ತಾಲೂಕಿನ ವೇಮಗಲ್ ಹೋಬಳಿಯ ಹುಲ್ಲಂಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಎರಡೂ ಕಡೆಯ ಮುಖಂಡರು, ಜಾಗೃತ ಸಮಿತಿ ಸದಸ್ಯರು ಹಾಗೂ ದಲಿತ ಸಂಘಟನೆಗಳ ಮುಖಂಡರ ಸಭೆಯನ್ನು ಗುರುವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಂಗಳಾ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದ ಜಾಗದ ಸಮಸ್ಯೆಯ ಕುರಿತು ನೂತನ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಜಿಲ್ಲಾಡಳಿತದಿಂದಲೇ ತಹಶಿಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾನೂನುಬದ್ಧವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪುತ್ಥಳಿ ಸ್ಥಾಪನೆಗೆ ಸೂಕ್ತ ಸ್ಥಳವನ್ನು ಜಿಲ್ಲಾಡಳಿತವೇ ಗುರುತಿಸಲಿದೆ. ಯಾವುದೇ ಕಾಮಗಾರಿಯಾಗಲಿ ಕಾನೂನುಬದ್ಧ ಅನುಮತಿ ಪಡೆದು ಮಾತ್ರ ನಡೆಸಬೇಕು. ಪಿಡಿಒ ಜಾಗ ನೀಡಿದ್ದರೂ ಜಿಲ್ಲಾಡಳಿತದ ಅನುಮತಿ ಪಡೆಯದೇ ಕೆಲಸ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪಿಡಿಒ ಅವರನ್ನು ಈಗಾಗಲೇ ಅಮಾನತುಗೊಳಿಸುವಂತೆ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಅಗತ್ಯ ಅನುದಾನವನ್ನೂ ಸರ್ಕಾರದಿಂದಲೇ ಒದಗಿಸಲಾಗುವುದು ಭರವಸೆ ನೀಡಿದರು.
ಗ್ರಾಮದಲ್ಲಿ ಸಹೋದರತ್ವ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಡಾ. ಅಂಬೇಡ್ಕರ್ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದು, ಅವರ ಹೆಸರಿನಲ್ಲಿ ಯಾವುದೇ ರೀತಿಯ ಸಂಘರ್ಷ ಉಂಟಾಗಬಾರದು ಜಿಲ್ಲಾಡಳಿತ ಗಮನಕ್ಕೆ ತರದೆ ಮಾಡಿದ್ದೀರಾ ಏನಾದರೂ ಅಹಿತಕರ ಘಟನೆಗಳು ನಡೆದಿದ್ದರೆ ಯಾರನ್ನು ಹೊಣೆ ಮಾಡಬೇಕಿತ್ತು ತಾಳ್ಮೆಯಿಂದ ಇದ್ದರೆ ಸಮಸ್ಯೆ ಪಸರಿಸಲು ಸಾಧ್ಯವಾಗುತ್ತದೆ ಎಂದು ಮುಖಂಡರಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ರವಿಶಂಕರ್ ಮಾತನಾಡಿ, ಯಾವುದೇ ಮಹನೀಯರ ಭಾವಚಿತ್ರ ಅಥವಾ ಪುತ್ಥಳಿಯಾಗಲಿ ಊರ ಮುಂದೆ ಇರುವುದಕ್ಕಿಂತ ನಮ್ಮ ಹೃದಯದಲ್ಲಿ ಇರಬೇಕು ಇದರಲ್ಲಿ ಪ್ರತಿಷ್ಠೆ ತೋರಬಾರದು ಕೆಲವರು ಸಮಸ್ಯೆ ಬಗೆಹರಿಯುವುದಕ್ಕಿಂತ ವಿವಾದ ಮುಂದುವರಿಯಲಿ ಎಂಬ ಮನೋಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಜಾಗವನ್ನು ಯಾವುದೇ ಸಮುದಾಯ ಅಥವಾ ಧರ್ಮದವರು ಅನುಮತಿ ಇಲ್ಲದೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಕಾರ್ಯ ಕೈಗೊಂಡರೆ ಕಾನೂನು ಕ್ರಮ ಅನಿವಾರ್ಯ. ಜಿಲ್ಲಾಡಳಿತ ಸ್ಥಳ ಗುರುತಿಸುವವರೆಗೆ ಯಾರೂ ಕಾನೂನು ಮೀರಿ ನಡೆದುಕೊಳ್ಳಬಾರದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ವಿವಿಧ ಸಂಘಟನೆಗಳ ಮುಖಂಡರು, ಜಾಗ ನೀಡಿದ ಪಿಡಿಒ ಸಭೆಗೆ ಹಾಜರಾಗಬೇಕಿತ್ತು. ಎಲ್ಲರಿಗೂ ಅಂಬೇಡ್ಕರ್ ಅವರ ಬಗ್ಗೆ ಗೌರವವಿದೆ. ಸೂಕ್ತ ಸ್ಥಳದಲ್ಲಿ ಪುತ್ಥಳಿ ನಿರ್ಮಾಣವಾಗಲಿ. ಪುತ್ಥಳಿಗಿಂತ ಅವರ ಆದರ್ಶಗಳನ್ನು ಪಾಲಿಸುವುದೇ ಮುಖ್ಯವಾಗಬೇಕು ಈ ವಿವಾದ ಉಂಟಾಗಲು ಕೆಲವು ಅಧಿಕಾರಿಗಳು ಕಾರಣ ಅವರ ವಿರುದ್ದವು ಕ್ರಮವಾಗಬೇಕಿದೆ ಎಂದು ಒತ್ತಾಯಿಸಿದರು. ಅಭಿಪ್ರಾಯಪಟ್ಟರು.
