ರಾಜ್ಯದ ಸರ್ಕಾರಿ ತಾಲೂಕು ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು, “ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಔಷಧಿ, ಪ್ರಯೋಗಾಲಯ ಸೌಲಭ್ಯ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸಿ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಸರ್ಕಾರಿ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಿಗೆ ದತ್ತು ನೀಡುವ ಮೂಲಕ ಮತ್ತಷ್ಟು ಆರೋಗ್ಯ ಸೇವೆಯನ್ನು ವ್ಯಾಪಾರೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.
“ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ಅಲ್ಲಿನ ರೋಗಿಗಳು ಸುಲಭವಾಗಿ ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಈಗಾಗಲೇ ದುಬಾರಿಯಾಗಿರುವ ಆರೋಗ್ಯ ಸೇವೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಹೊರೆಯಾಗುವ ಆತಂಕವಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ಈಗಾಗಲೇ ಹಲವು ಜಿಲ್ಲಾ ಆಸ್ಪತ್ರೆಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸುಪರ್ದಿಗೆ ನೀಡಿದ ಬಳಿಕ ಚಿಕಿತ್ಸೆ ಹಾಗೂ ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಶುಲ್ಕ ನಿಗದಿಪಡಿಸಲಾಗುತ್ತಿದೆ. ಇದರಿಂದ ಉಚಿತ ಹಾಗೂ ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆಯ ಆಶಯವೇ ದುರ್ಬಲವಾಗುತ್ತಿದೆ” ಎಂದು ದೂರಿದ್ದಾರೆ.
“ಆರೋಗ್ಯ, ಶಿಕ್ಷಣ ಖಾಸಗೀಕರಣವಾಗುವುಕ್ಕೆ ದಾರಿ ಮಾಡಿಕೊಡಬಾರದು. ಆರೋಗ್ಯದ ಜತೆಗೆ ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನೂ ಕೆಪಿಎಸ್ ಶಾಲಾ ಯೋಜನೆ ಹಾಗೂ ಸಿಎಸ್ಆರ್ ದೇಣಿಗೆಗಳ ಮೂಲಕ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಒಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೇವೆಗಳು ಸರ್ಕಾರದ ಜವಾಬ್ದಾರಿಯಾಗಿದ್ದು, ಅವುಗಳನ್ನು ಖಾಸಗಿಯವರ ಕೈಗೆ ಒಪ್ಪಿಸುವುದು ಜನವಿರೋಧಿ ನೀತಿಯಾಗಿದೆ” ಎಂದು ಹೇಳಿದ್ದಾರೆ.
“ಜನರಿಂದ ತೆರಿಗೆ ಸಂಗ್ರಹಿಸುವ ಸರ್ಕಾರವೇ ಜನರಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೇವೆಗಳನ್ನು ಉಚಿತವಾಗಿ ಒದಗಿಸಬೇಕು. ಮೂಲಭೂತ ಸೇವೆಗಳನ್ನೂ ಖಾಸಗಿ ಸಂಸ್ಥೆಗಳ ಮೂಲಕ ಒದಗಿಸುವುದಾದರೆ, ಜನರು ಸರ್ಕಾರಕ್ಕೆ ತೆರಿಗೆ ಏಕೆ ಪಾವತಿಸಬೇಕು ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗೆ ಏಕಾಏಕಿ ಬೆಂಕಿ; ಸವಾರ ಪಾರು
“ರಾಜ್ಯದ ಕಾಂಗ್ರೆಸ್ ಸರ್ಕಾರವು ಜನವಿರೋಧಿ ನೀತಿಗಳನ್ನು ಕೈಬಿಟ್ಟು, ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಅಥವಾ ಇತರೆ ಸಂಸ್ಥೆಗಳಿಗೆ ದತ್ತು ನೀಡುವ ಕ್ರಮವನ್ನು ಕೂಡಲೇ ಕೈಬಿಡಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ದಾದಿಯರು, ಸಿಬ್ಬಂದಿ, ಔಷಧಿ, ಪ್ರಯೋಗಾಲಯ ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಒದಗಿಸಿ ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಉಚಿತ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು” ಎಂದು ಅಗ್ರಹಿಸಿದ್ದಾರೆ.





