ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ರೈಲು ಒಂದೇ ಸಮನೆ ಓಡುತ್ತಿತ್ತು. ಅದರೊಳಗೆ ಕುಳಿತಿದ್ದ ಅವಳಿಗೆ ಮಾತ್ರ ಉಸಿರು ಕಟ್ಟಿದಂತಾಗಿ ತನ್ನ ಎರಡು ಮಕ್ಕಳನ್ನು ಆಚೆ ಬದಿಗೆ ಕುಳ್ಳಿರಿಸಿ ತಾನು ಇನ್ನಷ್ಟು ಕಿಟಕಿ ಬಳಿಗೆ ಸರಿದು ಕಿಟಕಿ ಗ್ಲಾಸನ್ನು ಮೇಲೆತ್ತಲು ನೋಡಿದಳು. ಸರಾಗವಾಗಿ ಮೇಲೆದ್ದ ಅದನ್ನು ನಿಲ್ಲಿಸಲು ಆಗಲಿಲ್ಲ. ಗ್ಲಾಸನ್ನು ಹೇಗೆ ಎಲ್ಲಿ ಯಾವುದಕ್ಕೆ ಆಸರೆ ಮಾಡಿ ನಿಲ್ಲಿಸಬೇಕೆಂಬುದು ತಿಳಿಯಲಿಲ್ಲ. ಇದನ್ನು ನಿಲ್ಲಿಸಲು ಅಗುಣಿಯಂತಾದ್ದು ಏನಾದರೂ ಇದೆಯಾ ಅಂದುಕೊಂಡು ಒಂದು ಕೈಯಿಂದ ಗ್ಲಾಸನ್ನು ಮೇಲೆತ್ತಿ ಹಿಡಿದು ಇನ್ನೊಂದು ಕೈಯಿಂದ ತಡಕಾಡಿದಳು. ಅದರ ಆಚೀಚೆ ಬದಿಗೆ ಕಣ್ಣಾಡಿಸಿದಳು. ಏನೂ ಗೊತ್ತಾಗಲಿಲ್ಲ. ಅಷ್ಟರಲ್ಲಿ ಹೊರಳುತ್ತಿದ್ದ ರೈಲಿನ ಅಲುಗಾಟಕ್ಕೆ ಆಯ ತಪ್ಪಿದಂತಾಗಿ ಕೈ ಜಾರಿದ ಗ್ಲಾಸು ದಡಕ್ಕನೆ ಕೆಳಸರಿಯಿತು.
ದಡ್ಡನೆ ಬಿದ್ದ ಅದರ ಸದ್ದಿಗೆ ಬೆಚ್ಚಿ, ಅವಳು ಹಿಂದೆ ಸರಿದಳು. ಇತ್ತ ಸರಿದ ಎಲ್ಲರ ಗಮನವನ್ನು ಹೀರಿಕೊಳ್ಳಲಾರದೆ ತಲೆ ತಗ್ಗಿಸಿದಳು. ಹೆದರಿಕೆಯಾಯಿತು. ಅಪ್ಪ ಎದುರುಗಡೆಯೇ ಕುಳಿತಿದ್ದ. ಆಚೆ ಬದಿಯಲ್ಲಿ ಒಂದು ಕುಟುಂಬದ ಯಜಮಾನ, ಯಜಮಾನತಿ, ಅವರ ಮಗಳು ಕುಳಿತಿದ್ದರು. ಮಗಳ ಒದ್ದಾಟವನ್ನು ಕಂಡು ಅಪ್ಪ ‘ಇದ್ಯಾಕೆ ಮೊಗಾ’ ಅಂದ. ಆ ಕುಟುಂಬ ಮಾತ್ರ ಮತ್ತೆ ತಮ್ಮ ಮಗಳನ್ನು ಆಡಿಸುವುದರಲ್ಲಿ ಪೂರ್ಣ ಮಗ್ನವಾಯಿತು.
ಅವಳು ಉಸಿರೆಳೆದುಕೊಂಡಳು. ತಲೆಗೆ ಎಣ್ಣೆಯನ್ನು ಹರಿಯುವಂತೆ ಹಾಕಿದ್ದರೂ ಜೊತೆಯಿಂದ ತಪ್ಪಿಸಿಕೊಂಡು ಕೆನ್ನೆ ಮೇಲೆ ನೇತಾಡುತ್ತಿದ್ದ ಮುಂದಲೆಯ ಮೋಟುಗೂದಲಿನ ಭಾಗವೊಂದನ್ನು ಕಿವಿಯ ಹಿಂದಕ್ಕೆ ತಳ್ಳಿ, ಕುತ್ತಿಗೆ ಸಂದಿಯಲ್ಲೆಲ್ಲಾ ಜಿನುಗುತ್ತಿದ್ದ ಬೆವರನ್ನು ಹರಳೆಣ್ಣೆಯ ಸಹಿತ ಬರಿಗೈಯಿಂದ ಒರೆಸಿಕೊಂಡಳು. ಕಿಟಕಿಯ ಗ್ಲಾಸು ಒಡೆದಂತೇನೂ ಕಾಣಲಿಲ್ಲ.
ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ
ತನ್ನ ತೊಡೆ ಮೇಲೆ ಮಲಗಿದ್ದ ಕಿರಿಮಗುವಿನ ತಲೆದಸಿಗೆ ಕೆಂಪಡರಿದ ಜಿಂಗಟವನ್ನು ಒತ್ತು ಮಾಡಿ ಈಗ ಅಪ್ಪ ತಾನೇ ಮುಂದೆ ಸರಿದು ಕಿಟಕಿಯ ಗ್ಲಾಸೆತ್ತಿ ಮೇಲ್‌ಭಾಗದಲ್ಲಿ ಮಡಚಿಕೊಂಡಂತಿದ್ದ ಕೊಂಡಿಯೊಂದಕ್ಕೆ ಆಸರೆ ಮಾಡಿ ನಿಲ್ಲಿಸಿದ. ತನಗೆ ಅಸಾಧ್ಯವೇ ಆಗಿದ್ದು ಅಪ್ಪನ ಕೈಯಲ್ಲಿ ಇಷ್ಟು ಸಸಾರವಾಗಿ ಬಗೆಹರಿದಿದ್ದು ಕಂಡ ಅವಳು, ಆ ಕಿಟಕಿ ನೋಡುತ್ತಾ ‘ಆದ್ಯಾಕೆ ನನಗೆ ಅದು ಸಿಕ್‌ನಿಲ್ಲ’ ಅಂತ ಗೊಣಗಿಕೊಂಡಳು.
ಈಗ ತೆರೆದ ಕಿಟಕಿಯಿಂದ ಗಾಳಿ ರಭಸವಾಗಿ ಒಳನುಗ್ಗತೊಡಗಿತು. ತಾತನಿಗೆ ಕಥೆ ಹೇಳಲು ಪೇರಿಕೊಂಡಿದ್ದ ಮಕ್ಕಳು ‘ಅಮ್ಯಾಕೆ ಹೇಳಿವಂತೆ ತಾಳು ತಾತ’ ಎಂದವೇ ಓಡಿಬಂದು ಕಿಟಕಿಯ ಕಂಬಿ ಹಿಡಿದುಕೊಂಡು ಮುಖ ಒಡ್ಡಿದವು.
