ಪರಿಸರ ಉಳಿಸುವ ನೆಪದಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಮೂಲಸೌಲಭ್ಯಗಳಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರನ್ನು ಏಕಾಏಕಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಕುರಿಮಂಡಿ ಎರಡನೇ ಪಾರ್ಕ್‌ನ ನಿವಾಸಿಗಳು ಗುರುವಾರ ಬೆಳಗ್ಗೆ ಆತಂಕ ವ್ಯಕ್ತಪಡಿಸಿದರು.
”ನಮಗೆ ಮನೆ ಕೊಡಿ, ಹೋಗುತ್ತೇವೆ. ಇಲ್ಲವೇ ವಿಷ ಕೊಡಿ, ಸಾಯುತ್ತೇವೆ. ಯಾವುದೇ ಕಾರಣಕ್ಕೂ ನಮ್ಮನ್ನು ಒಕ್ಕಲೆಬ್ಬಿಸಬೇಡಿ” ಎಂದು ವೃದ್ಧರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡರು.
ಮೈಸೂರಿನ ಪರಿಸರ ಉಳಿಸಿ ಸಮಿತಿ ಸದಸ್ಯರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಉದ್ಯಾನವನದ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವವರನ್ನು ತೆರವುಗೊಳಿಸುವಂತೆ ಒತ್ತಾಯಿಸಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂದ ಹಿನ್ನೆಲೆಯಲ್ಲಿ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ನಿವಾಸಿಗಳು, ”ಪರಿಸರ ಉಳಿಸಿ ಸಮಿತಿಯವರು ಮೊದಲು ನಮ್ಮ ಹೀನಾಯ ಬದುಕನ್ನು ಒಂದು ದಿನ ನೋಡಲಿ. ನಂತರ ನಮ್ಮನ್ನು ತೆರವುಗೊಳಿಸುವ ಬಗ್ಗೆ ಮಾತನಾಡಲಿ” ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಎಂ. ರಸೂಲ್ ಮಾತನಾಡಿ, ಕೆಸರೆ ಕುರಿಮಂಡಿ ಎ ಬ್ಲಾಕ್‌ನಲ್ಲಿ ಈ ಹಿಂದೆ ಸ್ಲಂ ಬೋರ್ಡ್ ವತಿಯಿಂದ 163 ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆ ಸಂದರ್ಭದಲ್ಲಿ 35 ಸ್ಲಂ ನಿವಾಸಿಗಳಿಗೆ ಮನೆ ದೊರೆಯಲಿಲ್ಲ. ನಂತರ ಸೋನಿಯಾಗಾಂಧಿ ಬ್ಲಾಕ್ ನಿರ್ಮಾಣವಾದರೂ ಸುಮಾರು 80 ಜನರಿಗೆ ಮನೆ ಸಿಗಲಿಲ್ಲ. ಹೀಗೆ ಒಟ್ಟು 115 ನಿವೇಶನರಹಿತ ಕುಟುಂಬಗಳು ಕಳೆದ 15ರಿಂದ 20 ವರ್ಷಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿವೆ ಎಂದರು.
ಇಲ್ಲಿನ ನಿವಾಸಿಗಳು ಯಾವುದೇ ಶಾಶ್ವತ ಕಟ್ಟಡ ನಿರ್ಮಿಸಿಕೊಂಡಿಲ್ಲ. ಮೂಲಸೌಕರ್ಯಗಳ ಕೊರತೆಯ ನಡುವೆಯೇ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂದಿನ ಜಿಲ್ಲಾಧಿಕಾರಿ ಶಿಖಾ ಅವರು ನಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದರು. ಆದರೆ ಅವು ಇದೀಗ ಶಿಥಿಲಗೊಂಡಿವೆ. ಸಮೀಪದಲ್ಲೇ ದೊಡ್ಡ ಮೋರಿ ಹರಿಯುತ್ತಿದ್ದು, ದುರ್ವಾಸನೆಯ ನಡುವೆಯೇ ಜನರು ಜೀವನ ಸಾಗಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
”ಸರ್ಕಾರ, ಅಧಿಕಾರಿಗಳು, ಹೋರಾಟಗಾರರು ಹಾಗೂ ಪರಿಸರವಾದಿಗಳಿಗೆ ಇಲ್ಲಿನ ಜನರ ಬದುಕು ಕಾಣುವುದಿಲ್ಲವೇ? ಇವರೂ ಮನುಷ್ಯರಲ್ಲವೇ? ಇಂತಹ ನರಕದಂತಹ ಪರಿಸ್ಥಿತಿಯಲ್ಲಿ ಬದುಕಲು ಯಾರಿಗೆ ತಾನೇ ಇಷ್ಟ?” ಎಂದು ಪ್ರಶ್ನಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ಆಡಳಿತ, ನೀರಾವರಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಎಚ್.ಎಂ. ಚನ್ನಬಸಪ್ಪ
ಅಂದಿನ ಜಿಲ್ಲಾಧಿಕಾರಿಗಳು ನಿವೇಶನ ಅಥವಾ ಮನೆ ಒದಗಿಸುವವರೆಗೆ ಇಲ್ಲಿಯೇ ವಾಸವಿರಬಹುದು ಎಂದು ಮೌಖಿಕವಾಗಿ ತಿಳಿಸಿದ್ದರಿಂದ 115 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಇವರಲ್ಲಿ ವಯೋವೃದ್ಧರು, ಅಂಗವಿಕಲರು, ವಿಧವೆಯರು ಹಾಗೂ ನಿರ್ಗತಿಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?
ಈ ಕುರಿತು ಶಾಸಕ ತನ್ವೀರ್ ಸೇಠ್ ಅವರ ಗಮನಕ್ಕೂ ತರಲಾಗಿದ್ದು, ನಿವಾಸಿಗಳಿಗೆ ಸೂಕ್ತ ನಿವೇಶನ ಅಥವಾ ಮನೆ ಒದಗಿಸುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಮನೆ ಅಥವಾ ನಿವೇಶನ ದೊರೆತ ಬಳಿಕ ಇಲ್ಲಿನ ನಿವಾಸಿಗಳನ್ನು ತೆರವುಗೊಳಿಸಲಿ ಎಂದು ಒತ್ತಾಯಿಸಿದರು.





