ಮೈಸೂರು | ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದವರನ್ನು ಬಂಧಿಸಿ – ದೇವನೂರರ ನೇತೃತ್ವದಲ್ಲಿ ಪ್ರತಿಭಟನೆ

Date:

ಹಿರಿಯ ಮುತ್ಸದ್ದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಒಡ್ಡಿರುವ ರೌಡಿ ಶೀಟರ್‌, ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ನನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಆಗ್ರಹಿಸಿದೆ.

ಮೈಸೂರಿನ ಟೌನ್‌ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಮುಂಭಾಗ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ದಸಂಸ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ದೇವನೂರ ಮಹಾದೇವ, “ಕಳೆದೆರಡು ದಿನಗಳ ಹಿಂದೆ ನಾನೊಂದು ವಿಡಿಯೋ ನೋಡಿದೆ. ಅದರಲ್ಲಿ ಮಣಿಕಂಠ ರಾಥೋಡ್ ಎಂಬ ಬಿಜೆಪಿ ಅಭ್ಯರ್ಥಿ ರಿವಾಲ್ವಾರ್‌ ತಿರುಗಿಸುತ್ತಾ ಇದ್ದ. ಆತನೇ ಖರ್ಗೆ ಕುಟುಂಬಕ್ಕೆ ಕೊಲ್ಲುವ ಬೆದರಿಕೆಯ ಮಾತುಗಳನ್ನು ಘಂಟಾಘೋಷವಾಗಿ, ಯಾವುದೇ ಭಯವಿರದೆ ಹೇಳ್ತಾ ಇದ್ದಾನೆ. ಇದನ್ನ ನೋಡಿ ಶಾಕ್ ಆಯಿತು” ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮಲ್ಲಿಕಾರ್ಜುನ ಖರ್ಗೆ ರಾಜ್ಯ, ದೇಶದಲ್ಲಿ ಮುತ್ಸದ್ದಿ ರಾಜಕಾರಣಿ. ಮುಂದೆ ಪ್ರಧಾನ ಮಂತ್ರಿ ಆಗಲು ಅರ್ಹತೆ ಇರುವಂತ ಹಿರಿಯ ರಾಜಕಾರಣಿ. ಅಂತಹ ಕುಟುಂಬವನ್ನು ಕೊಲ್ಲುವುದಾಗಿ ಹೇಳ್ತಾನೆ. ನಮ್ಮಲ್ಲಿ ಪೊಲೀಸ್ ವ್ಯವಸ್ಥೆ ಇದಿಯಾ” ಎಂದು ಪ್ರಶ್ನಿಸಿದರು.

“ಪೊಲೀಸ್ ವ್ಯವಸ್ಥೆ ಇರುವುದೇ ಆಗಿದ್ದರೆ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು (ಸುಮೊಟೊ) ಸಾಮಾಜಿಕ ಬಾಹಿರ ಹೇಳಿಕೆ ಕೊಟ್ಟಿರುವ ಆರೋಪಿಯನ್ನು ಬಂಧಿಸಬೇಕಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡೆ ಅಪಾಯಕಾರಿಯಾಗಿದ್ದು, ಸಮಾಜಕ್ಕೆ ಕಂಟಕವಾಗಿದೆ” ಎಂದು ಆರೋಪಿಸಿದರು.

“ಕೊಲೆ ಬೆದರಿಕೆ ಒಡ್ಡಿರುವ ವ್ಯಕ್ತಿ ಸಾಮಾನ್ಯನೇ, ವಯಸ್ಸಿಗಿಂತ ಕ್ರಿಮಿನಲ್ ಪ್ರಕರಣಗಳ ಪಟ್ಟಿಯೇ ದೊಡ್ಡದಿದೆ. ಆತನ ವಯಸ್ಸಿಗೂ ಮೀರಿದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ ಹಲವು ಕ್ರಿಮಿನಲ್ ಕೇಸ್‌ಗಳಿವೆ. ಅಲ್ಲದೆ ಈತ ಗಡಿಪಾರು ಕೂಡ ಆಗಿರುವ ವ್ಯಕ್ತಿ. ಇಂಥವನ ರಕ್ಷಣೆಗೆ ಈ ಸರ್ಕಾರ ನಿಂತಿದ್ದು, ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ನಿಜಕ್ಕೂ ನಾಚಿಕೆಗೇಡಿನ ಸಂಗತಿ” ಎಂದು ವಿಷಾದಿಸಿದರು.

“ಆಡಳಿತ ಸರ್ಕಾರದ ಮುಖ್ಯಮಂತ್ರಿ, ‘ಹೆಚ್ಚಿನ ತನಿಖೆ ಆಗ್ತಾ ಇದೆ. ತನಿಖೆ ಮಾಡಿಸ್ತಾ ಇದ್ದೀವಿ’ ಅಂತ ಹೇಳ್ತಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇದೇ ವ್ಯಕ್ತಿ ಕೊಲೆ ಬೆದರಿಕೆ ಹಾಕಿರುವ ಸಂಜ್ಞಾಪೂರ್ವಕ ಹೇಳಿಕೆ ಇರುವಾಗಲೂ ಅದರಲ್ಲೂ ಮಾರಕಾಸ್ತ್ರ (ರಿವಾಲ್ವರ್) ಹಿಡಿದು ರಾಜಾರೋಷವಾಗಿ ಖರ್ಗೆ ಕುಟುಂಬ ಸಫಾ (ಕೊಲೆ) ಮಾಡುವುದಾಗಿ ಹೇಳಿದ್ದರೂ, ಇನ್ನೂ ತನಿಖೆ ನಡೆಸಬೇಕೆ” ಎಂದು ಪ್ರಶ್ನಿಸಿದರು.

“ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿ ಅಭ್ಯರ್ಥಿ ಮಾಡಿ ಇಂತಹ ಕ್ರಿಮಿನಲ್‌ಗಳನ್ನು ಪೋಷಣೆ ಮಾಡುತ್ತಿದೆ. ಒಂದು ವೇಳೆ ಮೈ ಮರೆತು ಇದೇ ಕೆಟ್ಟ ಸರ್ಕಾರ ಆಧಿಕಾರಕ್ಕೆ ಬಂದರೆ ಕ್ರಿಮಿನಲ್‌ಗಳು, ಅಪರಾಧ ಹಿನ್ನಲೆಯವರೇ ಸಂಪುಟದಲ್ಲಿ ಇರುತ್ತಾರೆ. ಇಂಥವರಿಂದ ಯಾವ ಆಡಳಿತ ನಿರೀಕ್ಷೆ ಮಾಡಲು ಸಾಧ್ಯ. ಪೊಲೀಸ್ ವ್ಯವಸ್ಥೆಗೆ ಏನಾಗಿದೆ. ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಇಂದೂಧರ್ ಹೊನ್ನಾಪುರ ಮಾತನಾಡಿ, “ಸಮಾಜದಲ್ಲಿ ಬಹಿರಂಗವಾಗಿ ದಲಿತ ಸಮುದಾಯದ ಪ್ರಬಲ ಮುಖಂಡ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ ಕುಟುಂಬವನ್ನು ಕೊಲೆ ಮಾಡುವ ಧಮ್ಕಿ ಹಾಕಿ, ರಿವಾಲ್ವಾರ್ ತಿರುಗಿಸಿ ಹೇಳಿಕೆ ಕೊಟ್ಟರೂ, ಈವರೆಗೆ ಯಾವ ಕ್ರಮ ಕೈಗೊಂಡಿದ್ದೀರಿ. ಚುನಾವಣೆ ಅಭ್ಯರ್ಥಿ ನೀತಿ ಸಂಹಿತೆ ಜಾರಿ ಇರುವಾಗ ಮಾರಕಾಸ್ತ್ರ ಬಳಸಿ ಹೇಳಿಕೆ ಕೊಟ್ಟಿದ್ದರೂ ಕೂಡ ಪೊಲೀಸ್ ಇಲಾಖೆ, ಸರ್ಕಾರ ಏನು ಮಾಡುತ್ತಿದೆ. ಯಾರಾದರೂ ಸಾಮಾನ್ಯ ನಾಗರಿಕ ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳನ್ನು ಬಿಜೆಪಿ ಪೋಷಿಸಿ ಪಾಲನೆ ಮಾಡುತ್ತಿದೆ. ಕ್ರಿಮಿನಲ್ ವ್ಯಕ್ತಿ ಚಿಕ್ಕ ವಯಸ್ಸಿನಲ್ಲಿಯೇ ರೌಡಿ ಶೀಟರ್ ಆಗಿದ್ದು, ವಯಸ್ಸಿಗೂ ಮೀರಿ ಅಪರಾಧ ಎಸಗಿ, ಗಡಿಪಾರು ಆಗಿದ್ದರೂ ಬಿಜೆಪಿ ಚುನಾವಣೆಗೆ ಅಭ್ಯರ್ಥಿ ಮಾಡಿದೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ, ನಾವು ಉಳಿಯಬೇಕಾಗಿದೆ: ದೇವನೂರ ಮಹಾದೇವ

