ಕೆಪಿಎಸ್ ಮ್ಯಾಗ್ನೆಟ್ ಶಾಲೆ ಮಾಡುವ ಆಲೋಚನೆಯನ್ನು ತಕ್ಷಣ ಕೈಬಿಡಬೇಕು. ಆರ್ ಟಿ ಇ ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕೆಂದು ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ರಾಯಚೂರು ಘಟಕದ ವತಿಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು.
ನಗರದಲ್ಲಿ ಮಧ್ಯರಾತ್ರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸರಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾ ಪಾಟೀಲ್, “ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆಯು ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿದೆ. ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತ, ಅಲ್ಪಸಂಖ್ಯಾತರ, ಬಡ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಅವರ ಕಲಿಕೆಗೆ ಶಿಕ್ಷಕರನ್ನು ನೇಮಿಸದೆ ಕಳಪೆ ಗುಣಮಟ್ಟಣದ ಶಿಕ್ಷಣ ಪಡೆಯುವಂತಾಗಲು ಸರ್ಕಾರ ನೇರ ಹೊಣೆ” ಎಂದರು.
“ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಾಗಿ 17 ವರ್ಷ ಕಳೆದರೂ ಇಂದಿಗೂ ನಮ್ಮ ಭಾಗದಲ್ಲಿ ಶುದ್ಧ ಕುಡಿಯುವ ನೀರು, ಆಟದ ಮೈದಾನ, ತರಗತಿಗೊಬ್ಬರು ಶಿಕ್ಷಕರು ಇರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು. ಅರ್.ಟಿ.ಇ. ಸಮರ್ಪಕ ಜಾರಿಗೆ ಸರ್ಕಾರ ಮುಂದಾಗಬೇಕು. ರಾಜ್ಯಮಟ್ಟದಲ್ಲಿ ಶಿಕ್ಷಣ ತಜ್ಞರ ಒಳಗೊಂಡು ಆರ್ಟಿಇ ಅನುಷ್ಠಾನ ಕುರಿತು ಇಲ್ಲಿಯವರೆಗೆ ಜಾರಿ ಮಾಡಿದ ಕೆಲಸಗಳ ಕುರಿತು ಶ್ವೇತಪತ್ರ ಹೊರಡಿಸುವ ಮೂಲಕ ಆರ್ಟಿಇ ಅನುಷ್ಠಾನಕ್ಕೆ ತಜ್ಞರ ಸಮಿತಿಯ ಒಳಗೊಂಡು ಸಮಿತಿಯನ್ನು ರಚಿಸಬೇಕು” ಎಂದು ತಿಳಿಸಿದರು.
ಇದನ್ನೂ ಓದಿ> ರಾಯಚೂರು | ಜಗಜೀವನ್ ರಾಮ್ ಜಯಂತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗೈರುಹಾಜರಿ; ಮಾದಿಗ ದಂಡೋರ ಆಕ್ರೋಶ
ಇಲ್ಲದಿದ್ದಲ್ಲಿ ಏಕಕಾಲಕ್ಕೆ ರಾಜ್ಯದ 16 ಜಿಲ್ಲೆಗಳಲ್ಲಿ ಧರಣಿ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ವಿವಿಧ ಹಂತದ ಹೋರಾಟಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.
ಹೈದರಾಬಾದ್ ಕರ್ನಾಟಕ ಜನಾಂದೋಲನ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ. “ಸರ್ಕಾರ ಕನ್ನಡವನ್ನು ಉಳಿಸಬೇಕಾಗಿದ್ದರೆ ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ. ಸುಮಾರು ವರ್ಷಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಗುಣಮಟ್ಟ ಶಿಕ್ಷಣ ಕೊಡದೆ ಈ ಭಾಗದ ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ. ಸರಕಾರಕ್ಕೆ ಕಿಂಚಿತ್ತಾದರೂ ಬಡವರ ಬಗ್ಗೆ ಕನ್ನಡದ ಬಗ್ಗೆ ಗ್ರಾಮೀಣ ಪ್ರದೇಶದ ಜನರ ಬಗ್ಗೆ ಕಾಳಜಿ ಇದ್ದರೆ. ತಕ್ಷಣ ಶಿಕ್ಷಕರನ್ನು ತುಂಬುವ ಮೂಲಕ ಗುಣಮಟ್ಟ ಶಿಕ್ಷಣಕ್ಕೆ ಒತ್ತು ಕೊಡಬೇಕು. ಅರ್.ಟಿ.ಇ ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕೆ.ಪಿ.ಎಸ್ ಮ್ಯಾಗ್ನೆಟ್ ಶಾಲೆ ಮಾಡುವ ಆಲೋಚನೆಯನ್ನು ತಕ್ಷಣ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಹಂತದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಿವರಾಂ ರೆಡ್ಡಿ, ಗುರುರಾಜ್ ಸೈಯದ್ ಹಫೀಜ್ ಉಲ್ಲಾ, ಬಸವರಾಜ್ ಸ್ವಾಮಿ, ಎಂ.ಆರ್ ಬೇರಿ ಮಾರಮ್ಮ ಸೇರಿದಂತೆ ಜಿಲ್ಲೆಯಿಂದ ಬಂದ ವಿವಿಧ ಕಾರ್ಯಕರ್ತರು ಭಾಗವಹಿಸಿದ್ದರು.




