ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಶ್ರೀನಿವಾಸಪುರ ತಾಲೂಕು ಡಿಸಿಸಿ ಬ್ಯಾಂಕ್ ನಿರ್ದೇಶಕಿ ನಾಗರತ್ನಮ್ಮ ಅವರ ಅಧ್ಯಕ್ಷತೆಯಲ್ಲಿ ಸಂಘದ ನಿರ್ದೇಶಕರ ಸಭೆ ನಡೆಯಿತು.
ಸಭೆಯಲ್ಲಿ ಸಂಘದ ಪ್ರಸ್ತುತ ಕಾರ್ಯಚಟುವಟಿಕೆಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು, ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಸಂಗ್ರಹ ಹೆಚ್ಚಿಸುವುದು ಹಾಗೂ ಹೊಸ ಖಾತೆಗಳನ್ನು ತೆರೆಯುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿರುವ ಸಾಲಗಳ ಸುಸ್ತಿ ಹಾಗೂ ಮರುಪಾವತಿ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಪಡೆಯಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ಅವರ ನೇತೃತ್ವದಲ್ಲಿ ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಾಗರತ್ನಮ್ಮ ತಿಳಿಸಿದರು. ರೈತರು ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ಯೋಜನೆಗಳನ್ನು ರೂಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವುದು, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡುವುದು ಹಾಗೂ ಅವರ ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಗತ್ಯವಿರುವ ಯೋಜನೆಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರತ್ನಮ್ಮ ಹೇಳಿದರು.
This video cannot be played in your browser. Open the video directly
ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಸಂಗ್ರಹ ಹಾಗೂ ಹೊಸ ಖಾತೆಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಈ ಕುರಿತು ನಿರ್ದೇಶಕರಿಂದ ಸಲಹೆ ಹಾಗೂ ಸೂಚನೆಗಳನ್ನು ಪಡೆಯಲಾಯಿತು. ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳನ್ನು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಶಿವಾರೆಡ್ಡಿ ಅವರು ಸಂಘದ ವಿವಿಧ ಚಟುವಟಿಕೆಗಳು, ಸಾಲ ವಿತರಣೆ ಹಾಗೂ ಸಾಲ ಮರುಪಾವತಿ ಕುರಿತು ಸಭೆಗೆ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ..?ಚಿಂತಾಮಣಿ | ಎನ್.ವಿ. ಶ್ರೀನಿವಾಸನ್ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ಕುಸುಮಗಳು ಅರಳಿದಾಗ’ಲೋಕಾರ್ಪಣೆ
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಿ.ಎನ್. ಮಂಜುನಾಥ್ ರೆಡ್ಡಿ, ಉಪಾಧ್ಯಕ್ಷ ಶಬ್ಬೀರ್ ಅಹ್ಮದ್ ಪಾಷಾ, ಶ್ರೀನಿವಾಸಪುರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಪ್ರತಿಮಾ, ಸೂಪರ್‌ವೈಸರ್ ವೇಣು, ಸಂಘದ ನಿರ್ದೇಶಕರಾದ ಸಿ. ಮುನಿವೆಂಕಟಪ್ಪ, ಟಿ. ರಾಮಚಂದ್ರಪ್ಪ, ಎಂ. ಬೈರಾರೆಡ್ಡಿ, ಎಂ. ಮುನೇಶ್ವರ ಬಾಬು, ಸಿ.ಬಿ. ದೇವರಾಜ್, ಹೆಚ್.ಸಿ. ಮಂಜುನಾಥ್, ಸಿ.ವಿ. ಸಂಪತ್ ಕುಮಾರ್ ಹಾಗೂ ಸಂಘದ ಸಿಬ್ಬಂದಿ ಪದ್ಮ ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.





