ರಾಜ್ಯದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ಸಮಿತಿಗಳಿದ್ದರೂ ಸಹ ರಾಜ್ಯದಲ್ಲಿ ಬಾಲ್ಯವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳಿಗೆ ಕೊನೆಯಿಲ್ಲದಂತಾಗಿದೆ. ಅದರಲ್ಲೂ ಹಿಂದುಳಿದ ಭಾಗವೆಂದೇ ಗುರುತಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 154 ಬಾಲ್ಯವಿವಾಹ ನಡೆದಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಬೆಂಗಳೂರಿನ ರಾಜಾಜಿನಗರ ಶಾಸಕ ಸುರೇಶಕುಮಾರ ಅವರು 2026ರ ಆ.18ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉತ್ತರ ಒದಗಿಸಿದ್ದಾರೆ.
ಕಳೆದ 2024-25, 2025-26 ಹಾಗೂ 2026-27ನೇ ಸಾಲಿನ ಜೂನ್ ತಿಂಗಳವರೆಗೆ ಅಂದರೆ 30 ತಿಂಗಳಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 154 ಬಾಲ್ಯವಿವಾಹಗಳು ನಡೆದಿವೆ. ಮದುವೆ, ಸಂಸಾರ, ಕುಟುಂಬದ ಪರಿಕಲ್ಪನೆಯೇ ಗೊತ್ತಿಲ್ಲದ ಅಪ್ರಾಪ್ತರನ್ನು ವಿವಾಹ ಬಂಧನಕ್ಕೆ ತಳ್ಳುತ್ತಿರುವ ಪಿಡುಗು ಈ ಭಾಗದಲ್ಲಿ ಇನ್ನೂ ಜೀವಂತವಾಗಿದೆ. ಬಾಲ ವಿವಾಹ ನಿಷೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿಲ್ಲ ಎಂಬುದಕ್ಕೆ ಈ ಅಂಕಿ-ಅಂಶಗಳೇ ಹಿಡಿದ ಕೈಗನ್ನಡಿ ಎನ್ನಬಹುದು.
2024ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 787 ದೂರುಗಳು ಸ್ವೀಕೃತವಾಗಿದ್ದವು, ಈ ಪೈಕಿ 750 ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಹಿಡಿಯಲಾಗಿತ್ತು. ಉಳಿದ 37 ಪ್ರಕರಣಗಳು ತಡೆಹಿಡಿಯುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದಕ್ಕೆ ಬಾಲ್ಯವಿವಾಹ ನಡೆದಿದೆ. ಒಟ್ಟು 37 ಪ್ರಕರಣಗಳಲ್ಲಿ ಕಲಬುರಗಿ-14, ಯಾದಗಿರಿ-13 ಜಿಲ್ಲೆಯಲ್ಲೇ ಬಾಲ್ಯವಿವಾಹ ನಡೆದಿವೆ.
2025ರಲ್ಲಿ ಏಳು ಜಿಲ್ಲೆಗಳಲ್ಲಿ ಒಟ್ಟು 816 ದೂರುಗಳು ಸ್ವೀಕೃತವಾಗಿದ್ದವು. ಇದರಲ್ಲಿ 733 ಪ್ರಕರಣಗಳು ತಡೆಹಿಡಿದಿದ್ದರೆ, 83 ಬಾಲ್ಯವಿವಾಹ ನಡೆದವು. 2024ಕ್ಕೆ ಹೋಲಿಸಿದರೆ 2025ರಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇನ್ನು ಪ್ರಸಕ್ತ 2026-27ನೇ ವರ್ಷದ ಕಳೆದ ಆರು ತಿಂಗಳಲ್ಲಿ (ಜೂನ್‌ವರೆಗೆ) 577 ದೂರುಗಳು ಸ್ವೀಕೃತಗೊಂಡಿವೆ. ಈ ಪೈಕಿ 543 ಪ್ರಕರಣಗಳಲ್ಲಿ ಅಧಿಕಾರಿಗಳ ತಂಡ ಸಕಾಲಕ್ಕೆ ತೆರಳಿ ಬಾಲ್ಯವಿವಾಹ ತಡೆಹಿಡಿದ್ದರೆ, 34 ಬಾಲ್ಯವಿವಾಹ ನಡೆದಿದೆ. ಬಾಲ್ಯವಿವಾಹಗಳನ್ನು ತಡೆಹಿಡಿಯುವಲ್ಲಿ ಸರ್ಕಾರ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ 2024ನೇ ವರ್ಷದಲ್ಲಿ 166 ದೂರು ಸ್ವೀಕೃತವಾಗಿದ್ದವು. ಈ ಪೈಕಿ ಎಲ್ಲ ದೂರುಗಳಿಗೆ ಸ್ಪಂದಿಸಿ ಒಂದೂ ಬಾಲ್ಯವಿವಾಹ ನಡೆಯದಂತೆ ತಡೆಹಿಡಿಯಲಾಗಿತ್ತು. ಆದರೆ, 2025ರಲ್ಲಿ ಆ ಒಂದೇ ಜಿಲ್ಲೆಯಲ್ಲಿ 24 ಬಾಲ್ಯವಿವಾಹ ನಡೆದಿವೆ, ಇನ್ನು ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಎರಡೂವರೆ ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆಯೇ, ಹೊರತು ಅಂಕುಶ ಬಿದ್ದಿಲ್ಲ.