ಗಡಿಪಾರಾಗಿದ್ದ ವ್ಯಕ್ತಿ ಖರ್ಗೆ ಕುಟುಂಬವನ್ನು ಕೊಲ್ಲುವ ಬೆದರಿಕೆ ಹಾಕ್ತಾನೆ. ಇಂತಹ ವ್ಯಕ್ತಿಯನ್ನು ಬೆಳೆಸುತ್ತಿರುವ ಬಿಜೆಪಿ ಯಾವ ನೈತಿಕತೆ ಹೊಂದಿದೆ. ಮುಖ್ಯಮಂತ್ರಿ ಆಗಲಿ, ಪೊಲೀಸ್ ಆಗಲಿ ಕರ್ತವ್ಯ ಮರೆತು ಆರೋಪಿಯ ರಕ್ಷಣೆಗೆ ನಿಂತಿರುವುದು ಎಷ್ಟು ಸರಿ. ಇದೇನಾ ಸಮಾಜಕ್ಕೆ ಕೊಡುವ ಗೌರವ” ಎಂದು ಕಿಡಿಕಾರಿದ್ದಾರೆ.

“ಒಬ್ಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರೂ ಈವರೆಗೆ ಬಂಧಿಸಿಲ್ಲ. ಕಾನೂನು ಕ್ರಮ ಜರುಗಿಸಿಲ್ಲ. ನೀತಿಸಂಹಿತೆ ಇದಿಯೋ ಇಲ್ಲವೋ ತಿಳಿಯುತ್ತಿಲ್ಲ. ಕೊಲೆ ಬೆದರಿಕೆ ವಿಡಿಯೊ ಇದ್ದರೂ ಕೂಡ ಬೆನ್ನು ಮೂಳೆ ಇರದ ಪೊಲೀಸ್ ವ್ಯವಸ್ಥೆಗೆ ಏನೂ ಮಾಡಲಾಗುತ್ತಿಲ್ಲ” ಎಂದರು.

ಪ್ರತಿಭಟನೆಯಲ್ಲಿ ದಸಂಸ ಹಿರಿಯ ಮುಖಂಡ ವಿ ನಾಗರಾಜ್, ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸುಮಿತ್ರ ಬಾಯಿ, ಹೊಸೂರು ಕುಮಾರ್, ಅಲಗೂಡು ಶಿವಕುಮಾರ್ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭೆ ಚುನಾವಣೆ | ಏ. 25, 26ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧ

ಏ.19 ರಿಂದ ದೇಶದಲ್ಲಿ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಕರ್ನಾಟಕದಲ್ಲಿ ಎರಡು...

ಬೆಂಗಳೂರು | ಹತ್ತಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಒಂದೆಡೆ ಲೋಕಸಭಾ ಚುನಾವಣೆಯ ಕಾವು ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ...

ಬೆಂ.ಗ್ರಾಮಾಂತರ | ಕಾರ್ಮಿಕರ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ

ರಾತ್ರಿ ವೇಳೆ ಕಾರ್ಮಿಕರನ್ನು ಬೆದರಿಸಿ ಹಣ ಮತ್ತು ಮೊಬೈಲ್‌ ಫೋನ್‌ ಸುಲಿಗೆ...

ವಿಜಯಪುರ | ಉಪಹಾರ ಸೇವಿಸುತ್ತಾ ಜನರೊಂದಿಗೆ ಬೆರೆತು ಚರ್ಚಿಸಿದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ

ತಮ್ಮ ಸರಳತೆ, ಸಜ್ಜನಿಕೆಯಿಂದಲೇ ಮತದಾರರ ಮನಸ್ಸು ಗೆಲ್ಲುತ್ತಿರುವ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ...