ಭೂಸ್ವಾಧೀನಕ್ಕೆ ಒಳಗಾದ ಸಂತ್ರಸ್ತ ರೈತರಿಗೆ ಭೂ ಪರಿಹಾರ ನೀಡದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಯಚೂರು ಉಪ ವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ, ವಾಹನ ಹಾಗೂ ಕಂಪ್ಯೂಟರ್‌ಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಗುರುವಾರ ಜಪ್ತಿ ಮಾಡಲಾಯಿತು.
2008-09ನೇ ಸಾಲಿನಲ್ಲಿ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ 10ಕ್ಕೂ ಹೆಚ್ಚು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಸಂತ್ರಸ್ತ ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ರೈತರಿಗೆ ಭೂ ಪರಿಹಾರ ನೀಡುವಂತೆ ಆದೇಶಿಸಿತ್ತು. ಹಲವು ಬಾರಿ ಅವಕಾಶ ನೀಡಿದ್ದರೂ ನ್ಯಾಯಾಲಯದ ಆದೇಶದಂತೆ ಪರಿಹಾರ ಬಿಡುಗಡೆ ಮಾಡಲು ಸಹಾಯಕ ಆಯುಕ್ತರ ಕಚೇರಿ ವಿಫಲವಾಗಿದೆ ಎಂದು ಆರೋಪಿಸಿ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.
ವಕೀಲ ಜಂಬುನಾಥ ಯಾದವ ನೇತೃತ್ವದಲ್ಲಿ ರೈತರು ಹಾಗೂ ಅಧಿಕಾರಿಗಳು ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ನ್ಯಾಯಾಲಯದ ಆದೇಶದಂತೆ ಪೀಠೋಪಕರಣ, ವಾಹನ ಹಾಗೂ ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಿದರು. ಸುಂಕೇಶ್ವರಹಾಳ ಗ್ರಾಮದ ರೈತರಿಗೆ ₹1.30 ಕೋಟಿಗೂ ಅಧಿಕ ಭೂ ಪರಿಹಾರ ನೀಡಬೇಕಿದೆ. ಹತ್ತಾರು ವರ್ಷಗಳಿಂದ ಪರಿಹಾರ ನೀಡದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೂ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಜಪ್ತಿಗೆ ಆದೇಶಿಸಲಾಗಿದೆ’ ಎಂದು ವಕೀಲ ಜಂಬುನಾಥ ಯಾದವ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ
ಭೂ ಸಂತ್ರಸ್ತ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಲು ಅಧಿಕಾರಿಗಳು ಕೂಡಲೇ ಮುಂದಾ ಗಬೇಕು’ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತರು ಹಾಗೂ ಅಧಿಕಾರಿಗಳು ಹಾಜರಿದ್ದರು.