ಹೊರಗೆ ತುಂಬಿ ತುಳುಕಾಡುತ್ತಿದ್ದ ಗದ್ದೆಯ ಹಸಿರು, ಹುಲ್ಲು, ಮರ, ಗಿಡ, ಬಂಡೆ, ಹಳ್ಳಕೊಳ್ಳಗಳೆಲ್ಲ ರೈಲಿನಷ್ಟೇ ವೇಗವಾಗಿ ಹಿಂದಹಿಂದಕ್ಕೆ ದೌಡಾಯಿಸುತ್ತಿದ್ದವು. ನಿಂತ ನೀರಿನ, ಬೆಳೆದ ಪೈರಿನ ಬಯಲಿನಿಂದ ಬೀಸಿ ಬರುತ್ತಿದ್ದ ಹಿತವಾದ ಗಾಳಿಯ ಕಮ್ಮನೆ ವಾಸನೆ ಹೀರುತ್ತಾ ಅವಳು ನಿಂತಿದ್ದ ತನ್ನೆರಡು ಮಕ್ಕಳ ಸಂದಿಯಿಂದ ತಾನೂ ಮುಖ ತೂರಿ ಹೊರ ನೋಡತೊಡಗಿದಳು.
”ಅಯ್! ಗ್ಲಾಸು ಮುಚ್ಚಮ್ಮ ಗಾಳಿ ರಭಸ” ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಗಾಳಿಗೆ ಹಾರಾಡುತ್ತಿದ್ದ ಅವಳ ಮುಂಗುರಳನ್ನು ನೀವುತ್ತಿದ್ದ ಆಚೆ ಬದಿಯ ಯಜಮಾನ ಗದರಿದರು. ಆ ಗದ್ದಲಕ್ಕೆ ಬೆಚ್ಚಿ ಹಿಮ್ಮಳ್ಳಿದ ಮಕ್ಕಳು ಅವ್ವ ಎಲ್ಲಿ ಮುಚ್ಚಿಬಿಡುತ್ತಾಳೋ ಎಂಬ ಆತಂಕದಿಂದ ಅವ್ವನ ಮುಖ ನೋಡಿದವು. ಇವಳು ಮುಖ ಕೊಂಕಿಸಿ ಯಜಮಾನರತ್ತ ನೋಡಿದಳು. ಅವರು ಮತ್ತೆ ಗುರ್‌ಗುಟ್ಟಿಸಿದ ದೃಷ್ಟಿಯ ಎದುರಿಸಲಾರದೆ ಇತ್ತ ತಿರುಗಿ, ತನ್ನ ಮಕ್ಕಳ ಅರುಗಾಗಿಸಿ, ಕಿಟಕಿ ಮುಚ್ಚಿಬಿಟ್ಟಳು.
ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆ | ಒಂದು ತುಂಡು ಗೋಡೆ
ರೈಲು ಓಡುತ್ತಿದ್ದದ್ದು, ಆಮೇಲೆ ಓಡುತ್ತೋಡುತ್ತಾ ನಿಧಾನಗೊಂಡು ಕೊನೆಗೆ ಮಧ್ಯಮಾರ್ಗದಲ್ಲಿ ನಿಂತಿತು. ಯಾರೋ ಸೇತುವೆ ರಿಪೇರಿಯಂತೆ ಅಂದರು. ಒಳಗಡೆ ದಿಟವಾಗಿ ಅಸಹನೆ ಕಟುವಾಗತೊಡಗಿತು.
ಆ ಯಜಮಾನ ಮೋಸುಂಬೆ ತೊಳೆಯ ಮಗಳ ಬಾಯಿಗೆ ಇಡಲು ಹೋಗುವುದು; ಮಗಳು ಬಾಯಿ ಮುಂದಕ್ಕೆ ತಂದಾಗ ತಾನು ಹಿಂದಕ್ಕೆ ಕೈ ಎಳಕೊಳ್ಳುವುದು, ಅದಕ್ಕೆ ಮಗಳು ಮುನಿಸು ತೋರುವುದು, ಆ ಹುಸಿ ಮುನಿಸಿಗೆ ತಾಯಿ ನಗುವುದು ಸಾಗುತ್ತಿತ್ತು.
ಈ ಅಪ್ಪ ಕಿರಿಮಗುವ ತೊಡೆ ಮೇಲೆ ಮಲಗಿಸಿಕೊಂಡು, ಮೂಕನಂತೆ ಆಚೆ ನೋಡುತ್ತಾ ಕುಳಿತಿದ್ದ. ತನ್ನ ಈ ಎರಡು ಮಕ್ಕಳು ತಮ್ಮೊಳಗೇ ಏನೇನೋ ಆಡಿಕೊಳ್ಳುತ್ತಿದ್ದವು. ಅವನಿಗೆ ಕಿಟಕಿ ತೆಗೆಯಬೇಕೆನಿಸಿದರೂ ಕೈ ಬರಲಿಲ್ಲ.
ಎಷ್ಟು ಹೊತ್ತಾದರೂ ರೈಲು ಮುಂದೋಡುವ ಸೂಚನೆ ಕಾಣಲಿಲ್ಲ. ಆ ಅಪ್ಪ-ಮಗಳ ಹಣ್ಣಿನೊಂದಿಗಿನ ಹುಸಿಮುನಿಸಿನಾಟ ಈಗ ನಿಂತಿತ್ತು. ಯಜಮಾನತಿ ತಿಂದು ಮುಗಿಸಿದ ಮೋಸುಂಬೆ ಸಿಪ್ಪೆಯನ್ನು ಆಚೆ ಎಸೆಯಲು ಕಿಟಕಿ ಗ್ಲಾಸು ತೆರೆಯುವಂತೆ ಇವಳಿಗೆ ಹೇಳಿದರು. ಅದನ್ನೇ ಕಾಯುತ್ತಿದ್ದವಳಂತೆ ಇವಳು ಗ್ಲಾಸು ದಡಕ್ಕನೆ ಮೇಲೆತ್ತಿದಳು. ಅದನ್ನು ನಿಲ್ಲಿಸಲು ಈ ಸಲ ಅವಳಿಗೆ ಕಷ್ಟವಾಗಲಿಲ್ಲ. ಮತ್ತೂ ಯಜಮಾನತಿಯ ಕೈಲಿದ್ದ ಸಿಪ್ಪೆಯನ್ನು ತಾನೇ ಈಸಿಕೊಂಡು ಆಚೆ ಎಸೆದಳು. ಈಗ ರಭಸದಿಂದ ಗಾಳಿ ನುಗ್ಗದಿದ್ದರೂ ಉಸಿರನ್ನು ನಿರಾಳವಾಗಿ ಬಿಡುವಂತಾಯಿತು. ಮಕ್ಕಳು ಪುನಃ ನಾ ಮುಂದು ತಾ ಮುಂದು ಅಂತ ಕಿಟಕಿಗೆ ಮೊಗಚಿಕೊಂಡವು.
ರೈಲು ಹೊರಟಿತು. ಹಸಿರು ಗದ್ದೆಗಳು ಯಥಾಪ್ರಕಾರ ಹಿಂದಕ್ಕೆ ಸರಿಯುವುದು; ರೈಲು ಹಾವಿನಂತೆ ಮುಂದಕ್ಕೆ ಹರಿಯುವುದು ಮೊದಲಾಯಿತು. ಮಕ್ಕಳು ಈ ಕ್ರಿಯೆಯೊಳಗೆ ಒಂದಾಗತೊಡಗಿದವು. ಅವಳು ಹಿಂದಕ್ಕೋಡುವ ಹಸಿರಿನೊಳಗೆ ನಿರಂಬಳವಾಗಿ ತನ್ನ ಮನ ನೆಟ್ಟುಬಿಟ್ಟಳು.
