ಬಾಬಾಸಾಹೇಬರು ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿ ವಾಪಸ್ ಮರಳಿದಾಗ ಸಿಕ್ಕಿದ್ದು ಸ್ವಾಗತವಲ್ಲ, ಜಾತಿ ಅವಮಾನ.. ದಲಿತರು ಎಷ್ಟೇ ಉನ್ನತ ಹುದ್ದೆ ಅಲಂಕರಿಸಿದರೂ ಜಾತಿರೋಗಿಗಳಿಂದ ನಿಂದನೆಗಳನ್ನು ಎದುರಿಸುತ್ತಲೇ ಇದ್ದಾರೆ..
ಹುಟ್ಟಿನಿಂದಲೇ ಅವಮಾನ, ಅಸ್ಪೃಶ್ಯತೆಯ ನೋವನ್ನು ಹೊತ್ತು ಬರುವ ದಲಿತರು, ಮುಂದೆ ಎಂತಹದ್ದೇ ಹುದ್ದೆಯನ್ನು ಅಲಂಕರಿಸಿದರೂ ಜಾತಿ ತಾರತಮ್ಯದ ನೋವನ್ನು ಎದುರಿಸದೇ ಇರುವುದಿಲ್ಲ. ಶತಮಾನಗಳಿಂದ ಅನುಭವಿಸಿದ ಎಲ್ಲ ಸಂಕಟಗಳನ್ನು ನುಂಗಿಕೊಂಡು, ಸ್ವಾಭಿಮಾನದ ಬದುಕಿಗೊಂದು ದಾರಿದೀಪ ತೋರಿಸಿದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಹಿಡಿದು, ಈವರೆಗಿನ ಯಾವುದೇ ದಲಿತ ರಾಜಕಾರಣಿಯವರೆಗೂ- ಅವಮಾನಗಳಿಂದ ಮುಕ್ತರಾದವರಿಲ್ಲ.
ಬಾಬಾಸಾಹೇಬರ ನೇತೃತ್ವದಲ್ಲಿ ಬರೆದ ಸಂವಿಧಾನವು ಅಸ್ಪಶ್ಯತೆ, ಜಾತಿ ತಾರತಮ್ಯವನ್ನು ನಿಷೇಧಿಸಿದ್ದರೂ, ಜಾತಿಗ್ರಸ್ತರು ದಲಿತರನ್ನು ಒಂದಲ್ಲ ಒಂದು ರೀತಿ ಅವಮಾನಿಸುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೂ ಅಷ್ಟೇ, ದೇಶದ ರಾಷ್ಟ್ರಪತಿಯಾದರೂ ಅಷ್ಟೇ, ಜಾತಿಯ ಮನೋರೋಗಿಗಳಿಗೆ ದಲಿತರೆಂದರೆ, ಅಸಹನೆ.
ಉತ್ತರಾಖಂಡದ ಹಲ್ದ್‌ವಾನಿಯಲ್ಲಿರುವ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಭಾಷಣ ಮಾಡಿದ ಬಳಿಕ, `ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ ಸಂಘಟನೆ’ ನೇತೃತ್ವದಲ್ಲಿ ಕೆಲವು ಜಾತಿವಾದಿ ಕಿಡಿಗೇಡಿಗಳು ಗಂಗಾಜಲ ಪ್ರೋಕ್ಷಿಸಿ, ಹೋಮ ಹವನಮಾಡಿ ಶುದ್ಧೀಕರಣ ಕಾರ್ಯಕ್ರಮ ನಡೆಸಿದ್ದಾರೆ. ದಲಿತ ನಾಯಕ ಖರ್ಗೆ ಮತ್ತು ಅಸ್ಪೃಶ್ಯರನ್ನು ಸಂಘಪರಿವಾರದ ಮಂದಿ ಅಸಲಿಯಾಗಿ ಹೇಗೆ ನಡೆಸಿಕೊಳ್ಳುತ್ತಾರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರ: ರಾಜಕೀಯ ಸ್ವಾತಂತ್ರ್ಯದಿಂದ ಸಾಮಾಜಿಕ ವಿಮೋಚನೆಯವರೆಗೆ…