ಸಭೆಯ ಬಳಿಕ ಗ್ರಾಮಸ್ಥೆ ಕೋಮಲ ಮಾತನಾಡಿ ನಮ್ಮ ಗ್ರಾಮದಲ್ಲಿ ಎಲ್ಲರೂ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ. ಗ್ರಾಮದ ಸುನಿಲ್ ಕುಮಾರ್ ಎಂಬುವವರು ಹೊರಗಿನವರನ್ನು ತಂದು ಅಶಾಂತಿ ಸೃಷ್ಟಿಸಿದ್ದಾರೆ ನಮ್ಮ ಕಡೆಯವರ ಬಳಿ ಮಾಡಿರುವ ಸಾಲವನ್ನು ವಾಪಸು ಕೊಡುವಂತೆ ಪ್ರಶ್ನೆ ಮಾಡಿದ್ದಕ್ಕಾಗಿ ಈ ಗಲಾಟೆ ಸೃಷ್ಟಿಯಾಗಿದೆ ನಮಗೂ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ. ಹೊರಗಿನವರ ಹಸ್ತಕ್ಷೇಪ ಇಲ್ಲದಿದ್ದರೆ ಗ್ರಾಮಸ್ಥರೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದೆವು. ಅನಗತ್ಯವಾಗಿ ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಲಾಗಿದೆ ಎಂದು ಹೇಳಿದರು.
ದಮನಿತರ ಸೇವಾ ಸಮಿತಿ ಅಧ್ಯಕ್ಷ ಮೇಡಹಾಳ ಮುನಿಅಂಜಿನಪ್ಪ ಮಾತನಾಡಿ, ಈ ಹಿಂದೆ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸಲು ಗ್ರಾಮಸ್ಥರು ಒಪ್ಪಿಗೆ ನೀಡಿದ್ದರು. ಆದರೆ ಕೆಲವರು ರಾತ್ರೋರಾತ್ರಿ ಪುತ್ಥಳಿ ನಿರ್ಮಿಸಲು ಮುಂದಾಗಿದ್ದರು. ಸರ್ಕಾರದ ನಿಯಮಗಳನ್ನು ಪಾಲಿಸದೆ ಕಾರ್ಯ ನಡೆಸಲಾಗಿದೆ. ಗ್ರಾಮದ ಸುನಿಲ್ ಎಂಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ಅಂಬೇಡ್ಕರ್ ಅವರ ಹೆಸರಿನಲ್ಲಿ ವಿವಾದವನ್ನಾಗಿ ಮಾಡಲಾಗಿದೆ. ಜಿಲ್ಲಾಡಳಿತ ತೆಗೆದುಕೊಳ್ಳುವ ಯಾವುದೇ ಕಾನೂನುಬದ್ಧ ತೀರ್ಮಾನಕ್ಕೆ ಗ್ರಾಮದ ಎಲ್ಲಾ ಸಮುದಾಯವರು ಬದ್ಧರಾಗಿರುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಅಪ್ರಾಪ್ತ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ಬಂಧನ
ಸಭೆಯಲ್ಲಿ ಉಪವಿಭಾಗಧಿಕಾರಿ ರೇಣುಕಾ ಪ್ರಸಾದ್ ಜಂಬರಗಿ, ಸಮಾಜಕಲ್ಯಾಣಾಧಿಕಾರಿ ಮೈಲಾರಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ತಾಪಂ ಇಒ ಮಂಜುನಾಥ್, ವೇಮಗಲ್ ಇನ್ಸ್ಪೆಕ್ಟರ್ ಮಂಜು, ಮುಖಂಡರಾದ ಡಿಪಿಎಸ್ ಮುನಿರಾಜು, ಶ್ರೀರಂಗ, ದಲಿತ್ ನಾರಾಯಣಸ್ವಾಮಿ, ವಿ.ಗೀತಾ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ರವೀಂದ್ರನಾಥ್, ಶಾಂತಮ್ಮ, ಬೈರಂಡಹಳ್ಳಿ ನಾಗೇಶ್, ನಾಗನಾಳ ಶಂಕರ್, ಗ್ರಾಮಸ್ಥರಾದ ಈರಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಮಂಜುನಾಥ್, ಸೇರಿದಂತೆ ಮುಖಂಡರು ಅಧಿಕಾರಿಗಳು ಮುಂತಾದವರು ಇದ್ದರು.




