ಸಿದ್ದಾಪುರ: ಮನೆಗೆ ನುಗ್ಗಿ ಮಹಿಳೆಗೆ ಕತ್ತಿ ತೋರಿಸಿ ಬೆದರಿಕೆ ಹಾಕಿ ಮಾಂಗಲ್ಯ ಸರ ದರೋಡೆ ಮಾಡಿದ್ದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 22ರಂದು ಸಂಜೆ ಸುಮಾರು 4.22 ಗಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಳದಕಟ್ಟಾ-ಸೊರಬ ರಸ್ತೆಯ ಪದ್ಮರಾಜ್ ವಿಲ್ಲಾದಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ಒಬ್ಬರೇ ಇದ್ದ ಪೂನಮ್ ಗಣಪತಿ ಶೇಟ್ ಅವರ ಮನೆಗೆ 25ರಿಂದ 30 ವರ್ಷದೊಳಗಿನ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿ ಹಿಡಿದು ನುಗ್ಗಿದ್ದ.
ಬಳಿಕ “ಬಂಗಾರ ತೆಗಿ” ಎಂದು ಬೆದರಿಕೆ ಹಾಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಸಿಯಲು ಮುಂದಾಗಿದ್ದ. ಮಹಿಳೆ ಪ್ರತಿರೋಧಿಸಿ ಆತನನ್ನು ತಳ್ಳಿಹಾಕಿ ಮನೆಯಿಂದ ಹೊರಬರಲು ಯತ್ನಿಸಿದಾಗ, ಆರೋಪಿಯು ಅವರ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಬಲವಂತವಾಗಿ ಎಳೆದಿದ್ದರಿಂದ ಸರ ತುಂಡಾಗಿತ್ತು. ಈ ವೇಳೆ ಸುಮಾರು 12 ಗ್ರಾಂ ತೂಕದ ತಾಳಿ ಸರದ ಅರ್ಧ ಭಾಗ ಹಾಗೂ 8.5 ಗ್ರಾಂ ತೂಕದ ಆಂಟಿಕ್ ಕಾಯಿನ್ ಪವನ್ ಕೊಂಡಿ ಸೇರಿ ಒಟ್ಟು 20.5 ಗ್ರಾಂ ತೂಕದ, ಅಂದಾಜು ₹3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪರಾರಿಯಾಗಿದ್ದ. ಘಟನೆಯಲ್ಲಿ ಮಹಿಳೆಯ ಕುತ್ತಿಗೆಗೆ ಗಾಯವಾಗಿದೆ ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಕಾನಸೂರ ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ: ಶಿಕ್ಷಕನ ವಿರುದ್ಧ ಗಂಭೀರ ಆರೋಪ, FIR ದಾಖಲು!
ತನಿಖೆಯ ವೇಳೆ ಮಹೇಶ್ ಹನುಮಂತ ಮಡಿವಾಳ (23), ಕೂಲಿ ಕಾರ್ಮಿಕ, ಕೊಂಡ್ಲಿ ಗ್ರಾಮ, ಸಿದ್ದಾಪುರ ತಾಲೂಕು ನಿವಾಸಿ ಎಂಬುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದ 24 ಗಂಟೆಯೊಳಗೆ ಆತನನ್ನು ಬಂಧಿಸಲಾಯಿತು. ಆರೋಪಿಯಿಂದ ₹2.25 ಲಕ್ಷ ಮೌಲ್ಯದ 15.2 ಗ್ರಾಂ ತೂಕದ ಬಂಗಾರದ ತಾಳಿ ಸರ ಹಾಗೂ ಆಂಟಿಕ್ ಕಾಯಿನ್ ಪವನ್ ಕೊಂಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಅಂದಾಜು ₹45 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ, ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಶಾಂತಿನಾಥ ಕೆ. ಪಾಸಾನೆ ಹಾಗೂ ತನಿಖಾಧಿಕಾರಿ ಪಿಎಸ್‌ಐ ನಾಗಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‌ಐ ಸಂಗೀತಾ ಜಿ. ಕಾನಡೆ, ಎಎಸ್‌ಐ ರಮೇಶ್ ಗೌಡ, ಹೆಡ್ ಕಾನ್ಸ್‌ಟೇಬಲ್ ಪ್ರಕಾಶ ಪಟಗಾರ, ರಮೇಶಪ್ಪ ಕೂಡಲ್, ಸಿಪಿಸಿ ಮಣಿಕಂಠ ಎಂ.ಆರ್., ಗಿರೀಶಯ್ಯ ಎಂ.ಎಸ್., ಪ್ರಕಾಶ ಮಲ್ಲಾಡದ, ನಾಗರಾಜ ತಿಮ್ಮಾಪೂರ, ರವಿ ಕ್ಯಾಲಕೊಡ್, ಎಪಿಸಿ ಧನಂಜಯ ಮಡಿವಾಳ, ಶಿರಸಿ ನಗರ ಪೊಲೀಸ್ ಠಾಣೆಯ ರಾಮಯ್ಯ ಪೂಜಾರಿ ಹಾಗೂ ಹನುಮಂತ ಮಾಕಾಪೂರ, ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಟೆಕ್ನಿಕಲ್ ಸೆಲ್ ಸಿಬ್ಬಂದಿ ಭಾಗವಹಿಸಿದ್ದರು.