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
‘ಗಾಳಿ ರಭಸ ಜಾಸ್ತಿಯಾಯ್ತು ಗ್ಲಾಸು ಹಾಕ್ ಬುಡಮ್ಮ’ ಈ ಸಲ ಯಜಮಾನತಿ ತಿಳಿಸಿದಳು.
ಇವಳು ಆ ಹಸಿರಿನಾಚೆಯ ದಿಗಂತ, ಅದರ ಅನಂತತೆಯ ಒಳಗೆ ಹೊಕ್ಕಿದ್ದಳು. ಗಾಡಿ ಓಡುತ್ತಲೇ ಇತ್ತು. ಗಾಳಿ ಒಳ ನುಗ್ಗುತ್ತಿತ್ತು. ಒಂದು, ಎರಡು, ಮೂರು, ನಾಲ್ಕು, ಐದು ನಿಮಿಷವಾಯಿತು. ಫರ್ಲಾಂಗುಗಳ ದೂರ ಕ್ರಮಿಸಿತು. ಆದರೆ ಅವಳು ಗ್ಲಾಸನ್ನು ಇಳಿಸುವ ಸೂಚನೆಯನ್ನೇ ನೀಡದಿರುವುದನ್ನು ಕಂಡ ಯಜಮಾನತಿ ಮಗಳ ಮುಖದ ಮುಂದೆ ಹಾರಾಡುತ್ತಿದ್ದ ಮುಂಗುರುಳನ್ನು ಹಿಂದಕ್ಕೆ ಸರಿಸುತ್ತಾ “ಈ ಗಾಳಿ ನೋಡು, ಅದೇನು ಒಂದ್ಸಲ ಹೇಳಿದ್ದು ಕೇಳಿಸಲ್ವಾ? ಆ ಏನಮ್ಮ?” ಈಗ ಗಟ್ಟಿಯಾಗಿ ಹೇಳಿದಳು.
ಮಕ್ಕಳು ಆತಂಕದಿಂದ ಅವ್ವನ ಮುಖ ನೋಡಿದವು. ಅವಳು ನಿಧಾನಕ್ಕೆ ತಿರುಗಿದಳು. ಹಾಗೆ ನೋಡಿದರೆ ಗಾಳಿ ಅಂಥ ರಭಸವಾಗಿರಲಿಲ್ಲ. ‘ಏನು ಇವ್‌ರೆಲ್ಲ ಬಾಳೆ ಹಣ್ಣಿನ ಗುಡಾಣ್‌ದಲ್ಲಿ ಬೆಳದಿರಬೇಕು’ ಅಂತ ಗೊಣಗಿಕೊಂಡಳು. ಮಗಳು ಹತ್ತಿರ ಬಂದು ‘ಹಿಂಗೇ ಇರಲಿಕನೌವ್ವ, ಹಾಕ್ ಬ್ಯಾಡ’ ಅಂತ ಅವ್ವನ ಕಿವಿಯಲ್ಲಿ ಪಿಸುಗುಟ್ಟಿದಳು.
ಅತ್ತ ತಿರುಗಿದರೆ ಮತ್ತೆಲ್ಲಿ ಕಣ್ಣಲ್ಲೇ ತಿವಿಯುತ್ತಾರೋ ಅಂತ ಇವಳು ಕೇಳಿಸದಂತೆಯೇ ಕುಳಿತಿದ್ದಳು. ಆದರೆ ಈಸಲ ಯಜಮಾನರು “ಈ ಪ್ಯಾನ್ ಗಾಳೀನೇ ಸಾಕಂತೆ ಹಾಕಮ್ಮ, ಏನ್ ನಿಂಗೆ ಹೇಳತಾನೇ ಇರಬೇಕಲ್ಲ” ಅಂತ ರೋಪು ಮಾಡಿದರು. ಈ ಸದ್ದು ಅತ್ತಿಂದ ಬಂದದ್ದೇ ಇವಳ ಕೈ ತಟ್ಟನೆ ಕಿಟಕಿಯ ಬಳಿಗೆ ಸರಿಯಿತು. ಗ್ಲಾಸು ದಬಕ್ಕನೆ ಕೆಳಗಿಳಿಯಿತು.
ಅವಳ ಮಕ್ಕಳು ಪೆಚ್ಚುಮೋರೆ ಹಾಕಿಕೊಂಡು ತಾತನ ಪಕ್ಕಕ್ಕೆ ಹೋದವು. ಗ್ಲಾಸಿನಾಚೆಯ ಹಸಿರು ಗದ್ದೆಯ ನೋಡುತ್ತಿದ್ದ ತಾತ, ಅವುಗಳನ್ನು ಪಕ್ಕಕ್ಕೆ ಕರೆದು ಕೂರಿಸಿಕೊಂಡು ನಗಿಸಲೆಂದು ಗಂಡು ಮಗುವಿಗೆ ಗಿಲಿಗಿಲಿ ಮಾಡತೊಡಗಿದ.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
ಯಜಮಾನತಿ ಮೋಸುಂಬೆ ತೊಳೆಯ ಬೀಜ ಬಿಡಿಸಿ, ಮಗಳ ಬಾಯಿಗೆ ಊಡುತ್ತಿದ್ದಳು. ಮಗಳು ಉಂಡೆ ಹಣ್ಣನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಎಸೆದಾಡುವ ಚೆಂಡಿನಾಟ ಆಡುತ್ತಿದ್ದಳು. ರೈಲಿನ ಜುರುಕಾಟದ ಮಧ್ಯೆ ಬಾಯಿಗೆ ಊಡುತ್ತಿದ್ದ ತೊಳೆಗಳಲ್ಲಿ ಒಂದೊಂದು ತಪ್ಪಿ ಕೆಳ ಬೀಳುತ್ತಿತ್ತು.
ಅಪ್ಪ ತನ್ನ ಸುಕ್ಕಿನ ಮಧ್ಯದೊಳಗಿರುವ ಕಣ್ಣುಗಳ ಮತ್ತಷ್ಟು ಕಿರಿದುಗೊಳಿಸಿಕೊಂಡು ಗ್ಲಾಸಿನಾಚೆಯ ಬಯಲು ನೋಡುತ್ತಿದ್ದವನು ಗಕ್ಕನೆ ಎದುರಾಗುವ ದಿಬ್ಬ; ದಿಸಕ್ಕನೆ ಇಳಿಯುವ ಹಳ್ಳ; ಸ್ಪರ್ಧೆಗಿಳಿದಂತೆ ಕಾಣುವ ಮರಗಳನ್ನು ತೋರಿಸಲು ಮಕ್ಕಳನ್ನು ಕರೆಯುತ್ತಿದ್ದ. ಮುಚ್ಚಿದ್ದ ಗ್ಲಾಸಿನ ಹಿಂದಿನಿಂದ ನೋಡುವುದರಲ್ಲಿ ನಿರುತ್ಸಾಹಗೊಂಡು ಅವನ ಪಕ್ಕದಲ್ಲೇ ಇದ್ದ ಈ ಮಕ್ಕಳು ಆ ಹುಡುಗಿಯ ಕೈಯೊಳಗಿನಿಂದ ಉಂಡೆಹಣ್ಣಿನ ನೆಗೆದಾಟಕ್ಕೆ ಕಣ್ಣಾಡಿಸುತ್ತಾ, ಕೆಳ ಬೀಳುತ್ತಿದ್ದ ತೊಳೆಗಾಗಿ ಮುಖ ಕೊಂಕಿಸುತ್ತಾ ಕುಳಿತಿದ್ದವು. ಮಕ್ಕಳ ಯಾಚಗದ ನೋಟಕ್ಕೆ ಕಿರಿಕಿರಿಪಟ್ಟ ಇವಳು ಅದನ್ನ ಗದರಿಸಿ ತೀರಿಸಿಕೊಳ್ಳಲಾಗದೆ ಇನ್ನಷ್ಟು ಬೆನ್ನುಮಾಡಿ ಕಿಟಕಿಯತ್ತ ತಿರುಗಿದಳು. ಮಕ್ಕಳು ಗಿಲಿಗಿಲಿಗೂ ನಗದೆ, ಓಡುವ ಗಿಡಮರಗಳ ಸೋಜಿಗಕ್ಕೂ ಪಕ್ಕಾಗದೆ ಮುರಟಿ ಕುಳಿತಿದ್ದವನ್ನು ತಾತ ಇನ್ನಷ್ಟು ಹತ್ತಿರ ಕರೆದುಕೊಂಡು ಏಳು ಸಮುದ್ರದಾಚೆಯ ಮೀನುರಾಜನ ಕಥೆ ಹೇಳಲು ಆರಂಭಿಸಿದ.
ಮುಂದೆ ಸ್ಟೇಷನ್ನೊಂದು ಸಿಕ್ಕಿತು. ರೈಲು ನಿಂತಿದ್ದೇ ತಡ ವಡೆ, ಇಡ್ಲಿ, ಬಿಸ್ಕತು, ಕಾಫಿ, ಹುರಿಗಾಳು ಮಾರುವ ಹುಡುಗರು ಕಿಟಕಿ ಕಂಡಿಗಳಿಂದ ಮುಗಿಬಿದ್ದರು. ಆ ಯಜಮಾನರ ಮಗಳು ತನ್ನ ತಾಯಿಗೆ ಏನೋ ಕೇಳಿದಳು. ಯಜಮಾನ ಇತ್ತ ತಿರುಗಿ ‘ಗ್ಲಾಸು ಎತ್ತಮ್ಮ’ ಅಂದರು. ಇವಳು ಯಾಂತ್ರಿಕವಾಗಿ ಕಿಟಕಿಯ ಗ್ಲಾಸೆತ್ತಿ ನಿಲ್ಲಿಸಿದಳು. ಅವರು ಕಿಟಕಿ ಬಳಿ ಸರಿದು ಒಂದು ಬಿಸ್ಕತ್ತು ಪ್ಯಾಕೆಟ್ಟು ಕೊಂಡುಕೊಂಡರು. ಆಮೇಲೆ ಕೆಳಗಿಳಿದು ಹೋಗಿ ಬಾಟಲಿನಿಂದ ಕುಡಿಯಲು ನೀರು ತಂದರು.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
“ಹೆಜ್ಜೆ ಹೆಜ್ಜೆಗೂ ಎದುರಾಗುವ ಕಾವಲಿನ ರಾಕ್ಷಸರನ್ನು ಕೊಂದು, ಏಳು ಸುತ್ತಿನ ಕೋಟೆಯ ಅರಮನೆಯೊಳಗೆ ಬಂದು, ಏಳೆಡೆ ಸರ್ಪದ ಬೆಂಗಾವಲಿನಲ್ಲಿದ್ದ ಮಣಿಯನ್ನು ಪಡೆಯಬೇಕೆಂಬಲ್ಲಿನ” ಸಾಹಸದ ವರ್ಣನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎದ್ದು ಬಂದ ಈ ಮಕ್ಕಳು ‘ತಂ ಅವ್ವ ಏನಾರ ಕೊಡಿಸುತ್ತಾಳೆ’ ಅಂತ ಹೊಂಚುಹಾಕಿದವು. ಕಿಟಕಿಯ ಆಚೆ ಬದಿ ಅವ್ವನ ಮುಖದ ಹತ್ತಿರ ಹಿಡಿದು ‘ವಡೇ ವಡೇ’ ಅಂದರೂ ‘ಹುರ್ ಗಾಳು ಹುರ್‌ಗಾಳು’ ಅಂದರೂ, ‘ಕಡ್ಲೆಕಾಯಿ ಕಡ್ಲೆಕಾಯಿ’ ಅಂದರೂ ಇವಳ ಮುಖ ಅರಳಲೇ ಇಲ್ಲ. ಈಗ ಮನಸ್ಸು ಮಾಡಬಹುದು, ಇನ್ನೇನು ಮನಸ್ಸು ಮಾಡಬಹುದು ಅಂತ ಎವೆಯಿಕ್ಕದೆ ನೋಡಿದ ಅವುಗಳಿಗೆ ರೈಲು ಸಿಳ್ಳೆ ಹಾಕಿ ಚಕುಬುಕನೆ ಚಲಿಸತೊಡಗಿದಾಗ ಸರ್ಪದ ಹೆಡೆಯೊಳಗಿನ ಮಣಿಯು ಝಗ್ಗನೆ ಬೆಳಗುವ ನೆನಪಾಗಿ ಇತ್ತ ತಿರುಗಿದವು.
ಕಿಟಕಿ ಕೆಳಗಿಳಿಯಿತು. ನೊರನೊರನೆ ಮುರಿಯುವ ಬಿಸ್ಕತ್ತಿನ ವಾಸನೆ ಆವರಣವನ್ನು ತುಂಬಿತು. ಇವಳು ಕತ್ತಿನ ಸಂದಿಯಿಂದ ಜಿನುಗಾಡುತ್ತಿದ್ದ ಬೆವರನ್ನು ಸೆರಗಿನಿಂದ ಸರಸರನೆ ಒರೆಸಿಕೊಂಡಳು. ಇಪ್ಪತ್ತರ ಗಡಿ ದಾಟದಿದ್ದರೂ ಆಗಲೇ ಮೂರು ಮಕ್ಕಳ ತಾಯಿ! ಎಂಬತ್ತರಲ್ಲಿ ಎದ್ದು ಕಾಣುವ ಮೂಳೆ ಚಕ್ಕಳ ಈಗಲೇ ಸೆಡ್ಡು ಹೊಡೆದಿವೆ. ಕುಣಿದು ಕುಪ್ಪಳಿಸಬೇಕಿದ್ದ ಕನಸು ಕನವರಿಕೆಗಳೆಲ್ಲ ಪೊಟರೆ ಬಿದ್ದಿರುವ ಕಣ್ಣು ಗೂಡೊಳಗೆ ಕತ್ತು ಮುರಿದುಕೊಂಡು ಕಂತು ಬಿಟ್ಟಿವೆ. ಆಸರೆಯಾಗಿ ಇವುಗಳನ್ನೆಲ್ಲ ತುಳುಕಿಸಬೇಕಿದ್ದವನೇ ಇಂಗಿಹೋಗಿ ಬಿಟ್ಟನಲ್ಲ…
ನಿಟ್ಟುಸಿರು ಬಿಟ್ಟಳು. ನರನಾಕು ಮೂಲೆಯಿಂದಲೂ ಜಿನುಗಿದ ಬೆವರನ್ನು ಉಜ್ಜಿ ಒರೆಸಿಕೊಂಡಳು. ಕೊರಳಿನ ಹಸಿನೂಲಿನ ದಾರ, ಸೀರೆಯ ತೂತಿಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು. ಕೊಳೆ, ಬೆವರಿನಿಂದ ಕಪ್ಪಾಗಿ ನವೆದಿದ್ದ ಅದು ಎಲ್ಲಿ ಕಿತ್ತುಹೋಗಿ ಬಿಡುವುದೋ ಅಂತ ನಿಧಾನಕ್ಕೆ ಬಿಡಿಸಿ, ಸೆರಗ ಸರಿಮಾಡಿಕೊಂಡು ಮುಚ್ಚಿದ್ದ ಕಿಟಕಿಯತ್ತ ಮುಖ ಮಾಡಿದಳು.
ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ
ಮಕ್ಕಳು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಬಂದು ತಾತನ ಮಗ್ಗಲಲ್ಲಿ ಕುಳಿತವು. “ಬುಸ್ಸನೆ ಉಸಿರುಬುಡುವ ಏಳೆಡೆ ಸರ್ಪದ ಹೆಡೆಯೊಳಗೆ ಪಳಪಳ ಹೊಳೆಯುತ್ತಿದ್ದ ಮಣಿಯನ್ನು ಕಂಡ ರಾಜಕುಮಾರನ ಕಣ್ಣಿಗೆ ಕತ್ತಲೆ ಕವಿದಂತಾಯ್ತು. ಆಮ್ಯಾಲೆ ಏನಾಯ್ತಪ್ಪ ಅಂತಂದ್ರೆ…” ಎಂದು ತಾತ ದನಿ ಏರಸಿ ಕಥೆಯ ಸನ್ನಿವೇಶವನ್ನು ಮುಂದುವರಿಸಿದ. ಅವು ತಾತನ ಎಡಬಲಕ್ಕೆ ಇನ್ನಷ್ಟು ಸರಿದವು.
ರೈಲು ಓಡುತ್ತಲೇ ಇದ್ದದ್ದು ಮುಂದೊಂದು ನಿಲ್ದಾಣದಲ್ಲಿ ನಿಂತಿತು. ಹುಳಕ್ಕೆ ಮುತ್ತುವ ಇರುವೆಗಳಂತೆ ಜನ; ಕಂಬಿಗಳಾಚೆಯಿಂದ ವಡೇ ವಡೇ ಕಾಫೀ ಕಾಫೀ ಕಡ್ಲೆಕಾಯಿ ಕಡ್ಲೆಕಾಯಿ ಯಾರ್‍ರಿ ಪೆಪರಮೆಂಟ್, ಬಿಸ್ಕತ್ತು… ನಿಲ್ಲದೆ ಕರ್ಕಶವಾಗಿ ವಿಕಾರವಾಗಿ ಎದೆಗಪ್ಪಳಿಸುವ ದನಿಗಳು.
ಇವಳು ಸುಮ್ಮನೆ ಕುಳಿತಿದ್ದಳು. ಯಜಮಾನನ ಮಗಳು ಮತ್ತೊಂದಕ್ಕೆ ಬೇಡಿಕೆಯಿಟ್ಟಳು. ಯಜಮಾನ ಅವಸರದಿಂದ ಮುಂದೆ ಬಂದು ತಾನೇ ಗ್ಲಾಸೆತ್ತಿ ಹುಡುಗನ ಕೂಗಿದರು. ಆ ರಭಸಕ್ಕೆ ಅಪ್ಪನ ತೊಡೆ ಮೇಲೆ ಮಲಗಿದ್ದ ಕಿರಿಹುಡುಗ ಎಚ್ಚರಗೊಂಡಿತು. ಯಜಮಾನ ಕೊಳ್ಳುತ್ತಿದ್ದ ಮದ್ದೂರುವಡೆಯನ್ನು ನೋಡಿಬಿಟ್ಟಿತು. ಅವರು ಕಿಟಕಿ ಬಿಟ್ಟು ಇತ್ತ ಬಂದ ಮೇಲೆ ಆ ಮಗು ‘ನಂಗೂ ವಡೆ’ ಅಂತ ಕೇಳಿತು. ಅದರ ನೆವದಿಂದ ತಮಗೂ ಸಿಗಬಹುದೆಂದು ಆಸೆಯ ಅದುಮಿಟ್ಟು ಕಾದು ಕುಳಿತಿದ್ದ ಅಕ್ಕ ಅಣ್ಣರು ಎದ್ದು ಕಿಟಕಿಯ ಬಳಿಗೆ ಸರಿದರು.
ಅಪ್ಪ ಕಥೆ ಹೇಳುವುದನ್ನು ನಿಲ್ಲಿಸಿ ಕುಸುಗುತ್ತಿದ್ದ ಮಗುವ ಮಗಳ ಕೈಗೆ ಕೊಟ್ಟು ತಾನು ಅಂಗಿ ಜೇಬಿಗೆ ಕೈಹಾಕಿ ತಡಕಿದ. ಕೈ ಬೆರಳು ಜೇಬಿನ ತೂತಿನಿಂದ ಈಚೆ ಕಡೆಯಿತೆ ಹೊರತು ಅಲ್ಲೇನು ಸಿಕ್ಕಲಿಲ್ಲ. ಆಮೇಲೆ ಒಚ್ಚಮಗ್ಗಲಿನ ಜೇಬಿಗೆ ಕೈಹಾಕಿದ. ಬೀಡಿ ತುಂಡಿನ ಜೊತೆಯಲ್ಲೊಂದು ಪಾವಲಿ ಕೈಗಂಟಿ ಈಚೆ ಬಂತು. ಪಾವಲಿ ತೆಗೆದು ಮಗಳಿಗೆ ಕೊಟ್ಟ. ಇವಳು ಲಗುಬಗೆಯಿಂದ ಕೈಚಾಚಿ ಇನ್ನೂ ಅಲ್ಲೇ ನಿಂತಿದ್ದ ವಡೆ ಹುಡುಗನಿಗೆ ನೀಡಿ ‘ಮೂರು ವಡೆ ಕೊಡಪ್ಪಾ’ ಅಂದಳು. ಆ ಹುಡುಗ ಪಾವಲಿಯ ನೋಡಿದ. ಒಂದೇ ಪಾವಲಿ! ಮೂರು ವಡೆ!!
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಇಕೋ ತಕೋ ಮೂರೊಮ್ಮಕ್ಕೇ ವಡೆ ಬೇಕಂತೆ’ ಅಂತ ಸಿಡುಕಿ ಕೈಗೆ ಪಾವಲಿ ಕುಕ್ಕಿ, ವಡೆ ವಡೇರಿ ಅಂತ ಅವನು ಕೂಗುತ್ತಾ ಮುಂದೆ ಹೋದ. ರೈಲು ಗಂಟಲು ಸರಿಮಾಡಿಕೊಂಡು ಮೈ ಒದರಿತು.