ಒಟ್ಟಾರೆ ಎರಡೂವರೆ ವರ್ಷದಲ್ಲಿ ಕಲ್ಯಾಣದ ಜಿಲ್ಲೆಗಳಲ್ಲಿ 2,180 ದೂರುಗಳು ಸ್ವೀಕೃತವಾಗಿದ್ದು, ಈ ಪೈಕಿ 2,026 ಪ್ರಕರಣಗಳಲ್ಲಿ ಅಧಿಕಾರಿಗಳು ತಡೆಯೊಡಿದ್ದಾರೆ. 154 ಬಾಲ್ಯವಿವಾಹಗಳು ನಡೆದಿರುವುದು ವರದಿಯಾಗಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ಬಾಲ್ಯವಿವಾಹಕ್ಕೆ ಹಲವು ಕಾರಣಗಳು
ಬಾಲ್ಯವಿವಾಹ ಜೀವಂತ ಇರುವುದು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ. ಅಲ್ಲಿನ ಅನಕ್ಷರತೆ, ಬಡತನ, ರೂಢಿಗತ ಪದ್ಧತಿ, ಮರ್ಯಾದೆ ಹಾಗೂ ಧಾರ್ಮಿಕ ಅಂಧಶ್ರದ್ಧೆಗಳು ಬಾಲ್ಯವಿವಾಹವನ್ನು ತಡೆಯುವಲ್ಲಿ ಪ್ರಮುಖ ಅಡ್ಡಿಯಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯಿದ್ದರೂ, ಅದರ ಕಾರ್ಯಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ ಇರುವುದರಿಂದ ಬಾಲ್ಯವಿವಾಹ ಪ್ರಕರಣಗಳು ಹತೋಟಿಗೆ ಬರದಂತಾಗಿದೆ.
ಬಾಲ್ಯವಿವಾಹ ನಮ್ಮ ಸಮಾಜಕ್ಕೆ ಕಾಡುತ್ತಿರುವ ಪಿಡುಗು ಎಂದು ಹೇಳಬಹುದು. 18 ವರ್ಷ ಪೂರ್ವದಲ್ಲೇ ಮದುವೆಗೆ ಕೊರಳೊಡ್ಡುವ ಮಕ್ಕಳು ತಮ್ಮ ಬಾಲ್ಯದ ಜೀವನ ತ್ಯಾಜಿಸಿ ಸಂಸಾರವೆಂಬ ಬಂಧನಕ್ಕೆ ಸಿಲುಕುತ್ತಿದ್ದಾರೆ. ಬಾಲ್ಯವಿವಾಹವು ಹೆಣ್ಣುಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳ, ವಿವಿಧ ರೋಗರುಜಿನಗಳಿಗೆ ತುತ್ತಿಗೆ ಕಾರಣವಾಗುತ್ತದೆ. ಬಾಲ್ಯವಿವಾಹದಿಂದ ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಸಂಗ ಬಂದೇ ಬರುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸದ ಕೆಲ ಪೋಷಕರು ಮಕ್ಕಳ ವಯಸ್ಸು ಪರಿಗಣಿಸದೆ ಬೇಗ ಮದುವೆ ಮಾಡಬೇಕೆಂಬ ಧಾವಂತದಲ್ಲಿರುತ್ತಾರೆ.
ಸರ್ಕಾರದಿಂದ ಕಠಿಣ ಕ್ರಮ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಲ್ಯವಿವಾಹ ಹಾಗೂ ಬಾಲಗರ್ಭಧಾರಣೆ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿವಿಧ ಹಂತಗಳಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.