ಭಾರತೀಯ ಮನೋಭಾವದಲ್ಲಿ ಜಾತಿ ತಾರತಮ್ಯವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ನೆನಪಿಸುವ ಕಹಿ ಘಟನೆಗಳಿಗೆ ದೊಡ್ಡ ಇತಿಹಾಸವೇ ಇದೆ. ಬಹಳ ಹಿಂದಕ್ಕೆ ಹೋಗಬೇಕಿಲ್ಲ. 2025ರ ಆಕ್ಟೋಬರ್ 6ರಂದು ಈ ದೇಶದ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿದ್ದ ಬಿ.ಆರ್. ಗವಾಯಿ ಅವರ ಮೇಲೆ ಶೂ ತೂರಲಾಗಿತ್ತು! ಗವಾಯಿ ಅವರು ಬೌದ್ಧ ಅನುಯಾಯಿ, ಅಂಬೇಡ್ಕರ್ ವಾದಿ. ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಮಧ್ಯಪ್ರದೇಶದ ಖಜುರಾಹೊ ಸಂಕೀರ್ಣದಲ್ಲಿ ಮೊಘಲ್ ಆಕ್ರಮಣಗಳ ಸಮಯದಲ್ಲಿ ಹಾನಿಗೊಳಗಾದ ಭಗವಾನ್ ವಿಷ್ಣುವಿನ ವಿಗ್ರಹವನ್ನು ಮರುಸ್ಥಾಪಿಸುವ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಗವಾಯಿಯವರು ಕೆಲ ಮೌಖಿಕ ಟಿಪ್ಪಣಿಗಳನ್ನು ಮಾಡಿದ್ದರು. “ನಿಜವಾದ ಭಕ್ತರಾಗಿದ್ದರೆ ನೀವೇ ದೇವರ ಬಳಿ ಹೋಗಿ ಪ್ರಾರ್ಥಿಸಿ” ಎಂದು ಟೀಕಿಸಿದ್ದರು. ಇದು ಶ್ರೇಣಿಕೃತ ಸನಾತನ ಧರ್ಮದ ಮೇಲಿನ ದಾಳಿ ಎಂದು ವ್ಯಾಘ್ರನಾದ ರಾಕೇಶ್ ಕಿಶೋರ್ ಎಂಬ ಮನುವಾದಿ ವಕೀಲ, ಗವಾಯಿ ಅವರಿದ್ದ ಪೀಠದತ್ತ ಬೂಟು ಎಸೆದು ಅಗೌರವ ತೋರಿದ್ದ. ಗವಾಯಿಯವರು ಯಾವುದೇ ಕಾನೂನು ಕ್ರಮಕ್ಕೆ ಒತ್ತಾಯಿಸದೆ ಕ್ಷಮಾಪಣಾ ಗುಣ ಮೆರೆದರು. ಆದರೆ ದಲಿತರೊಬ್ಬರು ಸಿಜೆಐ ಆಗಿರುವುದನ್ನು ಜಾತಿವಾದಿ ಮನಸ್ಥಿತಿಗಳು ಸಹಿಸುವುದಿಲ್ಲ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಯಿತು.
1978ನೇ ಇಸವಿ. ವಾರಣಾಸಿಯಲ್ಲಿ ದಲಿತ ನಾಯಕ ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರ ಸಂಪೂರ್ಣಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆ ಸಂದರ್ಭದಲ್ಲಿ ಸವರ್ಣೀಯ ಬ್ರಾಹ್ಮಣ ಪುರೋಹಿತರು ಆ ಪ್ರತಿಮೆಯನ್ನು ‘ಗಂಗಾಜಲ’ದಿಂದ ತೊಳೆದು, ಜಗಜೀವನರಾಮ್ ಅವರ ಸ್ಪರ್ಶದಿಂದ ಅದು `ಅಪವಿತ್ರ’ವಾಗಿದೆ ಎಂದು ವಾದಿಸಿದ್ದರು. ಹಸಿರುಕ್ರಾಂತಿಯ ಹರಿಕಾರ ಎನಿಸಿದ, ದೇಶದ ಉಪಪ್ರಧಾನಿಯಾಗಿ ಕೆಲಸ ಮಾಡಿದ, ಈ ದೇಶದಲ್ಲಿ ಯಾರೊಬ್ಬನೂ ಹಸಿವಿನಿಂದ ನರಳಬಾರದು ಎಂದು ಕನಸು ಕಂಡ ಬಾಬೂಜಿಯವರನ್ನು ಈ ಸಮಾಜದ ನಡೆಸಿಕೊಂಡ ರೀತಿ ಇದಾಗಿತ್ತು!
