ಲಿ ಬಿಡುಗಡೆಯಾದ ಪುನೀತ್ ಕೆರೆಹಳ್ಳಿಗೆ ಇದೇ ಮಾಜಿ ಸಂಸದ ಪ್ರತಾಪ್ ಸಿಂಹ ಸ್ವಾಗತ ಕೋರಿದ್ದ. “ಬೆಂಗಳೂರಿನ ಎಸಿಪಿ ಚಂದನ್ ಅವರ ಕಚೇರಿಗೆ ನಾಳೆ 12 ಗಂಟೆಗೆ ಬರುತ್ತಿದ್ದೇನೆ. ಹಿಂದೂ ಕಾರ್ಯಕರ್ತರು ಬನ್ನಿ” ಎಂದು ಫೇಸ್‌ಬುಕ್‌ನಲ್ಲಿ ಕರೆ ನೀಡಿದ್ದಲ್ಲದೇ, ಬಂದು ಠಾಣೆಯ ಮುಂದೆ ಗಲಾಟೆ ಮಾಡಿದ್ದರು. ಸದ್ಯ ಬಿಜೆಪಿಯಿಂದ ಟಿಕೆಟ್ ಸಿಗದೇ ಮಾಜಿ ಆಗಿರುವ ಪ್ರತಾಪ್ ಸಿಂಹನಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ಇಲ್ಲ. ಅದಕ್ಕಾಗಿ ತನ್ನ ಇರುವಿಕೆಯನ್ನು ಹೀಗೆ ಪುಂಡರು, ಕೊಲೆ ಪಾತಕಿಗಳ ಜೊತೆಗೆ ಗುರುತಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ಮಾತ್ರ ದುರಂತ.
ಕಳೆದ ವರ್ಷ ವಿಧಾನಸಭಾ ಚುನಾವಣೆಗೆ ತಿಂಗಳಿರುವಾಗ ರಾಷ್ಟ್ರ ರಕ್ಷಣಾ ಪಡೆ ಎಂಬ ಪುಂಡರ ಗುಂಪಿನ ನಾಯಕ ಪುನೀತ್ ಕೆರೆಹಳ್ಳಿ ಸಾತನೂರಿನ ಗೋ ವ್ಯಾಪಾರಿ ಇದ್ರಿಸ್ ಪಾಷ ಅವರನ್ನು ಅಟ್ಟಾಡಿ ಹೊಡೆದಿತ್ತು. ತಪ್ಪಿಸಿಕೊಂಡು ಓಡಿದ್ದ ಇದ್ರಿಸ್ ಪಾಷ ಮರುದಿನ ಬೆಳಿಗ್ಗೆ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುದ್ದಿ ಗೊತ್ತಾಗುತ್ತಿದ್ದಂತೆ ತಪ್ಪಿಸಿಕೊಂಡು ಗುಜರಾತಿಗೆ ಪರಾರಿಯಾಗಿದ್ದ ಕೆರೆಹಳ್ಳಿ ಗ್ಯಾಂಗನ್ನು ತಿಂಗಳ ನಂತರ ಪೊಲೀಸರು ಹೆಡೆಮುರಿಕಟ್ಟಿ ತಂದಿದ್ದರು. ಒಂದು ತಿಂಗಳ ನಂತರ ಜಾಮೀನಿನ ಮೇಲೆ ಇಡೀ ಗ್ಯಾಂಗು ಬಿಡುಗಡೆಯಾಗಿತ್ತು. ಆಗ ಕೊಲೆ ಆರೋಪಿಗಳನ್ನು ಜೈಲಿನ ಬಳಿ ಹೋಗಿ ಸ್ವಾಗತಿಸಿ ತಮ್ಮ ಮನೆಗೆ ಕರೆತಂದು ಊಟ ಹಾಕಿದ ವ್ಯಕ್ತಿ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ.
2022ರಲ್ಲಿ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಹೆಸರಿನಲ್ಲಿ ಗೋದ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರಗೈದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಳು ಮಂದಿಯನ್ನು ಬಿಡುಗಡೆ ಮಾಡಿತ್ತು. ಆ ಏಳು ಮಂದಿಗೆ ಆರತಿ ಎತ್ತಿ, ಹೂವಿನ ಹಾರ ಹಾಕಿ, ಸಿಹಿ ತಿನಿಸಿ ಕುಟುಂಬ ವರ್ಗದವರು ಸ್ವಾಗತಿಸಿದ ಫೋಟೋಗಳನ್ನು ನಾವೆಲ್ಲ ನೋಡಿದ್ದೇವೆ. ತನ್ನ ರೇಪಿಸ್ಟ್‌ಗಳ ಬಿಡುಗಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಪ್ರಶ್ನಿಸಿದ ನಂತರ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿ ಮತ್ತೆ ಜೈಲಿಗೆ ಹಾಕುವಂತಾಯ್ತು.
