ಯೋಧರ ಶಿಸ್ತು, ಏಕಾಗ್ರತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದೇಶದ ಗಡಿ ಕಾಯಲು ಯೋಧನಿದ್ದರೆ ಮನೆ ಮತ್ತು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಪ್ರತಿ ಮನುಷ್ಯನ ಕರ್ತವ್ಯವಾಗಿರುತ್ತದೆ ಎಂದು ರಂಗನಿರ್ದೇಶಕ ಹಾಗೂ ಕಸಾಪ ಜಿಲ್ಲಾ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ವಿದ್ಯಾವಿಕಾಸ ಸಂಸ್ಥೆ ಆವರಣದಲ್ಲಿ ಚಿನ್ಮಯ ಮಯೂರ ಯೋಗಶಾಲೆಯ ಕ್ರೀಡಾ ಸಂಸ್ಥೆಯು ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಯೋಧ ನಮನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದರು.
“ಯೋಧರು ಗಡಿ ಕಾಯುವ ಮುನ್ನ ಮಾನಸಿಕ ಮತ್ತು ದೈಹಿಕವಾಗಿ ಹಲವು ರೀತಿಯ ಕಸರತ್ತುಗಳನ್ನು ನಡೆಸುತ್ತಾರೆ. ಅಂತೆಯೇ ಒಂದು ಕುಟುಂಬ ಮತ್ತು ಸಮಾಜವನ್ನು ಪ್ರತಿನಿಧಿಸುವ ವ್ಯಕ್ತಿ ಹೆಣ್ಣಾಗಿರಲಿ, ಗಂಡಾಗಿರಲಿ ತನ್ನ ಜವಾಬ್ದಾರಿಯನ್ನು ಅರಿತು ನಿಷ್ಠೆಯ ಉತ್ತಮ ಬದುಕನ್ನು ಸಾಗಿಸಬೇಕಾಗುತ್ತದೆ. ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಯೋಗ ತರಬೇತಿಯನ್ನು ಪಡೆಯಬೇಕಾಗುತ್ತದೆ. ಶಾಂತಿ ನೆಮ್ಮದಿಯನ್ನು ಯೋಗದಿಂದ ಗಳಿಸಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಪ್ರಕರಣ | ರಾಜ್ಯ ಸರ್ಕಾರ ವಜಾಕ್ಕೆ ಮುಸ್ಲಿಂ ಒಕ್ಕೂಟ ಆಗ್ರಹ
ನಿವೃತ್ತ ಉಪನ್ಯಾಸಕಿ ಶಾರದ ವೆಂಕಟೇಶರೆಡ್ಡಿ ಇವರು ಯೋಧರ ತ್ಯಾಗ ಬಲಿದಾನಗಳ ಕಾರ್ಗಿಲ್ ಬಗ್ಗೆ ನೆನಪು ಮಾಡಿಕೊಂಡು ವಿಜಯದಿವಸ್ ಯೋಧರಿಗೆ ನಮನ ಸಲ್ಲಿಸಿದರು.
ಗುಡ್ಡದರಂಗವ್ವನಹಳ್ಳಿಯ ನಿವೃತ್ತ ಸೈನಿಕ ಪಿ ಆರ್ ಶ್ರೀನಿವಾಸ್ ರೆಡ್ಡಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಚಿನ್ಮಯ ಮಯೂರ ಯೋಗಕ್ರೀಡಾ ಸಂಸ್ಥೆಯ ಅಧ್ಯಕ್ಷ ಎಂ ಬಿ ಮೋಹನ್, ಅನುಸೂಯ, ನಾಗಸಾರಿಕಾ, ತಿಮ್ಮಾರೆಡ್ಡಿ, ಕುಮಾರಿ, ಎಂ ಬಿ ಮುರುಳಿ, ಎಸ್ ಕೆ ಸುನಿತ ಇದ್ದರು.