ಇವಳು ಪಾವಲಿಯನ್ನು ಹಾಗೇ ಹಿಡಿದುಕೊಂಡು, ಹಿಂದೆ ಸರಿದು ಮಕ್ಕಳ ಮುಖ ನೋಡಿದಳು. ಅವುಗಳ ಮೋರೆ ಇಳೇ ಬಿದ್ದಿದ್ದವು. ಕಿರಿಮಗು ‘ನಂಗೂ ವಡೆಬೇಕು’ ಅಂತ ರಾಗ ಎಳೆಯುತ್ತಿತ್ತು. ಅವಳಿಗೆ ಹಿಂಡು ನಾಚಿಕೆಯಾಗಿ, ಮತ್ತೆ ಅಂಜಿಕೆ ಮೂಡಿ, ಮತ್ತೂ ಸೊರಗಿ ಆ ಮಗುವ ಎಳಕೊಂಡು ಬತ್ತಿದ ಎದೆಗೆ ಕಚ್ಚಿಸಿಕೊಂಡು ಸೀರೆ ಸೆರಗ ಮರೆಮಾಡಿಕೊಂಡಳು. ನವೆದ ಸೆರಗಿನಿಂದೀಚೆಗೂ ಆ ಮಗು ಕುಸುಗುತ್ತಲೇ ಮೊಲೆಯ ಚೀಪುತ್ತಿದ್ದುದು ಕಾಣುತ್ತಿತ್ತು.
ಹಸಿರು ಬಯಲನ್ನು ಬಿಟ್ಟು ರೈಲು ಈಗ ಒಣ ನೆಲವನ್ನು ಉರುಚುರುಚಿ ಹಿಂದೆ ಹಾಕುತ್ತ ಓಡುತ್ತಿತ್ತು. ಅದರಾಚೆಯೇ ದೃಷ್ಟಿ ನೆಟ್ಟಿದ್ದ ಅಪ್ಪ ಅದರಿಂದ ಕಿತ್ತು ನೆನಸಿಕೊಂಡಂತೆ ಎದ್ದು ಚಡ್ಡಿಜೇಬಿಗೆ ಕೈ ಹಾಕಿದ. ನೆನಪು ಸುಳ್ಳಾಗಲಿಲ್ಲ. ಅಲ್ಲಿ ಇನ್ನೊಂದು ಪಾವಲಿ ಸಿಕ್ಕಿತು. ‘ತಕ್ಕೊವ್ವ ಮುಂದಲ ಟೇಸನ್ನಾಗೆ ಏನಾರ ಮಕ್ಕುಳಿಗೆ ತಕೊಡು’ ಅಂದು ಮಗಳ ಕೈಗೆ ಕೊಟ್ಟ. ಇತ್ತ ಇವಳು ಎರಡು ಪಾವಲಿಗಳನ್ನು ಕೈಗಿಟ್ಟುಕೊಂಡಳು. ತುಟಿ ಮೇಲೆ ಆಸೆಯ ಅಲೆಯೊಂದು ಹೊರಳಾಡಿತು. ಎರಡೂ ಮಕ್ಕಳು ಸಡಗರದಿಂದೆದ್ದು ತಾತನ ಎಡಬಲ ಬಂದು ನಿಂತವು. ತಾತ ಹೆಮ್ಮೆಯಿಂದ ಮೊಮ್ಮಗ, ಮಗಳ ಬೆನ್ನು ಮೇಲೆ ಕೈ ಆಡಿಸುತ್ತಾ “ಅಮ್ಯಾಕೆ ಏನಾಯ್ತಪ್ಪ ಅಂದ್ರೆ, ಕಣ್ಗತ್ಲೆ ಬಂದ ರಾಜಕುಮಾರ ನಿಧಾನ್ಕೆ ಕಣ್ಣುಜ್ಕೊಂಡು ನೋಡಿ, ಏಳೆಡೆ ಸರ್ಪದ ಜೀವ ಎಲ್ಲದೆ ಅಂತ ನೆನಿಸ್ಕೊಂಡು ಅದು ಹಡೆಯೊಳಗದೆ ಅಂತ ಗೊತ್ತಾಗಿ, ಅಲ್ಲೇ ಗುರಿ ಹಿಡಿತಾನೆ” ಎಂದು ಕಥೆಯನ್ನು ಮುಂದುವರಿಸಿದ. ಆದರೆ ಮಕ್ಕಳಿಗೆ ಈ ಸಲ ನಿಲುಗಡೆಯನ್ನು ಕಾಣದೆ ರೈಲು ಓಡುತ್ತಲೆ ಇರುವಂತನಿಸತೊಡಗಿತು.
ಆದರೆ ಹಿಂದಿನ ಸಲಕ್ಕಿಂತ ಈ ನಿಲ್ದಾಣ ಕಡಿಮೆ ಅಂತರದಲ್ಲೇ ಇತ್ತು. ಅದನ್ನೇ ಕಾಯುತ್ತಿದ್ದ ಮಗ ಅವ್ವನತ್ತ ತಿರುಗಿ ‘ಅವ್ವಾ ಬಂದ್‌ಬುಡ್ತು ಕನೌವ್ವ’ ಅಂತ ಕಿರಿಚಿಕೊಂಡ. ಮಗಳು, ಹೂಕನೌವ್ವ ಅಂತ ಬೊಬ್ಬೆ ಹಾಕಿದಳು. ಎದೆಕಚ್ಚಿಕೊಂಡಿದ್ದ ಮಗು ಇವರ ಅಬ್ಬರಕ್ಕೆ ಎದ್ದಿತು. ಅದನ್ನು ತೊಡೆ ಮೇಲೆ ಕೂರಿಸಿಕೊಂಡು ಕಿಟಕಿಯ ಗ್ಲಾಸು ಮೇಲೆತ್ತಿ ನಿಲ್ಲಿಸಿದಳು. ಮಗಳು ತಲೆ ಚಾಚಿ, ದೂರದಲ್ಲಿ ಕಂಡ ವಡೆಯವನ “ವಡೇ ವಡೇ ಬಾ ಬಾ” ಅಂತ ಕೈ ಬೀಸಿ ಕೂಗಿದಳು. ಆ ವಡೆಯವನು, ಕೂಗಿದ್ದು ಕೇಳಿಸಿದರೂ ವಡೇ ವಡೇ ಅಂತ ಉದ್ದಕ್ಕೂ ನಿಂತು ನಿಂತು ಉಳಿದ ಗಿರಾಕಿಗಳ ಗಮನವನ್ನು ಸೆಳೆಯುತ್ತ ಬರುವುದನ್ನೇ ಯುಗ ಮಾಡಿಬಿಟ್ಟ. ಮಕ್ಕಳಿಬ್ಬರು ಕಿಟಕಿಯ ಆಚೆಗೆ ತಲೆ ತೂರಿಸಲಾಗದೆ ಸಾಧ್ಯವಾದಷ್ಟು ಕೈ ತೂರಿ ಅವನತ್ತ ಬೀಸುತ್ತ ಕಿರುಚತೊಡಗಿದವು. ಕೊನೆಗೂ ಆತ ಬಂದ. ಇವಳು ಎರಡು ಪಾವಲಿಗಳನ್ನು ಕೊಟ್ಟು ‘ವಡೆ ಕೊಡಪ್ಪಾ’ ಅಂದಳು.
ವಡೆಯವನು ಪಾವಲಿಗಳ ಕೈಗೀಸಿಕೊಂಡು ನೋಡಿದ. ಆಮೇಲೆ “ಇಷ್ಟಕ್ಕೆ ಬರಾಕ್ಕಿಲ್ಲ ಕನಮ್ಮ” ಅಂದ. ಅವಳು ಆತಂಕದಿಂದ “ಎರಡು ಪಾವ್ಲಿ ಕೊಟ್ಟಿವ್‌ನಿ ಹಂಗಿದ್ರೂ ಬರಾಕಿಲ್ಲ ಅಂತೀಯಲ್ಲಪ್ಪ” ಅಂದಳು.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಅವನು “ಎರಡಲ್ಲ, ಇನ್ನೂ ಒಂದ್ಬೇಕು ಗೊತ್ತಾ” ಅಂತ ತಲೆ ಕುಣಿಸಿದ. ರೈಲು ಸಿಳ್ಳು ಹಾಕಿತು. ಅವಳು ಅವಸರದಿಂದ ”ಈಟುಕ್ಕೆ ಇನ್ನೇನು ಬತ್ತದೆ ಅದನ್ನೇ ಕೊಡಪ್ಪ” ಅಂದಳು.
