ದುಷ್ಕರ್ಮಿಗಳು ಫಸಲಿಗೆ ಬರುವ ಅಡಕೆ ಸಸಿಗಳನ್ನು ಕಡಿದು ಕ್ರೌರ್ಯ ಮೆರೆಯುವ ಘಟನೆಗಳೂ ನಡೆಯುತ್ತಲೇ ಇವೆ. ಅಂತೆಯೇ ದುಷ್ಕರ್ಮಿಗಳು 400ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರದಕಟ್ಟೆಯಲ್ಲಿ ನಡೆದಿದೆ.
ಗಿಣ್ಣಪ್ಪನಹಟ್ಟಿ ಗ್ರಾಮದ ಹನುಮಂತಯ್ಯ ಅವರಿಗೆ ಸೇರಿದ ಅಡಕೆ ಗಿಡಗಳಿಗೆ ಹಾನಿಯಾಗಿದ್ದು, ಎರಡು ವರ್ಷದ ಹಿಂದೆ 1,100ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ನೆಟ್ಟು, ಮಗುವಿನಂತೆ ಪೋಷಿಸುತ್ತಾ ಬಂದಿದ್ದರು. ಅದರಲ್ಲೀಗ 400ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಈ ಕುರಿತು ಶಿರಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯಲ್ಲಿಯೂ ಆಳೆತ್ತರಕ್ಕೆ ಬಂದಿದ್ದ ಅಡಕೆ ಮರಗಳು ಇನ್ನೇನು ಫಸಲು ನೀಡಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ನೂರಾರು ಅಡಕೆ ಮರಗಳನ್ನು ಕಡಿದು ದುಷ್ಕೃತ್ಯ ಮೆರೆದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸುನೂರು ಗ್ರಾಮದ ಅಡಿವೆಪ್ಪ ಆಲದಕಟ್ಟಿ ಎಂಬ ರೈತರೊಬ್ಬರು ತಮ್ಮ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಕಳೆದ ದೀಪಾವಳಿಯಂದು ಹಬ್ಬ ಆಚರಿಸುವುದರಲ್ಲಿ ಕುಟುಂಬದವರು ಮಗ್ನರಾಗಿದ್ದರು. ಇದೇ ಸಮಯಕ್ಕೆ ಕಾದಿದ್ದ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ಅಡಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದರು. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತಹಶೀಲ್ದಾರ್ ಅಜಿತ್ ಕುಮಾರ್ ರೈ ವರ್ಗಾವಣೆ ಹಿಂಪಡೆಯುವಂತೆ ಒತ್ತಾಯ
ಫಸಲಿಗೆ ಬಂದಿದ್ದ 500 ಕ್ಕೂ ಹೆಚ್ಚು ಅಡಿಕೆ ಮರಗಳ ನಾಶ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಜ್ಜೇನಹಳ್ಳಿಯಲ್ಲಿ ಫಸಲಿಗೆ ಬಂದಿದ್ದ 500 ಕ್ಕೂ ಹೆಚ್ಚು ಅಡಕೆ ಮರಗಳನ್ನು ಕಡಿದು ಹಾಕಿದ್ದರು. ಬೆಳಗ್ಗೆ ಅಡಕೆ ಮರಗಳಿಗೆ ನೀರು ಹಾಯಿಸಲು ಹೋದಾಗ ಕೃತ್ಯ ಬೆಳಕಿಗೆ ಬಂದಿತ್ತು. ಹಳೇಬೀಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಸ್ಥಳಕ್ಕೆ ಬೇಲೂರು ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.