ಬಾಲ್ಯವಿವಾಹ ಮತ್ತು ಬಾಲಗರ್ಭಧಾರಣೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ವಿವಿಧ ಜಾಗೃತಿ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಿರುವುದಾಗಿ ತಿಳಿಸಿದೆ. ಬಾಲ್ಯವಿವಾಹ ನಡೆಯದಂತೆ ತಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ, ಬಾಲ್ಯವಿವಾಹ ನಿಷೇಧ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಿತಿಗಳನ್ನು ರಚಿಸಲಾಗಿದೆ.
ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ)-2015, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ ಮಾದರಿ ನಿಯಮಗಳು 2021, 2016 ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ-2012 ನಿಯಮಗಳು-2020 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ.
ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸಿ ರಕ್ಷಿಸುವುದು, ಬಾಲ್ಯವಿವಾಹ ತಡೆಯುವುದು ಹಾಗೂ ಮಕ್ಕಳಿಗೆ ಅಗತ್ಯವಾದ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆಯ ಅಕ್ಕಪಡೆ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಲ್ಯವಿವಾಹ ತಡೆ ಕಾಯ್ದೆ, ಬಾಲ್ಯವಿವಾಹ ನಿಷೇಧ ನಿಯಮಗಳು ಸೇರಿದಂತೆ ಸಂಬಂಧಪಟ್ಟ ಕಾನೂನುಗಳ ಕುರಿತು ಶಾಲಾ-ಕಾಲೇಜುಗಳಲ್ಲಿಯೂ ಬಾಲ್ಯವಿವಾಹದ ದುಷ್ಪರಿಣಾಮಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಬಾಲ್ಯವಿವಾಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗಿದೆ. ಬಾಲ್ಯವಿವಾಹದ ಪ್ರಯತ್ನ, ನಿಶ್ಚಿತಾರ್ಥದ ಬಗ್ಗೆ ಕ್ರಮಕೈಗೊಳ್ಳಲು ಬಾಲ್ಯವಿವಾಹ ನಿಷೇಧ ಕಾಯ್ದೆ-2006ರಲ್ಲಿ ಯಾವುದೇ ಕಲಂಗಳಲ್ಲಿ ಅವಕಾಶ ಇಲ್ಲದೇ ದೂರನ್ನು ದಾಖಲಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಇದನ್ನು ಅಪರಾಧವನ್ನಾಗಿಸಲು ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ 2025) ಅನ್ನು ಜಾರಿಗೆ ತರಲು ಕ್ರಮವಹಿಸಲಾಗುತ್ತಿದೆ ಎಂದು ಸರ್ಕಾರ ಲಿಖಿತವಾಗಿ ಉತ್ತರಿಸುತ್ತಿದ್ದರೂ ಕಡಿವಾಣ ಬೀಳದೇ ಇರುವುದು ವಿಪರ್ಯಾಸ.
ಬಾಲ್ಯದಲ್ಲೇ ತಾಯ್ತನದ ಹೊರೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಲ್ಯವಿವಾಹ ಅಷ್ಟೇ ಹೆಚ್ಚಳವಾಗಿಲ್ಲ. ಅದರೊಂದಿಗೆ ಬಾಲಗರ್ಭಿಣಿಯರ ಸಂಖ್ಯೆಯೂ ಗಣನೀಯವಾಗಿದೆ. ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಪ್ರೀತಿ, ಪ್ರೇಮದ ನೆಪದಲ್ಲಿ ವಂಚಿಸುವುದು, ಸಾಮಾಜಿಕ ಮಾಧ್ಯಮ ಹಾಗೂ ಮದುವೆಯಾಗುವುದಾಗಿ ನಂಬಿಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕೃತ್ಯಗಳಿಂದ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭ ಧರಿಸುತ್ತಿರುವ ಘಟನೆಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿಯೇ ಆಗಿದೆ.
