ಜಗತ್ತಿನ ತುಂಬಾ ಸುಳ್ಳು ವಿಜೃಂಭಿಸುತ್ತಿದೆ, ಆಡಂಬರ ಮೆರೆಯುತ್ತಿದೆ, ಸ್ನೇಹ,ಸೌಹಾರ್ದ,ಪ್ರೀತಿ ಮಮತೆ ಕಣ್ಮರೆಯಾಗಿವೆ ಎಂದು ಕವಿ ಕುಸುಮ ಆಯರಹಳ್ಳಿ ಹೇಳಿದರು
ತುಮಕೂರು ನಗರದ ಟೌನ್ ಹಾಲ್ ಬಳಿಯ ಐ.ಎಮ್.ಎ ಹಾಲ್ ನಲ್ಲಿ ದಾದಾಪೀರ್ ಮತ್ತು ರಂಗಮ್ಮ ಹೊದೇಕಲ್ ಅವರ ಜುಗಲ್ಬಂದಿ ‘ತೆರೆದ-ಕದ ಹೊಳೆದ-ಪದ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಆಡಂಬರವಿಲ್ಲದ, ಸುಳ್ಳಿನ ವಿಜೃಂಭಣೆಯಿಲ್ಲದ, ದೊಡ್ಡ ದೊಡ್ಡ ಅಜೆಂಡಾಗಳು ಇಲ್ಲದ, ಮೆದುಳಿಗಿಂತಾ ಹೃದಯದ ಭಾಷೆ ತುಂಬಿದ ಇಂತಹ ಕಾರ್ಯಕ್ರಮಗಳು ಅಷ್ಟೇ ನಮ್ಮನ್ನು ಬದುಕಿಸುತ್ತವೆ ಎಂದರು
ರಂಗಮ್ಮ ಮತ್ತು ದಾದಾಪೀರ್ ಬರೆದಿರುವ ಈ ಜುಗಲ್ಬಂದಿ ಪುಸ್ತಕ ಹೆದ್ದಾರಿಗಳಿಗಿಂತಾ ಕಾಲ್ದಾರಿ ಮುಖ್ಯ ಇಂತಹ ಕಾಲ್ದಾರಿಗಳೇ ಜಗತ್ತಿಗೆ ಬೆಳಕಾಗಬಲ್ಲಂತವು ಎಂಬುದನ್ನು ತಿಳಿಸುತ್ತದೆ, ಇಂದು ಬುದ್ದಿವಂತ ದುಷ್ಟರು ಹೆಚ್ಚಾಗುತ್ತಿದ್ದಾರೆ ಭಾಷೆ ಬಲ್ಲವರು ಪ್ರತಿಭಾವಂತರು ದುಷ್ಟರಾಗುತ್ತಿರುವುದು ಬಹಳ ಅಪಾಯಕಾರಿ ಇಂತಹ ವ್ಯವಸ್ಥೆಯೊಳಗಿರುವ ನಮಗೆ
ಹೆದ್ದಾರಿಗಳ ಬಗ್ಗೆ ನಂಬಿಕೆ ಹೋಗಿದೆ, ಜಗಮಗ ಬೆಳಕಿನ ಬಗ್ಗೆ ನಂಬಿಕೆ ಹೋಗಿದೆ, ಹಾಗಾಗಿ ಕಾಲುದಾರಿಗಳನ್ನು ಬುಡ್ಡಿ ದೀಪಗಳನ್ನು ಆಶ್ರಯಿಸಬೇಕಾಗಿದೆ ಆ ನಿಟ್ಟಿನಲ್ಲಿ ಈ ಪುಸ್ತಕ ಪ್ರೀತಿ, ಕಾರುಣ್ಯ, ಮೈತ್ರಿ, ಸಂದೇಶ ಹೊಂದಿರುವ ಉತ್ತಮ ಪುಸ್ತಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಸ್ತಕ ಕುರಿತು ಮಾತನಾಡಿದ ‘ನವೀನ ಹಳೆಮನಿ, ಕಾವ್ಯ ಕ್ಷೇತ್ರದಲ್ಲಿ ಜಗಲ್ಬಂದಿಯನ್ನು ಗಜ಼ಲ್ ಗಳಲ್ಲಿ ಕಾಣಬಹುದು ಆದರೆ ಇಂತಹ ಜುಗಲ್ಬಂದಿ ಅಪರೂಪವಾಗಿದ್ದು ಮತ್ತೂ ಅಷ್ಟೇ ಆಸಕ್ತಿದಾಯಕವಾಗಿರುವಾಗ ಸಣ್ಣ ಪುಟ್ಟ ಹನಿಗವಿತೆ ಮತ್ತು ಕವಿತೆಗಳಲ್ಲಿ ಜುಗಲ್ಬಂದಿ ಮಾಡುವುದು ವಿನೂತನ ಪ್ರಯೋಗವಾಗಿದೆ, ಈ ಜುಗಲ್ಬಂದಿ ಇಬ್ಬರ ಸಂವಾದವಷ್ಟೇ ಅಲ್ಲ ಇದು ಓದುವವರ ಕಣ್ಣು ತೆರೆಸುವ ಮನಸ್ಸನ್ನು ತಣಿಸುವ ಪ್ರೀತಿ ಹಂಚುವ ಪ್ರಯತ್ನ ಮತ್ತು ಜಯ, ಇಲ್ಲಿ ಕೆಟ್ಟದ್ದು ಎನ್ನುವುದು ಇಲ್ಲವೇ ಇಲ್ಲ ಇಂತಹ ಪುಸ್ತಕಗಳು ಈ ಹೊತ್ತಿಗೆ ಬಹಳ ಅವಶ್ಯಕ ಬೈನರಿಗಳಿಲ್ಲದೆ ಆಡಂಬರವಿಲ್ಲದೆ ಇಬ್ಬರೂ ಕೂಡಿ ಪ್ರೀತಿ ಹಂಚುವ ಹಾಗೆ ಹಂಚುವ ಮೂಲಕ ಪ್ರೀತಿ ಪಡೆಯುವ ಪ್ರಯತ್ನ ಇಲ್ಲಿದೆ, ಕರುಣೆ,ಮೈತ್ರಿ ತುಂಬಿರುವ ಈ ಪುಸ್ತಕವನ್ನು ನೆಲದ ಶಕ್ತಿಯಾಗಿರುವ ಎಲ್ಲಾ ತಾಯಂದಿರಿಗೆ ಅರ್ಪಿಸಿರುವುದು ಆ ಮೂಲಕ ತಾಯಿಯ ಪ್ರೀತಿ,ಮಮತೆ, ತ್ಯಾಗ ಇವೆಲ್ಲವು ಮಹತ್ವವೆಂದು ಹೇಳುತ್ತದೆ, ಇಲ್ಲಿ ಪ್ರಾಸವಿಲ್ಲ ಪದಗಳ ಆಟವಿಲ್ಲ ಬದಲಾಗಿ ಎಲ್ಲರಿಗೂ ಹಿತವೆನಿಸುವ ಪ್ರೀತಿ ನೀಡುವ ಕೃತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಚಂದ್ರಗುತ್ತಿಯವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಸರಳವಾಗಿ ಅರ್ಥಪೂರ್ಣವಾಗಿ ಕಾವ್ಯ ಸಂಸ್ಕೃತಿಯನ್ನು ಪಸರಿಸುವ ಇಂತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಂತಸದ ವಿಷಯ, ಕಾವ್ಯ ಎಂದರೇ ಅದು ಕಾಡು ಹತ್ತಿಯಂತೆ ತನ್ನಿಂದ ತಾನೇ ತೆರೆದುಕೊಂಡು ಎಲ್ಲಾ ಕಡೆ ಹರಡುವ ಹಾಗೆ ಕಾವ್ಯವೂ ಸಹ ಜೀವಪ್ರೀತಿಯನ್ನು, ಕಾರುಣ್ಯ, ಮೈತ್ರಿ, ಸೌಹಾರ್ದತೆಯನ್ನು, ಎಲ್ಲಾ ಕಡೆ ಪಸರಿಸುತ್ತದೆ ಅತ್ಯಂತ ಸರಳ ಸಂಗತಿಗಳಲ್ಲೇ ಕಾವ್ಯವಿದೆ, ನಾವಿಂದು ಒಳಗೊಳ್ಳುವ ಸಮಾಜವನ್ನು ಕಟ್ಟಬೇಕಿದೆ ಆದರೆ ನಮ್ಮನ್ನು ಹಿಂಸೆಯ ಪರವಾಗಿ ದ್ವೇಷದ ಪರವಾಗಿ ಪಳಗಿಸುವ ಕೆಲಸ ಆಗುತ್ತಿದೆ ಕಾವ್ಯ ಇಂತಹ ಪಳಗಿಸುವ ದಾರಿಯನ್ನು ದಿಕ್ಕರಿಸುತ್ತದೆ ಅಂತಹ ಕೆಲಸವನ್ನು ಈ ಕೃತಿ ಅರ್ಥಪೂರ್ಣವಾಗಿ ಮಾಡಿದೆ ಎಂದರು.
ಕೃತಿಯ ಕರ್ತೃಗಳಾದ ರಂಗಮ್ಮ ಹೊದೇಕಲ್ ಮತ್ತು ದಾದಾಪೀರ್ ಮಾತನಾಡಿ ಬಹಳಷ್ಟು ಕಷ್ಟದ ದಿನಗಳಲ್ಲಿ ಬೆಳೆದು ಬಂದ ನಮಗೆ ನಮ್ಮ ಸಿಟ್ಟು,ಕೋಪ,ಬೇಜಾರು ನೋವಿಗೆ ಅಕ್ಷರಗಳೇ ಸಮಾಧಾನವಾದವು ಇಂತಹ ಕಷ್ಟದ ಬದುಕೇ ನಮ್ಮ ಬರವಣಿಗೆಗೆ ಕಾರಣ ಎಂದು ಹೀಗೆ ಕಷ್ಟದಲ್ಲಿ ಅರಳಿದ ಕವಿತೆಗಳು ಪುಸ್ತಕವಾಗುವಲ್ಲಿನ ಸಂಭ್ರಮಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಹೆಳಿದರು
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ಕವಿತೆ ಬರೆಯಲೇ ಬೇಕೆಂದಿಲ್ಲ ಕವಿತೆಯನ್ನು ಬದುಕಲೂ ಬಹುದು ಈ ಕೃತಿಯನ್ನು ನಾವೆಲ್ಲರೂ ಪ್ರೀತಿಯಿಂದ ನಮ್ಮ ಹೃದಯಕ್ಕೆ ಅಪ್ಪಿಕೊಂಡಿದ್ದೇವೆ ಈ ಕೃತಿಯಲ್ಲಿ ಎರಡು ಚಿತ್ರಣಗಳಿವೆ ಒಂದು ಗುಡುಗಿಗಿಂತಾ ಮುಂಚೆ ಬರುವ ಮಿಂಚಿನಂತೆ ಇನ್ನೊಂದು ಮಿಂಚು ಹುಳುದಂತೆ ಇಲ್ಲಿನ ಹನಿಗವಿತೆಗಳು ಬಹಳ ಪ್ರಕರವಾಗಿವೆ ಕಿರಿದರಲ್ಲೇ ಹಿರಿದನ್ನು ಕಟ್ಟಿಕೊಡುತ್ತವೆ ಇವುಗಳಿಗೆ ನಮ್ಮನ್ನು ಆಳವಾಗಿ ಕಾಡುವ ಶಕ್ತಿ ಇದೆ ಇದು ಜುಗಲ್ಬಂದಿ ಅಲ್ಲ ಬದಲಾಗಿ ಒಂದು ಕಂಪನಕೆ ಮತ್ತೊಂದು ಅನುಕಂಪ ಕೂಡಿದ ಮಧುರ ಕಾವ್ಯ ಎಂದರು
ಕಾರ್ಯಕ್ರಮದಲ್ಲಿ ಯುವಕವಿಗಳು ಕವಿತೆ ವಾಚಿಸಿದರು ಮೇಘನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ರವರು ಸ್ವಾಗತಿಸಿದರು. ಅನೀಸಾ ಎಲ್ಲರನ್ನೂ ವಂದಿಸಿದರು ವಿವೇಕ ಕಾರ್ಯಕ್ರಮ ನಿರೂಪಿಸಿದರು ಜೊತೆಗೆ ತುಮಕೂರು ವಿವಿಯ ಪ್ರಾಧ್ಯಾಪಕಿ ಗಿರಿಜಾ ಕೆ.ಎಸ್ ಹಿರಿಯ ಲೇಖಕಿ ಇಂದ್ರಮ್ಮ ಬಳಗದ ಪ್ರೇಮ,ವೇದ, ಕೃಷ್ಣ, ಸೋನಿಕಾ, ಸಾತ್ವಿಕ್ ಅಂಚೆ ನೌಕರರು ಮತ್ತು ಗಣ್ಯರು ಉಪಸ್ಥಿತರಿದ್ದರು