ರಾಷ್ಟ್ರಪತಿಯಾಗಿದ್ದ ಕೆ.ಆರ್. ನಾರಾಯಣನ್ ಅವರು ಒಮ್ಮೆ, ಉನ್ನತ ನ್ಯಾಯಾಂಗದಲ್ಲಿ ದಲಿತರ ಪ್ರತಿನಿಧಿತ್ವಕ್ಕೆ ಗಮನ ಹರಿಸಬೇಕು ಎಂದು ಸೂಚಿಸಿದ್ದರು. ಆ ಕಾರಣಕ್ಕಾಗಿ ಅವರನ್ನು ಹೀಯಾಳಿಸಲಾಯಿತು. ‘ಇಂಡಿಯಾ ಟುಡೇ’ ಪತ್ರಿಕೆಯು ತನ್ನ ಮುಖಪುಟದಲ್ಲಿ ನಾರಾಯಣನ್ ಕುರಿತು ಅಪಹಾಸ್ಯಕರ ವ್ಯಕ್ತಿಚಿತ್ರವನ್ನೂ ಪ್ರಕಟಿಸಿತ್ತು.
1995, ಜೂನ್ 2ರಂದು ಲಕ್ನೋದ ಮೀರಾಬಾಯಿ ಮಾರ್ಗ್‌ನಲ್ಲಿರುವ ರಾಜ್ಯ ಅತಿಥಿ ಗೃಹದಲ್ಲಿ ಮಾಯಾವತಿ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು. ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ನಿರ್ಧಾರದಿಂದ ಆಕ್ರೋಶಗೊಂಡ ಸಮಾಜವಾದಿ ಪಕ್ಷದ ನೂರಾರು ಬೆಂಬಲಿಗರು ಮತ್ತು ಕಾರ್ಯಕರ್ತರು ಅತಿಥಿ ಗೃಹಕ್ಕೆ ನುಗ್ಗಿ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಮಾಯಾವತಿ ಅವರನ್ನು ಗುರಿಯಾಗಿಸಿ ಅವಾಚ್ಯ ಶಬ್ದಗಳಿಂದ ಮತ್ತು ಜಾತಿ ಸೂಚಕ ಪದಗಳಿಂದ ಅವಮಾನಿಸಲಾಯಿತು. ಆನಂತರ ಉತ್ತರಪ್ರದೇಶದಲ್ಲಿ ದಲಿತರು ಮತ್ತು ಯಾದವರ ನಡುವೆ ಅಳಿಸಲಾಗದ ರಾಜಕೀಯ ಸಂಘರ್ಷವೇ ಏರ್ಪಟ್ಟಿತು.
