ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಎದ್ದೇಳು ಕರ್ನಾಟಕ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ ಜೂನ್ 15ರಂದು ಯಾದಗಿರಿ ನಗರಕ್ಕೆ ಆಗಮಿಸಲಿದ್ದು, ಜಾಥಾವನ್ನು ಯಶಸ್ವಿಗೊಳಿಸುವ ಸಂಬಂಧ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಈ ಜಾಥಾ ಜೂನ್ 13ರಂದು ಬೀದರ್ ಜಿಲ್ಲೆಯಿಂದ ಆರಂಭವಾಗಿ, ಜೂನ್ 14ರಂದು ಕಲಬುರಗಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಜೂನ್ 15ರಂದು ಯಾದಗಿರಿ ಜಿಲ್ಲೆಗೆ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪ್ರಗತಿಪರ, ರೈತ, ಕಾರ್ಮಿಕ, ಅಲ್ಪಸಂಖ್ಯಾತ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ ಜಾಥಾದ ಕಾರ್ಯಕ್ರಮಗಳ ರೂಪುರೇಷೆಗಳನ್ನು ಅಂತಿಮಗೊಳಿಸಿದರು.

ಸಭೆಯನ್ನುದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಮರೆಪ್ಪ ಚಟ್ಟೇಕರ್ ಮಾತನಾಡಿ, ‘ಎಸ್‌ಐಆರ್ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಚುನಾವಣಾ ಆಯೋಗವು ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಂಡಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆ ಜಾರಿಯಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ಅರ್ಹರ ಹೆಸರು ಉಳಿಯಬೇಕು ಹಾಗೂ ಅನರ್ಹರ ಹೆಸರುಗಳು ಸೇರ್ಪಡೆಯಾಗಬಾರದು ಎಂಬ ಉದ್ದೇಶವನ್ನು ಚುನಾವಣಾ ಆಯೋಗ ಹೊಂದಿದೆ’ ಎಂದು ಹೇಳಿದರು.
ಜಾಥಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ‘ಜೂನ್ 15ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಗುವುದು. ನಂತರ ಬೈಕ್ ರ‍್ಯಾಲಿ ಮೂಲಕ ನಗರದ ಗಾಂಧಿ ಚೌಕ್‌ಗೆ ತೆರಳಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ಎಸ್‌ಐಆರ್ ಕುರಿತು ಮಾಹಿತಿ ಒಳಗೊಂಡ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ, ಅದರ ಪರಿಣಾಮಗಳ ಕುರಿತು ಪ್ರಮುಖ ಮುಖಂಡರು ಮಾತನಾಡಲಿದ್ದಾರೆ’ ಎಂದು ತಿಳಿಸಿದರು.
‘ಬಳಿಕ ಜಾಥಾ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಲಿದೆ. ಅಲ್ಲಿಯೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ, ಅದರ ಉದ್ದೇಶಗಳು ಹಾಗೂ ವಿವಿಧ ಸಂಘಟನೆಗಳು ವ್ಯಕ್ತಪಡಿಸುತ್ತಿರುವ ಆತಂಕಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು. ಎಸ್‌ಐಆರ್ ಪ್ರಕ್ರಿಯೆ ಮತದಾರರ ಪಟ್ಟಿಯನ್ನು ಮರುಪರಿಶೀಲಿಸುವ ಮತ್ತು ಪರಿಷ್ಕರಿಸುವ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿದೆ’ ಎಂದು ಅವರು ಹೇಳಿದರು.

‘ನಂತರ ಸುಭಾಷ್ ವೃತ್ತದಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದ್ದು, ಎಸ್‌ಐಆರ್ ಕುರಿತು ಬಹಿರಂಗ ಚರ್ಚೆ ನಡೆಯಲಿದೆ. ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಹಾಗೂ ಚಿಂತಕರು ಭಾಗವಹಿಸಿ ಪ್ರಜಾಪ್ರಭುತ್ವದ ಹಕ್ಕುಗಳು, ಮತದಾನದ ಮಹತ್ವ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಿದ್ದಾರೆ’ ಎಂದರು.