ಅವನು ಮುಂದಿನ ಯಾವ ಮಾತಿಗೂ ತಾನು ವಾರಸುದಾರನಲ್ಲದವನಂತೆ ‘ಬರೋ ಅಂಥೋದ್ದು ನನ್ನತ್ರ ಏನೂ ಇಲ್ಲಕಂತೆ ಹೋಗಮ್ಮ ನಿನ್ನಂಥೋರೆ ಗಿರಾಕಿಗಳು ಸಿಕ್ಕರೆ ಆಯ್ತು ಯಾಪಾರಾ’ ಅಂದು ಪಾವಲಿಗಳ ಅವಳ ಕೈಗೆ ತುರುಕಿ ಮುಂದೆ ನಡೆದ. ರೈಲು ರಭಸ ಹೆಚ್ಚಿಸಿಕೊಂಡಿತು.
ಇವಳು ಕೈಗೆ ಬಂದ ಪಾವಲಿಗಳನ್ನು ಹಾಗೇ ಹಿಡಿದುಕೊಂಡು ಅಪ್ಪನ ಮುಖ ನೋಡಿದಳು. ಅವನು ಅಸಹಾಯಕನಾಗಿದ್ದ. ಹಿರಿಯ ಎರಡು ಮಕ್ಕಳೂ ಮುಖ ಕಪ್ಪಿಟ್ಟಿಕೊಂಡು ಪಕ್ಕಕ್ಕೆ ಬಂದು ಕುಕ್ಕರ ಬಡಿದವು. ಕಿರಿ ಹುಡುಗ ‘ನಂಗೆ ವಡೆ ನಂಗೆ ವಡೇ’ ಅಂತ ದನಿ ತಿರುಗಿತು.
ಇವಳು ಅಳುವ ಮಗುವ ಮುಂದೆಳೆದುಕೊಂಡು ತಲೆ ನೀವಿ ಮೈದಡವಿ ”ಮುಂದಲ ತಾವೇ ನಾವು ಇಳಿಯೋದು, ಹಟ್ಟಿಗೆ ಹೋದ ಕೂಡ್ಲೆ ಏನಾರ ಮಾಡ್ ಕೊಡತೀನಿ. ಈಗ ಅಳಬ್ಯಾಡ ಕನಪ್ಪ” ಅಂತ ಪಿಸುಗುಟ್ಟಿದಳು.
ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದ ಮಕ್ಕಳಿಗೆ ತಾತ, ”ಇವುನಂಗೆ ಆ ರಾಜಕುಮಾರ ಅತ್ಕೊಂಡು ಕೂತಿದ್ರೆ ಮಣಿ ತರಾಕ್ಕೆ ಆಯ್ತಿತ್ತಾ? ಸರ್ಪದ ಜೀವ ಅದ್ರ ಹೆಡೆಯೊಳ್ಗೆ ಅದೆ ಅಂತ ತಿಳ್ಕೊಂಡೊನೆ ಅದನ್ನು ಕೊಂದು ಆ ಮುತ್ತು ಪಡ್ಕೊಂಡ. ಅದೆಂಗೆ ಪಡ್ಕೊಂಡಾ ಅಂದ್ರೆ” ಎಂದು ತನ್ನ ಕತೆಗೆ ರಂಗೇರಿಸಲು ಪ್ರಯತ್ನಿಸಿದ. ಆದರೂ ಆ ಮಗು ತನ್ನ ಆಳು ನಿಲ್ಲಿಸಲಿಲ್ಲ. ರಾಗ ಇನ್ನೂ ದೊಡ್ಡದು ಮಾಡಿತು. ಆ ಕಂಪಾರ್ಟಮೆಂಟು ಈ ಚಿಕ್ಕ ಗಂಟಲಿನ ದೊಡ್ಡ ಗದ್ದಲವನ್ನು ತುಂಬಲಾರದೆ ಹೋದಂತಾಗಿ, ಮುಖ ರಬ್ಬರು ಮಾಡಿಕೊಂಡು ಯಜಮಾನತಿ ತನ್ನ ಮಗಳಿಗೆ ತನ್ನದೇ ಅರ್ಧ ವಡೆ ಕೊಡುವಂತೆ ಹೇಳಿದಳು. ಆ ಹುಡುಗಿ ಒಪ್ಪಲಿಲ್ಲ. ವಾರಪತ್ರಿಕೆಯೊಂದರ ಪುಟ ತಿರುವಿ ಹಾಕುತ್ತಿದ್ದ ಯಜಮಾನರು “ನೀನ್ ಕೊಡಲಿಲ್ಲಾಂದರೆ ನಾವಿಲ್ಲಿ ಕೂರಕ್ಕಾಗೋದಿಲ್ಲ. ಅಲ್ನೋಡು ಗೋಳಾ?” ಅಂತ ರೇಗಿದರು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಯಜಮಾನತಿ ನಡುವೆಯೇ ಬಾಯಿ ಹಾಕಿ “ನೀವು ಸುಮ್ನಿರಿ ನಾನು ಕೊಡುಸ್‌ತೀನಿ” ಅಂತ ಗಂಡನಿಗೆ ಸಮಾಧಾನ ಮಾಡಿ, ಮಗಳ ಕಡೆ ತಿರುಗಿ ಪೂಸಿ ಮಾಡುತ್ತಾ, ”ನಿನಗೆ ಮುಂದಿನ ಸ್ಟೇಷನ್‌ನಲ್ಲಿ ಏನು ಬೇಕೋ ಅದನ್ನೇ ತಕೊಡತೀನಿ. ಈಗ ಆ ಮಗು ಅಳತಾ ಅದೆ, ಅರ್ಧ ಕೊಡು ಮಗಳೇ, ನೀನು ಜಾಣಮರಿ ಅಲ್ಲವಾ”- ರಮಿಸಿದಳು.
ಆ ಹುಡುಗಿ ಒಲ್ಲದ ಮನಸ್ಸಿನಿಂದ ಎದ್ದು ಬಂದು ಅಳುತ್ತಿದ್ದ ಈ ಮಗು ಕೈಗೆ ವಡೆ ಚೂರು ನೀಡಿತು. ಇದು ವಡೆ ಕಡೆ ತಿರುಗಿಯೂ ನೋಡಲಿಲ್ಲ. ಆ ಹುಡುಗಿ ಕೈ ಮೇಲೆ ಇಡಲು ಹೋಯಿತು. ಈ ಮಗು ತಟಕ್ಕನೆ ಕೈ ಹಿಂದಕ್ಕೆ ಎಳಕೊಂಡು ಮುಖ ಸೊಟ್ಟನೇ ಅತ್ತ ತಿರುಗಿಸಿ ‘ನಂಗೆ ಬ್ಯಾಡಾ’ ಅಂತ ಕಿರಿಚಿತು.
