ಸುಸ್ಥಿರ ನಗರ ಸಂಚಾರ ಮತ್ತು ವಾಯು ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾದ ‘ಮೈಸೂರು ಸೈಕಲ್ ಡೇ’ಯ 4ನೇ ಆವೃತ್ತಿ ಭಾನುವಾರ ನಗರದ ಸರಸ್ವತಿಪುರಂನಲ್ಲಿ ಯಶಸ್ವಿಯಾಗಿ ನೆರವೇರಿತು.
GIZ ಹಾಗೂ ESAF ಸಹಯೋಗದಲ್ಲಿ ಸರಸ್ವತಿಪುರಂನ ಬೇಕಿಂಗ್ ಪಾಯಿಂಟ್ ಸರ್ಕಲ್ ಸಮೀಪ ನಡೆದ ಈ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿಗಳು, ಯುವಕರು ಹಾಗೂ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ‘ಸುಸ್ಥಿರ ನಗರ ಸಂಚಾರ-ವಾಯು ಗುಣಮಟ್ಟ’ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಈ ಅಭಿಯಾನವು ಪರಿಸರ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ವೃದ್ಧಿ ಹಾಗೂ ಮಾಲಿನ್ಯ ರಹಿತ ನಗರ ಜೀವನದ ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ 5 ಕಿಲೋ ಮೀಟರ್ ಉದ್ದದ ಸೈಕಲ್ ರ್ಯಾಲಿ ನಡೆಯಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸೈಕಲ್ ಸವಾರರು ಉತ್ಸಾಹದಿಂದ ಪಾಲ್ಗೊಂಡು ಪರಿಸರ ಸ್ನೇಹಿ ಸಂಚಾರದ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ‘ಓಪನ್ ಸ್ಟ್ರೀಟ್’ ಚಟುವಟಿಕೆಗಳು ಹಾಗೂ ಸಾಂಪ್ರದಾಯಿಕ ಆಟೋಟಗಳು ಸಾರ್ವಜನಿಕರ ಗಮನ ಸೆಳೆದವು. ರಸ್ತೆಯನ್ನೇ ಜನಸ್ನೇಹಿ ಚಟುವಟಿಕೆಗಳ ವೇದಿಕೆಯಾಗಿಸಿ ಹಬ್ಬದ ವಾತಾವರಣ ನಿರ್ಮಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಮೈಸೂರು ಸಂಚಾರಿ ಪೊಲೀಸ್ ಇಲಾಖೆ, ಎನ್‌ಸಿಸಿ ಕೆಡೆಟ್ಸ್, ಪ್ರಮುಖ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯ ಪ್ರಮುಖ ಕಾರಣವಾಗಿತ್ತು.
ಈ ವಿಶೇಷ ಸುದ್ದಿ ಓದಿದ್ದೀರಾ?ಅರಣ್ಯ ಇಲಾಖೆಯ ವಸಾಹತುಶಾಹಿ ವಿರುದ್ಧ ನಾಗರಹೊಳೆ ಆದಿವಾಸಿಗಳ ಹಕ್ಕು ಹೋರಾಟ
‘ಮೈಸೂರು ಸೈಕಲ್ ಡೇ’ ಇದೀಗ ಶುದ್ಧ ಗಾಳಿ, ಆರೋಗ್ಯಕರ ಜೀವನಶೈಲಿ ಹಾಗೂ ಸುಸ್ಥಿರ ನಗರ ಸಂಚಾರವನ್ನು ಜನಪ್ರಿಯಗೊಳಿಸುವ ಪ್ರಮುಖ ವೇದಿಕೆಯಾಗಿ ರೂಪುಗೊಳ್ಳುತ್ತಿದೆ ಎಂದು ಆಯೋಜಕರು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸ್ವಯಂಸೇವಕರು, ಪಾಲುದಾರ ಸಂಸ್ಥೆಗಳು ಹಾಗೂ ಭಾಗವಹಿಸಿದ ನಾಗರಿಕರಿಗೆ ಮೈಸೂರು ಮಹಾನಗರ ಪಾಲಿಕೆ ಕೃತಜ್ಞತೆ ಸಲ್ಲಿಸಿತು.