ಕಳೆದ 2024-25, 2025-26 ಹಾಗೂ 2026-27ನೇ ವರ್ಷದ ಜುಲೈ ತಿಂಗಳ ಅಂತ್ಯದವರೆಗೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಟ್ಟು 2,783 ಪ್ರಕರಣಗಳು ವರದಿಯಾಗಿವೆ. ಎಳೆಯ ವಯಸ್ಸಿನ ಬಾಲಕಿಯರಿಗೆ ಸುರಕ್ಷತೆ ಇಲ್ಲ ಎಂಬುದು ಸರ್ಕಾರ ನೀಡಿದ ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ. ಎಳೆಯ ವಯಸ್ಸಿನಲ್ಲೇ ತಾಯ್ತನದ ಹೊರೆಯನ್ನು ಹೊತ್ತಿರುವ ಬಾಲಕಿಯರ ಪೈಕಿ 14, 15 ರಿಂದ 18 ವರ್ಷದವರೂ ಇರುವುದು ಕಂಡುಬಂದಿದೆ. ಇನ್ನು ಯಾರಿಗೂ ಗೊತ್ತಿಲ್ಲದಂತೆ ಬಾಲ್ಯವಿವಾಹ ಜರುಗಿದರೂ, ಪ್ರಕರಣ ದಾಖಲಾಗದೆ ಗುಟ್ಟಾಗಿ ಉಳಿದಿರುವುದು ಕೂಡ ಸತ್ಯ.
ರಾಯಚೂರನಲ್ಲೇ ಹೆಚ್ಚು
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯಲ್ಲೇ ಹೆಚ್ಚು ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಅಂದರೆ ಕಲ್ಯಾಣ ಕರ್ನಾಟಕದ ಒಟ್ಟು ವರದಿಯಾದ ಪ್ರಕರಣಗಳಲ್ಲಿ ಅರ್ಧದಷ್ಟು ರಾಯಚೂರನಲ್ಲೆ ನಡೆದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ನಂತರದಲ್ಲಿ ವಿಜಯನಗರ-522, ಬಳ್ಳಾರಿ-437 ಜಿಲ್ಲೆಗಳಿದ್ದರೆ, ಕಲಬುರಗಿಯಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ಸಾಲಿನ ಜನವರಿ ತಿಂಗಳಿಂದ ಜುಲೈ ಅಂತ್ಯದವರೆಗೆ ಕರ್ನಾಟಕದಲ್ಲಿ 725 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕದಲ್ಲಿಯೇ 197 ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ : ವಚನ ಕಲ್ಯಾಣ | ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ!
ತಿಂದುಂಡು, ಆಡಿ, ನಲಿಯಬೇಕಾದ 14-15 ವರ್ಷದ ಹೆಣ್ಣುಮಕ್ಕಳು ಗರ್ಭ ಧರಿಸಿ ಹೆಣಗುತ್ತಿದ್ದಾರೆ. ಶಾಲೆಗೆ ತೆರಳಿ ಓದಿ ನಾಳೆಯ ಚಂದದ ಬದುಕು ಕಟ್ಟಿಕೊಳ್ಳಬೇಕಾದ ಮಕ್ಕಳು ಬಾಲ್ಯದಲ್ಲಿಯೇ ತಾಯಿ ಆಗುತ್ತಿರುವ ಬಗ್ಗೆ ಇಡೀ ವ್ಯವಸ್ಥೆಯನ್ನು ದೂರುವದೊ ಅರ್ಥವಾಗದ ಸಂಗತಿ. ಕಳೆದ ಎರಡೂವರೆ ವರ್ಷದಲ್ಲಿ 14 ರಿಂದ 15 ವರ್ಷದೊಳಗಿನ 70 ಹೆಣ್ಣಮಕ್ಕಳು ಗರ್ಭಿಣಿಯರಾದ ಪ್ರಕರಣ ವರದಿಯಾಗಿದೆ. ಬಾಲ್ಯವಿವಾಹ ಎಂಬುದು ಅಪರಾಧ, ಶಿಕ್ಷೆಯ ಅರಿವಿದ್ದರೂ ಪೋಷಕರು ಮಕ್ಕಳನ್ನು ಬಾಲ್ಯದಲ್ಲೇ ಹಸೆಮಣೆಗೆ ತಳ್ಳುತ್ತಿದ್ದಾರೆ. ಇದರಿಂದ ಬಾಲಕಿಯರ ಬದುಕು ಬಾಲ್ಯದಲ್ಲಿಯೇ ಕಮರುತ್ತಿದೆ.
ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಅವರಿಗೆ ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷಿತ ಭವಿಷ್ಯವನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳ ಭವಿಷ್ಯ ಮಸುಕಾಗದಂತೆ ನೋಡಿಕೊಳ್ಳಲು ಬಾಲ್ಯವಿವಾಹದ ವಿರುದ್ಧ ವಿವಿಧ ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕಿರುವುದು ಅಗತ್ಯವಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