ಮೊದಲೇ ಕೊಡಲು ಮನಸ್ಸಿಲ್ಲದಿದ್ದ ಆ ಹುಡುಗಿಗೆ ಈಗ ಅವಮಾನ ಆದಂತಾಗಿ ಒಂದು ಕ್ಷಣ ಏನೂ ಗೊತ್ತಾಗದೆ, ಆಮೇಲೆ ಗರಕ್ಕನೆ ತಿರುಗಿ ಕುಳಿತಿದ್ದ ಅದರ ಅಣ್ಣನ ತೊಡೆ ಮೇಲೆ ರಪ್ಪನೆ ವಡೆ ಚೂರಿಟ್ಟು ತನ್ನ ತಾಯಿಯ ಕಡೆಗೆ ದಪ ದಪ ಕಾಲು ಹಾಕುತ್ತಾ ಹೋಯಿತು.
ಏಳೆಡೆ ಸರ್ಪದ ಹೆಡೆ ಕತ್ತರಿಸಿ ಮಣಿ ಹೊತ್ತು ತಂದ ರಾಜಕುಮಾರನ ಸಾಹಸದಲ್ಲಿ ಒಂದಾಗಿಬಿಟ್ಟಿದ್ದ ಆ ಹುಡುಗನಿಗೆ ಈ ಹುಡುಗಿಯ ಧಿಮಾಕು ಚುಚ್ಚಿದಂತಾಯಿತು. ತೊಡೆ ಮೇಲೆ ಕುಕ್ಕಿದ್ದ ವಡೆ ಚೂರನ್ನು ಎತ್ತಿ ಸಿಡಾರನೆ ಕಿಟಕಿಯತ್ತ ಬೀಸಿತು. ಅದು ಹಾಕಿದ್ದ ಕಿಟಕಿ ಗ್ಲಾಸಿಗೆ ಬಡಿದು ಪುಡಿ ಪುಡಿಯಾಗಿ ಕೆಳ ಉದುರಿತು. ಇವಳ ಮುಖ ಕೆಂಪಾಯಿತು. ಮುಖದ ಮೂಳೆಯ ಮೇಲೆ ಒಳಗಿನಿಂದ ಹೊರಳಿದ ನರಗಳು ನರ್ತನ ಮಾಡಿದವು. ಇಡೀ ದೇಹ ಕುದಿದು ನೀರಾಡಿತು. ಇನ್ನು ಸಹಿಸಲಾಗದೆ, ಮುಚ್ಚಿದ್ದ ಕಿಟಕಿ ಗ್ಲಾಸನ್ನು ದಡಕ್ಕನೆ ಮೇಲೆತ್ತಿ ನಿಲ್ಲಿಸಿ, ಕೊಸರಾಡುತ್ತಿದ್ದ ಮೂರು ಮಕ್ಕಳನ್ನೂ ಕಿಟಕಿಯತ್ತ ತಳ್ಳಿ ನಿಲ್ಲಿಸಿದಳು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ರೈಲು ಕುಲುಕುತ್ತಾ ಬಳಕುತ್ತಾ ಮುಂದೆ ಮುಂದೆ ಓಡಿದಂತೆ ತೆರೆದ ಕಿಟಕಿಯಿಂದ ಗಾಳಿ ಒಳ ನುಗ್ಗಿ ಆವರಣವನ್ನೆಲ್ಲಾ ತುಂಬಿಕೊಳ್ಳುತ್ತಿತ್ತು. ಕಂಬಿ ಹಿಡಿದು ಕಿಟಕಿಯ ಬಳಿ ನಿಂತಿದ್ದ ಮಕ್ಕಳು ಬಿಕ್ಕು ಬಿಕ್ಕುತ್ತಾ ಕೊನೆಗೆ ಆ ಬಿಕ್ಕಳಿಕೆಯನ್ನೂ ನುಂಗಿಕೊಂಡು ಆಚೆ ಬದಿಯಿಂದ ಹತ್ತಿರ ಬರುವ, ಬಂದಷ್ಟೇ ರಭಸವಾಗಿ ಹಿಂದೆ ಸರಿದುಬಿಡುವ, ಮರವ, ಗಿಡವ, ಪೊದೆಯ, ಬಂಡೆಯ ಇಡಿ ಹಸಿರು ಬಯಲನ್ನೇ ಹಿಡಿಯುವಂತೆ, ಹಿಡಿದು ನಿಲ್ಲಿಸಿ ಬಿಡುವಂತೆ, ಮತ್ತೆ ಕಬಕ್ಕನೆ ಮರೆಯಾಗಿ ಬಿಡುವಂತೆ ಆಗುತ್ತಿದ್ದ ಕೌತುಕಕ್ಕೆ ಪಕ್ಕಾಗಿ ನೋಡುತ್ತಾ ನಿಂತುಕೊಂಡವು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಕಾ.ತ. ಚಿಕ್ಕಣ್ಣ (1952): ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಾಳಮ್ಮನವರ ಕೊಪ್ಪಲಿನಲ್ಲಿ ಹುಟ್ಟಿದ ಚಿಕ್ಕಣ್ಣ ಎಂ.ಎ. (ಕನ್ನಡ) ಪದವೀಧರರು. ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಪ್ರಕಟಿತ ಕೃತಿಗಳು: ‘ಬಿಳಲು ಬಿಟ್ಟ ಬದುಕು’ (1979), ‘ಒಡಲುರಿ’ (1984), ‘ವಾಸನಾಮಯ ಬದುಕಿನ ಆಚೆ ಈಚೆ’ (1988), ‘ಮನಸು ಮುಗಿಲು’ (1993), ಅಗಾಂತರ, ಕಂಡೇರಿ, ಮೋಡ ನೆರಳ ನಿರಾಳ, ಕಾತಚಿ ಕಥಾರಂಗ (ಕಥಾ ಸಂಕಲನಗಳು); ‘ಮುಂಜಾವು’ (1989), ‘ದಂಡೆ'(1999) (ಕಾದಂಬರಿಗಳು); ಗೊಂಚಲು, ಮೆಕ್ಕೆ ಒಕ್ಕಲು (ಕವನ ಸಂಕಲನಗಳು); ‘ಬಳ್ಳಿಸಾಲು’ (ಪ್ರಬಂಧ); ‘ಕನಕಕಿರಣ’, ‘ಕನಕಭಾರತಿ’, ‘ಮುತ್ತು ಬಂದಿದೆ ಕೇರಿಗೆ’, ‘ಮೈತ್ರಿ’, ‘ಸಂಯುಕ್ತ’, ‘ಸಂಪದ’, ‘ಭಾರತೀಪ್ರಿಯ’, ‘ನಯಸೇನ’ (ಎಲ್ಲ ಸಂಪಾದಿತ); ಸೊಲ್ಲೆತ್ತಿ, ನೀರೊಳಗಣ ಬೆಳಕು, ಹೊತ್ತಿಗೆ (ವಿಮರ್ಶಾ ಕೃತಿಗಳು); ಸತ್ಯವತಿ, ಕಟ್ಟುಗಳು, ವಂಶಸ್ಥರು, ಗಂಟಾದ ನಂಟು, ತಿರಿದುಣ್ಣವ ಜನರ ನಡುವೆ, ವಾಸನಾಮಯ ಬದುಕಿನ ಆಚೆ-ಈಚೆ, ಗದ್ದೆಗಮ್ಮ, ಹುಚ್ಚೀರಿಯ ಹೆಸರಿನ ಪ್ರಸಂಗ (ನಾಟಕಗಳು). ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಚಿಕ್ಕಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು.