ರಾಷ್ಟ್ರಪತಿಯಾಗಿದ್ದ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನದ ಉದ್ಘಾಟನೆಗೆ ಮೋದಿ ಸರ್ಕಾರ ಕರೆಯಲಿಲ್ಲ. ಬುಡಕಟ್ಟು ಮಹಿಳೆಯಾದ ಮುರ್ಮು ಅವರು ದೇಶದ ಮೊದಲ ಪ್ರಜೆ ಸ್ಥಾನದಲ್ಲಿದ್ದರೂ ಅವರನ್ನು ಹೊರಗಿಟ್ಟು ಮಾಡಿದ ಕಾರ್ಯಕ್ರಮದಲ್ಲಿ ಹೋಮ-ಹವನದ ಘಾಟು ಸಂವಿಧಾನವನ್ನೇ ಅಣಕಿಸಿದಂತೆ ಕಾಣುತ್ತಿತ್ತು. ಅಲಹಾಬಾದ್‌ನಲ್ಲಿ ಹೊಸದಾಗಿ ವರ್ಗಾವಣೆಗೊಂಡ ನ್ಯಾಯಾಧೀಶರೊಬ್ಬರು ತಮ್ಮ ಅಧಿಕೃತ ಕೊಠಡಿಯ ಪೂರ್ವಭಾವಿ ಹಿರಿಯ ಅಧಿಕಾರಿ ದಲಿತರಾಗಿದ್ದರು ಎಂಬ ಕಾರಣಕ್ಕೆ ತಮ್ಮ ಕೊಠಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ ವರದಿಗಳು ಬೆಳಕಿಗೆ ಬಂದಿದ್ದವು. 2022ನೇ ಇಸವಿ. ರಾಯಚೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಎಂಬವರು ಗಣರಾಜ್ಯೋತ್ಸವದಂದು ಅಂಬೇಡ್ಕರ್ ಅವರ ಫೋಟೋವನ್ನು ಹೊರಗಿರಿಸಿ, ಅವಮಾನಿಸಿದ್ದರು. ಆ ನಂತರ ರಾಜ್ಯಾದ್ಯಂತ ದಲಿತ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಬೇಕಾಯಿತು.
ಇದನ್ನೂ ಓದಿರಿ: ‘ಅಸ್ಪೃಶ್ಯ ಭಾರತ’ ಭೂತಕ್ಕಿಂತಲೂ ಚಲನಶೀಲವಾಗುತ್ತಿದೆ…
ಬಾಬಾಸಾಹೇಬರು ಎದುರಿಸಿದ ಅವಮಾನಗಳನ್ನು ಮರೆಲಾದೀತೆ? ಅವರು ಬರೆದ ‘ವೀಸಾಗಾಗಿ ಕಾಯುತ್ತಾ’ ಕೃತಿಯು ಪ್ರತಿ ದಲಿತನ ಆತ್ಮಕಥೆಯೂ ಹೌದು. ಬಾಬಾಸಾಹೇಬರು ಹಾಕಿದ ಕಣ್ಣೀರು ಪ್ರತಿ ದಲಿತರ ಎದೆಯೊಳಗೂ ಅವಿತಿವೆ. ನ್ಯೂಯಾರ್ಕ್ ಕೊಲಂಬಿಯಾ ಯೂನಿವರ್ಸಿಟಿ ಮತ್ತು ಲಂಡನ್ ವಿಶ್ವವಿದ್ಯಾಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮುಗಿಸಿ 1918ರಲ್ಲಿ ಭಾರತಕ್ಕೆ ಬಾಬಾಸಾಹೇಬರು ಹಿಂತಿರುಗಿದ್ದರು. ಹೀಗೆ ಉನ್ನತ ವ್ಯಾಸಂಗ ಮಾಡಿ ಸವರ್ಣೀಯ ವ್ಯಕ್ತಿ ಯಾರಾದರೂ ಭಾರತಕ್ಕೆ ವಾಪಸ್ ಆದಾಗ, ಅವರಿಗೆ ಅದ್ಧೂರಿ ಸ್ವಾಗತವೇ ಸಿಗುತ್ತಿತ್ತು. ಬಾಬಾಸಾಹೇಬರಿಗೆ ಸಿಕ್ಕಿದ್ದು ಸ್ವಾಗತವಲ್ಲ, ಅವಮಾನ. ಅವರಿಗೆ ಉಳಿದುಕೊಳ್ಳಲು ಒಂದು ಜಾಗ ದೊರಕಲಿಲ್ಲ. ಹಣ ಹೆಚ್ಚಿಗೆ ಕೊಟ್ಟು, ತಾನೊಬ್ಬ ಪಾರ್ಸಿ ಎಂದು ಸುಳ್ಳು ಹೇಳಿ ‘ಪಾರ್ಸಿ ಇನ್’ ಹೋಟೆಲ್ ನಲ್ಲಿ ತಂಗಬೇಕಾಯಿತು. ಮನುಷ್ಯರ ಸಂಪರ್ಕವಿಲ್ಲ, ಮರಿದ ಕುರ್ಚಿ, ಮೇಜುಗಳ ಉಗ್ರಾಣದಲ್ಲಿ ಮಲಗಬೇಕಾಯಿತು. ತಮ್ಮನ್ನು ಓದಿಸಿದ್ದ ಬರೋಡಾ ಮಹಾರಾಜರು ಬಾಬಾಸಾಹೇಬರನ್ನು ಅಕೌಂಟೆಂಟ್ ಜನರಲ್ ಕಚೇರಿಗೆ ನೇಮಿಸಿದ್ದರು. ಉಳಿಯಲು ವಸತಿಗಾಗಿ ಹಾಕಿದ್ದ ಅರ್ಜಿಯನ್ನು ಬರೋಡದ ಪ್ರಧಾನ ಮಂತ್ರಿ ನಿರ್ಲಕ್ಷಿಸಿದ್ದರು. ಪಾರ್ಸಿಯಲ್ಲದಿದ್ದರೂ ಉಳಿದಿದ್ದ ಅಂಬೇಡ್ಕರ್ ಅವರಿಗೆ ಬೆದರಿಕೆಗಳನ್ನು ಹಾಕಲಾಯಿತು. ಬಾಬಾಸಾಹೇಬರು ತಮ್ಮ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದರು. ಹಿಂದೂ, ಮುಸ್ಲಿಂ, ಪಾರ್ಸಿ, ಕ್ರಿಶ್ಚಿಯನ್- ಎಲ್ಲರಿಗೂ ಅಂಬೇಡ್ಕರ್ ಒಬ್ಬ ಅಸ್ಪೃಶ್ಯರಾಗಿ ಕಂಡರೆ ಹೊರತು, ಅವರೊಬ್ಬ ಮನುಷ್ಯ, ಅವರೊಬ್ಬ ದೊಡ್ಡ ವಿದ್ವಾಂಸ ಅನಿಸಲೇ ಇಲ್ಲ. ಅವರು ಮನಸ್ಸು ಮಾಡಿದ್ದರೆ ವಿದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಿತ್ತು. ಆದರೆ ತಮ್ಮನ್ನು ಓದಿಸಿದ ಮಹಾರಾಜರ ಆಡಳಿತದಲ್ಲಿ ಸೇವೆ ಮಾಡಬೇಕೆಂದು ಬಂದ ಅವರಿಗೆ ದೊರಕಿದ್ದು ಕೇವಲ ಅವಮಾನ. ಹೀಗಾಗಿ ಹನ್ನೊಂದು ದಿನಗಳಿಗೆ ಬರೋಡಾ ಸೇವೆಯನ್ನು ಬಾಬಾಸಾಹೇಬರು ಅಂತ್ಯಗೊಳಿಸಿದರು.
ಅಂದು ಬಾಬಾಸಾಹೇಬರು ಅನುಭವಿಸಿದ ನೋವುಗಳಾಗಲೀ, ಇಂದು ಯಾವೊಬ್ಬ ದಲಿತ ನಾಯಕ ಎದುರಿಸುತ್ತಿರುವ ನೋವುಗಳಿಗಾಗಲೀ ವ್ಯತ್ಯಾಸ ಕಾಣುವುದಿಲ್ಲ. ಅಸ್ಪೃಶ್ಯತೆಯ ಸ್ವರೂಪ ಬದಲಾಗಿರಬಹುದು. ಆದರೆ ಆಳದಲ್ಲಿ ಈ ಮನೋರೋಗಿಗಳಿಗೆ ಇರುವುದು ದಲಿತರ ಮೇಲಿನ ಅಸಹನೆಯಷ್ಟೇ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



