ರಾಜ್ಯದ ನೂತನ ಸರ್ಕಾರದಲ್ಲಿ ಛಲವಾದಿ (ಪರಿಶಿಷ್ಟ ಜಾತಿ-ಬಲಗೈ) ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಜೊತೆಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಬೇಕು ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಛಲವಾದಿ ಸಮುದಾಯವು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯದ ಶೇಕಡಾ 96ಕ್ಕೂ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಈಗಾಗಲೇ ಸಚಿವರಾಗಿದ್ದ ಛಲವಾದಿ ಸಮುದಾಯದ ಮೂವರು ಸಚಿವರನ್ನು ಮುಂದುವರಿಸಬೇಕು. ಅಲ್ಲದೆ, ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಸಚಿವ ಸಂಪುಟದಲ್ಲಿ ಛಲವಾದಿ ಸಮುದಾಯಕ್ಕೆ ಸೇರಿದ ಐವರು ಪ್ರತಿನಿಧಿಗಳಲ್ಲಿ ಒಬ್ಬರಿಗೆ ಕಡ್ಡಾಯವಾಗಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಬುದ್ಧ, ಬಸವಣ್ಣ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡಿರುವ ಛಲವಾದಿ ಸಮುದಾಯವು ರಾಜ್ಯದಲ್ಲಿ ಸಂವಿಧಾನ ವಿರೋಧಿ ಹಾಗೂ ಜನವಿರೋಧಿ ಕೃತ್ಯಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಾ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಸಮುದಾಯದ ಹಿತದೃಷ್ಟಿ ಹಾಗೂ ಆಡಳಿತಾತ್ಮಕ ಅನುಭವವನ್ನು ಪರಿಗಣಿಸಿ, ಈಗಾಗಲೇ ಸಚಿವರಾಗಿದ್ದ ಮೂವರು ಸಚಿವರನ್ನು ಯಾವುದೇ ಕಾರಣಕ್ಕೂ ಕೈಬಿಡದೆ ನೂತನ ಸಚಿವ ಸಂಪುಟದಲ್ಲಿ ಮುಂದುವರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.





