ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ.ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಒಟ್ಟು 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತು ಮಂಡಳಿಯು ಈಗಾಗಲೇ ಕಿರು ಪ್ರಕಟಣೆಯನ್ನು ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿ ಪ್ರಕ್ರಿಯೆಯು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 21 ರೈಲ್ವೆ ಮಂಡಳಿಗಳ (RRB Zones) ವ್ಯಾಪ್ತಿಯಲ್ಲಿ ನಡೆಯಲಿದೆ. ಮುಂಬೈ, ಚೆನ್ನೈ, ಸಿಕಂದರಾಬಾದ್‌ನಂತಹ ಪ್ರಮುಖ ವಲಯಗಳಲ್ಲಿಯೂ ಈ ಹುದ್ದೆಗಳು ಲಭ್ಯವಿವೆ.
2026ರ ಮೇ 15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಯಿದೆ. ಅರ್ಜಿ ಸಲ್ಲಿಕೆಗೆ 2026 ಜೂನ್ 14 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಸಹ ಅಂದೇ ಅಂತಿಮ ದಿನಾಂಕವಾಗಿದೆ. ಪರೀಕ್ಷೆಯ ನಿಖರ ದಿನಾಂಕವನ್ನು ಮಂಡಳಿಯು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದು, ಪರೀಕ್ಷೆಗೆ 4 ದಿನಗಳ ಮೊದಲು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಐಟಿಐ (ITI) ಅಥವಾ ಡಿಪ್ಲೊಮಾ ಪದವಿ ಪಡೆದಿರುವುದು ಕಡ್ಡಾಯ. ಎಂಜಿನಿಯರಿಂಗ್ ಪದವೀಧರರೂ ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ: 2026ರ ಜುಲೈ 1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮದಂತೆ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಸಂದೇಶ್‌ಖಾಲಿ, ಆರ್.ಜಿ ಕರ್ ಘಟನೆಗಳಿಗೆ ಮರುಜೀವ ತುಂಬಲು BJP ಕುತಂತ್ರ!
ಸಾಮಾನ್ಯ ವರ್ಗ, ಒಬಿಸಿ ಹಾಗೂ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನುಳಿದಂತೆ ಎಸ್ಸಿ/ಎಸ್ಟಿ, ಮಾಜಿ ಸೈನಿಕರು, ಮಹಿಳೆಯರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 250 ರೂ. ಶುಲ್ಕವಿರುತ್ತದೆ. ಅಭ್ಯರ್ಥಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬಹುದು.
ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅಭ್ಯರ್ಥಿಗಳನ್ನು ನಾಲ್ಕು ಹಂತಗಳ ಪರೀಕ್ಷಾ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಹಂತ 1 ಮತ್ತು 2: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT 1 & 2).
- ಹಂತ 3: ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ (CBAT).
- ಹಂತ 4: ಮೂಲ ದಾಖಲೆಗಳ ಪರಿಶೀಲನೆ ಮತ್ತು ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್ www.rrbapply.gov.in ಗೆ ಭೇಟಿ ನೀಡಬಹುದು.