‘ಅಲ್ಲಿಂದ ಹಳೆಯ ಪ್ರವಾಸಿ ಮಂದಿರದಲ್ಲಿ ಮತ್ತೊಂದು ಸಮಾಲೋಚನಾ ಸಭೆ ನಡೆಸಿ, ಜೂನ್ 20ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು ಚರ್ಚಿಸಲಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಪಕ ಜನಸಂಪರ್ಕ ನಡೆಸುವ ಮೂಲಕ ರಾಜ್ಯಮಟ್ಟದ ಹೋರಾಟಕ್ಕೆ ಬೆಂಬಲ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
‘ನಂತರ ಜಾಥಾ ಶಹಾಪುರ ನಗರಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆ ಬಳಿ ಕರಪತ್ರ ವಿತರಣೆ ನಡೆಸಲಿದೆ. ಅಲ್ಲಿಂದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಎಸ್‌ಐಆರ್ ಕುರಿತು ಮಾಹಿತಿ ನೀಡಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರೂ ಎಚ್ಚರಿಕೆಯಿಂದ ಭಾಗವಹಿಸಿ ತಮ್ಮ ಹೆಸರುಗಳು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು’ ಕರೆ ನೀಡಿದರು.
ಇದೇ ವೇಳೆ ದಸಂಸ ಹಿರಿಯ ಮುಖಂಡರಾದ ಮಾನಪ್ಪ ಕಟ್ಟಿಮನಿ, ಕಾಶೀನಾಥ ನಾಟೇಕರ್, ಜಾಮತ್ ಸಂಘದ ಮುಖಂಡ ಮಹಮ್ಮದ್ ಸಲೀಂ, ರೈತ ಮುಖಂಡ ಫಕೀರ್ ಅಹಮ್ಮದ್, ಡಾ. ರೆಡ್‌ಷನ್ ನಾಲವಾರ, ಮಹಮ್ಮದ್ ವಾಸೆ ಹಾಗೂ ಶರಣಗೌಡ ಪಾಟೀಲ ಮಾತನಾಡಿ ಜಾಥಾದ ಉದ್ದೇಶಗಳು ಮತ್ತು ಜನಜಾಗೃತಿಯ ಅಗತ್ಯತೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಪರಶುರಾಮ, ಸೈದಪ್ಪ ಕೊಲ್ಲೂರು, ಭೀಮರಾಯ ಹೊಸಮನಿ, ಗೋಪಾಲ ಕೆಳಗೇರಿ, ನಿಂಗಪ್ಪ ಕೊಲ್ಲೂರು, ಮರಲಿಂಗ ಸಾವೂರ್, ಬಾಲರಾಜ ಕಾನಾಪುರ, ಮಲ್ಲೇಶ ಅನುಸುಗೂರ್, ನಿಂಗಪ್ಪ ಅನುಸುಗೂರ್, ಸಾಬಣ್ಣ ಎಡಳ್, ನಿಂಗಪ್ಪ ಬೀರನಾಳ, ಶರಬು ವಡಗೇರಾ, ಹಣಮಂತ ಗುರಸುಣಗಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಚಿಂತಕರು, ಸಾಹಿತಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು, ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಕೂಲಿ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು, ಜಮಾತ್ ಸಂಘಟನೆಗಳ ಪ್ರತಿನಿಧಿಗಳು, ರೈತ ಪರ ಸಂಘಟನೆಗಳ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ವಿವಾಹೇತರ ಸಂಬಂಧ ಶಂಕೆ : ಪತಿಯಿಂದ ಪತ್ನಿ ಕೊಲೆ
ಸಭೆಯಲ್ಲಿ ಜಾಥಾವನ್ನು ಯಶಸ್ವಿಗೊಳಿಸಲು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.