2016ರಲ್ಲಿ ಮಂಗಳೂರಿನ ಬಿಜೆಪಿಯ ಮುಖಂಡರೂ, ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗ ಅವರು ಕಟೀಲು ದೇವಸ್ಥಾನದಲ್ಲಿ ನಡೆದಿರುವ ಹಣ ದುರುಪಯೋಗವನ್ನು ಬಯಲಿಗೆಳೆದ ಕಾರಣಕ್ಕೆ ಅವರ ಮನೆಯ ಬಳಿ ಕೊಚ್ಚಿ ಹಾಕಿದ್ದು ಬಿಜೆಪಿಯ ಬೆಂಬಲಿಗ, ಯುವ ಬ್ರಿಗೇಡ್‌ನ ಮುಖಂಡ ನರೇಶ್ ಶೆಣೈ ತಂಡ. ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡು ನಂತರ ಎರಡು ತಿಂಗಳು ಜೈಲಿನಲ್ಲಿದ್ದು ಜಾಮೀನಿನಿಂದ ಹೊರಬಂದಾಗ ಮಂಗಳೂರು ಜೈಲಿನ ಬಾಗಿಲಲ್ಲೇ ಸ್ವಾಗತಿಸಿ ಕರೆತಂದಿದ್ದು ಇದೇ ಚಕ್ರವರ್ತಿ ಸೂಲಿಬೆಲೆ.
ಸಂಘಪರಿವಾರದ ಕಾರ್ಯಕರ್ತರು ಅಕ್ರಮ ಚಟುವಟಿಕೆ, ಗಲಭೆ, ಹಲ್ಲೆ, ಕೊಲೆಯ ಪ್ರಕರಣಗಳಲ್ಲಿ ಬಂಧನವಾದಾಗ “ಅಮಾಯಕರನ್ನು ಬಂಧಿಸಿದ್ದಾರೆ” ಎಂದು ಹೇಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸುವವರಲ್ಲಿ ಬಿಜೆಪಿಯ ಶಾಸಕರು, ಸಂಸದರೂ ಇರುತ್ತಾರೆ. ಕಾನೂನು ರೂಪಿಸುವ ಸ್ಥಾನದಲ್ಲಿರುವವರೇ ಕಾನೂನು ಉಲ್ಲಂಘಿಸಿದವರ ಪರ ನಿಲ್ಲುವುದಕ್ಕೆ ಬಿಜೆಪಿಯಲ್ಲಿ ಯಾವುದೇ ವಿರೋಧ ಇಲ್ಲ. ಕಾರ್ಯಕರ್ತರ ಪುಂಡಾಟದ ಪರ ನಿಂತು ಜಿಲ್ಲೆಗೆ ಬೆಂಕಿ ಹಾಕುತ್ತೇವೆ ಎಂದು ಸ್ವತಃ ಮಂಗಳೂರಿನ ಆಗಿನ ಬಿಜೆಪಿ ಸಂಸದ ನಳಿನ್ ಕುಮಾರ್ ಹೇಳಿರುವುದನ್ನು ನಾವೆಲ್ಲ ಕೇಳಿಸಿಕೊಂಡಿದ್ದೇವೆ.
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ ಸೆಪ್ಟಂಬರ್ 5ಕ್ಕೆ ಏಳು ವರ್ಷಗಳಾಗುತ್ತಿದೆ. ಹತ್ಯೆ ನಡೆದು ಕೆಲ ತಿಂಗಳಲ್ಲೇ ಸುಮಾರು 16-20 ಮಂದಿ ಹಂತಕರ ತಂಡವನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಚಾರ್ಜ್‌ಶೀಟ್ ಕೂಡಾ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಆರು ವರ್ಷಗಳಲ್ಲಿ ಯಾರೊಬ್ಬರಿಗೂ ಜಾಮೀನು ಸಿಕ್ಕಿರಲಿಲ್ಲ. ಆದರೆ ಕಳೆದ ಜುಲೈ 16ರಂದು ಮೊದಲಿಗೆ ಬಂಧನಕ್ಕೊಳಗಾದ ಮಂಡ್ಯದ ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಹಾಗೂ ಮತ್ತಿಬ್ಬರಿಗೆ ಜಾಮೀನು ನೀಡಲಾಗಿದೆ. ಬಿಜೆಪಿಯ ನಾಯಕರು ಹಿಂದುತ್ವ ಕಾರ್ಯಕರ್ತರ ಪ್ರಕರಣಗಳನ್ನು ನಡೆಸುತ್ತಿರುವ ಹಿರಿಯ ವಕೀಲ ಅರುಣ್ ಶ್ಯಾಂ ಗೌರಿ ಹಂತಕರ ಪರ ವಕಾಲತ್ತು ವಹಿಸುತ್ತಿದ್ದಾರೆ.